ಬಳ್ಳಾರಿಯಲ್ಲಿ ಒಣಮೆಣಸಿನಕಾಯಿ ಮಾರುಕಟ್ಟೆ ನಿರ್ಮಾಣ

KannadaprabhaNewsNetwork |  
Published : Dec 19, 2024, 12:31 AM IST
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ  ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಶೂನ್ಯವೇಳೆ ಮಾತನಾಡಿದ ಶಾಸಕ ವೈ.ಎಂ.ಸತೀಶ್ ಅವರು ಬಳ್ಳಾರಿಯಲ್ಲಿ ಒಣ ಮೆಣಸಿನಕಾಯಿ ಮಾರುಕಟ್ಟೆ ಸ್ಥಾಪನೆಗೆ ಒತ್ತಾಯಿಸಿದರು.  | Kannada Prabha

ಸಾರಾಂಶ

ಒಣಮೆಣಸಿನಕಾಯಿ ಮಾರುಕಟ್ಟೆ ನಿರ್ಮಿಸಲು ₹25 ಕೋಟಿ ವೆಚ್ಚದ ಪ್ರಸ್ತಾವನೆಗೆ ನಬಾರ್ಡ್ ಅನುಮೋದನೆ ನೀಡಿದೆ.

ಬಳ್ಳಾರಿ: ನಗರದ ಹೊರವಲಯದ ಆಲದಹಳ್ಳಿಯಲ್ಲಿ ನಬಾರ್ಡ್, ಎಚ್‌ಕೆಡಿಬಿ ನೆರವಿನೊಂದಿಗೆ ಒಣಮೆಣಸಿನಕಾಯಿ ಮಾರುಕಟ್ಟೆ ಮತ್ತು ಶೀತಲಗೃಹ ನಿರ್ಮಿಸಲು ಕ್ರಮ ವಹಿಸಲಾಗುವುದು ಎಂದು ಎಂದು ಸಚಿವ ಶಿವಾನಂದ ಪಾಟೀಲ ಬುಧವಾರ ವಿಧಾನಪರಿಷತ್ತಿಗೆ ತಿಳಿಸಿದ್ದಾರೆ.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಪ್ರಶ್ನೋತ್ತರ ವೇಳೆ ಶಾಸಕ ವೈ.ಎಂ. ಸತೀಶ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಒಣಮೆಣಸಿನಕಾಯಿ ಮಾರುಕಟ್ಟೆ ನಿರ್ಮಿಸಲು ₹25 ಕೋಟಿ ವೆಚ್ಚದ ಪ್ರಸ್ತಾವನೆಗೆ ನಬಾರ್ಡ್ ಅನುಮೋದನೆ ನೀಡಿದೆ. ಬಳ್ಳಾರಿ ಎಪಿಎಂಸಿ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದೆ. ಎಪಿಎಂಸಿಯಿಂದಲೂ ಸ್ವಲ್ಪ ನೆರವು ನೀಡಲಾಗುವುದು. ಎಚ್‌ಕೆಡಿಬಿಯಿಂದಲೂ ಅನುದಾನ ಪಡೆದು ಒಣಮೆಣಸಿನಕಾಯಿ ಮಾರುಕಟ್ಟೆ ಮತ್ತು ಶೀತಲ ಗೃಹ ನಿರ್ಮಿಸಲಾಗುವುದು ಎಂದು ಹೇಳಿದರು.

ಜಿಲ್ಲೆಯಲ್ಲಿ ಸುಮಾರು 45 ಸಾವಿರ ಎಕರೆ ಪ್ರದೇಶದಲ್ಲಿ ಒಣಮೆಣಸಿನಕಾಯಿ ಬೆಳೆಯಲಾಗುತ್ತಿದೆ. ಮಾರುಕಟ್ಟೆ, ಶೀತಲಗೃಹ ಒಂದೇ ಕಡೆ ಇದ್ದರೆ ರೈತರಿಗೆ ಅನುಕೂಲವಾಗಲಿದೆ. ಈ ದೃಷ್ಟಿಯಲ್ಲಿ ಯೋಜನೆ ರೂಪಿಸಲಾಗುತ್ತಿದೆ ಎಂದರು.

ಬಳ್ಳಾರಿ ಎಪಿಎಂಸಿಯಿಂದ ಅಲದಹಳ್ಳಿಯಲ್ಲಿ ಸುಮಾರು 23 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದು, ಈ ಜಾಗದಲ್ಲಿ ಒಣಮೆಣಸಿನಕಾಯಿ ಮಾರುಕಟ್ಟೆಯನ್ನು ಪಿಪಿಪಿ ಮಾಡೆಲ್‌ನಲ್ಲಿ ನಿರ್ಮಿಸಲು ಎರಡು ಬಾರಿ ಟೆಂಡರ್ ಕರೆದಿದ್ದರೂ ಯಾರೂ ಭಾಗವಹಿಸಿಲ್ಲ ಎಂದು ಪರಿಷತ್ತಿಗೆ ತಿಳಿಸಿದರು.

ಜಿಲ್ಲೆಯ ರೈತರು ಒಣಮೆಣಸಿನಕಾಯಿ ಮಾರಾಟ ಮಾಡಲು ಬ್ಯಾಡಗಿ ಮಾರುಕಟ್ಟೆಗೆ ಹೋಗಬೇಕಿದೆ. ಮಧ್ಯವರ್ತಿಗಳಿಂದಲೂ ಮೋಸಕ್ಕೀಡಾಗುತ್ತಿದ್ದಾರೆ. ಆಲದಹಳ್ಳಿಯಲ್ಲಿ ಮೆಣಸಿನಕಾಯಿ ಮಾರುಕಟ್ಟೆ ನಿರ್ಮಾಣವಾಗುವವರೆಗೆ ತಾತ್ಕಾಲಿಕವಾಗಿ ಬಳ್ಳಾರಿ ಎಪಿಎಂಸಿಯಲ್ಲೇ ಒಂದು ಮೆಣಸಿನಕಾಯಿ ಮಾರುಕಟ್ಟೆ ನಿರ್ಮಿಸಬೇಕು. ಈ ಮೂಲಕ ಮೆಣಸಿನಕಾಯಿ ಬೆಳೆಗಾರರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ವೈ.ಎಂ. ಸತೀಶ್ ಸಚಿವರಿಗೆ ಮನವಿ ಮಾಡಿದರು.

ಈ ಸಂಬಂಧ ಅಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ಹಂತದ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಮೆಗಾಡೈರಿ ಸ್ಥಾಪನೆಗೆ ಸಮಸ್ಯೆಯಿಲ್ಲ:

ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಜಿಲ್ಲಾ ಹಾಲು ಒಕ್ಕೂಟದಿಂದ ಕೊಳಗಲ್ಲು ಬಳಿ 15 ಎಕರೆ ಭೂಮಿಯನ್ನು ಜಿಲ್ಲಾಡಳಿತದ ಪಡೆದು, ₹80 ಕೋಟಿ ವೆಚ್ಚದಲ್ಲಿ ಮೆಗಾ ಡೈರಿ ನಿರ್ಮಾಣಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಸ್ಪಷ್ಟಪಡಿಸಿದ್ದಾರೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ಬಳ್ಳಾರಿ-ವಿಜಯನಗರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ ವೈ.ಎಂ. ಸತೀಶ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಕೆ.ಎನ್. ರಾಜಣ್ಣ, ನಿರ್ದೇಶಕರ ಸಂಖ್ಯೆ ಹೆಚ್ಚಳದ ವಿವಾದ ನ್ಯಾಯಾಲಯದಲ್ಲಿದೆ. ಆದರೆ, ಹೊಸ ಆಡಳಿತ ಮಂಡಳಿ ಅಧಿಕಾರಕ್ಕೆ ಬರುವವರೆಗೂ ಹಾಲಿ ಆಡಳಿತ ಮಂಡಳಿಯೇ ಅಧಿಕಾರದಲ್ಲಿರುತ್ತದೆ ಎಂದು ಉತ್ತರಿಸಿದ್ದಾರೆ.

ಜಿಲ್ಲಾಡಳಿತಕ್ಕೆ ₹2.92 ಕೋಟಿ ಪಾವತಿಸಿ ಕೊಳಗಲ್ಲು ಗ್ರಾಮದ ಸರ್ವೇ ನಂ. 139/ಬಿ ರಲ್ಲಿ 15 ಎಕರೆ ಭೂಮಿ ಖರೀದಿಸಿ ಕೆಎಂಇಆರ್‌ಸಿ ಬಿಡುಗಡೆ ಮಾಡಿರುವ ₹80 ಕೋಟಿ ಅನುದಾನದಿಂದ ಮೆಗಾ ಡೈರಿ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಯಾವುದೇ ಅಭ್ಯಂತರವಿಲ್ಲ ಎಂದರು.

ನರ್ಸಿಂಗ್ ಕಾಲೇಜಿಗೆ ಮನವಿ:

ಸಂಡೂರು ಕ್ಷೇತ್ರದಲ್ಲಿ ಸಾಕಷ್ಟು ಉದ್ಯಮಗಳಿದ್ದು, ಇದಕ್ಕಾಗಿ ಕ್ಷೇತ್ರದಲ್ಲಿ ಯುವಜನರಿಗೆ ಉದ್ಯೋಗಾವಕಾಶ ಕಲ್ಪಿಸಲು ತೋರಣಗಲ್‌ನಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಮಂಜೂರು ಮಾಡಬೇಕು. ಜೊತೆಗೆ ಆರೋಗ್ಯ ಕ್ಷೇತ್ರ ಅಭಿವೃದ್ಧಿಗೆ ಸಂಡೂರಿನಲ್ಲಿ ಸರ್ಕಾರಿ ನರ್ಸಿಂಗ್ ಕಾಲೇಜು ಮಂಜೂರು ಮಾಡುವಂತೆ ಶಾಸಕಿ ಈ.ಅನ್ನಪೂರ್ಣ ಮನವಿ ಮಾಡಿದರು.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಬುಧವಾರ ವಿಧಾನಸಭೆ ಕಲಾಪದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಂಡೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯನ್ನು 100 ಹಾಸಿಗೆಯಿಂದ 200 ಹಾಸಿಗೆಯ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿದ್ದಕ್ಕೆ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ಆದರೆ, ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರು, ಪ್ರಸೂತಿ ತಜ್ಞರು ಮುಂತಾದ ತಜ್ಞ ವೈದ್ಯರ ಕೊರತೆ ನೀಗಿಸಬೇಕು ಎಂದು ಮನವಿ ಮಾಡಿದರು.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಶೂನ್ಯವೇಳೆ ಮಾತನಾಡಿದ ಶಾಸಕ ವೈ.ಎಂ.ಸತೀಶ್ ಬಳ್ಳಾರಿಯಲ್ಲಿ ಒಣ ಮೆಣಸಿನಕಾಯಿ ಮಾರುಕಟ್ಟೆ ಸ್ಥಾಪನೆಗೆ ಒತ್ತಾಯಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಕ್ಷಿಣಕ್ಕೆ ಅನ್ಯಾಯವಾಗಲಿದೆ ಎಂಬ ಕಾಂಗ್ರೆಸ್‌ ಕೂಗಿಗೆ ತಾರ್ಕಿಕ ನೆಲೆ ಇಲ್ಲ
ಮಾಧ್ಯಮಗಳಿಗೆ ಅನವಶ್ಯಕ ಹೇಳಿಕೆ ನೀಡಿದ್ರೆ ಕ್ರಮ : ಡಿಕೆಶಿ