ಕನ್ನಡಪ್ರಭ ವಾರ್ತೆ ಹರಿಹರ
ನಗರದೊಳಗೆ ವಾಹನ ದಟ್ಟಣೆ ಕಡಿಮೆಗೊಳಿಸಲು ಹೊರ ಭಾಗದಲ್ಲಿ ಬೈಪಾಸ್ ರಸ್ತೆ ನಿರ್ಮಿಸಲಾಗುವುದು ಎಂದು ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಹೇಳಿದರು.ನಗರಸಭೆಗೆ ಬುಧವಾರ ಭೇಟಿ ನೀಡಿ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹರಪನಹಳ್ಳಿ ಹೆದ್ದಾರಿಯ ಲಕ್ಷ್ಮೀ ಫೌಂಡ್ರಿಯಿಂದ ಅಮರಾವತಿ ಕಾಲೋನಿ ಬಳಿಯ ಹಳೆ ಪಿ.ಬಿ. ರಸ್ತೆಯನ್ನು ಬೈಪಾಸ್ ರಸ್ತೆಯನ್ನಾಗಿ ದೂಡಾದಿಂದ ಅಭಿವೃದ್ಧಿ ಪಡಿಸುತ್ತೇವೆ ಎಂದರು.ನಗರಸಭೆಯಿಂದ 50 ಎಕರೆ ಜಮೀನು ಗುರುತಿಸಿ, ಜಮೀನು ಖರೀದಿಸಿ ನಿವೇಶನಗಳನ್ನು ರಚಿಸಿ ಬಡ ನಿರ್ವಸತಿದಾರರಿಗೆ ಹಂಚಿಕೆ ಮಾಡಲಾಗುವುದು. 8ನೇ ವಾರ್ಡಿನ ಎಸ್‍ಎಸ್‍ಕೆ ಕಲ್ಯಾಣ ಮಂಟಪ ಸಮೀಪದ ಮೆಟ್ಟಿಲುಹೊಳೆ ಪ್ರದೇಶವನ್ನು ಅಭಿವೃದ್ಧಿ ಪಡಿಸಿ ವಿವಿಧ ದೇವಸ್ಥಾನಗಳ ದೇವ, ದೇವತೆಗಳ ಸ್ನಾನಘಟ್ಟಕ್ಕೆ ಕಾಯಕಲ್ಪ ನೀಡಲಾಗುವುದು ಎಂದು ತಿಳಿಸಿದರು.ನಗರದ ಪ್ರಮುಖ ಉದ್ಯಾನ ವನಗಳ ಅಭಿವೃದ್ಧಿಗೆ ಅನುದಾನ ನೀಡುತ್ತೇವೆ. 24ನೇ ವಾರ್ಡಿನ ಬೆಂಕಿನಗರ ಕೊಳಚೆ ಪ್ರದೇಶ ಅಭಿವೃದ್ಧಿಗೆ ₹30 ಲಕ್ಷ ಬಿಡುಗಡೆ ಮಾಡಲಾಗುವುದು. ಆಗಬೇಕಿರುವ ಕೆಲವು ತುರ್ತು ಕಾಮಗಾರಿಗಳ ಅಂದಾಜು ವೆಚ್ಚ ನೀಡಲು ನಗರಸಭೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.ದೂಡಾ ಕಚೇರಿ: ನಗರಸಭೆ ಕಚೇರಿಯ ಕಟ್ಟಡದಲ್ಲಿ ಒಂದು ಕೊಠಡಿ ಗುರುತಿಸಿದ್ದು, ಅಲ್ಲಿ ದೂಡಾ ಸಿಬ್ಬಂದಿ ಪ್ರತಿ ದಿನ ಲಭ್ಯ ಆಗಲಿದ್ದಾರೆ. ಹರಿಹರದ ನಾಗರೀಕರು ಕಟ್ಟಡ ಪರವಾನಿಗೆ ಸೇರಿದಂತೆ ವಿವಿಧ ಕೆಲಸ ಕಾರ್ಯಗಳ ಸೇವೆಯನ್ನು ಇಲ್ಲಿಯೆ ಪಡೆಯಲು ಸಾಧ್ಯವಾಗುತ್ತದೆ. ಶೀಘ್ರದಲ್ಲೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಈ ಕಚೇರಿಗೆ ಚಾಲನೆ ನೀಡಲಿದ್ದಾರೆ. ಆ ಮೂಲಕ ಹರಿಹರದ ಜನತೆಯ ದಶಕಗಳ ಬೇಡಿಕೆಗೆ ಸ್ಪಂದಿಸಿದಂತಾಗುತ್ತದೆ ಎಂದು ತಿಳಿಸಿದರು.ಈ ಹಿಂದೆ ದೂಡಾದಿಂದ ಹರಿಹರಕ್ಕೆ ಹೆಚ್ಚಿನ ಅನುದಾನ ನೀಡಿಲ್ಲ ಎಂಬ ಆರೋಪವಿದೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನರು ಹರಿಹರದ ಅಭಿವೃದ್ಧಿಗೆ ಒತ್ತು ನೀಡಿದ್ದು, ದೂಡಾದಿಂದ ಅಗತ್ಯ ಅನುದಾನ ಬಿಡುಗಡೆಗೊಳಿಸುತ್ತೇವೆ ಎಂದು ಉತ್ತರಿಸಿದರು.ದೂಡಾ ಆಯುಕ್ತ ತಿಮ್ಮಣ್ಣ ಹುಲ್ಮನಿ, ನಗರಸಭೆ ಪೌರಾಯುಕ್ತ ಸುಬ್ರಹ್ಮಣ್ಯ ಶ್ರೇಷ್ಠಿ, ಸದಸ್ಯರಾದ ಕೆ.ಜಿ., ಸಿದ್ದೇಶ್, ಆರ್.ಸಿ. ಜಾವೀದ್, ಸೈಯದ್ ಅಬ್ದುಲ್ ಅಲೀಂ, ಮುಖಂಡ ಎಲ್.ಬಿ. ಹನುಮಂತಪ್ಪ, ಸೈಯದ್ ಸನಾಉಲ್ಲಾ, ಫೈನಾನ್ಸ್ ಮಂಜಣ್ಣ, ಮೊಹಮ್ಮದ್ ಫೈರೋಜ್, ದಾದಾಪೀರ್, ಕೆ. ಆಸಿಫ್‍ಉಲ್ಲಾ ಉಪಸ್ಥಿತರಿದ್ದರು.