ದುಗ್ಗಳ ಸದಾನಂದ
ದಕ್ಷಿಣದ ಪ್ರಯಾಗ ಎನಿಸಿರುವ ಭಾಗಮಂಡಲದ ಭಗಂಡೇಶ್ವರ ದೇವಾಲಯದ ಬಳಿ ಅಂಗಡಿ ಮಳಿಗೆಗಳು ಹಾಗೂ ವಸತಿಗೃಹ ಸಮುಚ್ಚಯ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು ಇದಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸಬೇಕೆಂದು ಸಾರ್ವಜನಿಕರು ಒತ್ತಾಯಪಡಿಸಿದ್ದಾರೆ.
ದೇವಾಲಯದ ಸಮೀಪ ಕನ್ನಿಕಾ ನದಿ ಹರಿಯುತ್ತಿದ್ದು ಇದು ಪವಿತ್ರ ಕಾವೇರಿ ನದಿಯನ್ನು ಸಂಗಮಿಸಿ ತ್ರಿವೇಣಿ ಸಂಗಮವಾಗಿದೆ. ತ್ರಿವೇಣಿ ಸಂಗಮ ಭಾಗಮಂಡಲದ ಪವಿತ್ರ ಕ್ಷೇತ್ರವಾಗಿದ್ದು ಭಕ್ತಾದಿಗಳಿಗೆ ಧಾರ್ಮಿಕ ತಾಣವಾಗಿ ಶ್ರದ್ಧಾ ಭಕ್ತಿಯ ಕೇಂದ್ರವಾಗಿದೆ. ಇದೀಗ ಪವಿತ್ರ ಕ್ಷೇತ್ರದಲ್ಲಿ ಕಟ್ಟಡ ಸಮುಚ್ಚಯ ನಿರ್ಮಾಣಗೊಳ್ಳುತ್ತಿದ್ದು ಇದರಿಂದ ದೇವಾಲಯದ ಪಾವಿತ್ರ್ಯತೆಗೆ ಧಕ್ಕೆ ಯಾಗಲಿದ್ದು ದೇವಾಲಯದ ಸೌಂದರ್ಯ ಹಾಳಾಗುವುದರೊಂದಿಗೆ ಪರಿಸರ ಮಾಲಿನ್ಯ ಗೊಳ್ಳಲಿದೆ ಎಂಬ ಆತಂಕ ಸಾರ್ವಜನಿಕರಲ್ಲಿ ಎದುರಾಗಿದ್ದು ಈ ಬಗ್ಗೆ ವಿರೋಧ ವ್ಯಕ್ತವಾಗಿದೆ.ಸಾರ್ವಜನಿಕರು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಭಗಂಡೇಶ್ವರ, ತಲಕಾವೇರಿ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷರಾದ ಅಪ್ಪಚೆಟ್ಟೋಳಂಡ ಮನುಮುತ್ತಪ್ಪ ಮಾತನಾಡಿದರು.ಭಾಗಮಂಡಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಳನ ರವಿ ಮಾತನಾಡಿ, ಹಿಂದೆ ದೇವಾಲಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ರಾಶಿ ಪ್ರಶ್ನೆಗಳನ್ನು ಇಟ್ಟು ಜ್ಯೋತಿಷ್ಯ ಮೂಲಕ ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿತ್ತು. ಅದರಂತೆ ಸಾಧಕ ಬಾಧಕಗಳ ಬಗ್ಗ ಉತ್ತರ ಪಡೆದು ಮುಂದುವರೆಯಬೇಕು ಆದಕಾರಣ ಕೂಡಲೇ ಕಾಮಗಾರಿ ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿದರು. ಸಾಮಾಜಿಕ ಹೋರಾಟಗಾರ ಕುದುಕುಳಿ ಭರತ್ ಮಾತನಾಡಿ ಭಗಂಡೇಶ್ವರ ದೇವಾಲಯ ಧಾರ್ಮಿಕ ತಾಣವಾಗಿದೆ, ಅಂಗಡಿ ಮಳಿಗೆ ಹಾಗು ವಸತಿ ಗೃಹಗಳ ನಿರ್ಮಾಣದಿಂದ ಮಳೆಗಾಲದಲ್ಲಿ ಪ್ರವಾಹಕ್ಕೊಳಗಾಗುವ ಈ ಪ್ರದೇಶ ಮತ್ತು ಪರಿಸರ ಹಾಳಾಗಲಿದೆ . ಭಕ್ತರಿಗೆ ತೊಂದರೆ ಆಗಬಹುದು ಎಂದು ಹೇಳಿದರು.ಈ ಸಂದರ್ಭದಲ್ಲಿ ಭಾಗಮಂಡಲ ಸಹಕಾರಿ ಸಂಘದ (ವಿ ಎಸ್ಎಸ್ ಯನ್) ಅಧ್ಯಕ್ಷರಾದ ಹೊಸೂರು ಸತೀಶ್ ಕುಮಾರ್ ಜೋಯಪ್ಪ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ರಾಜೀವ್, ಪಟ್ಟಮಾಡ ಸುಧೀರ್ ಕುಮಾರ್, ಅಮೆ ಹರೀಶ್, ನಿಡ್ಯಾಮಲೆ ರವಿ, ಕುದುಪಜೆ ಕುಲದೀಪ್, ಮೂಲೆಮಜಲು ಪೂಣಚ್ಚ ಇನ್ನಿತರರು ಹಾಜರಿದ್ದರು.