ಸಚಿವ ಸುಧಾಕರ್ ರವರ ಸೂಚನೆಯಂತೆ ಮಾದರಿ ನಗರ ನಿರ್ಮಾಣ

KannadaprabhaNewsNetwork |  
Published : Dec 03, 2025, 01:45 AM IST
ಚಿತ್ರ 2 | Kannada Prabha

ಸಾರಾಂಶ

ಹಿರಿಯೂರು ನಗರದ ನಗರಸಭೆ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 2026-2027ನೇ ಸಾಲಿನ ಕರಡು ಆಯವ್ಯಯ ಅಂದಾಜು ಪಟ್ಟಿ ತಯಾರಿಕೆ ಸಂಬಂಧ ಕರೆದಿದ್ದ ಸಾರ್ವಜನಿಕರ ಸಮಾಲೋಚನಾ ಸಭೆ ಉದ್ದೇಶಿಸಿ ಪೌರಾಯುಕ್ತ ಎ.ವಾಸಿಂ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ನಗರದ ಸಂಪೂರ್ಣ ಚಿತ್ರಣ ಬದಲಿಸಿ ಅಭಿವೃದ್ಧಿ ಹೊಂದಿದ ನಗರ ನಿರ್ಮಾಣಕ್ಕೆ ಎಲ್ಲರೂ ಸಲಹೆ ಸಹಕಾರ ನೀಡಬೇಕು. ಬರುವ ಬಜೆಟ್‌ನಲ್ಲಿ ನಿಮ್ಮ ಸಲಹೆಗಳಿಗೆ ಮೊದಲ ಆದ್ಯತೆ ನೀಡಿ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ರವರ ಆದೇಶದ ಮೇರೆಗೆ ಮಾದರಿ ನಗರ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತದೆ ಎಂದು ಪೌರಾಯುಕ್ತ ಎ.ವಾಸಿಂ ಹೇಳಿದರು.

ನಗರದ ನಗರಸಭೆ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 2026-2027ನೇ ಸಾಲಿನ ಕರಡು ಆಯವ್ಯಯ ಅಂದಾಜು ಪಟ್ಟಿ ತಯಾರಿಕೆ ಸಂಬಂಧ ಕರೆದಿದ್ದ ಸಾರ್ವಜನಿಕರ ಸಮಾಲೋಚನಾ ಸಭೆ ಉದ್ದೇಶಿಸಿ ಮಾತನಾಡಿದರು.

ನಗರದ ವ್ಯಾಪಾರ ವಹಿವಾಟಿಗೆ ಸಹಾಯ ಧನ ಯೋಜನೆ ಇದ್ದು ಈಗಾಗಲೇ ಅರ್ಜಿ ಆಹ್ವಾನಿಸಲಾಗಿದ್ದು ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುವುದು. ಮಟನ್ ಮಾರ್ಕೆಟ್ ನಲ್ಲಿ ಸ್ವಚ್ಛತೆ ಕಾಪಾಡಲು ಮತ್ತು ಬಾಡಿಗೆ ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಹೊಸ ಮಾರ್ಕೆಟ್ ಮಾಡಲು ಸಚಿವರ ಗಮನಕ್ಕೆ ತರಲಾಗಿದೆ. ಮುಂದಿನ ದಿನಗಳಲ್ಲಿ ನಗರ ವ್ಯಾಪ್ತಿಯಲ್ಲಿ ಎರಡು ಹಂತದ ಒಳ ಚರಂಡಿ ಆಗಲಿದೆ. ಯಾವ ವಾರ್ಡ್ ಬಿಡದೇ ಒಳ ಚರಂಡಿ ವ್ಯವಸ್ಥೆ ಮಾಡಲಾಗುವುದು ಎಂದರು.

ಬೀದಿ ಬದಿ ವ್ಯಾಪಾರಿಗಳಿಗೆ ಫುಡ್ ಕೋಡ್ ಮಾಡುವ ಯೋಜನೆ ಇದೆ. ಎಂಜಿನಿಯರ್‌ಗಳನ್ನು ಕರೆದುಕೊಂಡು ಹೋಗಿ ಆಕಾರ ನೋಡಿಕೊಂಡು ಬಂದಿದ್ದೇವೆ. ಅತೀ ಶೀಘ್ರದಲ್ಲೇ ಸ್ಥಳಾವಕಾಶ ಕಲ್ಪಿಸಲಾಗುವುದು. ಸಾರ್ವಜನಿಕರ ಸುಗಮ ಸಂಚಾರಕ್ಕೆ ಎಲ್ಲಾ ಕಡೆಯೂ ನಾಮಫಲಕ ಹಾಕುವ ಕೆಲಸ ಮಾಡಲಾಗುತ್ತದೆ. ಪಾರ್ಕ್ ಗಳ ಅಭಿವೃದ್ಧಿಗೆ ಅನುದಾನವಿದ್ದು ಆ ಕೆಲಸವನ್ನೂ ಶೀಘ್ರ ಮಾಡಲಾಗುವುದು. ಸಾರ್ವಜನಿಕರು ಮನೆಗಳನ್ನು ನಿರ್ಮಾಣ ಮಾಡಿಕೊಳ್ಳುವಾಗ ನಿರ್ಮಾಣ ಹಂತದ ನಿಯಮಗಳನ್ನು ಪಾಲಿಸಬೇಕು ಎಂದರು.

ನಗರಸಭೆ ನಾಮ ನಿರ್ದೇಶನ ಮಾಜಿ ಸದಸ್ಯ ಶಿವಕುಮಾರ್ ಮಾತನಾಡಿ, ನಗರದಲ್ಲಿ ಬೀದಿ ಬದಿಯ ವ್ಯಾಪಾರಿಗಳಿಗೆ ತೊಂದರೆಯಾಗುತ್ತಿದ್ದು ವಾಣಿ ವಿಲಾಸ ಶಾಲಾ ಹಿಂಭಾಗದಲ್ಲಿ 12 ಅಡಿ ರಸ್ತೆ ಇದ್ದು ಅಲ್ಲಿ ಅವರಿಗೆ ವ್ಯಾಪಾರಕ್ಕೆ ಅನುವು ಮಾಡಿಕೊಡಬೇಕು ಎಂದರು.

ದಲಿತ ಮುಖಂಡ ಕೆಪಿ ಶ್ರೀನಿವಾಸ್ ಮಾತನಾಡಿ ನಗರದ ವಿವಿಧ ಬಡಾವಣೆಗಳಲ್ಲಿನ ರಸ್ತೆಗಳನ್ನು ಅಭಿವೃದ್ಧಿಗೊಳಿಸಬೇಕು. ನಗರಕ್ಕೆ ಬರುವ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು.ಆರೋಗ್ಯದ ದೃಷ್ಟಿಯಿಂದ ಪೌರಕಾರ್ಮಿಕರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಪೌರ ಕಾರ್ಮಿಕರ ಮಕ್ಕಳಿಗೆ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ಮೀಸಲಿಡಬೇಕು ಎಂದರು.

ಪತ್ರಕರ್ತ ಹೆಂಜಾರಪ್ಪ ಮಾತನಾಡಿ 1 ರಿಂದ 5 ನೇ ವಾರ್ಡ್ ವರೆಗೆ ಯುಜಿಡಿ ಯೋಜನೆ ಕೈ ಬಿಡಲಾಗಿದೆ. ಅದನ್ನು ಸೇರಿಸಬೇಕು.ಒಂದನೇ ವಾರ್ಡ್ ನಲ್ಲಿ ಒಂದು ರಸ್ತೆ ನಿರ್ಮಾಣ ತಡೆಯಲಾಗಿದೆ. ಅಲ್ಲಿ ಶೀಘ್ರ ರಸ್ತೆ ನಿರ್ಮಾಣ ಆಗಬೇಕು ಎಂದರು.

ಅಬ್ದುಲ್ ಅಜೀಜ್ ಮಾತನಾಡಿ ಮಟನ್ ಮಾರ್ಕೆಟ್ ನಿಂದ ನಗರಸಭೆಗೆ ಆದಾಯ ಬರುತ್ತಿಲ್ಲ. ಆದರೂ ಪೌರಕಾರ್ಮಿಕರು ದಿನವೂ ಅಲ್ಲಿ ಸ್ವಚ್ಛತೆ ಮಾಡುತ್ತಿದ್ದಾರೆ. ಸ್ವಚ್ಛತೆ ಕಾಪಾಡುವ ಕಾರ್ಮಿಕರನ್ನು, ಸಾರ್ವಜನಿಕರನ್ನು ಗುರುತಿಸಿ ಪ್ರಶಂಸನಾ ಪತ್ರ ನೀಡುವ ವ್ಯವಸ್ಥೆ ಮಾಡಿ. ಅದರಿಂದ ಇನ್ನಷ್ಟು ಉತ್ತೇಜನ ನೀಡಿದಂತಾಗುತ್ತದೆ ಎಂದರು. ಈ ವೇಳೆ ಶಿವು ಖಂಡೇನಹಳ್ಳಿ, ರಾಘವೇಂದ್ರ, ಅರುಣ್ ಕುಮಾರ್, ಸೈಯದ್ ಮುಸ್ತಾಕ್, ಮಹಾಲಿಂಗಪ್ಪ, ಮಾರುತೇಶ್, ಗುರು ಎಂಜಿನಿಯರ್, ನಗರಸಭೆ ಎಂಜಿನಿಯರ್ ಶ್ರೀರಂಗಯ್ಯ, ಆರೋಗ್ಯ ನಿರೀಕ್ಷಕರಾದ ಸಂಧ್ಯಾ, ಮಹಾಲಿಂಗರಾಜ್ ಸೇರಿದಂತೆ ನಗರಸಭೆ ಸಿಬ್ಬಂದಿಗಳು, ಪೌರಕಾರ್ಮಿಕರು, ವರ್ತಕರು, ಸಾರ್ವಜನಿಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲೆಗಾಗಿ ಆಗ್ರಹಿಸಿ ಗೋಕಾಕ ಬಂದ್‌ ಇಂದು
ಒಂದೇ ಸಂಸ್ಥೆಯಿಂದ 50 ಜನ ಅಗ್ನಿವೀರರಾಗಿ ಆಯ್ಕೆ