
ಕನ್ನಡಪ್ರಭ ವಾರ್ತೆ ಶ್ರೀಮಂಗಲ
ಈ ಸಂದರ್ಭ ಮಾತನಾಡಿದ ಅವರು, ಬಹಳ ವರ್ಷಗಳಿಂದ ದುರಸ್ತಿಯಾಗಬೇಕಾಗಿದ್ದ ಸೇತುವೆಗೆ ಸಣ್ಣ ನೀರಾವರಿ ಇಲಾಖೆಯಿಂದ ಉಸ್ತುವಾರಿ ಸಚಿವ ಬೋಸರಾಜು ಅವರು ತಮ್ಮ ಮನವಿಗೆ ಸ್ಪಂದಿಸಿ 2.5 ಕೋಟಿ ರು. ಅನುದಾನ ಒದಗಿಸಿದ್ದು, ಇದರಲ್ಲಿ ಸೇತುವೆ ಮತ್ತು ಚೆಕ್ ಡ್ಯಾಮ್ ನಿರ್ಮಾಣವಾಗಲಿದೆ. ಇದರಿಂದ ಇಲ್ಲಿನ ಮುಖ್ಯ ದೇವಸ್ಥಾನದ ಭಕ್ತಾದಿಗಳಿಗೆ ಮತ್ತು ಗ್ರಾಮಸ್ಥರಿಗೆ ತೆರಳಲು ಮಾರ್ಗ ಸುಗಮವಾಗಲಿದೆ ಹಾಗೂ ಚೆಕ್ ಡ್ಯಾಮ್ ನಿರ್ಮಾಣದಿಂದ ಈ ಭಾಗದ ರೈತರಿಗೆ ಬೇಸಿಗೆಯಲ್ಲಿ ನೀರಿನ ಸಂಗ್ರಹದಿಂದ ಕೃಷಿಗೆ ಉಪಯೋಗಿಸಿಕೊಳ್ಳಲು ಅವಕಾಶವಾಗಲಿದೆ ಎಂದು ಹೇಳಿದರು.
ಈ ಮೂಲಕ ಒಳ್ಳೆಯ ಯೋಜನೆಯನ್ನು ಸರ್ಕಾರ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಸಚಿವರು ಮತ್ತು ರಾಜ್ಯ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ಈ ಯೋಜನೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಗುತ್ತಿಗೆದಾರರು ಹಾಗೂ ಇಂಜಿನಿಯರ್ ಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.ಕಾಮಗಾರಿಯನ್ನು ಒಂದು ತಿಂಗಳಲ್ಲಿ ಮುಗಿಸುತ್ತೇವೆ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ. ಈ ಬಾರಿಯೂ ಮಳೆ ಕಳೆದ ವರ್ಷದಷ್ಟೇ ಬರುತ್ತದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ. ಎಲ್ ನಿನೊ ಪರಿಣಾಮದಿಂದ ಮೇ ತಿಂಗಳ ಕೊನೆಯ ವಾರದಿಂದಲೇ ಹೆಚ್ಚಿನ ಮಳೆಯಾಗಬಹುದು ಎಂದು ಹೇಳಿದರು.ಅನೇಕ ಯೋಜನೆಗಳು, ಕಾರ್ಯಕ್ರಮಗಳು ಗ್ರಾಮದ ಮೂಲೆ ಮೂಲೆಗಳಲ್ಲಿ ಆಗುತ್ತಿವೆ. ಅಭಿವೃದ್ಧಿ ನಿಂತ ನೀರಲ್ಲ. ಅದು ನಿರಂತರವಾಗಿ ನಡೆಯುತ್ತಿರುತ್ತದೆ. ತಾವೆಲ್ಲ ಇದರಲ್ಲಿ ಕೈಜೋಡಿಸಬೇಕು ಹಾಗೂ ಸಹಕರಿಸಬೇಕು. ಹೀಗಾದರೆ ಇನ್ನಷ್ಟು ಅಭಿವೃದ್ಧಿ ಯೋಜನೆಗಳನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದ ಅವರು, ಮುಂದಿನ ಅವಧಿಯಲ್ಲಿ ಇನ್ನಷ್ಟು ಯೋಜನೆ ಮಾಡಬೇಕಾಗಿದೆ. ಮಾಡಿದ ಯೋಜನೆ ಕಾಮಗಾರಿಗಳನ್ನು ಗುರುತಿಸಿ ಸಹಕಾರ ನೀಡಬೇಕು. ಅಭಿವೃದ್ಧಿಯಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಹೇಳಿದರು.
ದೇವಸ್ಥಾನ ಸಮಿತಿಯ ಮತ್ತೊಬ್ಬ ಪ್ರಮುಖರಾದ ಬಾದುಮಂಡ ವಿಷ್ಣು ಕಾರ್ಯಪ್ಪ ಮಾತನಾಡಿ, ಬೆಟ್ಟದ ತಪ್ಪಲಿನಲ್ಲಿರುವ ಮತ್ತು ಕುಗ್ರಾಮವಾಗಿರುವ ಇಲ್ಲಿನ ಜನರ ಸಮಸ್ಯೆಯನ್ನು ಆಲಿಸಿದ ಶಾಸಕರು ದೊಡ್ಡ ಸೇತುವೆ ನಿರ್ಮಾಣಕ್ಕೆ ಅನುದಾನ ಒದಗಿಸಿದ್ದು, ದೇವಸ್ಥಾನದ ಭಕ್ತಾದಿಗಳು, ಗ್ರಾಮಸ್ಥರಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.
ಈ ಸಂದರ್ಭ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಎ.ಜೆ. ಬಾಬು, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ಹಿರಿಯರಾದ ಚೆಪ್ಪುಡೀರ ಪೊನ್ನಪ್ಪ, ಚೆಕ್ಕೇರ ಕಾಳಯ್ಯ, ತೀತಿರ ಪ್ರಭು ಸುಬ್ಬಯ್ಯ, ಪೆಮ್ಮಂಡ ರಾಜಾ ಕುಶಾಲಪ್ಪ, ಮಚ್ಚಮಾಡ ಉದಯ, ಬಾದುಮಂಡ ವಿಷ್ಣು ಕಾರ್ಯಪ್ಪ, ಅಪ್ಪಚ್ಚಂಗಡ ಮೋಟಯ್ಯ, ಚೊಟ್ಟೆಯಂಡಮಾಡ ಉದಯ, ಬೊಳ್ಳೇರ ದೀಪಕ್, ಅಜ್ಜಿಕುಟ್ಟಿರ ಗಿರೀಶ್, ಪಮ್ಮು, ಪೊನ್ನು, ಚೆಪ್ಪುಡೀರ ಬೋಪಣ್ಣ, ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಕುಮಾರಸ್ವಾಮಿ ಹಾಗೂ ದೇವಸ್ಥಾನ ಸಮಿತಿಯ ಪ್ರಮುಖರು, ಗ್ರಾಮಸ್ಥರು ಹಾಜರಿದ್ದರು.