ಸಾರಾಂಶ
ಶಿವಮೊಗ್ಗ: ಕರ್ನಾಟಕ ರಾಜ್ಯ ಸಮುದಾಯ ಸಂಘ 50 ವರ್ಷ ಪೂರೈಸಿರುವ ಹಿನ್ನೆಲೆ ಬೆಂಗಳೂರಿನ ಕರ್ನಾಟಕ ನಾಟಕ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಿವಮೊಗ್ಗ ರಂಗಾಯಣ, ಸಮುದಾಯ ಇವರ ಸಹಯೋಗದಲ್ಲಿ ನ.7ರಿಂದ 9ರಂದು ಕುವೆಂಪು ರಂಗ ಮಂದಿರದಲ್ಲಿ ರಾಜ್ಯಮಟ್ಟದ ಮೂರು ನಾಟಕಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮುದಾಯ ಶಿವಮೊಗ್ಗ ಅಧ್ಯಕ್ಷ ಡಾ.ಕೆ.ಜಿ.ವೆಂಕಟೇಶ್ ತಿಳಿಸಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಇಂದಿರಾಗಾಂಧಿಯವರ ತುರ್ತು ಪರಿಸ್ಥಿತಿ ವಿರುದ್ಧವಾಗಿ 1975ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ವಿದ್ಯಾರ್ಥಿಗಳು ಸಮುದಾಯ ಸಂಘವನ್ನು ಕಟ್ಟಿಕೊಂಡು, ತುರ್ತು ಪರಿಸ್ಥಿತಿ ವಿರುದ್ಧ ಹೋರಾಟದಲ್ಲಿ ತೊಡಗಿ, ಬೀದಿನಾಟಕ ಮತ್ತು ವಿಚಾರ ಸಂಕಿರಣ ಜಾಥಾ ನಡೆಸಿ ಜನರನ್ನು ಎಚ್ಚರಿಸುವ ಕೆಲಸ ಮಾಡಿದ್ದರು ಎಂದು ತಿಳಿಸಿದರು.ಈ ವರ್ಷ ‘ಮನುಷ್ಯತ್ವದೆಡೆಗೆ ಸಮುದಾಯ ಜಾಥಾ-50’ ಕಾರ್ಯಕ್ರಮ ಹಮ್ಮಿಕೊಂಡಿದ್ದು ನ.7 ರಂದು ಸಹ್ಯಾದ್ರಿ ಕಾಲೇಜಿನಲ್ಲಿ "ರಂಗಭೂಮಿಯಲ್ಲಿ ಸಾಂಸ್ಕೃತಿಕ ಸಾಧ್ಯತೆಗಳು " ಎನ್ನುವ ವಿಷಯವಾಗಿ ಮೈಸೂರು ರಂಗಾಯಣದ ಮಾಜಿ ನಿರ್ದೇಶಕ ಜನಾರ್ಧನ್ ಮಾತನಾಡಲಿದ್ದು, ಈ ಕಾರ್ಯಕ್ರಮವನ್ನು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಡಾ.ಕೆ.ವಿ.ನಾಗರಾಜಮೂರ್ತಿ ಉದ್ಘಾಟಿಸಲಿದ್ದಾರೆ. ಶಿವಮೊಗ್ಗ ರಂಗಾಯಣ ನಿರ್ದೇಶಕ ಡಿ.ಪ್ರಸನ್ನ ಭಾಗವಹಿಸಲಿದ್ದು, ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಂಶುಪಾಲ ಟಿ.ಅವಿನಾಶ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.ಅಂದು ಸಂಜೆ 6 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ನಾಟಕೋತ್ಸವವನ್ನು ಉದ್ಘಾಟಿಸಲಿದ್ದಾರೆ. ಡಾ.ಕೆ.ವಿ.ನಾಗರಾಜಮೂರ್ತಿ ಆಶಯ ನುಡಿಗಳನ್ನಾಡಲಿದ್ದು, ಜನಾರ್ಧನ್, ಡಾ.ಸಂಧ್ಯಾಕಾವೇರಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಶಾಸಕ ಎಸ್.ಎನ್.ಚನ್ನಬಸಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.ಹಿರಿಯ ನಾಟಕ ನಿರ್ದೇಶಕ ಡಾ.ಸಾಸ್ವೆಹಳ್ಳಿ ಸತೀಶ್ ಮಾತನಾಡಿ, ನ.7ರಂದು ಸಂಜೆ 6.30ಕ್ಕೆ ಬೆಂಗಳೂರಿನ ನೆನಪು ತಂಡದಿಂದ ಮಾಯಾದೀಪ ನಾಟಕ ಪ್ರದರ್ಶನವಿದ್ದು, ಪುನೀತ್ ಕರ್ತ ನಿರ್ದೇಶನ ಮಾಡಿದ್ದಾರೆ. ನ.8ರಂದು ಸಂಜೆ 6.30ಕ್ಕೆ ಶಿವಮೊಗ್ಗ ಸಮುದಾಯದವರು ‘ನೀರೊಳಗಣ ಕಿಚ್ಚು’ ನಾಟಕ ಪ್ರದರ್ಶಿಸಲಿದ್ದು, ಡಾ.ಸಾಸ್ವೆಹಳ್ಳಿ ಸತೀಶ್ ನಿರ್ದೇಶನ ಮಾಡಿದ್ದಾರೆ. ನ.9ರಂದು ಮೂಡುಬಿದಿರೆಯ ಆಳ್ವಾಸ್ ರಂಗಶಿಕ್ಷಣ ಕೇಂದ್ರದವರು ನಾಡೋಜ ಕಮಲಾ ಹಂಪನ ಅವರ ‘ಚಾರುವಸಂತ’ ನಾಟಕ ಆಡಲಿದ್ದು, ಜೀವನರಾಮ್ ಸುಳ್ಯಾ ನಿರ್ದೇಶನ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.ನ.8ರಂದು ಸಂಜೆ 6ಕ್ಕೆ ಶಿವಮೊಗ್ಗ ರಂಗಾಯಣದ ಆಡಳಿತಾಧಿಕಾರಿ ಶೈಲಜಾ ಕೊಡುಗು, ಡಾ.ಮೇಟಿ ಮಲ್ಲಿಕಾರ್ಜುನ, ಎಸ್.ದೇವೇಂದ್ರಗೌಡ, ಕಾಂತೇಶ್ ಕದರಮಂಡಲಗಿ ಇವರನ್ನು ಗೌರವಿಸಲಾಗುವುದು ಎಂದ ಅವರು, ನ.9ರಂದು ಸಂಜೆ 5.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ರಂಗನಿರ್ದೇಶಕಿ, ಗೌರಿಚಂದ್ರಕೇಸರಿ ಸಮಾರೋಪ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ಶಿವಮೊಗ್ಗ ರಂಗಾಯಣ ನಿರ್ದೇಶಕ ಡಿ.ಪ್ರಸನ್ನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಉಮೇಶ್, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಪಿ.ಎ.ಮಂಜಪ್ಪ, ಸಮುದಾಯ 50 ಉತ್ಸವ ಸಮಿತಿ ಕಾರ್ಯದರ್ಶಿ ಸಿ.ಕೆ.ಗುಂಡಪ್ಪ ಚಿಕ್ಕಮಗಳೂರು, ವಾಸವಿ ವಿದ್ಯಾಲಯದ ಎಸ್.ಕೆ.ಶೇಷಾಚಲ ಭಾಗವಹಿಸಲಿದ್ದು, ಸಮುದಾಯ ಶಿವಮೊಗ್ಗದ ಅಧ್ಯಕ್ಷ ಡಾ.ಕೆ.ಜಿ.ವೆಂಕಟೇಶ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಡಾ.ಗಣೇಶ್ ಕೆಂಚನಾಲ, ಮಹಾವೀರ ಕಾಸಾರ್, ಕಾಂತೇಶ್ ಕದರಮಂಡಲಗಿ, ಕೆ.ಲಕ್ಷ್ಮೀನಾರಾಯಣರಾವ್, ಹೊನ್ನಾಳಿ ಚಂದ್ರಶೇಖರ್ ಇದ್ದರು.
;Resize=(128,128))
;Resize=(128,128))