ಬೆಳಗಾವಿ : ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಹಣದಿಂದ ಮಕ್ಕಳಿಗೆ ಅನುಕೂಲವಾಗುವಂತೆ ಗ್ರಂಥಾಲಯ ನಿರ್ಮಾಣ!

KannadaprabhaNewsNetwork | Updated : Oct 14 2024, 12:47 PM IST

ಸಾರಾಂಶ

ಮಹಾತಾಯಿ ತಮ್ಮ ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣ ಕೂಡಿಟ್ಟು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಮಕ್ಕಳಿಗೆ ಅನುಕೂಲವಾಗುವಂತೆ ಮಂಟೂರ ಗ್ರಾಮದ ಮಹಿಳೆ ಮಲ್ಲವ್ವ ಭೀಮಪ್ಪ ಮೇಟಿ ಗ್ರಂಥಾಲಯ ನಿರ್ಮಿಸುವ ಮೂಲಕ ಮಾದರಿಯಾಗಿದ್ದು, ಇವರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಶ್ರೀಶೈಲ ಮಠದ

 ಬೆಳಗಾವಿ : ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣದಿಂದ ಮಹಿಳೆಯರು ಟಿವಿ, ಪ್ರೀಜ್ಡ್‌, ಮೊಬೈಲ್‌, ಮಕ್ಕಳಿಗೆ ಬೈಕ್‌ ಕೊಡಿಸಿದ್ದರು. ಸುಟ್ಟಟ್ಟಿ ಗ್ರಾಮದ ಅಜ್ಜಿಯೊಬ್ಬರು ಇಡೀ ಊರಿಗೆ ಹೋಳಿಗೆ ಊಟ ಹಾಕಿ ಸುದ್ದಿಯಾಗಿದ್ದರು. ಆದರೆ, ಇಲ್ಲೊಬ್ಬ ಮಹಾತಾಯಿ ತಮ್ಮ ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣ ಕೂಡಿಟ್ಟು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಮಕ್ಕಳಿಗೆ ಅನುಕೂಲವಾಗುವಂತೆ ಗ್ರಂಥಾಲಯ ನಿರ್ಮಿಸುವ ಮೂಲಕ ಮಾದರಿಯಾಗಿದ್ದು, ಇವರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮಂಟೂರ ಗ್ರಾಮದ ಮಹಿಳೆ ಮಲ್ಲವ್ವ ಭೀಮಪ್ಪ ಮೇಟಿ ಎಂಬುವರೇ ಮಕ್ಕಳಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಧ್ಯಯನ ಮಾಡಲು ಅನುಕೂಲವಾಗುವಂತೆ ಗ್ರಂಥಾಲಯ ನಿರ್ಮಿಸಿದ್ದಾರೆ. ಗ್ರಾಮ ಪಂಚಾಯತಿ ಸದಸ್ಯರೂ ಆಗಿರುವ ಮಲ್ಲವ್ವ ಅವರು ತಮ್ಮ 13 ತಿಂಗಳ ಕಂತಿನ ಗೃಹಲಕ್ಷ್ಮಿ ಹಣ ಮತ್ತು ಪಂಚಾಯತಿ ಸದಸ್ಯತ್ವದ ಗೌರವಧನ ಸೇರಿಸಿ ಮಕ್ಕಳ ಸಹಾಯದಿಂದ ₹1.50 ಲಕ್ಷ ವೆಚ್ಚದಲ್ಲಿ ಸಣ್ಣ ಪ್ರಮಾಣದ ಗ್ರಂಥಾಲಯ ನಿರ್ಮಿಸಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

ನಮ್ಮ ಮನೆ ಮಕ್ಕಳು, ಊರಿನ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಓದಲು ದೂರದ ಬೆಂಗಳೂರು, ಧಾರವಾಡ, ವಿಜಯಪುರ ಮತ್ತಿತರರ ನಗರಗಳಿಗೆ ಹೋಗುತ್ತಾರೆ. ಅವರಿಗೆ ತರಬೇತಗೆ ತಿಂಗಳು ತಿಂಗಳು ಹಣದ ಸಮಸ್ಯೆ ಎದುರಾಗುತ್ತಿತ್ತು. ಅಲ್ಲದೇ, ಊಟದ ಸಮಸ್ಯೆಯಿಂದಲೂ ಅವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿತ್ತು. ಗ್ರಂಥಾಲಯ ಸ್ಥಾಪನೆ ಮಾಡಿದರೇ ಊರಿನ ಮಕ್ಕಳೆಲ್ಲರೂ ಇಲ್ಲಿಯೇ ಬಂದು ಓದುತ್ತಾರೆ ಎಂಬ ಸದುದ್ದೇಶದಿಂದ ಗೃಹಲಕ್ಷ್ಮಿಯಿಂದ ಬಂದ ಹಣ, ಗ್ರಾಮ ಪಂಚಾಯತಿ ಸದಸ್ಯತ್ವದ ಗೌರವ ಧನ ಕೂಡಿಸಿ, ಮಕ್ಕಳ ಸಹಕಾರದಿಂದ ಒಟ್ಟು ₹1.50 ಲಕ್ಷ ವೆಚ್ಚದಲ್ಲಿ ಖರ್ಚು ಮಾಡಿ, ಸಣ್ಣ ಪ್ರಮಾಣದಲ್ಲಿ ಗ್ರಂಥಾಲಯ ನಿರ್ಮಿಸಲಾಗಿದೆ ಎಂದು ಮಲ್ಲವ್ವ ಭೀಮಪ್ಪ ಮೇಟಿ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ನಾನು ಹೆಚ್ಚೇನೂ ಓದಿಲ್ಲ. ಆದರೆ, ತಮ್ಮ ಊರು ಮಕ್ಕಳು ಓದಿ, ಒಳ್ಳೆಯ ಕೆಲಸ ಪಡೆಯಬೇಕು. ಹಾಗಾಗಿ, ಈ ಗ್ರಂಥಾಲಯ ನಿರ್ಮಿಸಿದ್ದೇನೆ. ತಮ್ಮ ಕುಟುಂಬದಲ್ಲಿ 8 ಜನ ಸದಸ್ಯರಿದ್ದಾರೆ. ನಮ್ಮದು ಕೃಷಿ ಕುಟುಂಬವಾಗಿದ್ದು, ಜತೆಗೆ ಕುರಿ ಸಾಕಾಣಿಕೆಯನ್ನೂ ಕೂಡ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ನಮ್ಮ ಊರಿನ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆ ಅಧ್ಯಯನಕ್ಕೆ ದೂರದ ನಗರಗಳಿಗೆ ಹೋಗುವ ಬದಲು ಇಲ್ಲಿಯೇ ಅಧ್ಯಯನ ಮಾಡಲು ಅನುಕೂಲವಾಗುವಂತೆ ಗೃಹಲಕ್ಷ್ಮಿ ಹಣ ಕೂಡಿಟ್ಟು, ಅದರ ಜೊತೆಗೆ ಗ್ರಾಪಂ ಸದಸ್ಯತ್ವದ ಗೌರವ ಧನಸೇರಿಸಿ ₹1.50 ಲಕ್ಷ ವೆಚ್ಚದಲ್ಲಿ ಗ್ರಂಥಾಲಯ ನಿರ್ಮಿಸಿದ್ದೇನೆ.

-ಮಲ್ಲವ್ವ ಮೇಟಿ, ಗ್ರಾಮ ಪಂಚಾಯತಿ ಸದಸ್ಯೆ

Share this article