ಕನ್ನಡಪ್ರಭ ವಾರ್ತೆ ದಾವಣಗೆರೆ
ಫುಡ್‌ಕೋರ್ಟ್ ಸ್ಥಾಪಿಸಬೇಕೆಂಬ ಬಹು ವರ್ಷಗಳ ಬೇಡಿಕೆಗೆ ಕೊನೆಗೂ ಕಾರ್ಯ ರೂಪಕ್ಕೆ ಬಂದಿದ್ದು, ಇಲ್ಲಿ ಬರುವ ಸಾರ್ವಜನಿಕರಿಗೆ ಸಂಪೂರ್ಣ ಉತ್ತಮ ಗುಣಮಟ್ಟದ ತಿನಿಸು ನೀಡುವ ಜೊತೆಗೆ ಶುದ್ಧತೆಗೂ ಗಮನ ಹರಿಸುವಂತೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಕಿವಿಮಾತು ಹೇಳಿದರು.ನಗರದ ಡಾ.ಎಂ.ಸಿ.ಮೋದಿ ವೃತ್ತದ ಬಳಿ ಬುಧವಾರ ಕರ್ನಾಟಕ ರಕ್ಷಣಾ ವೇದಿಕೆ ಪಾದಚಾರಿ ವ್ಯಾಪಾರಿಗಳು, ನಗರ ಘಟಕ ಆಯೋಜಿಸಿದ್ದ ಸಮಾರಂಭದಲ್ಲಿ ನೂತನವಾಗಿ ನಿರ್ಮಿಸಿರುವ ಸವಿ ಭೋಜನ (ಫುಡ್ ಕೋರ್ಟ್) ಉದ್ಘಾಟಿಸಿ ಮಾತನಾಡಿ, ಫುಡ್ ಕೋರ್ಟ್‌ನಲ್ಲಿ ಸ್ವಚ್ಛತೆ, ಶುದ್ಧತೆ ಕಾಪಾಡುವ ಜೊತೆಗೆ ಉತ್ತಮ ತಿನಿಸು, ಆಹಾರ ಒದಗಿಸಬೇಕು ಎಂದರು.
ಈಚೆಗಷ್ಟೇ ಫುಟ್ ಕೋರ್ಟ್ ಹಾಗೂ ಸಿಸಿ ರಸ್ತೆಗೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಭೂಮಿಪೂಜೆ ನೆರವೇರಿಸಿದ್ದರು. ಈಗ ಫುಡ್ ಕೋರ್ಟನ್ನು ನಾವು ಉದ್ಘಾಟಿಸುತ್ತಿರುವುದು ಸಂತೋಷದ ಸಂಗತಿ. ಬಡವರ ಪರವಾಗಿ ನಮ್ಮ ಸರ್ಕಾರ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಈಗ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳೇ ಸಾಕ್ಷಿ. ದಾವಣಗೆರೆಯ ನಾಲ್ಕು ಕಡೆಗಳಲ್ಲಿ ಫುಡ್ ಕೋರ್ಟ್‌ಗಳ ನಿರ್ಮಾಣ ಮಾಡುತ್ತಿದ್ದು, ಇಂದು ಡಾ.ಎಂ.ಸಿ.ಮೋದಿ ವೃತ್ತದ ಬಳಿಯ ಫುಡ್ ಕೋರ್ಟ್ ಉದ್ಘಾಟಿಸಿದ್ದೇವೆ ಎಂದು ತಿಳಿಸಿದರು.ನೂತನ ಫುಡ್ ಕೋರ್ಟ್ ನಿರ್ಮಾಣವಾದ ಪ್ರದೇಶದಲ್ಲಿ ಮೂಲ ಸೌಕರ್ಯ ಕಲ್ಪಿಸಬೇಕಿದೆ. ಮುಖ್ಯವಾಗಿ ಕುಡಿಯುವ ನೀರು, ಒಳ ಚರಂಡಿ ವ್ಯವಸ್ಥೆ ಮಾಡಬೇಕಿದೆ. ಮಳೆ ಬಂದರೆ ಮಳೆ ನೀರು ನಿಲ್ಲದಂತೆ ಸರಾಗವಾಗಿ ಹರಿದು ಹೋಗಲು, ಮಳೆ ನೀರು ಸಿಡಿಯದಂತೆ ಶೆಲ್ಟರ್ ಹಾಕಿಸುವ ಕೆಲಸವನ್ನು ಪಾಲಿಕೆ ಆಯುಕ್ತರು ಮಾಡಬೇಕು. ಗುತ್ತಿಗೆದಾರರು ಉತ್ತಮವಾಗಿ, ಗುಣಮಟ್ಟದ ಕೆಲಸ ಮಾಡಬೇಕು. ಅಭಿವೃದ್ಧಿ ಕಾರ್ಯಗಳ ವಿಚಾರದದಲ್ಲಿ ಗುಣಮಟ್ಟದ ವಿಚಾರದಲ್ಲಿ ಯಾವುದೇ ನಿರ್ಲಕ್ಷ್ಯವನ್ನು ನಾವು ಸಹಿಸುವುದಿಲ್ಲ ಎಂದು ಡಾ.ಪ್ರಭಾ ಮಲ್ಲಿಕಾರ್ಜುನ ಸೂಚ್ಯವಾಗಿ ಎಚ್ಚರಿಸಿದರು.
ಪಾಲಿಕೆ ಆಯುಕ್ತೆ ರೇಣುಕಾ ಮಾತಾಡಿ, ಫುಡ್ ಕೋರ್ಟ್ ನಿರ್ಮಿಸಲು ಎಲ್ಲಾ ರೀತಿಯ ಟೆಂಡರ್ ಕರೆದು, ಹಣ ಬಿಡುಗಡೆ ಮಾಡಿದ್ದೇವೆ. ಗುತ್ತಿಗೆದಾರರು ತ್ವರಿತವಾಗಿ ಎಲ್ಲಾ ಕೆಲಸಗಳನ್ನೂ ಪೂರ್ಣಗೊಳಿಸಬೇಕು. ಮಹಾ ನಗರದ ನಾಲ್ಕು ಭಾಗದಲ್ಲಿ ಫುಡ್ ಕೋರ್ಟ್ ನಿರ್ಮಿಸಲಾಗುವುದು. ಡಾ.ಎಂ.ಸಿ. ಮೋದಿ ವೃತ್ತ, ಎಸ್ಓಜಿ ಕಾಲನಿ, ಶ್ರೀ ಜಯದೇವ ವೃತ್ತದಲ್ಲಿ ಶೇ.80ರಷ್ಟು ಕಾಮಗಾರಿ ಮುಗಿದಿದೆ. ಗಡಿಯಾರ ಕಂಬದ ಬಳಿ ಕಾಮಗಾರಿ ಆರಂಭಿಸಬೇಕಾಗಿದೆ ಎಂದರು.ಮಹಾನಗರ ಪಾಲಿಕೆ ಸದಸ್ಯ ಜಿ.ಎಸ್.ಮಂಜುನಾಥ ಗಡಿಗುಡಾಳ್ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನರ ಆಶಯದಂತೆ ಫುಡ್ ಕೋರ್ಟ್‌ಗಳ ನಿರ್ಮಾಣ ಕೈಗೊಳ್ಳಲಾಗಿದೆ. ನಮ್ಮ ಭಾಗದಲ್ಲಿ ಸಚಿವರು ವಿಶೇಷ ಕಾಳಜಿ ವಹಿಸಿದ್ದು, ಇಂತಹ ಕಾರ್ಯ ಕೈಗೊಳ್ಳಲು ಹೆಮ್ಮೆಯಾಗುತ್ತಿದೆ. ಒಳ್ಳೆಯ ಕೆಲಸ ಮಾಡಿದಾಗ ಸಾರ್ವಜನಿಕರು ಸಹ ಮೆಚ್ಚುಗೆ ವ್ಯಕ್ತಪಡಿಸಬೇಕು. ವಾರ್ಡ್‌ನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದು, ಜನರು ಪ್ರೋತ್ಸಾಹಿಸಿದರೆ ಇನ್ನೂ ಹೆಚ್ಚು ಕೆಲಸ ಮಾಡಲು ಸಾಧ್ಯ. ಫುಡ್ ಕೋರ್ಟ್‌ನ ಬಾಕಿ ಕಾಮಗಾರಿ ಆದಷ್ಟು ಬೇಗನೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಕರವೇ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ಅಧ್ಯಕ್ಷತೆ ವಹಿಸಿದ್ದರು. ಪಾಲಿಕೆ ಸದಸ್ಯರಾದ ಕೆ.ಚಮನ್ ಸಾಬ್, ಎ.ನಾಗರಾಜ, ಪಾಮೇನಹಳ್ಳಿ ನಾಗರಾಜ, ಉಮೇಶ, ಕರವೇ ಜಿಲ್ಲಾ ಗೌರವಾಧ್ಯಕ್ಷ ವಾಸುದೇವ ರಾಯ್ಕರ್, ಪಾದಚಾರಿ ವ್ಯಾಪಾರಿಗಳ ಘಟಕದ ಅಧ್ಯಕ್ಷ ಸುರೇಶ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಬಸಮ್ಮ, ಶಾಂತಮ್ಮ, ನಾಗಮ್ಮ, ಮಂಜುಳ ಗಣೇಶ, ಉದ್ಯಮಿದಾರರ ಘಟಕದ ಉಪಾಧ್ಯಕ್ಷ ಓ.ಮಹೇಶ್ವರಪ್ಪ, ಬಿ.ಎಸ್.ಸಂತೋಷ, ರಾಜಣ್ಣ, ರವಿಕುಮಾರ, ಜಬೀವುಲ್ಲಾ, ಆಟೋ ರಫೀಕ್, ಆಯೂಬ್, ಅನ್ವರ್, ದಾದಾಪೀರ್, ಎಂ.ಡಿ.ರಫೀಕ್, ದಾದೇಶ್, ಧೀರೇಂದ್ರ, ರಾಘವೇಂದ್ರ, ಚಂದ್ರು, ತುಳಸಿರಾಮ್, ಸಂಜು, ಕರಿಬಸಪ್ಪ, ರಮೇಶ್, ರಾಕಿ, ಅಕ್ಷಯ್, ಹನುಮಂತಪ್ಪ, ಬಸವರಾಜ್, ದಾದಾಪೀರ, ನಾಗರಾಜ, ರವಿ, ಕಾಲುಲಾಲ್ ಚೌಧರಿ, ಮಂಜುನಾಥ್, ನಾಗಪ್ಪ ಇತರರು ಇದ್ದರು.