ನಾರಾಯಣ ಮಾಯಾಚಾರಿ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳಪಟ್ಟಣದ ಹೃದಯಭಾಗದಲ್ಲಿ ಹಳೆ ಮಾರುಕಟ್ಟೆಯನ್ನು ತೆರವುಗೊಳಿಸಿದ ಅದೇ ಜಾಗದಲ್ಲಿ ಇದೀಗ ವಿನೂತನ ಅತ್ಯಾಧುನಿಕ ಸೌಲಭ್ಯಗಳುಳ್ಳ ಬೃಹತ್ ಮೆಗಾ ಮಾರ್ಕೆಟ್ ನಿರ್ಮಾಣಗೊಳ್ಳಲಿದೆ. ಕಾಮಗಾರಿಗೆ ಫೆ.27ಕ್ಕೆ ಅಡಿಗಲ್ಲು ಸಮಾರಂಭ ನೆರವೇರುತ್ತಿದ್ದು, ಈ ಕಾರ್ಯಕ್ಕೆ ಪಟ್ಟಣದ ಗಣ್ಯ ವ್ಯಾಪಾರಸ್ಥರು, ಉದ್ಯಮಿಗಳು, ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾರೆ. ಮೆಗಾ ಮಾರ್ಕೆಟ್ ಬಹು ದಿನಗಳ ಜನರ ಕನಸಾಗಿದ್ದು, ಇದೀಗ ಶಾಸಕ ಹಾಗೂ ಕೆಎಸ್‌ಡಿಎಲ್ ಅಧ್ಯಕ್ಷ ಸಿ.ಎಸ್.ನಾಡಗೌಡ (ಅಪ್ಪಾಗಿ) ಅವರು ಈ ಕಾರ್ಯಕ್ಕೆ ಮುಂದಾಗಿದ್ದಾರೆ.
ಈಗಾಗಲೇ ಮುದ್ದೇಬಿಹಾಳ ಪಟ್ಟಣದ ಮುಖ್ಯ ಬಜಾರದ ಗ್ರಾಮ ದೇವತೆ ಕಟ್ಟೆ ಎದುರಿಗಿನ ಹಳೆ ಮಾರುಕಟ್ಟೆ ಕಟ್ಟಡವೂ ಸಂಪೂರ್ಣ ಶಿಥಿಲಾವಸ್ಥೆ ತಲುಪಿದೆ. ಹೀಗಾಗಿ, ಸಾರ್ವಜನಿಕರು ಮತ್ತು ವ್ಯಾಪಾರಸ್ಥರು ಕೂಡ ತೀವ್ರ ಆತಂಕಕ್ಕೊಳಗಾಗಿದ್ದರು. ಜೀವ ಕೈಯಲ್ಲಿ ಹಿಡಿದು ವ್ಯಾಪಾರ ನಡೆಸುತ್ತಿದ್ದರು. ಅಂದಿನ ಸರ್ಕಾರ ಈ ಮಾರುಕಟ್ಟೆಯಿಂದ ಸಾರ್ವಜನಿಕರಿಗೆ ಅಪಾಯವಿದ್ದು, ತೆರವುಗೊಳಿಸುವಂತೆ ಮಾರ್ಚ್ 2022ರಲ್ಲಿಯೇ ಆದೇಶ ನೀಡಿದ್ದರಿಂದ ತೆರವುಗೊಳಿಸಲಾಗಿತ್ತು. ಆದರೆ, ಕಾರಣಾಂತರದಿಂದ ಮಾರುಕಟ್ಟೆ ನಿರ್ಮಾಣ ನೆನಗುದಿಗೆ ಬಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಸಧ್ಯ ಪುರಸಭೆ ಸದಸ್ಯರು ಒಂದುಗೂಡಿ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರ ಬಳಿ ನಿಯೋಗ ತೆರಳಿ ಮೆಗಾ ಮಾರ್ಕೆಟ್ ನಿರ್ಮಾಣಕ್ಕೆ ಮನವಿ ಮಾಡಿದ್ದರು.ಬಳಿಕ, ಮೆಗಾ ಮಾರ್ಕೆಟ್ ನಿರ್ಮಾಣದ ಎಸ್ಟಿಮೇಟ್ ತಯಾರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪೌರಾಡಳಿತ ಸಚಿವ ರಹಿಂ ಖಾನ್ ಅವರನ್ನು ಸಂಪರ್ಕಿಸಿ ಅನುದಾನ ಬಿಡುಗಡೆಗೆ ಒತ್ತಾಯಿಸಲಾಗಿತ್ತು. ನಂತರ ಒಟ್ಟು ₹ 15 ಕೋಟಿಗಳ ವೆಚ್ಚದಲ್ಲಿ ಮೆಗಾ ಮಾರ್ಕೆಟ್ ನಿರ್ಮಾಣಕ್ಕೆ ಹಣಕಾಸು ಇಲಾಖೆ ಪರವಾನಗಿ ನೀಡಿ ಅನುಮೋದನೆ ನೀಡಿತ್ತು. ಬಳಿಕ ಮುದ್ದೇಬಿಹಾಳ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸುಮಾರು ₹ 20 ಕೋಟಿ ಅದರಲ್ಲಿ ತಾಳಿಕೋಟಿಗೆ ₹ 7 ಕೋಟಿ, ನಾಲತವಾಡಕ್ಕೆ ₹ 5 ಕೋಟಿ ಮುದ್ದೇಬಿಹಾಳ ಪಟ್ಟಣ ಅಭಿವೃದ್ಧಿಗೆ ಒಟ್ಟು ₹ 8 ಕೋಟಿ ಹಂಚಲಾಗಿತ್ತು. ಅದರಲ್ಲಿ ಮಾರುಕಟ್ಟೆ ನಿರ್ಮಾಣಕ್ಕೆ ಮೊದಲ ಹಂತದಲ್ಲಿ ₹ 5 ಕೋಟಿ ನೀಡಿ ಟೆಂಡರ್ ಪ್ರಕ್ರಿಯೆ ಕೂಡ ಮುಕ್ತಾಯವಾಗಿದೆ. ಒಟ್ಟು ₹ 15 ಕೋಟಿ ಎಸ್ಎಫ್‌ಸಿ ವಿಶೇಷ ಅನುದಾನದಲ್ಲಿ 46 ಮಳಿಗೆಗಳುಳ್ಳ ಕಟ್ಟಡ. ಸಾರ್ವಜನಿಕ ಶೌಚಾಲಯ, ಎರಡು ಬದಿಯ ಮುಖ್ಯದ್ವಾರದ ಬಳಿ ಇಲೆಕ್ಟ್ರಿಕಲ್ ಲಿಫ್ಟ್ ಸೇರಿದಂತೆ ಒಟ್ಟು ಮೂರು ಮಹಡಿಯ ಅತ್ಯಾಧುನಿಕ ವಿನೂತನ ಮಾದರಿಯ ಮೆಗಾ ಮಾರ್ಕೆಟ್ ನಿರ್ಮಾಣ ಕಾಮಗಾರಿ ನಡೆಯಲಿದೆ. ಅದರಲ್ಲಿ ಮೊದಲ ಹಂತದ ಕಾಮಗಾರಿಗೆ ₹ 5 ಕೋಟಿ ಹಣ ಬಿಡುಗಡೆಯಾಗಿದೆ. ಎರಡನೇ ಹಂತದ ಕಾಮಗಾರಿಗೆ ₹ 5 ಕೋಟಿಗೆ ಮಂಜುರಾತಿ ನೀಡಿದೆ. ಆದರೆ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ನಡೆಯಬೇಕಿದೆ.
------------ಕೋಟ್
ಹಲವು ಬಾರಿ ಪುರಸಭೆ ಸಾಮಾನ್ಯ ಸಭೆಯಲ್ಲಿ ಮೆಗಾ ಮಾರ್ಕೆಟ್ ನಿರ್ಮಾಣಕ್ಕೆ ಸದಸ್ಯರ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಆದರೆ, ಸಾಧ್ಯವಾಗಿರಲಿಲ್ಲ. ಈಗ ಶಾಸಕ ಸಿ.ಎಸ್.ನಾಡಗೌಡ ಸಾಹೇಬರು ನಮ್ಮೆಲ್ಲರ ಮನವಿಗೆ ತಕ್ಷಣ ಸ್ಪಂದಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪೌರಾಡಳಿತ ಸಚಿವ ರಹೀಂ ಖಾನ್ ಅವರಿಗೆ ಹೇಳಿ ವಿಶೇಷ ಅನಿದಾನ ಬಿಡುಗಡೆ ಮಾಡಿಸಿದ್ದಾರೆ.ಮೈಬೂಬ ಗೊಳಸಂಗಿ, ಪುರಸಭೆ ಅಧ್ಯಕ್ಷ.
-----------ಕೋಟ್
ಮೆಗಾ ಮಾರ್ಕೆಟ್ ನಮ್ಮ ಪಟ್ಟಣದ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿತ್ತು. ಈಗ ಕಾಲ ಸನ್ನಿಹಿತವಾಗಿದೆ. ಮಾರ್ಕೆಟ್ ನಿರ್ಮಾಣ ಕಾಮಗಾರಿಗೆ ಚಾಲನೆ ಸಿಕ್ಕಿರುವುದಕ್ಕೆ, ಕಾಮಗಾರಿ ಮಾತ್ರವಲ್ಲದೇ ಇನ್ನೂ ರಸ್ತೆ, ಚರಂಡಿ, ಬೀದಿ ವಿದ್ಯುದ್ದೀಪ, ಶಾಶ್ವತ ಕುಡಿಯುವ ನೀರು, ಉದ್ಯಾನವನಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಉದ್ದೇಶವಿದೆ. ಅನುದಾನ ತರುವಲ್ಲಿ ಶಾಸಕ ಅಪ್ಪಾಜಿ ನಾಡಗೌಡರ ಪರಿಶ್ರಮ ಹಾಗೂ ಸಾಮಾಜಿಕ ಕಳಕಳಿ ಹೆಚ್ಚಾಗಿದೆ.ಮಲ್ಲನಗೌಡ ಬಿರಾದಾರ, ಪುರಸಭೆ ಮುಖ್ಯಾಧಿಕಾರಿ
----------ಕೋಟ್
ನೂತನ ಅತ್ಯಾಧುನಿಕ ತಂತ್ರಜ್ಞಾನದ ಮೆಗಾ ಮಾರ್ಕೆಟ್ ನಿರ್ಮಾಣಕ್ಕೆ ಚಾಲನೆ ನೀಡುತ್ತಿರುವುದು ಪಟ್ಟಣದ ಬಹುತೇಕ ಗಣ್ಯ ವ್ಯಾಪಾರಸ್ಥರ, ಸಾರ್ವಜನಿಕರ ಬಹುದಿನಗಳ ಬೇಡಿಕೆ ಇಡೇರಿದಂತಾಗಿದೆ. ಇದಕ್ಕೆ ಶ್ರಮಿಸಿದ ಶಾಸಕ ಅಪ್ಪಾಜಿ ನಾಡಗೌಡರಿಗೆ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ.ವಾಸುದೇವ ಶಾಸ್ತ್ರೀ, ಕಪಡಾ ಮರ್ಚಂಟ್ ಅಸೋಸಿಯೇಷನ್ ಅಧ್ಯಕ್ಷ.