ಇಪ್ಪತ್ತೈದು ಲಕ್ಷ ಲಕ್ಷ ವೆಚ್ಚದಲ್ಲಿ ಕನ್ನಡ ಭವನ ನಿರ್ಮಾಣ

KannadaprabhaNewsNetwork |  
Published : Feb 22, 2024, 01:53 AM IST
21ಜಿಯುಡಿ2 | Kannada Prabha

ಸಾರಾಂಶ

ಗುಡಿಬಂಡೆ 15 ವರ್ಷಗಳ ಹಿಂದೆ ಹೇಗಿತ್ತು, ಈಗ ಹೇಗಿದೆ ಎಂಬುದನ್ನು ಎಲ್ಲರೂ ಗಮನಿಸಬೇಕಿದೆ. ಬಹುತೇಕ ಎಲ್ಲಾ ರಸ್ತೆಗಳು ಉತ್ತಮವಾಗಿ ನಿರ್ಮಾಣಗೊಂಡಿದೆ. ಕ್ರೀಡಾಪಟುಗಳ ಬೇಡಿಕೆಯಂತೆ ಕ್ರೀಡಾಂಗಣ ನಿರ್ಮಾಣದ ಡಿಪಿಆರ್ ಸಿದ್ಧವಾಗುತ್ತಿದೆ

ಕನ್ನಡಪ್ರಭ ವಾರ್ತೆ ಗುಡಿಬಂಡೆ

ತಾಲೂಕು ಆಡಳಿತದ ವತಿಯಿಂದ ಈಗಾಗಲೇ ಕನ್ನಡ ಭವನ ನಿರ್ಮಾಣಕ್ಕಾಗಿ ಜಾಗ ನೀಡಿದ್ದು, ಲೋಕಸಭಾ ಚುನಾವಣೆ ಮುಗಿದ ಕೂಡಲೇ 25 ಲಕ್ಷ ರು. ವೆಚ್ಚದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಅನುದಾನ ಒದಗಿಸಿ, ಉತ್ತಮವಾದ ಕನ್ನಡ ಭವನ ನಿರ್ಮಿಸುವುದಾಗಿ ಶಾಸಕ ಸುಬ್ಬಾರೆಡ್ಡಿ ಭರವಸೆ ನೀಡಿದರು.

ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ 6ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಗುಡಿಬಂಡೆ ಆಂಧ್ರದ ಗಡಿಭಾಗದಲ್ಲಿದ್ದರೂ ಕನ್ನಡ ಇಲ್ಲಿ ಉನ್ನತ ಸ್ಥಾನದಲ್ಲಿದೆ ಎಂದರು.

ಕನ್ನಡ ಅಭಿವೃದ್ಧಿಗೆ ಸಹಕಾರ

ಗುಡಿಬಂಡೆಯಲ್ಲಿ ಹೆಚ್ಚು ಕವಿಗಳಿದ್ದಾರೆ. ತಮ್ಮ ಕವನಗಳು, ಕಾದಂಬರಿಗಳ ಮೂಲಕ ಈ ಭಾಗದಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಕೆಲಸ ಮಾಡುತ್ತಿದ್ದಾರೆ. ಅದರ ಜೊತೆಗೆ ಆಗಾಗ ಕನ್ನಡ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಂಡು ಮತಷ್ಟು ಮೆರುಗು ಕೊಡುತ್ತಿದ್ದಾರೆ. ನಮ್ಮ ಸರ್ಕಾರದ ವತಿಯಿಂದ ನನ್ನ ಭಾಗದಲ್ಲಿ ಕನ್ನಡ ಭಾಷೆ ಉಳಿಸಿ ಬೆಳೆಸಲು ಎಷ್ಟು ಸಾಧ್ಯವೋ ಅಷ್ಟು ಅನುದಾನ ಹಾಗೂ ಸಹಕಾರವನ್ನು ಕೊಡುತ್ತೇನೆ ಎಂದರು.

ಗುಡಿಬಂಡೆ 15 ವರ್ಷಗಳ ಹಿಂದೆ ಹೇಗಿತ್ತು, ಈಗ ಹೇಗಿದೆ ಎಂಬುದನ್ನು ಎಲ್ಲರೂ ಗಮನಿಸಬೇಕಿದೆ. ಬಹುತೇಕ ಎಲ್ಲಾ ರಸ್ತೆಗಳು ಉತ್ತಮವಾಗಿ ನಿರ್ಮಾಣಗೊಂಡಿದೆ. ಕ್ರೀಡಾಪಟುಗಳ ಬೇಡಿಕೆಯಂತೆ ಕ್ರೀಡಾಂಗಣ ನಿರ್ಮಾಣದ ಡಿಪಿಆರ್ ಸಿದ್ಧವಾಗುತ್ತಿದೆ. ಬಸ್ ಡಿಪೋ ಸ್ಥಾಪಿಸಲು ಚರ್ಚಿಸಿ ಸಾಲಿಗೆ ನನ್ನ ಈ ಅವಧಿಯಲ್ಲೇ ಬಸ್ ಡಿಪೋ ನಿರ್ಮಾಣ ಮಾಡಿಸುತ್ತೇನೆ. ಅಲ್ಲದೆ ತಾಲೂಕಿನ ಐತಿಹಾಸಿಕ ಸ್ಮಾರಕಗಳ ಬಳಿ ಗಣಿಗಾರಿಕೆ ನಡೆಸಲು ಅವಕಾಶ ನೀಡುವುದಿಲ್ಲ. ಈ ಕುರಿತು ತಾಲೂಕು ಆಡಳಿತಕ್ಕೂ ಸೂಚನೆ ನೀಡುತ್ತೇನೆ ಎಂದರು.

ಸ್ಮಾರಕಗಳ ಬೀಡು ಗುಡಿಬಂಡೆ

ಬಳಿಕ 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ.ನ. ನಾಗೇಂದ್ರ ಮಾತನಾಡಿ, ಗುಡಿಬಂಡೆಯಲ್ಲಿ ನಾವೆಲ್ಲರೂ ಹುಟ್ಟಿರುವುದು ಪುಣ್ಯ, ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ನನ್ನನ್ನು ಆಯ್ಕೆ ಮಾಡಿರುವ ಎಲ್ಲರಿಗೂ ಧನ್ಯವಾದಗಳು. ಗುಡಿಬಂಡೆ ಎಂದಾಕ್ಷಣ ಎಲ್ಲರೂ ಚಿಕ್ಕ ತಾಲೂಕು ಎಂಬ ಮನೋಭಾವ ಬೆಳೆಸಿಕೊಂಡಿರುತ್ತಾರೆ. ಆದರೆ ಈ ಹಿಂದೆ ಗುಡಿಬಂಡೆ ಆರು ಹೋಬಳಿಗಳನ್ನು ಹೊಂದಿದ್ದ ದೊಡ್ಡ ತಾಲೂಕಾಗಿತ್ತು. ಐತಿಹಾಸಿಕ ಸ್ಮಾರಕಗಳ ಬೀಡು ಎಂದೇ ಗುಡಿಬಂಡೆಯನ್ನು ಕರೆಯಲಾಗುತ್ತದೆ ಎಂದರು.

ಸಮ್ಮೇಳನದ ನಿರ್ಣಯಗಳು

6ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ಕೆಳಕಂಡತೆ ಕೆಲವೊಂದು ನಿರ್ಣಯಗಳನ್ನು ಸಮ್ಮೇಳನಾಧ್ಯಕ್ಷ ಸ.ನ. ನಾಗೇಂದ್ರ ಮಂಡಿಸಿದರು. ಐತಿಹಾಸಿಕ ಹಿನ್ನೆಲೆಯ ಅಮಾನಿಬೈರಸಾಗರ ಕೆರೆ ಭಾರತದ ಭೂಪಟವನ್ನು ಹೋಲುವಂತೆ ಇದ್ದು, ಅದನ್ನು ರಾಷ್ಟ್ರೀಯ ಸ್ಮಾರಕ ಎಂದು ಗುರ್ತಿಸುವುದು, ಈ ಭಾಗದಲ್ಲಿ ಜವಳಿ ಪಾರ್ಕ್ ಸ್ಥಾಪನೆ, ಬಸ್ ಡಿಪೋ, ಪ್ರವಾಸೋದ್ಯಮ ಅಭಿವೃದ್ದಿಪಡಿಸುವುದರ ಜೊತೆಗೆ ಈ ಭಾಗದಲ್ಲಿರುವ ಎಲ್ಲಾ ಸ್ಮಾರಕಗಳನ್ನು ಪುನರುಜ್ಜೀವನ ಮಾಡಿ ಗುಡಿಬಂಡೆಯ ಅಸ್ಮಿತೆಯನ್ನು ಉಳಿಸಬೇಕು ಎಂಬ ನಿರ್ಣಯಗಳನ್ನು ಮಂಡನೆ ಮಾಡಲಾಯಿತು.

ಇನ್ನೂ ವೇದಿಕೆ ಕಾರ್ಯಕ್ರಮಕ್ಕೂ ಮುನ್ನಾ ಗುಡಿಬಂಡೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ವಿವಿಧ ಕಲಾತಂಡಗಳೊಂದಿಗೆ ಸಮ್ಮೇಳನ ಅಧ್ಯಕ್ಷರನ್ನು ಬೆಳ್ಳಿ ರಥದಲ್ಲಿ ಕೂರಿಸಿ ಮೆರವಣಿಗೆ ಮೂಲಕ ವೇದಿಕೆಗೆ ಬರಮಾಡಿಕೊಳ್ಳಲಾಯಿತು. ಸಾಹಿತ್ಯ ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ರಾಜಶೇಖರನಾಯ್ಡು ರವರಿಂದ ಹಾಲಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ.ನ. ನಾಗೇಂದ್ರ ರವರಿಗೆ ಕನ್ನಡ ಬಾವುಟ ನೀಡುವುದರ ಮೂಲಕ ಹಸ್ತಾಂತರಿಸಲಾಯಿತು.

ಈ ವೇಳೆ ತಹಸೀಲ್ದಾರ್ ಮನೀಷಾ, ಕಸಾಪ ಜಿಲ್ಲಾಧ್ಯಕ್ಷ ಕೋಡಿರಂಗಪ್ಪ, ಬಿಇಒ ಮುನೇಗೌಡ, ಆರಕ್ಷಕ ವೃತ್ತ ನಿರೀಕ್ಷಕ ನಯಾಜ್ ಬೇಗ್, ಪ.ಪಂ. ಮುಖ್ಯಾಧಿಕಾರಿ ಸಭಾ ಶಿರೀನ್, ಅಧ್ಯಕ್ಷೆ ನಗೀನ್ ತಾಜ್, ಉಪಾಧ್ಯಕ್ಷ ವಿಕಾಸ್, ಕಸಾಪ ತಾಲೂಕು ಅಧ್ಯಕ್ಷ ಪ್ರೆಸ್ ಸುಬ್ಬರಾಯಪ್ಪ, ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷರಾದ ವೆಂಕಟಾಚಲಯ್ಯ, ಗುಡಿಬಂಡೆ ರಫೀಕ್, ಜಿ.ಎನ್. ರಾಜಶೇಖರ್ ನಾಯ್ಡು, ಕನ್ನಡಾಭಿಮಾನಿಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!