ಬ್ಯಾಡಗಿಯ 4 ಕಡೆಗಳಲ್ಲಿ ರಸ್ತೆಗಳಿಗೆ ಬ್ರಿಡ್ಜ್‌ ನಿರ್ಮಾಣ: ಶಾಸಕ ಶಿವಣ್ಣನವರ

KannadaprabhaNewsNetwork |  
Published : Dec 04, 2024, 12:30 AM IST
ಮ | Kannada Prabha

ಸಾರಾಂಶ

ಸೇತುವೆ (ಬ್ರಿಡ್ಜ್ ) ಇಲ್ಲದೇ ಮಳೆಯಿಂದಾದ ಅನಾಹುತಕ್ಕೆ ನೂರಾರು ಎಕರೆ ಕೃಷಿಭೂಮಿಯಲ್ಲಿನ ಬೆಳೆನಾಶವಾಗಿದ್ದು ಸಂತ್ರಸ್ತ ರೈತರ ನೆರವಿಗೆ ಸ್ಪಂದಿಸಿದ್ದು ಮಾಸಣಗಿ, ಶಂಕರೀಪುರ, ಹಿರೇಹಳ್ಳಿ ಸೇರಿದಂತೆ ತಾಲೂಕಿನ 4 ಕಡೆಗಳಲ್ಲಿ ರಸ್ತೆಗಳಿಗೆ ಸೇತುವೆ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗಿದೆ. ಬರುವ ಆರ್ಥಿಕ ವರ್ಷದಲ್ಲಿ ಇದಕ್ಕೆ ಅನುಮೋದನೆ ಸಿಗಲಿದ್ದು ಕಾಮಗಾರಿ ಆರಂಭಿಸುವುದಾಗಿ ಶಾಸಕ ಬಸವರಾಜ ಶಿವಣ್ಣನವರ ಪಟ್ಟಣದ ತಾಪಂ ಆವರಣದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ತಿಳಿಸಿದರು.

ಬ್ಯಾಡಗಿ: ಸೇತುವೆ (ಬ್ರಿಡ್ಜ್ ) ಇಲ್ಲದೇ ಮಳೆಯಿಂದಾದ ಅನಾಹುತಕ್ಕೆ ನೂರಾರು ಎಕರೆ ಕೃಷಿಭೂಮಿಯಲ್ಲಿನ ಬೆಳೆನಾಶವಾಗಿದ್ದು ಸಂತ್ರಸ್ತ ರೈತರ ನೆರವಿಗೆ ಸ್ಪಂದಿಸಿದ್ದು ಮಾಸಣಗಿ, ಶಂಕರೀಪುರ, ಹಿರೇಹಳ್ಳಿ ಸೇರಿದಂತೆ ತಾಲೂಕಿನ 4 ಕಡೆಗಳಲ್ಲಿ ರಸ್ತೆಗಳಿಗೆ ಸೇತುವೆ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗಿದೆ. ಬರುವ ಆರ್ಥಿಕ ವರ್ಷದಲ್ಲಿ ಇದಕ್ಕೆ ಅನುಮೋದನೆ ಸಿಗಲಿದ್ದು ಕಾಮಗಾರಿ ಆರಂಭಿಸುವುದಾಗಿ ಶಾಸಕ ಬಸವರಾಜ ಶಿವಣ್ಣನವರ ಪಟ್ಟಣದ ತಾಪಂ ಆವರಣದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ತಿಳಿಸಿದರು.

ಲೋಕೋಪಯೋಗಿ ಇಲಾಖೆ ಕುರಿತು ಚರ್ಚೆ ವೇಳೆ ಮಾತನಾಡಿದ ಅವರು, ರಸ್ತೆಗಳ ಮೇಲೆ ನೀರು ಹರಿದು ಕೋಟಿಗಟ್ಟಲೇ ಮೌಲ್ಯದ ಬೆಳೆ ನಾಶವಾಗಿದ್ದು, ಮಳೆಯ ಅವಾಂತರಕ್ಕೆ ಇಡೀ ದಿನವೇ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಅಂಗರಗಟ್ಟಿ-ಮಾಸಣಗಿ ಮದ್ಯದ ಸಂತೆ ಹಳ್ಳ, ಮಲ್ಲೂರ-ಶಂಕರೀಪುರ ಮದ್ಯದಲ್ಲಿನ ಹಳ್ಳ ಸೇರಿದಂತೆ ತಾಲೂಕಿನ ನಾಲ್ಕು ಕಡೆಗಳಲ್ಲಿ ಸೇತುವೆ ನಿಮಾರ್ಣಕ್ಕೆ ಕ್ರಮ ಕೈಗೊಂಡಿದ್ದಾಗಿ ತಿಳಿಸಿದರು.

ರಸ್ತೆ ಪಕ್ಕದಲ್ಲಿ ಕಾಲುವೆ ಹಾಗೂ ಗಿಡಮರ ತೆರವುಗೊಳಿಸಿ: ಬ್ಯಾಡಗಿ ಮತಕ್ಷೇತ್ರದ ವ್ಯಾಪ್ತಿಯ ಯಾವುದೇ ರಸ್ತೆಯಲ್ಲಿ ಜಂಗಲ್ ಕಟಿಂಗ್ ಈವರೆಗೂ ಆರಂಭವಾಗಿಲ್ಲ. ಹೀಗಾಗಿ ಗಿಡಗಂಟೆಗಳಿಂದ ರಸ್ತೆಗಳು ಮುಚ್ಚಿ ಹೋಗುತ್ತಿವೆ. ಅಲ್ಲದೇ ಎಲ್ಲೆಂದರಲ್ಲಿ ರಸ್ತೆಗಳಲ್ಲಿ ತಗ್ಗುಗಳನ್ನು ನಿರ್ಮಿಸಲಾಗುತ್ತಿದ್ದು, ಕೂಡಲೇ ಎಲ್ಲದಕ್ಕೂ ಕ್ರಮಗಳನ್ನು ಕೈಗೊಂಡು ವರದಿ ನೀಡುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಕಾಮಗಾರಿ ಪೂರ್ಣಗೊಳಿಸಿದ ಕೆಲವೇ ದಿನಗಳಲ್ಲಿ ತಿಳವಳ್ಳಿ-ಧುಮ್ಮಿಹಾಳ ರಸ್ತೆ ಸಂಪೂರ್ಣ ಕಿತ್ತುಹೋಗಿದೆ. ಸದರಿ ರಸ್ತೆ 7.5 ಮೀಟರ್ ಇದ್ದರೂ ಕೇವಲ 4.5 ಮೀಟರ್ ರಸ್ತೆ ಮಾಡಲಾಗಿದ್ದು ರೈತರಿಗೆ ತಿಳುವಳಿಕೆ ನೀಡುವ ಮೂಲಕ ಕಾನೂನು ರೀತಿಯಲ್ಲಿ 7.5 ಮೀಟರ್ ರಸ್ತೆ ನಿರ್ಮಿಸುವಂತೆ ಪಂಚಾಯತ್ ರಾಜ್ಯ ಎಂಜಿನಿಯರಿಂಗ್ ಅಧಿಕಾರಿಗಳಿಗೆ ಸೂಚಿಸಿದರು.

ಕಾರ್ಮಿಕ ಇಲಾಖೆಯ ಪ್ರಗತಿ ಪರಿಶೀಲನೆ ವೇಳೆ ಮಾತನಾಡಿದ ಅವರು, ಲೇಬರ್ ಕಾರ್ಡ ಮಾಡಲು ತಾಲೂಕಿನಲ್ಲಿ ಏಜೆಂಟರ್ ಗಳನ್ನು ನೇಮಕ ಮಾಡಿಕೊಂಡಿದ್ದು ಬಡವರಿಂದ ಹೆಚ್ಚಿಗೆ ಹಣವನ್ನು ಪೀಕಲಾಗುತ್ತಿದೆ. ಕನಿಷ್ಠ 3 ಸಾವಿರ ಕೊಟ್ಟರಷ್ಟೇ ಕಾರ್ಡ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಅಷ್ಟಕ್ಕೂ ಕಾರ್ಮಿಕರ ಮಕ್ಕಳಿಗೆ ವಿತರಿಸಬೇಕಾಗಿದ್ದ ಲ್ಯಾಪ್ ಟ್ಯಾಪ್ ಈವರೆಗೂ ವಿತರಣೆಯಾಗಿಲ್ಲ. ನಗರದ ಹೊರಗೆ ಕಚೇರಿ ಮಾಡಿಕೊಂಡು ಸಾರ್ವಜನಿಕರ ಕೈಗೆ ಸಿಗುತ್ತಿಲ್ಲ, ನೀವು ಸಿಗುವ ದಿವಸವನ್ನಾದರೂ ಬೋರ್ಡ್‌ ಹಾಕುವಂತೆ ಆಕ್ರೋಶ ವ್ಯಕ್ತಪಡಿಸಿದರು.

ರೂ.10 ಪರಿಹಾರ ನೀಡಿ: ಕಳೆದೆರಡು ತಿಂಗಳ ಹಿಂದಷ್ಟೇ ಸುರಿದ ಅಕಾಲಿಕ ಮಳೆಗೆ ಬ್ಯಾಡಗಿ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ 141 ಮನೆಗಳಿಗೆ ಹಾನಿಯಾಗಿದೆ, ಆದರೆ ಫಲಾನುಭವಿಗಳಿಗೆ ಕೇವಲ ರೂ.5 ಸಾವಿರ ನೀಡುತ್ತಿದ್ದೀರಿ, ಅದರಿಂದಾಗುವ ಲಾಭವಾದರೂ ಏನು.? ಕೂಡಲೇ ಪ್ರತಿಯೊಬ್ಬ ಫಲಾನುಭವಿಗೆ ಕನಿಷ್ಟ ರೂ.10 ಸಾವಿರ ಪರಿಹಾರ ನೀಡುವಂತೆ ತಹಶೀಲ್ದಾರ ಫಿರೋಜ್ ಷಾ ಸೋಮನಕಟ್ಟಿ ಸ್ಥಳದಲ್ಲೇ ಸೂಚಿಸಿದರು.

ಎಲ್ಲಾ ರೈತರಿಗೆ ಸೌಲಭ್ಯ ಸಿಗಬೇಕು: ಕೆಲವೊಂದಿಷ್ಟು ರೈತರ ಗುಂಪುಗಳಷ್ಟೇ ಕೃಷಿ ಇಲಾಖೆಯ ಎಲ್ಲ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ, ಕೂಡಲೇ ಇಂತಹುಗಳಿಗೆ ಕಡಿವಾಣ ಹಾಕಬೇಕು, ಕಳೆದೆರಡು ತಿಂಗಳ ಹಿಂದಷ್ಟೇ ಸುರಿದ ಮಳೆಗೆ ಬೆಳೆ ಹಾನಿ ವಿಚಾರದಲ್ಲಿ ಆಗಿರುವ ನಷ್ಟದ ವರದಿ ನೀಡುವಂತೆ ತಾಕೀತು ಮಾಡಿದ ಅವರು, ಅವರಿಗೆ ಪರಿಹಾರ ವಿತರಿಸುವ ಕುರಿತು ತೆಗೆದುಕೊಂಡ ಕ್ರಮಗಳ ಬಗ್ಗೆ ವರದಿ ನೀಡುವಂತೆ ಆಗ್ರಹಿಸಿದರು.

ಗೃಹಲಕ್ಷ್ಮೀ ಹಣ ತಲುಪಿಸಿ:

ಸರ್ಕಾರದ ಮಹಾತ್ವಾಕಾಂಕ್ಷಿ ಗೃಹಲಕ್ಷ್ಮೀ ಯೋಜನೆಯಡಿ ಫಲಾನುಭವಿಗಳಿಗೆ ಸರಿಯಾಗಿ ಹಣ ತಲುಪುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಸುಮಾರು 500ಕ್ಕೂ ಹೆಚ್ಚು ಫಲಾನುಭವಿಗಳ ಅರ್ಜಿ ಪರಿಶೀಲನೆ ಹಂತದಲ್ಲಿವೆ. ಅವುಗಳನ್ನು ಯಾವ ಕಾರಣಕ್ಕೆ ತಡೆಹಿಡಿಯಲಾಗಿದೆ ಅದನ್ನು ಸರಳೀಕರಣಗೊಳಿಸಿ ಸರ್ಕಾರದ ಅನುದಾನ ಸಿಗುವಂತೆ ನೋಡಿಕೊಳ್ಳಲು ಶಿಶು ಅಭಿವೃದ್ಧಿ ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ದೇವರಗುಡ್ಡದಲ್ಲಿ ಯುಜಿಡಿ ನಿರ್ಮಾಣಕ್ಕೆ ಡಿಪಿಆರ್: ದೇವರಗುಡ್ಡ ಗ್ರಾಮದಲ್ಲಿ ಯುಜಿಡಿ ನಿರ್ಮಾಣಕ್ಕೆ ಕೂಡಲೇ ಸವಿವರವಾದ ನೀಲಿನಕ್ಷೆಯೊಂದಿಗೆ ಡಿಟೇಲ್ ಪ್ರಾಜೆಕ್ಟ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಶೀಘ್ರದಲ್ಲೇ ಅದಕ್ಕಾಗಿ ಅನುದಾನ ತರುವುದಾಗಿ ತಿಳಿಸಿದರು.

ವೇದಿಕೆಯಲ್ಲಿ ತಾಪಂ ಇಓ ಕೆ.ಎಂ. ಮಲ್ಲಿಕಾರ್ಜುನ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕಾಧ್ಯಕ್ಷ ಶಂಭನಗೌಡ ಪಾಟೀಲ, ಕೆಸಿಸಿ ಬ್ಯಾಂಕ್ ನಿರ್ದೇಶಕ ಚನ್ನಬಸಪ್ಪ ಹುಲ್ಲತ್ತಿ, ಕೆಡಿಪಿ ಸದಸ್ಯ ಪರಮೇಶಗೌಡ ತೆವರಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಶಿವಯೋಗಿ ಉಕ್ಕುಂದ ಸೇರಿದಂತೆ ಬ್ಯಾಡಗಿ ಮತಕ್ಷೇತ್ರ ವ್ಯಾಪ್ತಿಯ ಹಾವೇರಿ, ರಾಣಿಬೆನ್ನೂರ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಫೋಟೋ-02ಬಿವೈಡಿ5-ಬ್ಯಾಡಗಿ ತಾಲೂಕು ಪಂಚಾಯತ್ ಆವರಣದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕ ಬಸವರಾಜ ಶಿವಣ್ಣನವರ ಅಧಿಕಾರಿಗಳೊಂದಿಗೆ ಚರ್ಚಿಸಿದರು.

PREV

Recommended Stories

ವಿಕ್ಟೋರಿಯಾ ಆಸ್ಪತ್ರೆಗೆ ಸಿದ್ದರಾಮಯ್ಯ ದಿಢೀರ್ ಭೇಟಿ
ಇಂದು ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ : ಇಲ್ಲೆಲ್ಲಾ ವಾಹನಗಳಿಗೆ ನಿಷೇಧ