ಭವ್ಯ ದೇವಾಂಗ ಸಮುದಾಯ ಭವನ ನಿರ್ಮಾಣ ಮುಖ್ಯ

KannadaprabhaNewsNetwork | Published : Jul 16, 2024 12:30 AM

ಸಾರಾಂಶ

ನಾಡಿನ ಕೇಂದ್ರ ಬಿಂದುವಾದ ದಾವಣಗೆರೆಯಲ್ಲಿ ಎಲ್ಲರಿಗೂ ಅನುಕೂಲ ಆಗುವಂತೆ ದೇವಾಂಗ ಸಮಾಜದ ಭ‍ವ್ಯ ಸಮುದಾಯ ಭವನ ನಿರ್ಮಿಸಬೇಕಿದೆ ಎಂದು ಯಾದಗಿರಿ ಜಿಲ್ಲೆಯ ಮುದೇನೂರು ಮಹಾಸಂಸ್ಥಾನ ಮಠದ ಡಾ.ಈಶ್ವರಾನಂದ ಸ್ವಾಮೀಜಿ ದಾವಣಗೆರೆಯಲ್ಲಿ ಹೇಳಿದ್ದಾರೆ.

- ದೇವಾಂಗ ಸಮಾಜದಿಂದ ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರದಲ್ಲಿ ಡಾ.ಈಶ್ವರಾನಂದ ಶ್ರೀ

- - -

ಕನ್ನಡಪ್ರಭ ವಾರ್ತೆ, ದಾವಣಗೆರೆ

ನಾಡಿನ ಕೇಂದ್ರ ಬಿಂದುವಾದ ದಾವಣಗೆರೆಯಲ್ಲಿ ಎಲ್ಲರಿಗೂ ಅನುಕೂಲ ಆಗುವಂತೆ ದೇವಾಂಗ ಸಮಾಜದ ಭ‍ವ್ಯ ಸಮುದಾಯ ಭವನ ನಿರ್ಮಿಸಬೇಕಿದೆ ಎಂದು ಯಾದಗಿರಿ ಜಿಲ್ಲೆಯ ಮುದೇನೂರು ಮಹಾಸಂಸ್ಥಾನ ಮಠದ ಡಾ.ಈಶ್ವರಾನಂದ ಸ್ವಾಮೀಜಿ ನುಡಿದರು.

ನಗರದ ಕೊಂಡಜ್ಜಿ ರಸ್ತೆಯ ಶ್ರೀ ಲಕ್ಷ್ಮೀ ವೆಂಕಟೇಶ್ವರ ಭವನದಲ್ಲಿ ಭಾನುವಾರ ದೇವಾಂಗ ಸಮಾಜದ ಜಿಲ್ಲಾಮಟ್ಟದ 7ನೇ ವರ್ಷದ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಸರ್ಕಾರದಿಂದ ಪಡೆದ ನಿವೇಶನದಲ್ಲಿ ಆದಷ್ಟು ಬೇಗನೆ ದೇವಾಂಗ ಸಮುದಾಯದ ಭವ್ಯ ಭವನ ನಿರ್ಮಾಣವಾಗಲಿ ಎಂದರು.

ಸಮುದಾಯ ಭವನ ನಿರ್ಮಾಣಕ್ಕೆ ಸಮಾಜ ಬಾಂಧವರೂ ಕೈ ಜೋಡಿಸಬೇಕು. ಹನಿ ಹನಿಗೂಡಿದರೆ ಹಳ್ಳ ಎಂಬಂತೆ ಕೈಲಾದ ನೆರವಿನ ಹಸ್ತ ಚಾಚಬೇಕು. ಈಗಿನ ವಾತಾವರಣದಲ್ಲಿ ಶಿಕ್ಷಣದಿಂದ ಮಾತ್ರ ಸಮಾಜದ ಪ್ರಗತಿ ಸಾಧ್ಯವಿದೆ. ಪ್ರತಿಯೊಬ್ಬ ಪಾಲಕರೂ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ, ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಸಮಾಜ, ದೇಶದ ಆಸ್ತಿಯಾಗಿ ಮಕ್ಕಳನ್ನು ರೂಪಿಸಬೇಕು ಎಂದು ತಿಳಿಸಿದರು.

ಬಿಜೆಪಿ ಯುವ ಮುಖಂಡ, ಮಾಜಿ ಮೇಯರ್ ಬಿ.ಜಿ.ಅಜಯಕುಮಾರ ಮಾತನಾಡಿ, ದೇಶದಲ್ಲಿ 84 ಕೋಟಿ ಜನರು ವಿವಿಧ ಕಾರಣಕ್ಕೆ ಒಂದಿಲ್ಲೊಂದು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ನೆಮ್ಮದಿಯ ಬದುಕಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಮುಖ್ಯ. ಆರೋಗ್ಯ ಉತ್ತಮವಾಗಿದ್ದರೆ ಜೀವನದಲ್ಲಿ ಯಾವುದೇ ಸಾಧನೆ ಮಾಡಲು ಸಾಧ್ಯವಿದೆ. ದೇವಾಂಗ ಬಾಂಧವರು ಮಕ್ಕಳನ್ನು ಸತ್ಪ್ರಜೆಗಳಾಗಿ ರೂಪಿಸಬೇಕು ಎಂದರು.

ಜಿಪಂ ಮಾಜಿ ಸದಸ್ಯ ಬಿ.ಎಂ. ವಾಗೀಶ ಸ್ವಾಮಿ ಮಾತನಾಡಿ, ಯಾವುದೇ ಸಮಾಜವಾಗಿದ್ದರೂ ಶೈಕ್ಷಣಿಕ, ಸಾಮಾಜಿಕ, ರಾಜಕೀಯವಾಗಿ ಬಲಿಷ್ಠವಾದಾಗ ಮಾತ್ರ ಆರ್ಥಿಕ ಸಬಲತೆ ಹೊಂದಲು ಸಾಧ್ಯ. ಹಿಂದುಳಿದ ವರ್ಗಗಳಲ್ಲಿ ಒಂದಾಗಿರುವ ದೇವಾಗ ಸಮಾಜ ಬಾಂಧವರು ಸಮಾಜದ ಮುಖ್ಯವಾಹಿನಿಗೆ ಬರುವಂತಾಗಲಿ ಎಂದು ಹಾರೈಸಿದರು.

ದೇವಾಂಗ ಸಂಘದ ಅಧ್ಯಕ್ಷ ಬಿ.ಎನ್. ಬಾಬು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಗೌರವಾಧ್ಯಕ್ಷ ಡಾ. ಎಸ್.ರಂಗನಾಥ, ಟಿ.ಅಜ್ಜೇಶಿ, ಬಿ.ಆರ್. ಶೈಲಜಾ ರಮೇಶ, ಅತಿಥ್ ಅಂಬರ್‌ಕರ್, ಎಸ್.ಜಿ. ಪುನೀತ್ ಶಂಕರ್ ಇತರರು ಇದ್ದರು.

- - -

ಬಾಕ್ಸ್‌ * "ಉನ್ನತ ಧ್ಯೇಯ, ಗುರಿ ಇರಲಿ " ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ಧ್ಯೇಯ, ಗುರಿ ಇಟ್ಟುಕೊಂಡು ಏಕಾಗ್ರತೆಯಿಂದ ಅಧ್ಯಯನ ಮಾಡಬೇಕು. ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣದಿಂದ ಯಾವುದೇ ಸಾಧನೆ ಮಾಡಲು ಸಾಧ್ಯವಿದೆ. ಎಸ್ಸೆಸ್ಸೆಲ್ಸಿ, ಪಿಯುಸಿ ಪ್ರತಿಯೊಬ್ಬ ವಿದ್ಯಾರ್ಥಿಗಳ ಜೀವನದ ತಿರುವು. ಇವರೆಡು ಮೈಲುಗಲ್ಲುಗಳ ನಂತರ ಅನೇಕ ದಾರಿಗಳಿಗೆ. ಯಾವ ಮಾರ್ಗದಲ್ಲಿ ಸಾಗಿದರೆ ಉತ್ತಮ, ಉಜ್ವಲ ಭವಿಷ್ಯ ನಿರ್ಮಾಣ ಸಾಧ್ಯವೆಂದ ಬಗ್ಗೆ ಸರಿಯಾಗಿ ಮಾಹಿತಿ ಹೊಂದಿರಬೇಕು ಎಂದು ಶ್ರೀಗಳು ಹೇಳಿದರು.- - -

-14ಕೆಡಿವಿಜಿ5, 6:

ದಾವಣಗೆರೆಯಲ್ಲಿ ಭಾನುವಾರ ಯಾದಗಿರಿ ಜಿಲ್ಲೆಯ ಮುದೇನೂರು ಮಹಾಸಂಸ್ಥಾನ ಮಠದ ಡಾ. ಈಶ್ವರಾನಂದ ಸ್ವಾಮೀಜಿ, ಬಿ.ಜಿ.ಅಜಯಕುಮಾರ, ಬಿ.ಎಂ.ವಾಗೀಶ ಸ್ವಾಮಿ ದೇವಾಂಗ ಸಮಾಜದ ಜಿಲ್ಲಾ ಮಟ್ಟದ 7ನೇ ವರ್ಷದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿದರು.

Share this article