ಕೆದಮುಳ್ಳೂರು: ಆದಿವಾಸಿ ಕುಟುಂಬಗಳ ಮನೆ ನಿರ್ಮಾಣದ ಕಾಮಗಾರಿ ಪರಿಶೀಲಿಸಿದ ಪೊನ್ನಣ್ಣ

KannadaprabhaNewsNetwork |  
Published : Oct 31, 2023, 01:15 AM IST
ಚಿತ್ರ : 30ಎಂಡಿಕೆ3 : ಕೆದಮುಳ್ಳೂರು ಗ್ರಾಮಆದಿವಾಸಿ ಕುಟುಂಬಗಳ ಮನೆ ನಿರ್ಮಾಣದ ಕಾಮಗಾರಿ ಪರಿಶೀಲಿಸಿದ ಎ.ಎಸ್.ಪೊನ್ನಣ್ಣ | Kannada Prabha

ಸಾರಾಂಶ

ಈ ವೇಳೆ ಮಾತನಾಡಿದ ಶಾಸಕ ಪೊನ್ನಣ್ಣ, ಈಗಾಗಲೇ 60 ಮನೆಗಳ ನಿರ್ಮಾಣ ಕಾಮಗಾರಿ ನಡೆದಿದ್ದು, ಅರ್ಧಕ್ಕೆ ನಿಂತು ಹೋಗಿದೆ. ಈ ಸಂಬಂಧ ಸರ್ಕಾರದ ಗಮನಕ್ಕೆ ತಂದು ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿಸಿ ಕಾಮಗಾರಿಯನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ ವಿರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾ.ಪಂ. ವ್ಯಾಪ್ತಿಯ ಕೆದಮುಳ್ಳೂರು ಗ್ರಾಮದ ಸರ್ವೇ ನಂಬರ್ 370/1ರ 7.50 ಎಕರೆ ಜಾಗದಲ್ಲಿ ಆದಿವಾಸಿಗಳಿಗೆ 129 ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಪ್ರಥಮ ಹಂತದಲ್ಲಿ 60 ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಆದರೆ ವಿದ್ಯುತ್ ಮತ್ತು ಕುಡಿಯುವ ನೀರು ಸಂಪರ್ಕ ಕಲ್ಪಿಸದೆ ಅರ್ಧಕ್ಕೆ ನಿಂತಿರುವ ಹಿನ್ನೆಲೆ ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಮಾತನಾಡಿದ ಶಾಸಕ ಪೊನ್ನಣ್ಣ, ಈಗಾಗಲೇ 60 ಮನೆಗಳ ನಿರ್ಮಾಣ ಕಾಮಗಾರಿ ನಡೆದಿದ್ದು, ಅರ್ಧಕ್ಕೆ ನಿಂತು ಹೋಗಿದೆ. ಈ ಸಂಬಂಧ ಸರ್ಕಾರದ ಗಮನಕ್ಕೆ ತಂದು ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿಸಿ ಕಾಮಗಾರಿಯನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು. ಈಗಾಗಲೇ ಸೋಲಾರ್ ದೀಪದ ವ್ಯವಸ್ಥೆ ಮಾಡಲಾಗಿದೆ. ಆಹಾರ ಕಿಟ್, ಟಾರ್ಚ್ ವಿತರಿಸಲಾಗಿದೆ. ಸರ್ಕಾರ ಆದಿವಾಸಿಗಳು, ಬಡವರ ಒಳಿತಿಗಾಗಿ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಆ ನಿಟ್ಟಿನಲ್ಲಿ ಕೆದಮುಳ್ಳೂರು ಗ್ರಾ.ಪಂ. ವ್ಯಾಪ್ತಿಯ 75 ಕುಟುಂಬಗಳು ಹಾಗೂ ಸುತ್ತಮುತ್ತಲಿನ ಗ್ರಾ.ಪಂ. ವ್ಯಾಪ್ತಿಯ 54 ಸೇರಿ ಒಟ್ಟು 129 ನಿರಾಶ್ರಿತ ಆದಿವಾಸಿ ಗಿರಿಜನ ಕುಟುಂಬಗಳಿಗೆ ವಸತಿ ಸೌಲಭ್ಯ ಕಲ್ಪಿಸಲು ಮುಂದಾಗಿದೆ ಎಂದು ತಿಳಿಸಿದರು. ಪತ್ರವ್ಯವಹಾರ ಬಾಕಿ: ಡಿಸಿ ಜಿಲ್ಲಾಧಿಕಾರಿ ಡಾ.ವೆಂಕಟ್ ರಾಜಾ ಮಾತನಾಡಿ, ಮನೆಗಳ ನಿರ್ಮಾಣಕ್ಕೆ ಹಣ ಬಿಡುಗಡೆ ಸಂಬಂಧ ಪತ್ರ ವ್ಯವಹಾರ ಆಗಿದ್ದು, ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು. ಈ ಸಂಬಂಧ ಇಲಾಖೆಯ ನಿರ್ದೇಶಕರ ಜೊತೆ ಚರ್ಚಿಸಲಾಗುವುದು. ಈಗಾಗಲೇ ನಿರ್ಮಾಣ ಹಂತದಲ್ಲಿರುವ ಮನೆಗಳಿಗೆ ವಿದ್ಯುತ್ ಹಾಗೂ ಕುಡಿಯುವ ನೀರು ಪೂರೈಕೆ ಮಾಡಬೇಕಿದೆ. ಈ ಸಂಬಂಧ ಪ್ರಯತ್ನಿಸಲಾಗುವುದು ಎಂದರು. ಐಟಿಡಿಪಿ ಇಲಾಖಾ ಅಧಿಕಾರಿ ಹೊನ್ನೇಗೌಡ ಮಾಹಿತಿ ನೀಡಿ, ಸರ್ಕಾರದ ಆದೇಶದಲ್ಲಿ 5 ಲಕ್ಷ ರು. ತಲಾ ಘಟಕ ವೆಚ್ಚದಲ್ಲಿ 129 ಮನೆಗಳನ್ನು ನಿರ್ಮಾಣ ಮಾಡಲು 645 ಲಕ್ಷ ರು. ಅನುದಾನ ಬಿಡುಗಡೆ ಮಾಡಲು ಆದೇಶಿಸಲಾಗಿತ್ತು. ಅದರಂತೆ ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯದಿಂದ ಶೇ.50ರಷ್ಟು 322.50 ಲಕ್ಷ ರು. ಅನುದಾನ ಬಿಡುಗಡೆ ಆಗಿ, ಕೆಆರ್‌ಐಡಿಎಲ್ ಮೂಲಕ 5 ಲಕ್ಷ ರು. ಘಟಕ ವೆಚ್ಚಕ್ಕೆ ಸಿದ್ಧಪಡಿಸಿ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ದೊರತಿದೆ ಎಂದು ಹೇಳಿದರು. ನಾಲ್ಕು ಹಂತಗಳಲ್ಲಿ ಯೋಜನೆ ಜಾರಿ ಕೆಆರ್‌ಐಡಿಎಲ್ ಸಂಸ್ಥೆಗೆ ಗರಿಷ್ಠ 2 ಕೋಟಿ ಮೊತ್ತಕ್ಕೆ ಕಾಮಗಾರಿ ಕೈಗೊಳ್ಳಲು ವಿನಾಯಿತಿ ನೀಡಲಾಗಿತ್ತು. ತಿದ್ದುಪಡಿ ಅಧಿನಿಯಮ 2021ರ 4ನೇ ಪ್ರಕರಣದ 4ಇ ಅಡಿ ವಿನಾಯಿತಿ ನೀಡಿದ್ದು, ಕೆದಮುಳ್ಳೂರು ಗ್ರಾಮದಲ್ಲಿ 129 ಮನೆಗಳನ್ನು ನಾಲ್ಕು ಹಂತದಲ್ಲಿ (1ನೇ ಹಂತದಲ್ಲಿ 40, 2ನೇ ಹಂತದಲ್ಲಿ 40, 3ನೇ ಹಂತದಲ್ಲಿ 40, ನಾಲ್ಕನೇ ಹಂತದಲ್ಲಿ 9 ಮನೆಗಳನ್ನು ನಿರ್ಮಿಸಲು) ಸರ್ಕಾರದಿಂದ ನಿರ್ದೇಶನ ನೀಡಲಾಗಿತ್ತು ಎಂದು ಅವರು ವಿವರಿಸಿದರು. ಅದರಂತೆ ಮೊದಲ ಹಂತದಲ್ಲಿ 40 ಮನೆಗಳನ್ನು ನಿರ್ಮಾಣ ಮಾಡಲು ಕಾರ್ಯಾದೇಶ ನೀಡಿ ಕಾಮಗಾರಿ ನಿರ್ವಹಿಸಲು ಶೇ.25ರಷ್ಟು 150 ಲಕ್ಷ ರು. ಅನುದಾನವನ್ನು ಕಾರ್ಯಪಾಲಕ ಅಭಿಯಂತರರು ಕೆಆರ್‌ಐಡಿಎಲ್ ಹುಣಸೂರು ಅವರಿಗೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು. ಸದ್ಯ ಪರಿಷ್ಕೃತ ಜಿಎಸ್‌ಟಿ ದರ ಸೇರಿದಂತೆ 2021-22ನೇ ಸಾಲಿನ ಎಸ್.ಆರ್. ದರದಂತೆ ಪ್ರತಿ ಮನೆಗೆ 2.64 ಲಕ್ಷ ರು. ಗಳಂತೆ ಹೆಚ್ಚುವರಿಯಾಗಿ ಒಂದು ಮನೆ ಘಟಕ ವೆಚ್ಚ 7.64 ಲಕ್ಷ ರು. ಆಗುತ್ತದೆ. ಮನೆ ಕಾಮಗಾರಿ ಪ್ರಾರಂಭಿಸಲು ಬಾಕಿ ಇರುವ 89 ಮನೆಗಳ ಒಟ್ಟು 679.96 ಲಕ್ಷ ರು. ಅನುದಾನ ಬಿಡುಗಡೆಗೊಳಿಸಲು ಪರಿಷ್ಕೃತ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಮಂಜೂರಾತಿ ನೀಡಲು ಕಾರ್ಯಪಾಲಕ ಅಭಿಯಂತರರು ಕೆಆರ್‌ಐಡಿಎಸ್ ಹುಣಸೂರು ಅವರು ಪತ್ರದಲ್ಲಿ ಕೋರಿದ್ದಾರೆ ಎಂದು ಐಟಿಡಿಪಿ ಇಲಾಖಾ ಅಧಿಕಾರಿ ವಿವರಿಸಿದರು. ಆಡಳಿತಾತ್ಮಕ ಮಂಜೂರಾತಿ ದೊರೆತಿರುವ 5 ಲಕ್ಷ ರೂ. ಘಟಕ ವೆಚ್ಚದ ಅಂದಾಜು ಪಟ್ಟಿಯಲ್ಲಿ ವಿದ್ಯುತ್ ಮತ್ತು ಕುಡಿಯುವ ನೀರು ಪೂರೈಕೆ ಒಳಗೊಂಡಿಲ್ಲದೆ ಇರುವುದರಿಂದ ಪ್ರಸ್ತುತ ಸಾಮಾಗ್ರಿಗಳ ದರ ಮತ್ತು ಎಸ್.ಆರ್. ದರ ಹೆಚ್ಚಾಗಿರುವುದರಿಂದ ಅಂದಾಜು ಪಟ್ಟಿಯಂತೆ ಅವಶ್ಯಕ ಕಾಮಗಾರಿ ಕೈಗೊಳ್ಳಲು ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಕೋರಲಾಗಿದೆ ಎಂದು ಎಸ್.ಹೊನ್ನೇಗೌಡ ತಿಳಿಸಿದರು. ಸದ್ಯ ಗ್ರಾಮ ಪಂಚಾಯಿತಿಯಿಂದ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಗ್ರಾ.ಪಂ.ಪ್ರಮುಖರು ಮಾಹಿತಿ ನೀಡಿದರು. ಕೆಆರ್‌ಐಡಿಎಲ್ ಕಾರ್ಯಪಾಲಕ ಎಂಜಿನಿಯರ್ ಸುರೇಶ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕೆ.ಎಸ್.ಪ್ರಮೋದ್, ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕರಾದ ಸಚಿನ್, ಗ್ರಾ.ಪಂ.ಅಧಿಕಾರಿಗಳು ಇತರರು ಇದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು
ದ್ವೇಷ ಭಾಷಣ ತಡೆ, ಸುಳ್ಳು ಸುದ್ದಿ ನಿಯಂತ್ರಣಕ್ಕೆ ಮಸೂದೆ