ಜಲಾವೃತ ಪ್ರದೇಶಕ್ಕೆ ರೂಪಾಲಿ ನಾಯ್ಕ ಭೇಟಿ

KannadaprabhaNewsNetwork | Published : Jul 16, 2024 12:30 AM

ಸಾರಾಂಶ

ಚತುಷ್ಪಥ ಕಾಮಗಾರಿ ನಿರ್ವಹಿಸುತ್ತಿರುವ ಐಆರ್‌ಬಿ ಕಂಪನಿಯು ಅವೈಜ್ಞಾನಿಕ ಕಾಮಗಾರಿ ಹಾಗೂ ನೌಕಾನೆಲೆ ಕಾಮಗಾರಿಗಳಿಂದ ಸಮುದ್ರಕ್ಕೆ ಸೇರುವ ನೀರಿಗೆ ತಡೆಯಾಗುತ್ತಿರುವುದರಿಂದ ಇಂತಹ ಸಮಸ್ಯೆಗಳು ಮರುಕಳಿಸುತ್ತಿದೆ.

ಕಾರವಾರ: ತಾಲೂಕಿನ ಜಲಾವೃತ ಪ್ರದೇಶಗಳಿಗೆ ಭೇಟಿ ನೀಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷರು ಹಾಗೂ ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ, ಸಂತ್ರಸ್ತರ ಸಹಾಯಕ್ಕೆ ನಿಂತರು. ನೀರು ಸರಾಗವಾಗಿ ಹರಿದುಹೋಗುವಂತೆ ಕ್ರಮ ಕೈಗೊಳ್ಳಲು ನೌಕಾನೆಲೆ ಅಧಿಕಾರಿಗಳಿಗೆ ತಿಳಿಸಿದರು.

ತಾಲೂಕಿನ ಚೆಂಡಿಯಾ‌ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಗಾ, ಐಸ್‌‌ ಫ್ಯಾಕ್ಟರಿ ಚೆಂಡಿಯಾ, ಪೋಸ್ಟ್‌ ಚೆಂಡಿಯಾ, ಇಡೂರು ಸೇರಿದಂತೆ‌ ವಿವಿಧ ಭಾಗದ ಜಲಾವೃತವಾಗಿ ತೊಂದರೆಗೊಳಗಾದ ಜನತೆಯ ಅಹವಾಲನ್ನು ಆಲಿಸಿದರು. ಜನತೆಯೊಂದಿಗೆ ತಾವಿರುವುದಾಗಿ ಭರವಸೆ ನೀಡಿದರು.

ಚತುಷ್ಪಥ ಕಾಮಗಾರಿ ನಿರ್ವಹಿಸುತ್ತಿರುವ ಐಆರ್‌ಬಿ ಕಂಪನಿಯು ಅವೈಜ್ಞಾನಿಕ ಕಾಮಗಾರಿ ಹಾಗೂ ನೌಕಾನೆಲೆ ಕಾಮಗಾರಿಗಳಿಂದ ಸಮುದ್ರಕ್ಕೆ ಸೇರುವ ನೀರಿಗೆ ತಡೆಯಾಗುತ್ತಿರುವುದರಿಂದ ಇಂತಹ ಸಮಸ್ಯೆಗಳು ಮರುಕಳಿಸುತ್ತಿದೆ ಎಂದು ತಿಳಿಸಿದ ರೂಪಾಲಿ ಎಸ್. ನಾಯ್ಕ, ನೌಕಾನೆಲೆ ಅಧಿಕಾರಿಗಳ ಜತೆ ಮಾತುಕತೆ ನಡೆಸಿದರು.

ಈ ಹಿಂದೆ ಶಾಸಕರಾಗಿದ್ದಾಗಲೂ ನೀರು ಹರಿದುಹೋಗಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೆ. ಆದರೆ ಅಗತ್ಯ ಕ್ರಮ ಕೈಗೊಳ್ಳದೆ ಇರುವುದರಿಂದ ಎಲ್ಲೆಡೆ ನೀರು ತುಂಬುತ್ತಿದೆ. ಜನತೆ ಮೇಲಿಂದ ಮೇಲೆ ತೊಂದರೆ ಅನುಭವಿಸುವಂತಾಗಿದೆ. ಇಲ್ಲಿನ ಜನತೆ ನೌಕಾನೆಲೆಗಾಗಿ, ರಾಷ್ಟ್ರಕ್ಕಾಗಿ ಮನೆ, ಆಸ್ತಿ ತ್ಯಾಗ ಮಾಡಿದ್ದಾರೆ. ಹೀಗಿದ್ದರೂ ಅವರಿಗೆ ನೌಕಾನೆಲೆ ಸಹಕರಿಸದೆ ಇದ್ದರೆ ಹೇಗೆ? ನೀರು ತುಂಬದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ನಿಮ್ಮ ಮೇಲಿದೆ ಎಂದು ಅಧಿಕಾರಿಗಳಿಗೆ ತಿಳಿಸಿದರು.

ನೀರು ಸರಾಗವಾಗಿ ಹರಿದುಹೋಗಲು ಇರುವ ಅಡ್ಡಿಯನ್ನು ನಿವಾರಿಸಿ ಶಾಶ್ವತ ಕ್ರಮ ಕೈಗೊಳ್ಳಬೇಕೆಂದರು. ನಂತರ ನೀರು ಹರಿದು ಹೋಗಲು ತಡೆಯಾಗುತ್ತಿದ್ದ ಜಾಗಗಳನ್ನು ನೌಕಾನೆಲೆ ಅಧಿಕಾರಿಗಳಿಗೆ ತಿಳಿಸಲಾಯಿತು. ನೀರಿನ ಹರಿವಿಗೆ ಆಗಿರುವ ಅಡ್ಡಿಯನ್ನು ತೆರವುಗೊಳಿಸುವುದಾಗಿ ಭರವಸೆ ನೀಡಿದರು.

ಕಾರವಾರ ತಾಲೂಕಿನ ಚೆಂಡಿಯಾ, ಅರಗಾ, ತೋಡೂರ ಮತ್ತಿತರ ಕಡೆ ಪ್ರವಾಹ ಪರಿಸ್ಥಿತಿ ತಲೆದೋರದಂತೆ ಶಾಶ್ವತ ಪರಿಹಾರ ಕಲ್ಪಿಸಲು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಜತೆ ಮಾತುಕತೆ ನಡೆಸಿ, ವಿನಂತಿಸಿದ್ದೇನೆ. ಸಂಸದರು ಸ್ಪಂದಿಸಿದ್ದು, ಸಮಸ್ಯೆ ಬಗೆಹರಿಯುವ ವಿಶ್ವಾಸ ಇದೆ ಎಂದು ಮಾಜಿ ಶಾಸಕಿ ರೂಪಾಲಿ ನಾಯ್ಕ ತಿಳಿಸಿದರು.

ಸಂತ್ರಸ್ತರ ಅಹವಾಲು ಆಲಿಕೆ: ಸುರಿಯುತ್ತಿರುವ ಮಳೆಯನ್ನೂ ಲೆಕ್ಕಿಸದೆ ರೂಪಾಲಿ ಎಸ್. ನಾಯ್ಕ ಜಲಾವೃತ ಪ್ರದೇಶಗಳಿಗೆ ಭೇಟಿ ನೀಡಿದರು. ರಸ್ತೆಯಲ್ಲಿ ನೀರಿನಲ್ಲಿಯೇ ನಡೆದುಕೊಂಡು ಹೋಗಿ ಸಂತ್ರಸ್ತರ ಅಹವಾಲು ಆಲಿಸಿದರು. ಅವರಿಗೆ ಧೈರ್ಯ ಹೇಳಿದರು. ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಶಾಶ್ವತ ಪರಿಹಾರ: ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವುದರಿಂದ ಇಂತಹ ಘಟನೆಗಳು ನಡೆಯುತ್ತಿವೆ. ಇದು ಪುನರಾವರ್ತನೆ ಆಗದಂತೆ ಕಾರ್ಯ ನಿರ್ವಹಿಸಬೇಕು ಎಂದು ನೌಕಾನೆಲೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಜಿಲ್ಲಾಡಳಿತ ಮತ್ತು ನೌಕಾನೆಲೆ ಜನರ ರಕ್ಷಣೆಗೆ ಆದ್ಯತೆ ನೀಡಬೇಕು. ಪ್ರವಾಹ ಉಂಟಾಗದಂತೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ತಿಳಿಸಿದರು.

Share this article