ಮುಂದಿನ ಹಂತದಲ್ಲಿ ಬೃಹತ್ ಕಟ್ಟಡವಾಗಿ ನಿರ್ಮಾಣ

KannadaprabhaNewsNetwork |  
Published : Nov 27, 2025, 01:30 AM IST
26ಸಿಎಚ್ಎನ್‌60ಚಾಮರಾಜನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಪಿ.ಎಂ ಉಷಾ ಯೋಜನೆಯಡಿ ನಾಲ್ಕು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಕಟ್ಟಡ ಕಾಮಗಾರಿಗೆ ಉನ್ನತ ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕ ನಾಗೇಂದ್ರ ಪ್ರಸಾದ್ ಅವರು ಶಂಕುಸ್ಥಾಪನೆ ನೆರವೇರಿಸಿದರು. | Kannada Prabha

ಸಾರಾಂಶ

ಭಾರತ ಸಂವಿಧಾನ ಅಂಗೀಕಾರವಾದ ದಿನದಂದು ಕಾಲೇಜಿನ ನೂತನ ಕಟ್ಟಡ ಕಾಮಗಾರಿಗೆ ಚಾಲನೆ ಸಿಕ್ಕಿರುವುದು ಸಂತಸ ತಂದಿದೆ. ಇದು ಅರ್ಥಪೂರ್ಣ ಕಾರ್ಯಕ್ರಮವಾಗಿದೆ ಎಂದು ಉನ್ನತ ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕ ನಾಗೇಂದ್ರ ಪ್ರಸಾದ್ ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಭಾರತ ಸಂವಿಧಾನ ಅಂಗೀಕಾರವಾದ ದಿನದಂದು ಕಾಲೇಜಿನ ನೂತನ ಕಟ್ಟಡ ಕಾಮಗಾರಿಗೆ ಚಾಲನೆ ಸಿಕ್ಕಿರುವುದು ಸಂತಸ ತಂದಿದೆ. ಇದು ಅರ್ಥಪೂರ್ಣ ಕಾರ್ಯಕ್ರಮವಾಗಿದೆ ಎಂದು ಉನ್ನತ ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕ ನಾಗೇಂದ್ರ ಪ್ರಸಾದ್ ಹೇಳಿದರು.

ಪಿ.ಎಂ ಉಷಾ ಯೋಜನೆಯಡಿ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ನಾಲ್ಕು ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ವಿಶ್ವದಲ್ಲಿ ಬೃಹತ್ ಲಿಖಿತ ಸಂವಿಧಾನ ಅಂಗೀಕರಿಸಿದ ನವೆಂಬರ್ 26 ಅನ್ನು ಸಂವಿಧಾನ ದಿನವಾಗಿ ಎಲ್ಲೆಡೆ ಆಚರಿಸಲಾಗುತ್ತಿದೆ. ಶ್ರೇಷ್ಠ ಸಂವಿಧಾನ ಕೊಡುಗೆ ನೀಡಿದ ಡಾ. ಬಿ.ಆರ್. ಅಂಬೇಡ್ಕರ್ , ಸದಾ ಸ್ಮರಣೀಯರು. ಅವರ ವಿಚಾರಧಾರೆ ಆದರ್ಶಗಳನ್ನು ಪಾಲನೆ ಮಾಡಬೇಕಿದೆ ಎಂದು ತಿಳಿಸಿದರು.

ನೂತನ ಕಟ್ಟಡ ದಲ್ಲಿ ಆರಂಭಿಕವಾಗಿ ಕೆಳಂತಸ್ತು ಹಾಗೂ ಮೊದಲನೆ ಮಹಡಿ ನಿರ್ಮಾಣವಾಗಲಿದೆ. ಮುಂದಿನ ಹಂತದಲ್ಲಿ ಬೃಹತ್ ಕಟ್ಟಡವಾಗಿ ನಿರ್ಮಿಸಲು ಯೋಜಿಸಲಾಗುವುದು ಎಂದು ತಿಳಿದರು.

ಕಾಲೇಜು ಅಭಿವೃದ್ದಿ ಸಮಿತಿಯ ಸದಸ್ಯರಾದ ರಂಗಸ್ವಾಮಿ ಮಾತನಾಡಿ, ಕಾಲೇಜು ನೂತನ ಕಟ್ಟಡವು ಗುಣಮಟ್ಟದಿಂದ ನಿರ್ಮಾಣವಾಗಬೇಕು. ಚಾಮರಾಜನಗರ ಜಿಲ್ಲೆಯು ಗಡಿ ಜಿಲ್ಲೆಯಾಗಿದ್ದು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕಾಲೇಜು ಕಟ್ಟಡ ನಿರ್ಮಿಸಬೇಕಿದೆ. ಉನ್ನತ ಶಿಕ್ಷಣಕ್ಕೆ ಪೂರಕವಾದ ಎಲ್ಲಾ ಸೌಲಭ್ಯಗಳು ಲಭ್ಯವಾಗಬೇಕು. ಇಲ್ಲಿ ವಿದ್ಯಾಭ್ಯಾಸ ಮುಗಿಸಿ ಉನ್ನತ ಹುದ್ದೆಯನ್ನು ವಿದ್ಯಾರ್ಥಿನಿಯರು ಅಲಂಕರಿಸುವ ಮೂಲಕ ಕಾಲೇಜು ಹಾಗೂ ಜಿಲ್ಲೆಗೆ ಹೆಸರಾಗಬೇಕು ಎಂದರು.

ಕಾಲೇಜು ಅಭಿವೃದ್ದಿ ಸಮಿತಿಯ ಮತ್ತೋರ್ವ ಸದಸ್ಯರಾದ ಪರ್ವತರಾಜು ಮಾತನಾಡಿ, ಕಾಲೇಜು ಸ್ಥಾಪನೆಯಾದಾಗ ಕೃಷಿ ಹಾಗೂ ರೇಷ್ಮೆ ಇಲಾಖೆಯ ಬಾಡಿಗೆ ಕಟ್ಟಡದಲ್ಲಿ ಆರಂಭಗೊಂಡಿತು. ನೂತನ ಕಟ್ಟಡ ಶಂಕುಸ್ಥಾಪನೆಗೊಳ್ಳುತ್ತಿರುವುದು ಸಂತಸದ ವಿಷಯವಾಗಿದೆ. ಕಾಲೇಜು ಉನ್ನತ ಮಟ್ಟದಲ್ಲಿ ಬೆಳೆಯಲು ಪ್ರಮುಖವಾಗಿ ವಿದ್ಯಾರ್ಥಿನಿಯರು ಅತಿ ಹೆಚ್ಚು ಸಂಖ್ಯೆಯಲ್ಲಿ ದಾಖಲಾಗಬೇಕು. ಇಲ್ಲಿನ ವಿದ್ಯಾರ್ಥಿನಿಯರು ಭವಿಷ್ಯದಲ್ಲಿ ಉತ್ತಮ ಬದುಕು ರುಪಿಸಿಕೊಳ್ಳಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲ ಮಹದೇವಸ್ವಾಮಿ ಮಾತನಾಡಿ, ಅತಿ ಸಣ್ಣದಾಗಿ ಆರಂಭವಾದ ಕಾಲೇಜಿಗೆ ಇಂದು ಸ್ವಂತ ಕಟ್ಟಡ ನಿರ್ಮಾಣವಾಗುತ್ತಿರುವುದು ಎಲ್ಲಾ ಬೋಧಕ, ಬೋಧಕೇತರ ಹಾಗೂ ವಿದ್ಯಾರ್ಥಿಗಳಿಗೆ ಹರ್ಷ ತಂದಿದೆ. ಉಷಾ ಯೋಜನೆ ಅಡಿಯಲ್ಲಿ ₹4 ಕೋಟಿ ಹಣ ಕಟ್ಟಡಕ್ಕೆ ಬಿಡುಗಡೆಯಾಗಿದೆ. ಮುಂದಿನ ದಿನಗಳಲ್ಲಿ ಕಾಲೇಜಿನ ಹಿರಿಮೆಯನ್ನು ಹೆಚ್ಚಿಸಲು ಶ್ರಮವಹಿಸಲಿದ್ದೇವೆ ಎಂದರು.

ಕಾಲೇಜು ಅಭಿವೃದ್ದಿ ಸಮಿತಿಯ ಸದಸ್ಯರಾದ ರಂಗಸ್ವಾಮಿ ಹೆಬ್ಬಸೂರು ಉಪಸ್ಥಿತರಿದ್ದರು.

PREV

Recommended Stories

ಡಿಕೆಶಿ ಭೇಟಿಯಾದ್ರೂ ಸಿದ್ದುಗೇ ನಮ್ಮ ಬೆಂಬಲ: ಜಾರಕಿಹೊಳಿ
2028ಕ್ಕೆ ಕಾಂಗ್ರೆಸ್‌ ಅಧಿಕಾರಕ್ಕೆ ತರಲು ಸತೀಶ್‌ ಜತೆ ಚರ್ಚೆ : ಡಿಕೆ