ಅಧಿಕಾರಿಗಳಿಗೆ ಸೂಚನೆ । 24ಕ್ಕೆ ತೆರೆಯಲಿರುವ ಹಾಸನಾಂಬ ದೇಗುಲ ಬಾಗಿಲು । ಉತ್ಸವ ಸಿದ್ಧತೆ ಸಭೆ
ಹಾಸನಾಂಬ ದೇವಸ್ಥಾನದ ಬಾಗಿಲನ್ನು ಅ.೨೪ ರಂದು ತೆರೆಯಲಾಗುವುದು. ಎಲ್ಲಾ ಅಧಿಕಾರಿಗಳು ತಮ್ಮ ತಮ್ಮ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದರ ಮೂಲಕ ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಸತ್ಯಭಾಮ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಶ್ರೀ ಹಾಸನಾಂಬ ಜಾತ್ರಾ ಮಹೋತ್ಸವ ಸಿದ್ಧತೆಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿ, ಸಾರ್ವಜನಿಕರಿಗೆ ಅ.೨೪ ಮತ್ತು ನ.೩ ರಂದು ದೇವಿ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಉಳಿದಂತೆ ಎಲ್ಲಾ ದಿನಗಳಲ್ಲೂ ವಾರದ 24 ಗಂಟೆ ದೇವಿ ದರ್ಶನಕ್ಕೆ ಅವಕಾಶ ಇರುತ್ತದೆ ಎಂದು ತಿಳಿಸಿದರು.ವಿಶೇಷ ಚೇತನರಿಗೆ ವ್ಹೀಲ್ ಚೇರ್ ವ್ಯವಸ್ಥೆ ಇರುತ್ತದೆ. ಭಕ್ತಾದಿಗಳು ದೇವಿ ದರ್ಶನ ಪಡೆಯಲು ಅನುಕೂಲವಾಗುವಂತೆ ಮಧ್ಯದಲ್ಲಿ ಯಾವುದೇ ಅಡೆತಡೆಯಾಗದಂತೆ ಕ್ರಮವಹಿಸಲು ತಿಳಿಸಿದರು.
ಜಾತ್ರಾ ಮಹೋತ್ಸವ ಸನಿಹದಲ್ಲಿಯೇ ಇದೆ. ಈಗಾಗಲೇ ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದ್ದು, ಅತ್ಯಂತ ಜಾಗರೂಕತೆಯಿಂದ ಕರ್ತವ್ಯ ನಿರ್ವಹಿಸಲು ನಿರ್ದೇಶನ ನೀಡಿದರು. ಹಾಸನಾಂಬ ಜಾತ್ರಾ ಮಹೋತ್ಸವದ ಹಿನ್ನಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ ಸ್ವಚ್ಛತಾ ಕಾರ್ಯ ನಿರ್ವಹಿಸಲು ಸೂಚಿಸಿದರು.
ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ ಮತ್ತಿತರ ವ್ಯವಸ್ಥೆಗೆ ಕ್ರಮವಹಿಸುವುದರ ಜತೆಗೆ ಸ್ವಚ್ಛತಾ ಸಿಬ್ಬಂದಿ ಕಡ್ಡಾಯವಾಗಿ ಸ್ಥಳದಲ್ಲಿಯೇ ಇದ್ದು, ಶೌಚಾಲಯವನ್ನು ಆಗಿಂದಾಗ್ಗೆ ಸ್ವಚ್ಛಗೊಳಿಸಬೇಕು. ದೇವಿ ದರ್ಶನಕ್ಕೆ ಸರತಿ ಸಾಲಿನಲ್ಲಿ ಸಾಗುವ ಸ್ಥಳ ಮತ್ತು ದೊನ್ನೆ ಪ್ರಸಾದ ವಿತರಣೆ ಸ್ಥಳದಲ್ಲಿಯೂ ಸ್ವಚ್ಛತೆಗೆ ನಿಗಾವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹಾಸನಾಂಬ ಜಾತ್ರಾ ಮಹೋತ್ಸವದ ಪ್ರಯುಕ್ತ ಅ.೨೬ ರಿಂದ ೨೯ರ ವರೆಗೆ ಫಲಪುಷ್ಪ ಪ್ರದರ್ಶನವನ್ನು ನಗರದ ಸಿಲ್ವರ್ ಜೂಬಿಲಿ ಪಾರ್ಕ್‌ನಲ್ಲಿ ಏರ್ಪಡಿಸಲಾಗಿದೆ. ಪ್ರತಿದಿನ ದೊನ್ನೆ ಪ್ರಸಾದ ಮತ್ತು ಸಿಬ್ಬಂದಿಗೆ ವ್ಯವಸ್ಥೆ ಮಾಡಿರುವ ಆಹಾರದ ಗುಣಮಟ್ಟವನ್ನು ಪರಿಶೀಲಿಸಲು ಅಗತ್ಯಕ್ರಮ ವಹಿಸಲು ಸೂಚನೆ ನೀಡಿದರು. ಇಬ್ಬರು ವೈದ್ಯರು ಹಾಗೂ ಇಬ್ಬರು ನಸಿಂಗ್ ಸಿಬ್ಬಂದಿ ಪ್ರಥಮ ಚಿಕಿತ್ಸೆಗೆ ಅಗತ್ಯವಿರುವ ಎಲ್ಲಾ ಔಷಧಿಗಳೊಂದಿಗೆ ಸುಸಜ್ಜಿತ ಆ್ಯಂಬುಲೆನ್ಸ್ ನಿಯೋಜನೆಗೆ ಕ್ರಮವಹಿಸಲು ಜಿಲ್ಲಾ ಸರ್ಜನ್‌ಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಚಂದ್ರಶೇಖರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.