ಕಡ್ಡಾಯವಾಗಿ ಆಂತರಿಕಾ ದೂರು ನಿವಾರಣಾ ಸಮಿತಿ ರಚಿಸಿ

| Published : Nov 06 2025, 01:45 AM IST

ಸಾರಾಂಶ

ತಮ್ಮ ತಮ್ಮ ವ್ಯಾಪ್ತಿಯಲ್ಲಿ ಸ್ವೀಕೃತವಾದ ದೂರುಗಳನ್ನು ಪರಿಹರಿಸಲು ಸೂಕ್ಷ್ಮವಾಗಿ ಗಮನಿಸಿ ಮುಲಾಜಿಲ್ಲದೆ ಸೂಕ್ತವಾದ ನಿರ್ಧಾರ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ ಪ್ರವಾಸದ ಸಂದರ್ಭದಲ್ಲಿ ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದು ಜಿಲ್ಲಾಡಳಿತಕ್ಕೆ ಧನ್ಯವಾದಗಳನ್ನು ಸಲ್ಲಿಸಿದರು. ಸಂಘ ಸಂಸ್ಥೆಗಳು ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಮಹಿಳೆಯರ ಸುರಕ್ಷತೆಗಾಗಿ ಸಮಿತಿ ರಚನೆ ಮಾಡಿದ್ದರಾ ಮತ್ತು ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಯುತ್ತಿದೆಯಾ ಎಂದು ಪರಿಶೀಲಿಸಬೇಕು ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕನ್ನಡಪ್ರಭ ವಾರ್ತೆ ಹಾಸನ

ಸರ್ಕಾರಿ ಕಚೇರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಮಹಿಳೆಯರು ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಲೈಂಗಿಕ ದೌರ್ಜನ್ಯ ತಡೆಯಲು ಸುಪ್ರೀಂ ಕೋರ್ಟ್ ಆದೇಶದಂತೆ ಕಡ್ಡಾಯವಾಗಿ ಆಂತರಿಕಾ ದೂರು ನಿವಾರಣಾ ಸಮಿತಿ ರಚಿಸುವಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮೀ ಚೌಧರಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಬುಧವಾರ ಮಹಿಳಾ ಸ್ಪಂದನಾ ಮತ್ತು ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಸ್ವೀಕೃತವಾದ ದೂರುಗಳನ್ನು ಪರಿಹರಿಸಲು ಸೂಕ್ಷ್ಮವಾಗಿ ಗಮನಿಸಿ ಮುಲಾಜಿಲ್ಲದೆ ಸೂಕ್ತವಾದ ನಿರ್ಧಾರ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ ಪ್ರವಾಸದ ಸಂದರ್ಭದಲ್ಲಿ ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದು ಜಿಲ್ಲಾಡಳಿತಕ್ಕೆ ಧನ್ಯವಾದಗಳನ್ನು ಸಲ್ಲಿಸಿದರು. ಸಂಘ ಸಂಸ್ಥೆಗಳು ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಮಹಿಳೆಯರ ಸುರಕ್ಷತೆಗಾಗಿ ಸಮಿತಿ ರಚನೆ ಮಾಡಿದ್ದರಾ ಮತ್ತು ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಯುತ್ತಿದೆಯಾ ಎಂದು ಪರಿಶೀಲಿಸಬೇಕು ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಈ ವರ್ಷದಲ್ಲಿ ೨೭೯ ಕಾಣೆಯಾದ ಮಹಿಳೆಯರು ಮತ್ತು ಹೆಣ್ಣುಮಕ್ಕಳ ಪ್ರಕರಣಗಳು ಪೊಲೀಸ್ ಇಲಾಖೆಯಲ್ಲಿ ದಾಖಲಾಗಿದ್ದು, ೨೩೬ ಪ್ರಕರಣ ಪತ್ತೆ ಮಾಡಲಾಗಿದೆ. ಉಳಿದ ೪೩ ಪ್ರಕರಣಗಳನ್ನು ಶೀಘ್ರವಾಗಿ ಪತ್ತೆ ಹಚ್ಚಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇತ್ತೀಚೆಗೆ ವಿವಾಹ ವಿಚ್ಛೇಧನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮದುವೆಗೆ ಮುನ್ನ ಹುಡುಗ-ಹುಡುಗಿಗೆ ಸಮಾಲೋಚನೆ ನಡೆಸುವ ನಿಟ್ಟಿನಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದಿಂದ ನನ್ನ-ನಿನ್ನ ಕನಸು ಎಂಬ ಕಾರ್ಯಕ್ರಮವನ್ನು ಜಾರಿಗೆ ತರಲಾಗುತ್ತಿದೆ. ರಾಜ್ಯದಲ್ಲಿ ಈ ಕಾರ್ಯಕ್ರಮ ಇನ್ನೂ ಯಾವ ಜಿಲ್ಲೆಯಲ್ಲಿ ಆರಂಭಿಸಿಲ್ಲ, ಹಾಸನ ಜಿಲ್ಲೆಯಿಂದಲೇ ಮೊದಲು ಪ್ರಾರಂಭವಾಗಲಿ ಎಂದು ತಿಳಿಸಿದರು.

ಇಂದಿನ ದಿನಗಳಲ್ಲಿ ಯುವಕ ಯುವತಿಯರು ಮದುವೆಯಾಗಿ ಒಂದು ವ?ದೊಳಗೆ ವಿಚ್ಚೇದನ ತೆಗೆದುಕೊಳ್ಳುವ ಸ್ಥಿತಿಗೆ ತಲುಪುತ್ತಿದ್ದಾರೆ. ಅವರಲ್ಲಿ ತಾಳ್ಮೆ ಕಡಿಮೆಯಿರುವುದು ಕಂಡುಬರುತ್ತಿದೆ. ಇದನ್ನು ತಪ್ಪಿಸಿ ಭದ್ರ ಬುನಾದಿ ಹಾಕುವ ನಿಟ್ಟಿನಲ್ಲಿ ಅರಿವು ಮೂಡಿಸಬೇಕು ಆ ಕಾರಣಕ್ಕೆ ಮದುವೆಯ ಪೂರ್ವದಲ್ಲಿ ಯುವಕ ಯುವತಿಯರ ತಂದೆ ತಾಯಿಗಳು ಕುಳಿತು ಚರ್ಚೆ ಮಾಡಿ ಎರಡು ಕುಟುಂಬಗಳು ಮದುವೆ ಒಪ್ಪಂದ ಮಾಡಿಕೊಂಡು ಮುಂದುವರೆಯಬೇಕು ಆಗ ಸಮಾಜದಲ್ಲಿ ಸಂಸ್ಕಾರಯುತವಾಗಿ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಅಸಂಘಟಿತ ಕಾರ್ಮಿಕರು ದೂರು ನೀಡಲು ಸಹಕಾರಿಯಾಗುವಂತೆ ಜಿಲ್ಲಾ ಮಟ್ಟದ ದೂರು ನಿವಾರಣಾ ಸಮಿತಿಯ ಕುರಿತು ಜಿಲ್ಲಾಧಿಕಾರಿ ಕಚೇರಿ ನಾಮಫಲಕದಲ್ಲಿ ಅಳವಡಿಸಬೇಕು ಎಂದು ತಿಳಿಸಿದರು.

ಭೇಟಿ ನೀಡಿದ ಸಂದರ್ಭದಲ್ಲಿ ಗಮನಿಸಿದ್ದು, ಬಿ.ಸಿ.ಎಂ. ಹಾಸ್ಟೆಲ್‌ಗಳಲ್ಲಿ ಗೋಡೆ ಕುಸಿಯುವ ಹಂತದಲ್ಲಿದೆ. ಇಂತಹವುಗಳ ಬಗ್ಗೆ ಗಮನಹರಿಸಿ ಮಕ್ಕಳಿಗೆ ತೊಂದರೆಯಾಗದಂತೆ ಕ್ರಮವಹಿಸಿ ಎಂದರಲ್ಲದೆ, ಹೆಣ್ಣು ಮಕ್ಕಳ ರಕ್ಷಣೆಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಪ್ರತಿ ಪೊಲೀಸ್ ಠಾಣೆಯಲ್ಲಿ ಮಹಿಳಾ ಸ್ಪಂದನ ಕಾರ್ಯಕ್ರಮ ನಡೆಯುತ್ತದೆ. ಅಲ್ಲಿ ಸ್ಪಂದಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರತಿ ತಿಂಗಳ ಮೂರನೇ ಶನಿವಾರ ನಡೆಯುವ ಜನ ಸ್ಪಂದನ ಕಾರ್ಯಕ್ರಮದಲ್ಲಿ ದೂರು ಸಲ್ಲಿಸಿ ಎಂದು ತಿಳಿಸಿದರು. ಶಾಲಾ, ಕಾಲೇಜುಗಳಲ್ಲಿ ಮಕ್ಕಳಿಗೆ ಬ್ಯಾಡ್ ಮತ್ತು ಗುಡ್ ಟಚ್ ಬಗ್ಗೆ ಜಾಗೃತಿ ಮೂಡಿಸಿ ಎಂದರಲ್ಲದೆ, ತುರ್ತು ಸಹಾಯವಾಣಿ ಸಂಖ್ಯೆಯನ್ನು ಫಲಕಗಳಲ್ಲಿ ಅಳವಡಿಸುವಂತೆ ಸೂಚನೆ ನೀಡಿದರು. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಬೇಡಿಕೆಗೆ ಅನುಗುಣವಾಗಿ ಬಸ್ ನಿಲುಗಡೆಗೆ ಅವಕಾಶ ಕಲ್ಪಿಸಲು ಕ್ರಮವಹಿಸಲು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್‌. ಪೂರ್ಣಿಮಾ, ಅಪರ ಜಿಲ್ಲಾಧಿಕಾರಿ ಮಂಜುನಾಥ್, ಹೆಚ್ಚುವರಿ ಪೊಲೀಸ್ ವರಿ?ಧಿಕಾರಿ ವೆಂಕಟೇಶ್ ನಾಯ್ಡು, ಮಾಹಿಳಾ ಆಯೋಗದ ಕಾರ್ಯದರ್ಶಿ ರೂಪ ಉಪಸ್ಥಿತರಿದ್ದರು. ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.