ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಅವೈಜ್ಞಾನಿ ಕಾಮಗಾರಿಯಿಂದ ಮಳೆಗಾಲದಲ್ಲಿ ಬಹುತೇಕ ಅಂಡರ್ ಪಾಸ್‌ಗಳಲ್ಲಿ ನೀರು ನಿಲ್ಲುತ್ತಿರುವುದರಿಂದ ಜನಸಾಮಾನ್ಯರು ಸಂಚರಿಸಲಾಗದ ಸ್ಥಿತಿ ಬಂದಿದೆ. ಪಟ್ಟಣದ ಹೊರವಲಯದ ಚೌಡೇಶ್ವರಿ ದೇವಾಲಯದ ಬಳಿ ಜಲಸೂರು ಹೆದ್ದಾರಿಯಲ್ಲಿರುವ ಅಂಡರ್ ಪಾಸ್ ಹೇಮಾವತಿ ವಿತರಣಾ ನಾಲಾ ಏರಿಯ ಮೂಲಕ ಕೆ.ಆರ್.ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಹಿಂಭಾಗದ ವರೆಗೂ ಸಂಪರ್ಕ ಕಲ್ಪಿಸುತ್ತದೆ.
ಈ ಭಾಗದ ನೂರಾರು ಎಕರೆ ಪ್ರದೇಶದಲ್ಲಿ ಕೃಷಿ ಮಾಡುತ್ತಿರುವ ರೈತಾಪಿ ವರ್ಗ ಮತ್ತು ಪಾಲಿಟೆಕ್ನಿಕ್ ಹಿಂಭಾಗದ ಮೂಲಕ ಪಟ್ಟಣವನ್ನು ಸಂರ್ಕಿಸುವ ಜನರಿಗೆ ಇರುವ ಏಕೈಕ ಅಂಡರ್ ಪಾಸ್ ಆಗಿದ್ದು, ಈ ರಸ್ತೆಯಲ್ಲಿ ಸಂಚರಿಸುವವರಿಗಾಗಿ ಕೆಶಿಪ್ ಎಂಜಿನಿಯರುಗಳು ಅಂಡರ್ ಪಾಸ್ ನ ಎರಡೂ ಬದಿಯಲ್ಲೂ ಸರ್ವೀಸ್ ರಸ್ತೆ ನಿರ್ಮಿಸಿದ್ದಾರೆ.ಆದರೆ, ಸರ್ವೀಸ್ ರಸ್ತೆ ಅವೈಜ್ಞಾನಿಕವಾಗಿದ್ದು, ಜನ ಸಂಚಾರಕ್ಕೆ ಯೋಗ್ಯವಾಗಿಲ್ಲ. ಮಳೆ ಬಂದರೆ ನೀರು ತುಂಬಿಕೊಳ್ಳುತ್ತಿದೆ. ನಿಂತ ನೀರು ಹೊರ ಹೋಗಲು ಸರಿಯಾದ ವ್ಯವಸ್ಥೆ ಇಲ್ಲ. ಇದೇ ರೀತಿ ಪಟ್ಟಣದ ಚಿಕ್ಕೋನಹಳ್ಳಿ ಬಳಿಯೂ ಒಂದು ಅಂಡರ್ ಪಾಸ್ ನಲ್ಲೂ ಮಳೆ ನೀರು ತುಂಬಿಕೊಂಡು ಜನ ನೀರಿನೊಳಗೆ ಸಂಚರಿಸಬೇಕಾದ ಸ್ಥಿತಿ ಎದುರಾಗಿದೆ.
ಗ್ರಾಮದೊಳಗೆ ಹೆದ್ದಾರಿ ಹಾದುಹೋಗಿದೆ. ಅವೈಜ್ಞಾನಿ ಕಾಮಗಾರಿಯಿಂದ ತಾಲೂಕು ವ್ಯಾಪ್ತಿಯಲ್ಲಿ ಒಂದಲ್ಲ ಒಂದು ಕಡೆ ಅಮಾಯಕರು ಅಪರಿಚಿತ ವಾಹನಗಳಿಗೆ ಬಳಿಯಾಗುತ್ತಿದ್ದಾರೆ. ತಾಲೂಕಿನ ದಡದಹಳ್ಳಿಯ ಚನ್ನೇಗೌಡ ಎನ್ನುವ 62 ವರ್ಷದ ವೃದ್ದ ಸೈಕಲ್ಲಿನಲ್ಲಿ ಹೋಗುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿಯಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಅವೈಜ್ಞಾನಿಕ ಹೆದ್ದಾರಿಯಿಂದ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಕ್ಷೇತ್ರದ ಜನರ ದೂರುಗಳನ್ನು ಆಲಿಸಿ ಕಳೆದ ಎರಡು ತಿಂಗಳ ಹಿಂದೆ ಶಾಸಕ ಎಚ್.ಟಿ.ಮಂಜು ಕೆಶಿಪ್ ರಾಜ್ಯ ಮಟ್ಟದ ಅಧಿಕಾರಿಗಳೊಂದಿಗೆ ಹೆದ್ದಾರಿಯಲ್ಲಿ ಸಂಚರಿಸಿ ಜನರ ಸಮಸ್ಯೆಗಳನ್ನು ಮನವರಿಕೆ ಮಾಡಿದ್ದರು. ಅಲ್ಲದೇ, ಕೆಶಿಪ್ ಎಂಜಿನಿಯರುಗಳು ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿದರಾದರೂ ಇದುವರೆಗೆ ಒಂದೇ ಒಂದು ಸಮಸ್ಯೆ ಬಗೆಹರಿದಿಲ್ಲ.