ಸತೀಶ ಸಿ.ಎಸ್.
ಕನ್ನಡಪ್ರಭ ವಾರ್ತೆ ರಟ್ಟೀಹಳ್ಳಿತಾಲೂಕಿನ ಚಿಕ್ಕಕಬ್ಬಾರ ಗ್ರಾಮದಲ್ಲಿ ನರೇಗಾ ಯೋಜನೆಯಡಿ ₹10 ಲಕ್ಷ ವೆಚ್ಚದ 17 ಲಕ್ಷ ಲೀಟರ್ ಸಾಮರ್ಥ್ಯದ ಚೆಕ್ ಡ್ಯಾಂ ನಿರ್ಮಾಣ ಮಾಡುವ ಮೂಲಕ ಸಾವಿರಾರು ಎಕರೆಗೆ ನೀರುಣಿಸುವ ಯೋಜನೆ ಜಾರಿಗೊಳಿಸಲಾಗಿದೆ. ರೈತರ ಬದುಕು ಹಸನಾಗಲು ಗ್ರಾಪಂ ಸಹಕಾರಿಯಾಗಿದೆ.
ಹಾವೇರಿ ಜಿಲ್ಲೆ ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ನರೇಗಾ ಯೋಜನೆಯಡಿ ಸಾವಿರಾರು ರೈತ ಕುಟುಂಬ ಹಾಗೂ ಬಡ ವರ್ಗದ ಕೂಲಿ ಕಾರ್ಮಿಕರಿಗೆ ವರ್ಷ ಪೂರ್ತಿ ಕೆಲಸ ನೀಡುವ ಮೂಲಕ ಬದುಕಿನ ಭರವಸೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕೂಲಿ ಕಾರ್ಮಿಕರು ಸಂತಸ ವ್ಯಕ್ತಪಡಿಸಿದರು.ತಾಲೂಕಿನ ಹಿರೇಕಬ್ಬಾರ ಗ್ರಾಪಂ ವ್ಯಾಪ್ತಿಯ ಚಿಕ್ಕಕಬ್ಬಾರ ಗ್ರಾಮದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅತಿ ಕಡಿಮೆ ವೆಚ್ಚದಲ್ಲಿ 17 ಲಕ್ಷ ಲೀಟರ್ ಸಾಮರ್ಥ್ಯದ ಮಾದರಿ ಚೆಕ್ ಡ್ಯಾಂ ನಿರ್ಮಾಣ ಮಾಡಿ, ಈ ಭಾಗದ ನೂರಾರು ನಿಷ್ಕ್ರಿಯ ಬೋರ್‌ವೆಲ್‌ಗಳಿಗೆ ಜೀವ ಕಳೆ ತರಲಾಗಿದೆ. ಬೇಸಿಗೆಯಲ್ಲೂ ಕೃಷಿ ಚಟುವಟಿಕೆ ನಡೆಸಲು ಸಹಕಾರಿಯಾಗಿದೆ. ಅಲ್ಲದೆ ನೂರಾರು ಪ್ರಾಣಿ ಪಕ್ಷಿಗಳ ಆಶ್ರಯ ತಾಣವಾಗಿ ಮಾರ್ಪಟ್ಟಿದೆ.
ಗ್ರಾಮದಲ್ಲಿ ವ್ಯರ್ಥವಾಗಿ ಹರಿದು ಹೋಗುವ ಮಳೆ ನೀರನ್ನು ''''ಕ್ಯಾಚ್ ದಿ ರೇನ್'''' ಎಂಬ ಘೋಷಣೆಯೊಂದಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ರೈತರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮಸ್ಥರ ಸಹಕಾರದಿಂದ ಕ್ರಿಯಾ ಯೋಜನೆ ತಯಾರಿಸಿ, 2024-25ನೇ ಸಾಲಿನಲ್ಲಿ ಅಂದಾಜು ₹10 ಲಕ್ಷ ವೆಚ್ಚದ 17 ಲಕ್ಷ ಲೀಟರ್ ಸಾಮರ್ಥ್ಯದ ಚೆಕ್ ಡ್ಯಾಂ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಅದಕ್ಕಾಗಿ 1445 ಮಾನವ ದಿನಗಳನ್ನು ಸೃಜನೆ ಮಾಡಿ, 5.5 ಲಕ್ಷ ಕೂಲಿ ಪಾವತಿಸಲಾಗಿದೆ. ಚೆಕ್‌ಡ್ಯಾಂ 14 ಮೀಟರ್ ಉದ್ದವಿದೆ. ಡ್ಯಾಂ ನಿರ್ಮಾಣಕ್ಕೆ ಸಾಮಗ್ರಿಗಾಗಿ ₹4.64 ಲಕ್ಷ ವೆಚ್ಚ ಮಾಡಲಾಗಿದೆ. ಇದು ಬೇಸಿಗೆಯಲ್ಲೂ ನೂರಾರು ರೈತರ ಜಲ ಮೂಲವಾಗಿದೆ.ಪ್ರಸ್ತುತ ಕಾಲಘಟ್ಟದಲ್ಲಿ ಜಲ ಸಂರಕ್ಷಣೆ ಬಹುಮುಖ್ಯವಾಗಿದ್ದು, ನರೇಗಾ ಯೋಜನೆಯಡಿ ಕಾರ್ಯ ಯಶಸ್ವಿಯಾಗಿ ನಡೆದಿದೆ. ಅಮೃತ ಸರೋವರ ಚೆಕ್ ಡ್ಯಾಂ ನಿರ್ಮಾಣ, ನೀರು ಕಾಲುವೆ ಅಭಿವೃದ್ಧಿ, ಕೃಷಿ ಹೊಂಡ ರೈತರ ಆರ್ಥಿಕ ಭದ್ರತೆಯ ಜತೆಗೆ ನೆಮ್ಮದಿಯ ಬದುಕು ಕಲ್ಪಿಸಲು ಕ್ರಮವಹಿಸಲಾಗುವುದು. ಕಡಿಮೆ ವೆಚ್ಚದಲ್ಲಿ ಅರ್ಥಪೂರ್ಣ ಚೆಕ್ ಡ್ಯಾಂ ನಿರ್ಮಾಣದಿಂದ ರೈತರು ಸಂತಸಗೊಂಡಿದ್ದಾರೆ ಎಂದು ಜಿಪಂ ಸಿಇಒ ಅಕ್ಷಯ ಶ್ರೀಧರ ಹೇಳಿದರು.
ಹಳ್ಳದ ನೀರು ಮಳೆಗಾಲದಲ್ಲಿ ಹರಿದು ಹೋಗುತ್ತಿತ್ತು, ಪ್ರಸ್ತುತ ವರ್ಷ ಗ್ರಾಪಂ ವತಿಯಿಂದ ಚೆಕ್ ಡ್ಯಾಂ ನಿರ್ಮಾಣ ಮಾಡಿದ್ದರಿಂದ ನಮಗೆ ಸದಾ ಕಾಲ ನೀರು ಸಿಗಲಿದೆ. ಬದುಗಳ ಕೊರಕಲು, ಬೆಳೆ ನಷ್ಟ ತಪ್ಪಿದಂತಾಗಿ, ಉತ್ತಮ ಬೆಳೆ ಬೆಳೆಯಲು ಸಹಾಯಕಾರಿಯಾಗಿದೆ ಗ್ರಾಮದ ರೈತ ಮೌಲಾಸಾಬ ದೊಡ್ಡಮನಿ ಹೇಳಿದರು.ಹಿರೇಕಬ್ಬಾರ ಗ್ರಾಪಂ ವ್ಯಾಪ್ತಿಯಲ್ಲಿ ಚೆಕ್ ಡ್ಯಾಂ ನಿರ್ಮಾಣ ಮಾಡಿದ್ದರಿಂದ ನೂರಾರು ರೈತರಿಗೆ ಉಪಯುಕ್ತವಾಗಿದೆ. ಉತ್ತಮ ಬೆಳೆ ಬೆಳೆಯಲು ಸಹಕಾರಿಯಾಗಿದೆ. ರೈತರು ಆರ್ಥಿಕವಾಗಿ ಸದೃಢರಾಗಲು ಸಹಕಾರಿಯಾಗಿದೆ ಗ್ರಾಮದ ಲಕ್ಷ್ಮೀಕಾಂತ ಬೊಮ್ಮಣ್ಣನವರ ಹೇಳಿದರು.