ಮೂರು ವರ್ಷದಲ್ಲಿ ನಾಲ್ಕು ಸಾವಿರ ಮನೆ ನಿರ್ಮಿಸಿ ಹಂಚಿಕೆ: ಶಾಸಕ ಟಿ.ಎಸ್.ಶ್ರೀವತ್ಸ

KannadaprabhaNewsNetwork | Published : Jul 18, 2024 1:30 AM

ಸಾರಾಂಶ

ಬಡವರು ಮತ್ತು ಮಧ್ಯಮ ವರ್ಗದವರು ಮನೆಗಳಲ್ಲಿ ವಾಸ ಮಾಡಬೇಕೆ ಹೊರತು ಮತ್ತೊಬ್ಬರಿಗೆ ಬಾಡಿಗೆ ನೀಡಬಾರದು. ಲಲಿತಾದ್ರಿಪುರದಲ್ಲಿ ಜಿ- ಪ್ಲಸ್ 9 ಬಹುಮಹಡಿ ಮನೆ ನಿರ್ಮಿಸುತ್ತಿದ್ದು, ಎರಡು ತಿಂಗಳೊಳಗೆ ಮತ್ತೆ 1,660 ಮನೆಗಳ ನಿರ್ಮಾಣಕ್ಕೆ ಶೀಘ್ರದಲ್ಲೇ ಕಾಮಗಾರಿ ಆರಂಭ ಮಾಡಲಾಗುವುದು. ಪ.ಜಾತಿಗೆ ಸೇರಿದ ಫಲಾನುಭವಿಗಳಿಗೆ 395 ಮನೆಗಳ ನಿರ್ವಾಣಕ್ಕೆ ಅನುದಾನ ಮೀಸಲಿಡಲಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಮುಂದಿನ ಮೂರು ವರ್ಷಗಳಲ್ಲಿ ನಾಲ್ಕು ಸಾವಿರ ಮನೆ ನಿರ್ಮಿಸಿ ಹಂಚಿಕೆ ಮಾಡುವುದಾಗಿ ಶಾಸಕ ಟಿ.ಎಸ್. ಶ್ರೀವತ್ಸ ಹೇಳಿದರು.

ನಗರ ಪಾಲಿಕೆ ಸಭಾಂಗಣದಲ್ಲಿ ಕೆ.ಆರ್. ಕ್ಷೇತ್ರದ ಆಶ್ರಯ ಬಡಾವಣೆ ಫಲಾನುಭವಿಗಳಿಗೆ ಹಕ್ಕುಪತ್ರ, ಹಕ್ಕು ಖುಲಾಸೆ ಮತ್ತು ಎನ್ಒಸಿ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಾಂಕೇತಿಕವಾಗಿ ಸಾವಿತ್ರಿ, ಕಮಲಮ್ಮ, ಶಿವರುದ್ರ, ಲಕ್ಷ್ಮಮ್ಮ, ಕೃಷ್ಣಮೂರ್ತಿ ಅವರಿಗೆ ಹಕ್ಕುಪತ್ರ ವಿತರಿಸಿದರು.

ಬಡವರು ಮತ್ತು ಮಧ್ಯಮ ವರ್ಗದವರು ಮನೆಗಳಲ್ಲಿ ವಾಸ ಮಾಡಬೇಕೆ ಹೊರತು ಮತ್ತೊಬ್ಬರಿಗೆ ಬಾಡಿಗೆ ನೀಡಬಾರದು. ಲಲಿತಾದ್ರಿಪುರದಲ್ಲಿ ಜಿ- ಪ್ಲಸ್ 9 ಬಹುಮಹಡಿ ಮನೆ ನಿರ್ಮಿಸುತ್ತಿದ್ದು, ಎರಡು ತಿಂಗಳೊಳಗೆ ಮತ್ತೆ 1,660 ಮನೆಗಳ ನಿರ್ಮಾಣಕ್ಕೆ ಶೀಘ್ರದಲ್ಲೇ ಕಾಮಗಾರಿ ಆರಂಭ ಮಾಡಲಾಗುವುದು. ಪ.ಜಾತಿಗೆ ಸೇರಿದ ಫಲಾನುಭವಿಗಳಿಗೆ 395 ಮನೆಗಳ ನಿರ್ವಾಣಕ್ಕೆ ಅನುದಾನ ಮೀಸಲಿಡಲಾಗಿದೆ ಎಂದರು.

ಅಶೋಕಪುರಂನ ಕೆಲವು ಕಡೆಗಳಲ್ಲಿ ದಾಖಲೆ ಸಮಸ್ಯೆ ಆಗಿರುವುದನ್ನು ಸರಿಪಡಿಸಿ ಮಂಜೂರು ಮಾಡಲಾಗುತ್ತಿದೆ. ಸ್ವಂತ ಜಾಗ ಹೊಂದಿರುವ ಬಡವರು ಸರ್ಕಾರದ ನೆರವಿನಿಂದ ಮನೆ ನಿರ್ಮಾಣ ಮಾಡಿಕೊಳ್ಳಬಹುದು ಎಂದರು.

ಮೂರು ವರ್ಷಗಳಲ್ಲಿ ಕ್ಷೇತ್ರದಲ್ಲಿ ನಾಲ್ಕು ಸಾವಿರ ಮನೆಯನ್ನು ಅರ್ಹರಿಗೆ ಕೊಡಿಸಲು ಬೇಕಾದ ಕ್ರಮ ಕೈಗೊಳ್ಳಲಾಗಿದೆ. ಒಬ್ಬ ಫಲಾನುಭವಿಯು ಒಂದೂವರೆ ಲಕ್ಷ ವಂತಿಗೆ ಕಟ್ಟಿದರೆ, ಉಳಿದ ಹಣ 12 ಲಕ್ಷ ರೂ.ಅನ್ನು ಸರ್ಕಾರ ಭರಿಸಲಿದೆ. ಆಶ್ರಯ ಮನೆಗಳನ್ನು ನಿರ್ಮಿಸಿಕೊಂಡಿರುವ 180 ಫಲಾನುಭವಿಗಳಿಗೆ ಹಕ್ಕುಪತ್ರ ಹಂಚಿಕೆ ಮಾಡಲಾಗಿದ್ದು, ಮನೆ ತೆಗೆದುಕೊಂಡ ಫಲಾನುಭವಿಗಳು ಬೇರೆಯವರಿಗೆ ಮಾರಾಟ, ಬೋಗ್ಯ ನೀಡುವುದು, ಬಾಡಿಗೆಗೆ ನೀಡದೆ ವಾಸ ಮಾಡಬೇಕು ಎಂದರು.

ನಗರದಲ್ಲಿ ವಾಸ ಮಾಡಲು ಬಾಡಿಗೆಗೆ ಕೊಟ್ಟು ಕುಳಿತರೆ ಮುಂದೆ ಅದೇ ಮನೆಗಳು ಕೈತಪ್ಪಲಿವೆ. ಕಳೆದ ಒಂದು ವರ್ಷದ ಹಿಂದೆ ಶಾಸಕನಾಗಿ ಆಯ್ಕೆಯಾದ ಮೇಲೆ ಹಕ್ಕುಪತ್ರ, ಹಕ್ಕು ಖುಲಾಸೆ ನೀಡುತ್ತಿಲ್ಲ ಎನ್ನುವ ದೂರುಗಳು ಕೇಳಲಾರಂಭಿಸಿತು. ನಂತರ ಈ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆ ಅರಿಯಲಾಯಿತು. ಜನರು ನೊಂದುಕೊಂಡಿರುವ ಕಾರಣ ಕೆಲವೊಮ್ಮೆ ಅಧಿಕಾರಿಗಳ ಮೇಲೆ ಕೋಪದಿಂದ ಮಾತನಾಡುವ ಸನ್ನಿವೇಶ ಬಂದಿದ್ದರೂ ಜನರ ಹಿತಕ್ಕಾಗಿ ನಾವು ಗಟ್ಟಿ ನಿಲುವು ಹೊಂದಬೇಕಿದೆ ಎಂದರು.

ಸರ್ಕಾರದ ಯೋಜನೆ ಹಳ್ಳಹಿಡಿಯಬಾರದು. ಬಡವನಿಗೆ ಸರ್ಕಾರದ ಕಾರ್ಯಕ್ರಮಗಳ ಸೌಲಭ್ಯ ನೀಡುವಾಗ ಹಣಕ್ಕಾಗಿ ಪೀಡಿಸಬಾರದು. ಒಂದೊತ್ತಿನ ಕೂಲಿ ಮಾಡುವ ಫಲಾನುಭವಿಯಿಂದ ಯಾವುದನ್ನೂ ನಿರೀಕ್ಷಿಸದೆ ಕೆಲಸ ಮಾಡಬೇಕು. ಹಣ ಕೊಟ್ಟು ಪಡೆದುಕೊಂಡೆ ಎನ್ನುವುದು ಬರಬಾರದು. ಒಂದು ವೇಳೆ ನನಗೆ ಗೊತ್ತಿಲ್ಲದೆ ಹಣ ಕೊಟ್ಟು ಹಕ್ಕುಪತ್ರ ಪಡೆದಿದ್ದರೆ ಅಂತಹವರು ನೇರವಾಗಿ ಭೇಟಿಯಾಗಿ ಎಂದು ಅವರು ಸಲಹೆ ನೀಡಿದರು.

ನಗರ ಪಾಲಿಕೆ ಹೆಚ್ಚುವರಿ ಆಯುಕ್ತೆ ಕುಸುಮಾ ಕುಮಾರಿ ಮಾತನಾಡಿ, ತುಂಬಾ ವರ್ಷಗಳಿಂದ ಹಕ್ಕು ಪತ್ರಗಳು ಸಿಗದೆ ಅಲೆದಾಡುತ್ತಿರುವುದನ್ನು ಗಮನಿಸಿ ಅಗತ್ಯ ಕ್ರಮಕೈಗೊಳ್ಳುವುದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅದರಂತೆ ಒಟ್ಟಿಗೆ ವಿತರಿಸಲಾಗುತ್ತಿದೆ ಎಂದರು. ಆಶ್ರಯ ಸಮಿತಿ ವಿಷಯ ನಿರ್ವಾಹಕ ಜಯರಾಮ್, ಕಚೇರಿ ಸಹಾಯಕ ಉಮೇಶ್, ಮದನ್ ಇದ್ದರು.

Share this article