ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಸಿಬಿಎಸ್ಇ ವಸತಿ ಶಾಲೆ, ಪದವಿ ಪೂರ್ವ ಕಾಲೇಜಿನ ಕಟ್ಟಡ ಲೋಕಾರ್ಪಣೆ
ಹಿಟ್ನಾಳ, ಭಾಗ್ಯನಗರ ಮತ್ತು ಕೊಪ್ಪಳದ ಶಾಸಕರ ಮಾದರಿ ಶಾಲೆ ಸೇರಿ ತಾಲೂಕಿನಲ್ಲಿ ಮೂರು ಕಡೆ ಪ್ರಾಥಮಿಕ, ಪ್ರೌಢ ಹಾಗೂ ಪಿಯು ಕಾಲೇಜು ಒಳಗೊಂಡಂತೆ ₹12 ಕೋಟಿ ವೆಚ್ಚದಲ್ಲಿ ಸರ್ಕಾರಿ ಇಂಟರ್ ನ್ಯಾಷನಲ್ ಮಾಡೆಲ್ ಶಾಲೆ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.
ಜಿಲ್ಲಾಡಳಿತ, ಜಿಪಂ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಕೊಪ್ಪಳ ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಸಿಬಿಎಸ್ಇ ವಸತಿ ಶಾಲೆ ಮತ್ತು ಪದವಿ ಪೂರ್ವ ಕಾಲೇಜು ಕಟ್ಟಡವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.ಲಿಂಗದಹಳ್ಳಿಯಲ್ಲಿಂದು ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಸಿಬಿಎಸ್ಇ ವಸತಿ ಶಾಲೆ ಮತ್ತು ಪದವಿ ಪೂರ್ವ ಕಾಲೇಜು ಉದ್ಘಾಟನೆಯಾಗಿದ್ದು ಸಂತಸವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು 2015-16 ನೇ ಸಾಲಿನ ಬಜೆಟ್‌ನಲ್ಲಿ ಎರಡು ಡಾ. ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆಗಳನ್ನು ಘೋಷಣೆ ಮಾಡಿದ್ದು, ಇದರಲ್ಲಿ ಒಂದು ಶಾಲೆಯನ್ನು ಕೊಪ್ಪಳ ಕ್ಷೇತ್ರಕ್ಕೆ ನೀಡಿದ್ದರು. ಸಿಬಿಎಸ್ಇ ಪಠ್ಯಕ್ರಮದ 6ರಿಂದ 12ನೇ ತರಗತಿವರೆಗೆ ಮಕ್ಕಳ ಶೈಕ್ಷಣಿಕ ಅನುಕೂಲಕ್ಕೆ ಸುಸಜ್ಜಿತವಾದ ಕಟ್ಟಡ ಲೋಕಾರ್ಪಣೆಗೊಳಿಸಲಾಗಿದೆ. ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ಅನೇಕ ದೊಡ್ಡ-ದೊಡ್ಡ ಯೋಜನೆಗಳನ್ನು ತರುವಂತಹ ಕೆಲಸವಾಗಿದ್ದು, ಶೈಕ್ಷಣಿಕ ರಂಗದಲ್ಲಿ ಮೊರಾರ್ಜಿ ಶಾಲೆಗಳು, ಅಬ್ದುಲ್ ಕಲಾಂ ವಸತಿ ಶಾಲೆಗಳು ಹಾಗೂ ಇತರ ಹಾಸ್ಟೆಲ್‌ಗಳಿಗೆ ಈ ವರ್ಷ ₹60 ಕೋಟಿಗಳನ್ನು ಕೊಪ್ಪಳ ಕ್ಷೇತ್ರಕ್ಕೆ ತರುವಂತಹ ಕೆಲಸವಾಗಿದೆ ಎಂದು ಹೇಳಿದರು.
ಮಾಜಿ ಸಂಸದ ಕರಡಿ ಸಂಗಣ್ಣ ಮಾತನಾಡಿ, ಲಿಂಗದಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ ಮತ್ತು ಪಪೂ ಕಾಲೇಜು ಕಟ್ಟಡವು ಉತ್ತಮ ಗುಣಮಟ್ಟದಿಂದ ನಿರ್ಮಿಸಲಾಗಿದ್ದು, ಸಂತಸ ತಂದಿದೆ. ಈ ವಸತಿ ಶಾಲೆಯನ್ನು ಕೊಪ್ಪಳ ಕ್ಷೇತ್ರಕ್ಕೆ ತಂದಿರುವ ಶಾಸಕರ ಕಾರ್ಯವು ಶ್ಲ್ಯಾಘನೀಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕೊಪ್ಪಳ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಾಲಚಂದ್ರನ್, ಬೆವಿನಾಳ ಗ್ರಾಪಂ ಅಧ್ಯಕ್ಷೆ ತಿಪ್ಪವ್ವ ಶಿವಪ್ಪ ನಾಯಕ, ಉಪಾಧ್ಯಕ್ಷ ಮುರಳಿ ಬಿಸರಳ್ಳಿ, ಸದಸ್ಯ ಅಂಜನಪ್ಪ ಲಿಂಗದಹಳ್ಳಿ, ಕೊಪ್ಪಳ ತಹಸೀಲ್ದಾರ ವಿಠ್ಠಲ್ ಚೌಗಲಾ, ತಾಪಂ ಇಒ ದುಂಡಪ್ಪ ತುರಾತಿ, ಜಿಪಂ ಮಾಜಿ ಅಧ್ಯಕ್ಷರಾದ ಎಸ್.ಬಿ. ನಾಗರಳ್ಳಿ ಹಾಗೂ ಟಿ. ಜರ್ನಾರ್ದನ ಹುಲಿಗಿ ಸೇರಿದಂತೆ ಹಲವು ಗಣ್ಯರು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.