ರಾಮನಗರ: ವಿಶ್ವಕರ್ಮರಿಗೆ ಪರಿಶಿಷ್ಟ ಪಂಗಡದ ಮೀಸಲಾತಿ ಕಲ್ಪಿಸುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸೆಪ್ಟೆಂಬರ್ ತಿಂಗಳಲ್ಲಿ ಬೀದರ್‌ನಿಂದ ಬೆಂಗಳೂರುವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯರು ಆದ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ಕೆ.ಪಿ.ನಂಜುಂಡಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಲ್ಕೈದು ತಿಂಗಳು ರಾಜ್ಯದ ಪ್ರತಿ ಹೋಬಳಿ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ವಿಶ್ವಕರ್ಮರನ್ನು ಸಂಘಟಿಸಿ ಸಮಾಜಕ್ಕೆ ಆಗುತ್ತಿರುವ ಅನ್ಯಾಯ ಕುರಿತು ಅರಿವು ಮೂಡಿಸಲಾಗುವುದು. ಆನಂತರ ಸೆಪ್ಟೆಂಬರ್ ತಿಂಗಳಲ್ಲಿ 40 ದಿನಗಳ ಕಾಲ 750 ಕಿ.ಮೀವರೆಗೆ ಪಾದಯಾತ್ರೆ ನಡೆಸಿ ರಾಜ್ಯ ಸರ್ಕಾರದ ಗಮನ ಸೆಳೆಯುತ್ತೇವೆ ಎಂದರು.

2ಎ ಮೀಸಲಾತಿಯಲ್ಲಿ 102 ಜಾತಿಗಳಿದ್ದು, ಈ ಜಾತಿಗಳಿಗೆ ಶೇ. 15ರಷ್ಟು ಮೀಸಲಾತಿ ನೀಡಲಾಗಿದೆ. ಇದರಿಂದಾಗಿ ಪ್ರಬಲ ಜಾತಿಗಳನ್ನು ಎದುರಿಸಿ ವಿಶ್ವಕರ್ಮರಿಗೆ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಎಲ್ಲ ಜಾತಿಗಳನ್ನು ಮೀರಿ ಅಧಿಕಾರ ಪಡೆಯಲು ಆಗುತ್ತಿಲ್ಲ. ತಾಪಂ - ಜಿಪಂ ಸದಸ್ಯರಾಗಿ ಆಯ್ಕೆಯಾದ ಉದಾಹರಣೆಗಳು ಇಲ್ಲ. ಆದ್ದರಿಂದ ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂಬುದು ಸಮಾಜದ ಒತ್ತಾಸೆಯಾಗಿದೆ ಎಂದು ಹೇಳಿದರು.

ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದರಿಂದ ನಮ್ಮ ಆಚಾರ- ವಿಚಾರ, ಸಂಸ್ಕೃತಿ ಬದಲಾಗುವುದಿಲ್ಲ. ಈ ವಿಷಯದಲ್ಲಿ ಕೆಲವರು ಅಪಪ್ರಚಾರ ಮಾಡುತ್ತಿದ್ದು, ಅದಕ್ಕೆ ಯಾರೂ ಕಿವಿಗೊಡಬಾರದು. ಸಮಾಜ ಸಂಘಟಿತವಾಗದ ಹೊರತು ಸಂವಿಧಾನ ನೀಡಿರುವ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿಲ್ಲ ಎಂದರು.

ನಾವು ಬ್ರಾಹ್ಮಣರಲ್ಲ, ವಿಶ್ವಕರ್ಮರು :


ಐದು ಕುಲ ಕಸುಬು ಮಾಡುತ್ತಿರುವ ವಿಶ್ವಕರ್ಮರು ತಾವುಗಳು ಬ್ರಾಹ್ಮಣರು ಅಂತ ಭ್ರಮಾಲೋಕದಲ್ಲಿ ಬದುಕುತ್ತಿದ್ದಾರೆ. ನಾವು ಬ್ರಾಹ್ಮಣರಲ್ಲ, ವಿಶ್ವಕರ್ಮ ಸಮಾಜದವರು. ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ 41 ಉಪಪಂಗಡಗಳಲ್ಲಿ ವಿಶ್ವ ಬ್ರಾಹ್ಮಣ ಅಂತ ಸಣ್ಣ ಉಪ ಪಂಗಡ ಇದೆ. ಆ ಹೆಸರಿಟ್ಟುಕೊಂಡು ವಿಶ್ವಕರ್ಮದವರನ್ನು ಬ್ರಾಹ್ಮಣರ ಸಂಖ್ಯೆಯಲ್ಲಿ ಸೇರಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವಿಶ್ವಕರ್ಮ ಸಮಾಜಕ್ಕೆ ರಾಜಕೀಯ ಮತ್ತು ಸಾಮಾಜಿಕವಾಗಿ ಯಾರೂ ಸಹಾಯ ಮಾಡುತ್ತಿಲ್ಲ. ಜಾತಿಗಣತಿ ಸಂದರ್ಭದಲ್ಲಿ 30-35 ಲಕ್ಷ ಇದ್ದಂತಹ ಜನಸಂಖ್ಯೆ ಕೇವಲ 8 ಲಕ್ಷಕ್ಕಿಂತಲೂ ಕಡಿಮೆ ಬಂದಿದೆ. ಯಾವ ಸಮಾಜ ರಾಜಕೀಯವಾಗಿ ಪ್ರಬಲವಾಗಿ ಇರುವುದಿಲ್ಲವೊ ಆ ಸಮಾಜದ ಜನಸಂಖ್ಯೆಯೂ ಕಡಿಮೆಯಾಗುತ್ತದೆ. ಆದ್ದರಿಂದ ಶೋಷಿತ ಸಮಾಜಗಳು ಹೋರಾಟದ ಮೂಲಕ ಅಧಿಕಾರ ಪಡೆದು, ಕುಲಕಸುಬು ಉಳಿಸಿಕೊಳ್ಳಬೇಕಿದೆ ಎಂದು ನಂಜುಂಡಿ ಹೇಳಿದರು.

ಈಗ ಕೇಂದ್ರ ಸರ್ಕಾರ ಜಾತಿ ಸಮೀಕ್ಷೆ ನಡೆಸಲು ಮುಂದಾಗಿದೆ. ಜಾತಿ ಗಣತಿ ಬಂದಾಗ ಶೋಷಿತ ವರ್ಗಗಳಲ್ಲಿರುವ ಉಪಜಾತಿಗಳು ಎಚ್ಚೆತ್ತುಕೊಳ್ಳದಿದ್ದರೆ ಆ ಸಮಾಜದ ಜನಸಂಖ್ಯೆಯೇ ಕಡಿಮೆಯಾಗುತ್ತದೆ. ಹೀಗಾಗಿ, ಎಲ್ಲ ಸಮಾಜಗಳು ಜಾಗೃತರಾಗಬೇಕು. ಇಲ್ಲದಿದ್ದರೆ, ಧ್ವನಿ ಇಲ್ಲದ ಸಮಾಜಗಳಿಗೆ ಅನ್ಯಾಯವಾಗುತ್ತದೆ. ರಾಜಕೀಯ ಪ್ರಜ್ಞೆ ಇರುವ ಸಮಾಜಗಳು ಮಾತ್ರ ಪ್ರಬಲವಾಗುತ್ತವೆ ಎಂದು ಎಚ್ಚರಿಸಿದರು.

ಕಾಯಕ ಸಮಾಜಗಳು ಒಗ್ಗಟ್ಟಾಗಲಿ :

ಜಾತಿ ಜನಗಣತಿ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜ ಬಾಂಧವರು ಜಾತಿ ಕಾಲಂನಲ್ಲಿ ಯಾವುದೇ ಉಪಜಾತಿಯನ್ನು ನಮೂದಿಸದೇ ಕೇವಲ ವಿಶ್ವಕರ್ಮ ಎಂದು ನಮೂದಿಸಬೇಕಿದೆ. ಸಮಾಜದಲ್ಲಿ ವಿಶ್ವ ಬ್ರಾಹ್ಮಣ ಎಂಬುದು ವಿಶ್ವಕರ್ಮ ಜಾತಿಯ ಉಪಜಾತಿಯಾಗಿದೆ. ಇದಕ್ಕೂ ಬ್ರಾಹ್ಮಣ ಜಾತಿಗೂ ಸಂಬಂಧವಿಲ್ಲ. ವಿಶ್ವಕರ್ಮದ ಅಡಿಯಲ್ಲಿ ವಿಶ್ವ ಬ್ರಾಹ್ಮಣ, ಕಮ್ಮಾರ, ಬಡಿಗೇರ, ಹಿಂದೂ ವಿಶ್ವಕರ್ಮ ಎಂಬ ಹಲವಾರು ಉಪಜಾತಿಗಳಿವೆ. ರಾಜ್ಯದಲ್ಲಿ ಪ್ರಮುಖ ಐದು ಕಸುಬುಗಳನ್ನು ಮಾಡುವವರು ವಿಶ್ವಕರ್ಮ ಸಮಾಜದವರೇ ಆಗಿದ್ದಾರೆ. ಆದರೆ, ಜಾತಿಗಣತಿ ಕಾಲಂನಲ್ಲಿ ಉಪಜಾತಿ ಬದಲು, ವಿಶ್ವಕರ್ಮ ಸಮಾಜ ಎಂದೇ ನಮೂದಿಸಬೇಕು ಎಂದು ಹೇಳಿದರು.

ಆಯಾಯ ಸಮಾಜಗಳನ್ನು ವೃತ್ತಿ ಮೂಲಕ ಗುರುತಿಸಿ ಬಲಿಷ್ಠಗೊಳಿಸಿ ದೇಶದ ಸಂಸ್ಕೃತಿಗೆ ಶಕ್ತಿ ತುಂಬುವ ಕೆಲಸವನ್ನು ಸರ್ಕಾರಗಳು ಮಾಡುತ್ತಿಲ್ಲ. ಹೀಗಾಗಿ ರಾಜಕೀಯ ಪ್ರಜ್ಞೆ ಇಲ್ಲದ ಸಮಾಜಗಳು ದೇಶಕ್ಕೆ ಏನೇ ಕೊಡುಗೆ ನೀಡಿದ್ದರು ಸಹ ಅವುಗಳು ನಿರ್ಲಕ್ಷ್ಯಕ್ಕೆ ಒಳಗಾಗುತ್ತವೆ. ಕಾಯಕ ಸಮಾಜಗಳು ಒಗ್ಗಟ್ಟಾಗಿ ವಾಸ್ತವತೆ ಅರಿಯದಿದ್ದರೆ ಬೀದಿಯಲ್ಲಿ ನಿಲ್ಲಬೇಕಾಗುತ್ತದೆ ಎಂದು ಕೆ.ಪಿ.ನಂಜುಂಡಿ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಶ್ವಕರ್ಮ ಸಮಾಜದ ರಾಜ್ಯ ಉಪಾಧ್ಯಕ್ಷ ಬಸವರಾಜು, ಕುಮಾರ್, ಜನಾರ್ಧನ್, ಲಿಂಗರಾಜು, ಸಿದ್ದರಾಜು, ರಾಮಾಚಾರಿ, ಲೋಕೇಶ್ , ಕುಮಾರ್ , ರಾಜೇಶ್ ಇದ್ದರು.

17ಕೆಆರ್ ಎಂಎನ್ 4.ಜೆಪಿಜಿ

ವಿಧಾನ ಪರಿಷತ್ ಮಾಜಿ ಸದಸ್ಯರು ಆದ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ಕೆ.ಪಿ. ನಂಜುಂಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.