ಮುತ್ತತ್ತಿಯಿಂದ ಬನ್ನೇರುಘಟ್ಟದವರೆಗೆ ಬ್ಯಾರಿಕೇಡ್ ನಿರ್ಮಾಣ

KannadaprabhaNewsNetwork |  
Published : Oct 14, 2023, 01:00 AM ISTUpdated : Oct 14, 2023, 01:01 AM IST
2.ರಾಮನಗರ ತಾಲೂಕಿನ ಕೈಲಾಂಚ ಹೋಬಳಿ  ಬನ್ನಿಕುಪ್ಪೆ  ಗ್ರಾಮದಲ್ಲಿ ಸಂಸದ ಡಿ.ಕೆ.ಸುರೇಶ್ ರವರು  ಸಾರ್ವಜನಿಕ ರ ಕುಂದು ಕೊರತೆ ಅಹವಾಲು ಸ್ವೀಕರಿಸಿದರು. | Kannada Prabha

ಸಾರಾಂಶ

ರಾಮನಗರ: ಜಿಲ್ಲೆಯ ಕಾಡಂಚಿನ ಗ್ರಾಮಗಳಲ್ಲಿ ವನ್ಯಜೀವಿಗಳ ಹಾವಳಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮುತ್ತತ್ತಿಯಿಂದ ಬನ್ನೇರುಘಟ್ಟದವರೆಗೆ ಬ್ಯಾರಿಕೇಡ್ ನಿರ್ಮಾಣ ಕಾರ್ಯಕ್ಕೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು.

ರಾಮನಗರ: ಜಿಲ್ಲೆಯ ಕಾಡಂಚಿನ ಗ್ರಾಮಗಳಲ್ಲಿ ವನ್ಯಜೀವಿಗಳ ಹಾವಳಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮುತ್ತತ್ತಿಯಿಂದ ಬನ್ನೇರುಘಟ್ಟದವರೆಗೆ ಬ್ಯಾರಿಕೇಡ್ ನಿರ್ಮಾಣ ಕಾರ್ಯಕ್ಕೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು. ತಾಲೂಕಿನ ಕೈಲಾಂಚ ಹೋಬಳಿ ವಿಭೂತಿಕೆರೆ ಹಾಗೂ ಬನ್ನಿಕುಪ್ಪೆ ಗ್ರಾಮದಲ್ಲಿ ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯತಿ ವತಿಯಿಂದ ಆಯೋಜಿಸಿದ್ದ ಸಾರ್ವಜನಿಕರ ಕುಂದು ಕೊರತೆ ಅಹವಾಲು ಸ್ವೀಕೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿನಿತ್ಯ ವನ್ಯಜೀವಿ ಮತ್ತು ಮಾನವ ಸಂಘರ್ಷ ನಡೆಯುತ್ತಿದ್ದು, ಸಾವು ನೋವುಗಳು ಸಂಭವಿಸುತ್ತಲೇ ಇದೆ. ಈ ವಿಚಾರವಾಗಿ ಅರಣ್ಯ ಸಚಿವರೊಂದಿಗೆ ಚರ್ಚೆ ನಡೆಸಿದ್ದು, ಕಾಡಂಚಿನ ಗ್ರಾಮಗಳಲ್ಲಿ ಬ್ಯಾರಿಕೇಡ್ ನಿರ್ಮಾಣಕ್ಕೆ 30ರಿಂದ 40 ಕೋಟಿ ರುಪಾಯಿ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ ಎಂದರು. ಮುತ್ತತ್ತಿಯಿಂದ ಬನ್ನೇರುಘಟ್ಟದವರೆಗೆ ಅರಣ್ಯದಂಚಿನ ಗ್ರಾಮಗಳಲ್ಲಿ ವನ್ಯಜೀವಿಗಳ ಹಾವಳಿ ನಿರಂತರವಾಗಿದೆ. ಆ ಭಾಗದಲ್ಲಿ ಬ್ಯಾರಿಕೇಡ್ ನಿರ್ಮಿಸುವ ಸಂಬಂಧ ಎಸ್ಟಿಮೆಂಟ್ ಸಿದ್ದಪಡಿಸಿ ಸಲ್ಲಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಹೇಳಿದರು. ತಮಿಳುನಾಡಿನವರು ಕಾಡಾನೆಗಳನ್ನು ಇಲ್ಲಿಗೆ ಓಡಿಸಿದರೆ, ನಾವು ಅವುಗಳನ್ನು ಮತ್ತೆ ತಮಿಳುನಾಡಿಗೆ ಹಿಮ್ಮಟ್ಟಿಸುತ್ತೇವೆ. ಕಬ್ಬಾಳು, ಚನ್ನಪಟ್ಟಣ ಸುತ್ತಮುತ್ತ ಬಾಳೆ ಫಸಲು ಚೆನ್ನಾಗಿರುವುದರಿಂದ ಕಾಡಾನೆಗಳ ಹಿಂಡು ಅಲ್ಲಿಯೇ ಬಿಡಾರ ಹೂಡಿವೆ. ಅವುಗಳನ್ನು ಸೆರೆ ಹಿಡಿಯುವ ಪ್ರಯತ್ನ ಫಲಿಸಲಿಲ್ಲ. ಆದ್ದರಿಂದ ಹಿಮ್ಮಟ್ಟಿಸುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು. ಪಂಚಾಯಿತಿ ಕೇಂದ್ರದಲ್ಲಿ ಮಾದರಿ ಶಾಲೆ: ಜಿಲ್ಲೆಯ ಪ್ರತಿಯೊಬ್ಬ ವ್ಯಕ್ತಿ ಉತ್ತಮ ಜೀವನ ನಡೆಸಲು ಬೇಕಾದ ಮೂಲಸೌಕರ್ಯಗಳನ್ನು ಕಲ್ಪಿಸಲು ಒತ್ತು ನೀಡಲಾಗುತ್ತಿದೆ. ಅದರಂತೆ ಶಿಕ್ಷಣ, ಆರೋಗ್ಯ ಹಾಗೂ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಶಿಕ್ಷಣಕ್ಕಾಗಿಯೇ ವಲಸೆ ಹೋಗುವುಧನ್ನು ತಪ್ಪಿಸಬೇಕೆಂಬ ಉದ್ದೇಶದ ಪಂಚಾಯಿತಿಗೊಂದು ಕರ್ನಾಟಕ ಪಬ್ಲಿಕ್ ಶಾಲೆ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು. ಎರಡು ಮೂರು ಪಂಚಾಯಿತಿ ಸೇರಿ ಒಂದು ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ಸ್ಥಾಪಿಸಲಾಗುವುದು. ಈ ವರ್ಷ ಜಿಲ್ಲೆಯಲ್ಲಿ 20 ಶಾಲೆಗಳ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗುವುದು. ಪ್ರತಿಯೊಂದು ಶಾಲೆಯೂ 6 -8 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ ಎಂದು ತಿಳಿಸಿದರು. ಪ್ರತಿ ಗ್ರಾಮಗಳಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು, ಜಮೀನು ಖಾತೆ, ಇ ಸ್ವತ್ತು , ಕೆರೆ ಒತ್ತುವರಿ ಸಮಸ್ಯೆಗಳಿದ್ದು, ಅವೆಲ್ಲವು ತಕ್ಷಣವೇ ಬಗೆಹರಿಸಬೇಕೆಂಬ ಆತುರವೇ ಬೇಡ. ರಾಮನಗರ ಕ್ಷೇತ್ರದಲ್ಲಿ ಶಾಸಕರಿಲ್ಲ ಎಂಬ ಕೊರಗು ಈಗಷ್ಟೇ ನಿವಾರಣೆಯಾಗಿದೆ. ಎಲ್ಲ ಸಮಸ್ಯೆಗಳಿಗೂ ಹಂತ ಹಂತವಾಗಿ ಪರಿಹಾರ ಕಲ್ಪಿಸಲಾಗುವುದು ಎಂದು ಹೇಳಿದರು. ಶಾಸಕ ಇಕ್ಬಾಲ್ ಹುಸೇನ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಂದ ನಾಲ್ಕು ತಿಂಗಳಲ್ಲಿ ಕೊಟ್ಟ ಮಾತಿನಂತೆ ಗ್ಯಾರಂಟಿಗಳನ್ನು ಜಾರಿ ಮಾಡುತ್ತಿದೆ. ಅದರ ಜೊತೆಗೆ ಅಭಿವೃದ್ಧಿ ಕಾರ್ಯ ಗಳು ನಡೆಯುತ್ತಿವೆ. ನಿಮ್ಮ ಮನೆ ಬಾಗಿಲಿಗೆ ಸರ್ಕಾರದ ಸವಲತ್ತುಗಳನ್ನು ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದರು. ವಿಭೂತಿಕೆರೆ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 11 ಕೋಟಿ ರುಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಮನೆಗಳಿಗೆ ನಲ್ಲಿ ಅಳವಡಿಸುವ, ಸಿ.ಸಿ.ರಸ್ತೆ, ಚರಂಡಿ ನಿರ್ಮಾಣ, ದೇವಸ್ಥಾನದ ಜೀರ್ಣೋದ್ಧಾರ ಕೆಲಸ ನಡೆಯುತ್ತಿದೆ. ರೈತರಿಗೆ ಹಕ್ಕು ಪತ್ರ, ಸೂರಿಲ್ಲದವರಿಗೆ ಮನೆ, ನಿವೇಶನ ವಿತರಣೆಗೂ ಕ್ರಮ ವಹಿಸಲಾಗುತ್ತಿದೆ. ಕರ್ನಾಟಕ ಪಬ್ಲಿಕ್ ಶಾಲೆ ಸ್ಥಾಪನೆಗಾಗಿ 5 ಎಕರೆ ಜಾಗವನ್ನು ಗುರುತಿಸಲಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ತಹಸೀಲ್ದಾರ್ ತೇಜಸ್ವಿನಿ, ತಾಪಂ ಇಒ ಪ್ರದೀಪ್ ಕುಮಾರ್, ಮಾಜಿ ಶಾಸಕ ಕೆ.ರಾಜು, ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಂ.ಲಿಂಗಪ್ಪ, ಕೆಎಂಎಫ್ ಮಾಜಿ ಅಧ್ಯಕ್ಷ ಪಿ.ನಾಗರಾಜು, ಜಿಪಂ ಮಾಜಿ ಅಧ್ಯಕ್ಷ ಕೆ.ರಮೇಶ್, ವಿಭೂತಿಕೆರೆ ಗ್ರಾಪಂ ಅಧ್ಯಕ್ಷ ರಂಗಸ್ವಾಮಿ, ಉಪಾಧ್ಯಕ್ಷೆ ಮಂಗಳಗೌರಮ್ಮ, ಬನ್ನಿಕುಪ್ಪೆ ಗ್ರಾಪಂ ಅಧ್ಯಕ್ಷ ಹೇಮಂತ್ ಕುಮಾರ್, ಉಪಾಧ್ಯಕ್ಷೆ ರಂಜಿತಾ, ತಾಪಂ ಮಾಜಿ ಅಧ್ಯಕ್ಷ ಭದ್ರಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಎಚ್.ರಾಜು, ಚೇತನ್ ಕುಮಾರ್, ಮುಖಂಡರಾದ ಜಯಣ್ಣ, ಮಹೇಂದ್ರ, ನಾಗೇಶ್, ಮಹಾಲಿಂಗು, ಅರಳಪ್ಪ, ಶಿವಣ್ಣ, ಭಗೀರಥ, ರವಿಕುಮಾರ್ ಉಪಸ್ಥಿತರಿದ್ದರು. ಕೋಟ್‌.... ಕಳೆದ 20 ವರ್ಷ ಅಧಿಕಾರದಲ್ಲಿದ್ದವರು ಏನು ಮಾಡದಿರುವುದೇ ಸಮಸ್ಯೆಗಳು ಜೀವಂತವಾಗಿರಲು ಕಾರಣ. ಇಷ್ಟು ವರ್ಷ ನೀವೆಲ್ಲರು ಮೌನವಾಗಿದ್ದೀರಿ, ಇನ್ನು 5 ವರ್ಷ ತಾಳ್ಮೆ ಯಿಂದ ಕಾದು ನೋಡಿ ರಾಮನಗರವನ್ನು ಶಿಕ್ಷಣ, ಆರೋಗ್ಯ ಹಾಗೂ ನೀರಾವರಿ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿಯೂ ಮಾದರಿ ಜಿಲ್ಲೆಯನ್ನಾಗಿ ರೂಪಿಸುತ್ತೇವೆ. -ಡಿ.ಕೆ.ಸುರೇಶ್, ಸಂಸದರು 13ಕೆಆರ್ ಎಂಎನ್ 1,2.ಜೆಪಿಜಿ ರಾಮನಗರ ತಾಲೂಕಿನ ಕೈಲಾಂಚ ಹೋಬಳಿ ಬನ್ನಿಕುಪ್ಪೆ ಗ್ರಾಮದಲ್ಲಿ ಸಂಸದ ಡಿ.ಕೆ.ಸುರೇಶ್ ಸಾರ್ವಜನಿಕರ ಕುಂದು ಕೊರತೆ ಅಹವಾಲು ಸ್ವೀಕರಿಸಿದರು.

PREV

Recommended Stories

ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು
ದ್ವೇಷ ಭಾಷಣ ತಡೆ, ಸುಳ್ಳು ಸುದ್ದಿ ನಿಯಂತ್ರಣಕ್ಕೆ ಮಸೂದೆ