ಯಲಬುರ್ಗಾ: ಚಿಕ್ಕವಂಕಲಕುಂಟಾದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ₹೮ ಕೋಟಿ ವೆಚ್ಚದಲ್ಲಿ ಬುದ್ಧ ಬಸವ ಅಂಬೇಡ್ಕರ್ ಭವನ ನಿರ್ಮಿಸಲಾಗುತ್ತಿದೆ. ಭವನಕ್ಕೆ ಅಗತ್ಯ ಮೂಲ ಸೌಕರ್ಯ ಒದಗಿಸುವ ಮೂಲಕ ಗುಣಮಟ್ಟದ ಕಾಮಗಾರಿ ನಿರ್ವಹಿಸಬೇಕು ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ಬುದ್ಧ ಬಸವ ಅಂಬೇಡ್ಕರ್ ಭವನ ಮಾರುತೇಶ್ವರ ಜಾತ್ರೆಯ ದಿನ ಲೋಕಾರ್ಪಣೆಯಾಗಲಿದೆ. ಬಡವರ ಅನುಕೂಲಕ್ಕೆ ನಿರ್ಮಾಣವಾಗುವ ಭವನದಲ್ಲಿ ಎಸ್ಸಿ, ಎಸ್ಟಿ ವರ್ಗದವರ ಮದುವೆ ಕಾರ್ಯಕ್ಕೆ ₹೧೦ ಸಾವಿರ, ಇತರರಿಗೆ ₹೨೦ ಸಾವಿರ ನಿಗದಿ ಮಾಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.
ಹಿರೇವಂಕಲಕುಂಟಾ-ಗಾಣಧಾಳ ಬೈಪಾಸ್ ರಸ್ತೆಗೆ ಭೂಸ್ವಾಧೀನ ಬಳಿಕ ವರ್ಷದೊಳಗೆ ಕಾಮಗಾರಿ ಪ್ರಾರಂಭವಾಗಲಿದೆ. ಹುಬ್ಬಳ್ಳಿ-ಕುಷ್ಟಗಿ ರೈಲು ಪ್ರಾರಂಭವಾಗಿದ್ದು, ಇನ್ನೊಂದು ರೈಲು ಸಂಚಾರ ಪ್ರಾರಂಭಿಸಲಾಗುವುದು. ಇನ್ನೆರಡು ವರ್ಷದಲ್ಲಿ ಕಲಬುರ್ಗಿ ವರೆಗೆ ರೈಲು ಸಂಚಾರಕ್ಕೆ ಅನುಕೂಲ ಮಾಡಿ ಕೊಡುದಾಗಿ ತಿಳಿಸಿದರು.ನೇರ ಪ್ರಸಾರ ವೀಕ್ಷಿಸಿ:
ಕೃಷ್ಣಾ ಬಿಸ್ಕೀಂ ನೀರಾವರಿ ಯೋಜನೆ ಕುರಿತು ಮಂಗಳವಾರ ಸುವರ್ಣ ಸೌಧದ ಸದನದಲ್ಲಿ ಪ್ರಸ್ತಾವನೆ ಮಾಡುತ್ತೇನೆ. ಮಾಧ್ಯಮಗಳಲ್ಲಿ ನೇರ ಪ್ರಸಾರ ವೀಕ್ಷಿಸಿ ಎಂದು ಜನರಿಗೆ ಕರೆ ನೀಡಿದರು.ತಾಲೂಕಿನ ೩೬ ಕೆರೆ ತುಂಬಿಸಲು ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿ.ಕೆ. ಶಿವಕುಮಾರ ಮತ್ತು ನಾನು ತೀರ್ಮಾನ ಮಾಡಲಾಗಿದ್ದು, ಸುಮ್ಮನೆ ನೀರಾವರಿ ಬಗ್ಗೆ ಭಾಷಣ ನಡೆದರೆ ಸಾಲದು. ಶಾಸಕರಾದವರಿಗೆ ಕಾನೂನು, ಆಡಳಿತ ವ್ಯವಸ್ಥೆ ಗೊತ್ತಿರಬೇಕು. ಬಿಜೆಪಿಯವರು ಚುನಾವಣೆ ಬಂದಾಗ ಮಾತ್ರ ಭಾಷಣ ಮಾಡುತ್ತಾರೆ. ಸದನದಲ್ಲಿ ಖಾಲಿ ಭಾಷಣ ಮಾಡುವ ಬಿಜೆಪಿಗರಿಗೆ ಬೇರೆ ಕೆಲಸ ಇಲ್ಲ ಎಂದರು.
ಗ್ರಾಪಂ ಅಧ್ಯಕ್ಷರನ್ನು ಅವಿಶ್ವಾಸ ಮಾಡಿ ರಾಜೀನಾಮೆ ಕೊಡಿಸಿ, ಬದಲಾಯಿಸಲು ಅಸಾಧ್ಯ. ಅಂಥದ್ದರಲ್ಲಿ ಸಿಎಂ ಬದಲಾವಣೆ ಸಾಧ್ಯನಾ? ಎಂದು ವ್ಯಂಗ್ಯವಾಡಿದ ಅವರು ಜನವರಿ ತಿಂಗಳಲ್ಲಿ ಮಂತ್ರಿಮಂಡಲದ ಸಂಪುಟ ವಿಸ್ತರಣೆ ಆಗಲಿದೆ ಎಂದು ಭವಿಷ್ಯ ನುಡಿದರು.ಈ ಸಂದರ್ಭ ಗ್ರಾಪಂ ಅಧ್ಯಕ್ಷೆ ಹುಲಿಗೆಮ್ಮ ಬಸವರಾಜ ತಳವಾರ್, ತಹಸೀಲ್ದಾರ್ ಪ್ರಕಾಶ ನಾಶಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆರಿಬಸಪ್ಪ ನಿಡಗುಂದಿ, ರಾಘವೇಂದ್ರಾಚಾರ್ ಜೋಷಿ, ಮಹೇಶ ಹಳ್ಳಿ, ಅಶೋಕ ತೋಟದ, ರುದ್ರಪ್ಪ ಮರಕಟ್, ಕುಂಟೆಪ್ಪ ಕಂಬಳಿ, ಆದೇಶ ರೊಟ್ಟಿ, ಅಪ್ಪಣ್ಣ ಜೋಶಿ, ಪಿಡಬ್ಲುಡಿ ಎಇಇ ಮಲ್ಲಿಕಾರ್ಜುನ, ಕೆಆರ್‌ಐಡಿಎಲ್ ಅನೀಲ್ ಪಾಟೀಲ್ ಹಾಗೂ ನಾನಾ ಇಲಾಖೆಗಳ ಅಧಿಕಾರಿಗಳು, ಮುಖಂಡರು ಇದ್ದರು.