ಬೇವೂರಲ್ಲಿ ₹೪.೫೦ ಕೋಟಿ ವೆಚ್ಚದಲ್ಲಿ ಬಸ್‌ನಿಲ್ದಾಣ ನಿರ್ಮಾಣ: ಬಸವರಾಜ ರಾಯರಡ್ಡಿ

KannadaprabhaNewsNetwork | Published : Oct 16, 2024 12:47 AM

ಸಾರಾಂಶ

ತಾಲೂಕಿನ ಬೇವೂರು ಗ್ರಾಮವು ದೊಡ್ಡ ಗ್ರಾಮವಾಗಿದ್ದು, ಈ ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ₹೪.೫೦ ಕೋಟಿ ವೆಚ್ಚದಲ್ಲಿ ಸುಸಜ್ಜಿತ ಬಸ್‌ನಿಲ್ದಾಣ ನಿರ್ಮಿಸಬೇಕೆನ್ನುವ ಕನಸು ನನ್ನದಾಗಿದೆ.

ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದ ಸಿಎಂ ಆರ್ಥಿಕ ಸಲಹೆಗಾರ

ಕನ್ನಡಪ್ರಭ ವಾರ್ತೆ ಯಲಬುರ್ಗಾ

ತಾಲೂಕಿನ ಬೇವೂರು ಗ್ರಾಮವು ದೊಡ್ಡ ಗ್ರಾಮವಾಗಿದ್ದು, ಈ ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ₹೪.೫೦ ಕೋಟಿ ವೆಚ್ಚದಲ್ಲಿ ಸುಸಜ್ಜಿತ ಬಸ್‌ನಿಲ್ದಾಣ ನಿರ್ಮಿಸಬೇಕೆನ್ನುವ ಕನಸು ನನ್ನದಾಗಿದೆ. ಇಡೀ ಗ್ರಾಮಸ್ಥರು ಒಮ್ಮತದಿಂದ ಪಕ್ಷ ಬೇಧ ಮರೆತು ಸಹಕಾರ ನೀಡಿದರೆ ನಿರ್ಮಾಣಕ್ಕೆ ಅನುಕೂಲವಾಗುತ್ತದೆ ಎಂದು ಸಿಎಂ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.

ಪಟ್ಟಣದ ಶಾಸಕರ ಕಚೇರಿಯಲ್ಲಿ ಬೇವೂರು ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿ ಮಾತನಾಡಿದ ಅವರು, ಇದೀಗ ಪ್ರವಾಸಿ ಮಂದಿರ ತೆರವುಗೊಳಿಸಿ ಹೊಸ ಬಸ್‌ನಿಲ್ದಾಣ ನಿರ್ಮಿಸುವುದಕ್ಕಾಗಿ ಈಗಾಗಲೇ ₹೪.೫೦ ಕೋಟಿ ಅನುದಾನ ಮಂಜೂರಾಗಿ ಟೆಂಡರ್ ಪ್ರಕ್ರಿಯೆ ಕೂಡ ಮುಗಿದಿದೆ. ಕಾಮಗಾರಿ ನಿರ್ಮಾಣಕ್ಕೆ ಎಲ್ಲರೂ ಪಕ್ಷ, ಬೇಧ ಮರೆತು ಸಹಕಾರ ನೀಡಿದರೆ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.

ಈಗಾಗಲೇ ಸುಸಜ್ಜಿತ ನಿಲ್ದಾಣ ಮಾಡಲು ನಿಗದಿ ಮಾಡಿರುವ ಸ್ಥಳದಲ್ಲಿಯೇ ಸರ್ಕಾರದ ಹಂತದಲ್ಲಿ ಅಂತಿಮಗೊಂಡು ಟೆಂಡರ್ ಪ್ರಕ್ರಿಯೆ ಮುಗಿದಿದೆ. ಯಾವುದೇ ಬದಲಾವಣೆ ಮಾಡಲು ಬರುವುದಿಲ್ಲ. ನಿಗದಿಗೊಳಿಸಿದ ಸ್ಥಳದಲ್ಲೇ ಹೊಸ ನಿಲ್ದಾಣ ನಿರ್ಮಿಸುವುದು ಸೂಕ್ತವಾಗಿದೆ. ನಿಮ್ಮೆಲ್ಲರ ಒತ್ತಾಯದ ಮೇರೆಗೆ ಸಾರ್ವಜನಿಕರ ಅನುಕೂಲಕ್ಕಾಗಿ ಸರ್ಕಲ್ ವೃತ್ತದಲ್ಲಿಯೇ ಮಿನಿ ನಿಲ್ದಾಣವನ್ನು ನನ್ನ ಶಾಸಕರ ಅನುದಾನದಲ್ಲಿ ಮುಂದೆ ಮಾಡಿಕೊಡುವುದಾಗಿ ಭರವಸೆ ನೀಡಿದರು.ಪ್ರವಾಸಿ ಮಂದಿರ ಜಾಗದಲ್ಲಿ ಸುಸಜ್ಜಿತ ದೊಡ್ಡ ಬಸ್‌ನಿಲ್ದಾಣಕ್ಕೆ ತೀರ್ಮಾನಕ್ಕೆ ಬರಲಾಯಿತು.

ಈ ಸಂದರ್ಭ ಗ್ರಾಮದ ಮುಖಂಡರಾದ ಮಲ್ಲನಗೌಡ ಕೋನನಗೌಡ್ರ, ವೀರಣ್ಣ ಹಳ್ಳಿ, ಶರಣಪ್ಪ ಪಳೋಟಿ, ಸೋಮಲಿಂಗಪ್ಪ ಕೊಳಜಿ, ಹನುಮಂತಪ್ಪ ಚರಾರಿ, ಸಂಗಮೇಶ ಗೊಂದಿ, ಯಮನಪ್ಪ ಉಪ್ಪಾರ, ಹೇಮಂತ ಅಂಚಿ, ನಿಂಗಜ್ಜ ಕೊಳಜಿ, ಬಸಣ್ಣ ಚಿತವಾಡಗಿ, ಹನುಮೇಶ ಕೋನನಗೌಡ, ಮಲ್ಲಪ್ಪ ಕರಡಿ, ಶರಣಪ್ಪ ಬಳಿಗಾರ, ದೇವರಾಜ ಹಳ್ಳಿ, ಶಂಕರ ಹಳ್ಳಿ, ಹನುಮಂತ ಹಿಟ್ಟಿನ್ ಮತ್ತಿತರರು ಇದ್ದರು.

Share this article