ಜಿಲ್ಲೆಯ ಪ್ರತಿ ತಾಲೂಕಿಗೊಂದು ಹೊಸ ಕೆರೆ ನಿರ್ಮಾಣ

KannadaprabhaNewsNetwork |  
Published : Jun 21, 2026, 01:15 AM IST
20ಕೆಡಿವಿಜಿ1, 2-ದಾವಣಗೆರೆ ಜಿಲ್ಲಾಡಳಿತ ಭವನದಲ್ಲಿ ಶನಿವಾರ ನೆಲ-ಜಲ, ಪರಿಸರ ವೃದ್ಧಿ, ಮಳೆ ನೀರು ಕೊಯ್ಲು, ಸಸಿ ನೆಡುವುದು ಮತ್ತು ಜಿಲ್ಲೆಯ ಕೆರೆಗಳ ಸಮರ್ಪಕ ನಿರ್ವಹಣೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ. | Kannada Prabha

ಸಾರಾಂಶ

ಅಂತರ್ಜಲ ಸಂರಕ್ಷಣೆಗೆ ಆದ್ಯತೆ ನೀಡುವ ಜೊತೆಗೆ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಒಂದು ಹೊಸ ಕೆರೆ ನಿರ್ಮಾಣಕ್ಕೆ ಸ್ಥಳ ಪರಿಶೀಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದ್ದಾರೆ.

- ಇನ್ನು ಪದೇಪದೇ ಸಿಸಿ ರಸ್ತೆ, ಫೇವರ್ಸ್‌ ಅಗೆಯಲು ಅವಕಾಶ ಇಲ್ಲ: ಡಿಸಿ ಗಂಗಾಧರಸ್ವಾಮಿ ತಾಕೀತು - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಅಂತರ್ಜಲ ಸಂರಕ್ಷಣೆಗೆ ಆದ್ಯತೆ ನೀಡುವ ಜೊತೆಗೆ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಒಂದು ಹೊಸ ಕೆರೆ ನಿರ್ಮಾಣಕ್ಕೆ ಸ್ಥಳ ಪರಿಶೀಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಶನಿವಾರ ನೆಲ-ಜಲ, ಪರಿಸರ ವೃದ್ಧಿ, ಮಳೆನೀರು ಕೊಯ್ಲು, ಸಸಿ ನೆಡುವುದು ಮತ್ತು ಜಿಲ್ಲೆಯ ಕೆರೆಗಳ ಸಮರ್ಪಕ ನಿರ್ವಹಣೆ ಕುರಿತ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಕೆರೆಗಳ ಹೂಳೆತ್ತುವ ಕಾಮಗಾರಿಗಳ ಜೊತೆಗೆ ಅಗತ್ಯ ಇರುವ ಕಡೆ ಹೊಸ ಕೆರೆಗಳನ್ನು ನಿರ್ಮಿಸಲು ಆದ್ಯತೆ ನೀಡಲಿದೆ. ತಹಸೀಲ್ದಾರರು ಆಯಾ ತಾಲೂಕಿನಲ್ಲಿ ಸ್ಥಳ ಪರಿಶೀಲಿಸಬೇಕು ಎಂದರು.

ಊರಿಗೊಂದು ಕೆರೆ ಮಾಡಲು ಸಾಧ್ಯ ಆಗದಿದ್ದರೂ, ತಾಲೂಕಿಗೆ ಒಂದಾದರೂ ಹೊಸ ಕೆರೆ ನಿರ್ಮಿಸಬೇಕು. ಹೊಸ ಕೆರೆ ನಿರ್ಮಾಣಕ್ಕೆ ಜಾಗದ ಲಭ್ಯತೆ ಪರಿಶೀಲಿಸಿ ವರದಿ ನೀಡಲು ತಹಸೀಲ್ದಾರರಿಗೆ ಸೂಚಿಸಿದೆ. ಜಿಲ್ಲೆಯ ವಿವಿಧ ಕೆರೆಗಳ ಪುನಶ್ಚೇತನ ಕಾರ್ಯ ಭರದಿಂದ ಸಾಗಿದೆ. ಈಗ ದಾವಣಗೆರೆ ತಾ. ಹೊಸಹಳ್ಳಿ, ಚನ್ನಗಿರಿಯ ಬಸಾಪುರ, ನ್ಯಾಮತಿಯ ಕೊಡಚಗೊಂಡನಹಳ್ಳಿ 3 ಪ್ರಮುಖ ಕೆರೆಗಳ ಅಭಿವೃದ್ಧಿ ಕಾಮಗಾರಿಗೆ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ ಎಂದು ಹೇಳಿದರು.

ಕೆರೆ ಎಂಬುದಾಗಿ ಇನ್ನೂ ವರ್ಗೀಕರಣಗೊಳ್ಳದ, ನೀರು ನಿಲ್ಲುತ್ತಿರುವ ಜಾಗ ಗುರುತಿಸಿ, ಅವುಗಳ ವಿಸ್ತೀರ್ಣ ಹೆಚ್ಚಿಸಿ ಕೆರೆಯೆಂದು ದಾಖಲೆಗಳಲ್ಲಿ ಸೇರ್ಪಡೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯ ಇತರೆ ಕೆರೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಮತ್ತು ಕೆರೆಗಳಿಗೆ ಹಳ್ಳ ಹಾಗೂ ನಾಲೆಗಳ ಮೂಲಕ ನೀರು ಬರುವಂತೆ ಕಾಲುವೆಗಳ ವ್ಯವಸ್ಥೆಗೆ ಸೂಚನೆ ನೀಡಲಾಗಿದೆ. ರೈ ತರು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಕೆರೆಗಳ ನಿರ್ಮಾಣ ಮತ್ತು ಅಭಿವೃದ್ಧಿ ಕಾರ್ಯಗಳು ಅತ್ಯಂತ ಉಪಯುಕ್ತವಾಗಲಿವೆ ಎಂದು ಅ‍ವರು ತಿಳಿಸಿದರು.

ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಲು ಹೊಸ ಇಂಗು ಕೆರೆಗಳ ನಿರ್ಮಾಣಕ್ಕೆ ವಿಶೇಷ ಒತ್ತು ನೀಡಲಾಗುತ್ತಿದೆ. ಹೊಸ ಇಂಗು ಕೆರೆ ನಿರ್ಮಾಣಕ್ಕೆ ಪ್ರಸ್ತಾವನೆ ಸಿದ್ಧಪಡಿಸಿ ಕಳಿಸಲಾಗಿದೆ. ಕೆರೆಗಳ ನಿರ್ಮಾಣ, ಮಳೆ ನೀರನ್ನು ಇಂಗಿಸುವುದರಿಂದ ಅಂತರ್ಜಲ ವೃದ್ಧಿಯಾಗುವ ಜೊತೆಗೆ ಸಾಕಷ್ಟು ಅನುಕೂಲವೂ ಆಗಲಿದೆ. ಈಗಾಗಲೇ ತಹಸೀಲ್ದಾರರಿಗೆ ಹೊಸ ಕೆರೆಗಳ ನಿರ್ಮಾಣಕ್ಕೆ ಸೂಕ್ತ ಸ್ಥಳಗಳ ಪರಿಶೀಲನೆಗೆ ಸೂಚನೆ ನೀಡಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.

ನಗರ, ಗ್ರಾಮೀಣ ಭಾಗಗಳಲ್ಲಿ ಸಿಸಿ ರಸ್ತೆ ನಿರ್ಮಿಸುವಾಗ ಅಥವಾ ಪೇವರ್ಸ್ ಅಳವಡಿಸುವಾಗ ದೂರದೃಷ್ಟಿ ಇಟ್ಟುಕೊಂಡು ಕಾಮಗಾರಿ ನಡೆಸಲು ಆದೇಶಿಸಲಾಗಿದೆ. ರಸ್ತೆ ಆದ ಬಳಿಕ ಯುಟಿಲಿಟಿ (ವಿದ್ಯುತ್, ಇಂಟರ್ನೆಟ್, ನೀರು) ಕೇಬಲ್‌ಗಳ ಅಳವಡಿಕೆಗಾಗಿ ಪದೇಪದೇ ರಸ್ತೆ ಅಗೆಯುವುದನ್ನು ತಪ್ಪಿಸಲು ಒಂದು ಪ್ರಮುಖ ನಿರ್ಧಾರ ಕೈಗೊಳ್ಳಲಾಗಿದೆ. ಅದರಂತೆ, ಇನ್ನು ಮುಂದೆ ನಿರ್ಮಿಸಲಾಗುವ ಸಿಸಿ ರಸ್ತೆಗಳಲ್ಲಿ ಕಡ್ಡಾಯವಾಗಿ ಪ್ರತಿ 200 ಅಡಿಗೆ ಒಂದರಂತೆ ರಸ್ತೆಯ ಅಡ್ಡಲಾಗಿ ಕನಿಷ್ಠ 2 ಇಂಚಿನ ** HDPE (High-Density Polyethylene)** ಪೈಪ್‌ ಮೊದಲೇ ಅಳವಡಿಸಲು ಇಲಾಖೆ ಡಿಪಿಆರ್‌ನಲ್ಲೇ ಸೇರಿಸಲು ಆದೇಶಿಸಿದೆ. ಇದರಿಂದ ರಸ್ತೆ ಆಯಸ್ಸು ಹೆಚ್ಚಲಿದೆ. ಜನರ ಹಣ ಪೋಲಾಗುವುದು ತಪ್ಪುತ್ತದೆ ಎಂದರು.

ಉದ್ಯಾನವನಗಳು ಮತ್ತು ರಸ್ತೆಗಳ ಬದಿಯಲ್ಲಿ ಗಿಡ ನೆಡುವುದಷ್ಟೇ ಅಲ್ಲದೇ, ಅವುಗಳಿಗೆ ನಿರಂತರ ನೀರುಣಿಸಿ ಪೋಷಿಸುವುದು ಇಲಾಖೆಗಳ ಜವಾಬ್ದಾರಿ. ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಮರಗಳ ಬುಡದಲ್ಲಿ ಕಾಂಕ್ರೀಟ್ ಹಾಕಿ ಮರಗಳು ಉಸಿರಾಡಲು ತೊಂದರೆ ಆಗದಂತೆ ಎಚ್ಚರಿಕೆ ವಹಿಸಲು ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಕಂದಾಯ, ಅರಣ್ಯ, ಮಹಾನಗರ ಪಾಲಿಕೆ ಸೇರಿದಂತೆ ಎಲ್ಲ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ತಿಳಿಸಿದರು.

ಪರಿಸರ ಸಮತೋಲನ ಕಾಯ್ದುಕೊಳ್ಳಲು ವಿವಿಧ ಸಂಘ- ಸಂಸ್ಥೆಗಳು ಹಾಗೂ ಸ್ವಸಹಾಯ ಸಂಘಗಳ ಸಹಯೋಗದೊಂದಿಗೆ ಸುಮಾರು 1 ಸಾವಿರ ಸಸಿ ನೆಡಲಾಗಿದೆ. ಕಚೇರಿಗಳ ಆವರಣದಲ್ಲಿ ಈಗಾಗಲೇ ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತಿದ್ದು, ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಗಿಡಗಳನ್ನು ನೆಟ್ಟು ಬೆಳೆಸುವ ಮೂಲಕ ಹಸಿರು ವಿಕಾಸಕ್ಕೆ ಕೊಡುಗೆ ನೀಡಬೇಕು ಎಂದು ಡಿಸಿ ಗಂಗಾಧರ ಸ್ವಾಮಿ ತಿಳಿಸಿದರು.

ಜಿಪಂ ಸಿಇಒ ಗಿತ್ತೆ ಮಾಧವ ವಿಠಲ ರಾವ್, ಉಪವಿಭಾಗಾಧಿಕಾರಿ ಸಂತೋಷಕುಮಾರ, ಹೊನ್ನಾಳಿ ಎಸಿ ಎಚ್.ಬಿ.ಚನ್ನಪ್ಪ, ಡಿವೈಎಸ್ಪಿ ಶರಣ ಬಸವೇಶ್ವರ, ಪಾಲಿಕೆ ಆಯುಕ್ತ ಡಾ. ಎನ್.ಮಹಾಂತೇಶ, ಕೃಷಿ ಜಂಟಿ ನಿರ್ದೇಶಕ ಜಿಯಾವುಲ್ಲಾ, ಡಿಎಚ್‌ಒ ಡಾ.ಷಣ್ಮುಖಪ್ಪ, ಸಾಮಾಜಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ನವೀನ್, ರೈತ ಮುಖಂಡ ಬಲ್ಲೂರು ರವಿಕುಮಾರ, ತಹಸೀಲ್ದಾರರು, ರೈತ ಮುಖಂಡರು, ಅಧಿಕಾರಿಗಳು ಇದ್ದರು.

- - -

(ಬಾಕ್ಸ್‌) * ನಾಲೆ ಹೂಳೆತ್ತಲು ಪ್ರಸ್ತಾವನೆ ಭದ್ರಾ ಕಾಲುವೆಯಲ್ಲಿ ಬೆಳೆದಿರುವ ಗಿಡ- ಮರಗಳು, ಜೊಂಡು ಹುಲ್ಲು(ವೀಡ್ಸ್)ಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಸಮ್ಮತಿಸಿದ್ದು, ನಾಲೆಗೆ ನೀರು ಹರಿಸಿದಾಗ ರೈತರಿಗೆ ಯಾವುದೇ ಸಮಸ್ಯೆಯಾಗದಂತೆ ತಡೆಯಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು, ಯಂತ್ರೋಪಕರಣದ ಸಹಾಯದಿಂದ ತ್ವರಿತವಾಗಿ ಹೂಳು ತೆಗೆಯಲು ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಇದಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡುವುದಾಗಿ ಸರ್ಕಾರ ಭರವಸೆ ನೀಡಿದೆ ಎಂದು ಡಿಸಿ ಗಂಗಾಧರ ಸ್ವಾಮಿ ಹೇಳಿದರು.

ದಾವಣಗೆರೆ ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳು ಸಾರ್ವಜನಿಕರ ಅನುಕೂಲಕ್ಕಾಗಿ ಕಡ್ಡಾಯವಾಗಿ ಮಳೆನೀರು ಕೊಯ್ಲು ವ್ಯವಸ್ಥೆ ಅಳವಡಿಸಿಕೊಳ್ಳಬೇಕು. ಕಚೇರಿಗಳ ಅನಗತ್ಯ ವಿದ್ಯುತ್ ವೆಚ್ಚ ಕಡಿಮೆ ಮಾಡಲು ಎಲ್ಲಾ ಸರ್ಕಾರಿ ಕಟ್ಟಡಗಳ ಮೇಲೆ ಸೋಲಾರ್ ರೂಫ್ ಟಾಪ್(ಸೌರಶಕ್ತಿ ಫಲಕ) ಅಳವಡಿಸಲು ಪ್ರಕ್ರಿಯೆ ಆರಂಭಿಸಬೇಕು, ಜೆ.ಎಚ್.ಪಟೇಲ ಬಡಾವಣೆಯ ಬಾಲಭವನದಲ್ಲಿ ಕಡ್ಡಾಯವಾಗಿ ಮಳೆನೀರು ಕೊಯ್ಲು ಪದ್ಧತಿ ಜಾರಿಗೊಳಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ನಿರ್ದೇಶನ ನೀಡಿದ್ದು, ಈ ಬಗ್ಗೆ ಕೈಗೊಂಡ ಕ್ರಮಗಳ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದರು.

- - -

(ಕೋಟ್‌) ಕರ್ನಾಟಕದ ಇತಿಹಾಸದಲ್ಲಿ ಕೆರೆಗಳ ನಿರ್ಮಾಣಕ್ಕೆ ಅಪಾರ ಕೊಡುಗೆಯಿದೆ. ಈ ಹಿಂದೆ ಕೆಂಪೇಗೌಡರ ತಾಯಿ ಊರಿಗೊಂದು ಕೆರೆ ಕಟ್ಟಿಸಲು ಹೇಳುತ್ತಿದ್ದರು. ಅದೇ ಕಾರಣಕ್ಕಾಗಿಯೇ ನಮ್ಮ ರಾಜ್ಯದಲ್ಲಿ ಇಷ್ಟೊಂದು ಕೆರೆಗಳಿವೆ. ಹೊಸ ಕೆರೆಗಳನ್ನು ನಿರ್ಮಿಸುವುದರಿಂದ ನೂರಾರು ಜನರಿಗೆ ಅನುಕೂಲವಾಗುತ್ತದೆ. ಪಶು, ಪಕ್ಷಿಗಳಿಗೆ ನೀರು ಸಿಗುವ ಜೊತೆಗೆ ಪರಿಸರಕ್ಕೂ ಇದರಿಂದ ಅನುಕೂಲವಾಗಲಿದೆ.

- ಜಿ.ಎಂ. ಗಂಗಾಧರ ಸ್ವಾಮಿ, ಜಿಲ್ಲಾಧಿಕಾರಿ.

- - -

-20ಕೆಡಿವಿಜಿ1, 2: ದಾವಣಗೆರೆ ಜಿಲ್ಲಾಡಳಿತ ಭವನದಲ್ಲಿ ಶನಿವಾರ ನೆಲ-ಜಲ, ಪರಿಸರ ವೃದ್ಧಿ, ಮಳೆ ನೀರು ಕೊಯ್ಲು, ಸಸಿ ನೆಡುವುದು ಮತ್ತು ಜಿಲ್ಲೆಯ ಕೆರೆಗಳ ಸಮರ್ಪಕ ನಿರ್ವಹಣೆ ಕುರಿತ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯುತ್‌ ಖಾಸಗೀಕರಣ ವಿರೋಧಿಸಿ ಮಂಡ್ಯದಲ್ಲಿ ಪ್ರತಿಭಟನೆ
ಸಾರ್ವಜನಿಕ ಗ್ರಂಥಾಲಯಕ್ಕೆ ವಿದ್ಯುತ್ ಸಂಪರ್ಕವೇ ಇಲ್ಲ..!