ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಬೆಳಗಾವಿಯಲ್ಲಿ ಮರಾಠಿ ,ಕನ್ನಡ ಎಂದು ಮತಗಳು ಚಲಾವಣೆಯಾಗುತ್ತಿದ್ದವು. ಆ ಪರಿಸ್ಥಿತಿ ಇಂದು ಬದಲಾಗಿದ್ದು, ಅಲ್ಲಿಯೂ ಕೂಡ ಅಭಿವೃದ್ಧಿ ಆಧಾರದಲ್ಲಿ ನಡೆಯುತ್ತಿರುವುದು ಉತ್ತಮ ಬೆಳವಣಿಗೆ. ಕೊಡಗು ಸೇರಿದಂತೆ ಹಲವಡೆ ಧರ್ಮದ ಆಧಾರದಲ್ಲಿ ನಡೆಯುತ್ತಿದ್ದ ಪರಿಸ್ಥಿತಿ ಬದಲಾಗಿದೆ ಎಂದರು.
ವಿರಾಜಪೇಟೆ-ಬೈಂದೂರು ರಾಜ್ಯ ಹೆದ್ದಾರಿಯ ಐಗೂರು ಗ್ರಾಮದಲ್ಲಿ ರು. 10 ಕೋಟಿ ವೆಚ್ಚದ ನೂತನ ಸೇತುವೆ ನಿರ್ಮಾಣಕ್ಕೆ ಶನಿವಾರ ಚಾಲನೆ ನೀಡಿ, ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಸಾಕಷ್ಟು ರಸ್ತೆ ಅಭಿವೃದ್ಧಿಗೆ ಬೇಡಿಕೆ ಇದೆ. ಎಲ್ಲ ರಸ್ತೆಗಳೂ ಉತ್ತಮವಾಗಿರಬೇಕೆಂಬ ಚಿಂತನೆಯೊಂದಿಗೆ ಇಲಾಖೆ ಕೆಲಸ ಮಾಡುತ್ತಿದೆ. ಇನ್ನೂ ನಮ್ಮ ಸರ್ಕಾರಕ್ಕೆ ಮೂರು ವರ್ಷಗಳ ಅವಧಿ ಇರುವುದರಿಂದ, ಎಲ್ಲ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.ಸ್ವಾತಂತ್ರ್ಯ ಪೂರ್ವದಲ್ಲಿಯೇ ನಿರ್ಮಾಣ ಮಾಡಿರುವ ಸೇತುವೆ 100 ವರ್ಷಗಳಿಗೂ ಹೆಚ್ಚಿನ ಕಾಲ ಬಾಳಿಕೆ ಬಂದಿದ್ದು, ಈಗ ಆಧುನಿಕ ಯೋಜನೆಗಳನ್ನು ಬಳಸಿಕೊಂಡು ಇನ್ನೂ ಹೆಚ್ಚಿನ ವರ್ಷಗಳು ಜನರ ಉಪಯೋಗಕ್ಕೆ ಬರುವಂತಹ ಸೇತುವೆ ನಿರ್ಮಾಣ ಮಾಡುವ ಮೂಲಕ ಇತಿಹಾಸದಲ್ಲಿ ಉಳಿಯುವಂತಾಗಬೇಕೆಂದರು.
ಶಾಸಕ ಡಾ. ಮಂತರ್ ಗೌಡ ಮಾತನಾಡಿ, 100 ವರ್ಷಗಳ ಹಿಂದೆ ಬ್ರಿಟಿಷರು ಆಡಳಿತ ನಡೆಸುತ್ತಿದ್ದ ಸಂದರ್ಭ ಲಾರ್ಡ್ ಲೂಯಿಸ್ 1837ರಲ್ಲಿ ನಿರ್ಮಿಸಿದ್ದ ಸೇತುವೆ ದುರ್ಬಲಗೊಂಡಿರುವುದರಿಂದ ನೂತನ ಸೇತುವೆ ನಿರ್ಮಾಣಕ್ಕೆ ಮುಂದಾಗಲಾಗಿದೆ. ರಾಜ್ಯ ಸರ್ಕಾರ ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುತ್ತಿದ್ದು, ಯೋಜನೆಗಳ ಯಶಸ್ವಿಗೆ ಸ್ಥಳೀಯರು ಸಹಕಾರ ಮುಖ್ಯವಾಗಿದೆ ಎಂದರು.