ಅತ್ತಿಗುಂಡಿಯಿಂದ ಕೊಳಗಾಮೆಗೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಜಿಲ್ಲೆಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಮುಂದಿನ ದಿನಗಳಲ್ಲಿ ಮಹಲ್‌ನಿಂದ ಕೆಮ್ಮಣ್ಣುಗುಂಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.ಅತ್ತಿಗುಂಡಿಯಿಂದ ಕೊಳಗಾಮೆಗೆ ಹೋಗುವ ರಸ್ತೆ ಅಭಿವೃದ್ಧಿಗೆ ₹1.50 ಕೋಟಿ ಕಾಮಗಾರಿಗೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಈಗಾಗಲೇ ಮಹಲ್‌ನಿಂದ ಕೆಮ್ಮಣ್ಣುಗುಂಡಿ ಸಂಪರ್ಕಿಸುವ ರಸ್ತೆಗೆ ಸುಮಾರು ₹33 ಕೋಟಿ ವೆಚ್ಚದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ನೇತೃತ್ವದಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕೆಲವು ತಾಂತ್ರಿಕ ತೊಂದರೆ ಯಿಂದಾಗಿ ವಾಪಸ್ ಬಂದಿದೆ ಎಂದು ಹೇಳಿದರು.
ಈ ರಸ್ತೆ ಅಭಿವೃದ್ಧಿಯಾದರೆ ವಾಹನ ದಟ್ಟಣೆ ಕಡಿಮೆಯಾಗಿ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. ಕೆಮ್ಮಣ್ಣು ಗುಂಡಿಯಿಂದ ತರೀಕೆರೆ ಮಾರ್ಗವಾಗಿ ಪ್ರವಾಸಿಗರು ವಾಪಸ್ ಹೋಗುತ್ತಾರೆಂದು ತಿಳಿಸಿದರು.ಪ್ರವಾಸಿಗರಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಮತ್ತೊಮ್ಮೆ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ಸೇರಿ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ. ಪರಿಸರಕ್ಕೆ ಹಾನಿಯಾಗದಂತೆ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ನೀಡಿರುವ ₹ 14 ಕೋಟಿ ರೂ. ವಿಶೇಷ ಅನುದಾನದಲ್ಲಿ ಅತ್ತಿಗುಂಡಿ ಗ್ರಾ.ಪಂ ಗೆ ಒಂದು ಕೋಟಿ ರು. ಕಾಂಕ್ರಿಟ್ ರಸ್ತೆ ಕಾಮಗಾರಿ, ಕೊಳಗಾಮೆಗೆ ಹೋಗುವ ರಸ್ತೆಗೆ ₹1.50 ಕೋಟಿ ವೆಚ್ಚದ ಡಾಂಬರೀಕರಣ ರಸ್ತೆ ನಿರ್ಮಾಣ ಮಾಡಲಾಗುವುದೆಂದರು.ಈ ಭಾಗದಲ್ಲಿ ಅತೀ ಹೆಚ್ಚು ಮಳೆಯಾಗುವುದರಿಂದ ರಸ್ತೆಗಳು ಹಾನಿಯಾಗುತ್ತಿದ್ದವು. ಈ ಬಗ್ಗೆ ಗ್ರಾಮಸ್ಥರು ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಇಲಾಖೆ ಅಧಿಕಾರಿಗಳು ಈ ರಸ್ತೆ ಕಾಮಗಾರಿ ಯನ್ನು ಗುಣಮಟ್ಟದಿಂದ ಕೂಡಿರುವಂತೆ ನೋಡಿಕೊಂಡು ಅತೀ ಶೀಘ್ರದಲ್ಲಿ ಸಾರ್ವಜನಿಕರಿಗೆ ಸಮರ್ಪಿಸಬೇಕೆಂದು ಸೂಚಿಸಿದರು.ಇದು ಪ್ರವಾಸಿ ತಾಣಗಳ ಪ್ರದೇಶವಾಗಿರುವುದರಿಂದ ಪ್ರವಾಸಿಗರು ಮತ್ತು ಸ್ಥಳೀಯ ನಿವಾಸಿಗಳಿಗೂ ತೊಂದರೆಯಾಗದ ರೀತಿ ಕಾಮಗಾರಿ ಹೊಂದಾಣಿಕೆ ಮಾಡಿಕೊಂಡು ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಗುತ್ತಿಗೆದಾರರು ಮುಂದಾಗಬೇಕೆಂದು ಹೇಳಿದರು.ಈ ಸಂದರ್ಭದಲ್ಲಿ ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಎಚ್.ಪಿ ಮಂಜೇಗೌಡ, ನಗರಸಭೆ ಸದಸ್ಯ ಶಾದಬ್ ಆಲಂ ಖಾನ್, ಗ್ರಾ.ಪಂ ಅಧ್ಯಕ್ಷೆ ವಿಜಯಲಕ್ಷ್ಮಿ, ಮಾಜಿ ಅಧ್ಯಕ್ಷ ಶಾಂತಕುಮಾರ್, ಸದಸ್ಯರು ಹಾಜರಿದ್ದರು.---- ಬಾಕ್ಸ್ ----ಕೇಂದ್ರದ ನಿರ್ಧಾರ ಶ್ಲಾಘನೀಯ: ತಮ್ಮಯ್ಯ
ಚಿಕ್ಕಮಗಳೂರು: ಭಾರತ ದೇಶದಲ್ಲಿ ಜನಿಸಿದ ನಾವು ಮೊದಲು ದೇಶ ಬಳಿಕ ಧರ್ಮ, ನಂತರ ಗ್ರಾಮ, ಮನೆ. ದೇಶಕ್ಕೆ ಭಯೋತ್ಪಾದಕರ ಉಪಟಳದಿಂದ ತೊಂದರೆಯಾಗುತ್ತಿದ್ದು, ಈ ಸಂದರ್ಭದಲ್ಲಿ ದೇಶದ ಯಾವುದೇ ಧರ್ಮದ ಪ್ರಜೆಗಳ ಮೇಲೆ ದಾಳಿ ಮಾಡಿದರೆ ಸಹಿಸಲಾಗದು. ಕೇಂದ್ರ ಸರ್ಕಾರ ಉಗ್ರರನ್ನು ಸದೆಬಡಿಯಲು ತೆಗೆದುಕೊಂಡ ನಿರ್ಧಾರ ಶ್ಲಾಘನೀಯ ಎಂದರು.ಈಗಾಗಲೇ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸೇನೆಗೆ ನೈತಿಕ ಬೆಂಬಲ ತುಂಬುವ ದೃಷ್ಟಿಯಿಂದ ಉಗ್ರವಾದಿ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಾಶ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.ಬೆಂಗಳೂರಿನಲ್ಲಿ ನಿನ್ನೆ ನಡೆದ ತಿರಂಗಾಯಾತ್ರೆ ಇತಿಹಾಸದ ಪುಟದಲ್ಲಿ ಸೇರುತ್ತಿದೆ. ಇದರಲ್ಲಿ ಸರ್ವರೂ ಒಗ್ಗಟ್ಟಿನಿಂದ ಭಾಗವಹಿಸಿ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಉಗ್ರಗಾಮಿಗಳನ್ನು ಸದೆಬಡಿಯುವ ಶಕ್ತಿಯನ್ನು ಸೇನೆಗೆ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.ಭಾರತ ಅತೀ ಶೀಘ್ರ ಉಗ್ರಗಾಮಿಗಳ, ಭಯೋತ್ಪಾದಕರ ಮುಕ್ತ ದೇಶವಾಗಬೇಕು. ಯಾವುದೇ ರಾಜ್ಯದ ಪ್ರವಾಸಿ ತಾಣಗಳಿಗೆ ಹೋದವರಿಗೆ ಭಯ ಮುಕ್ತವಾಗುವ ಜೊತೆಗೆ ಕ್ಷೇಮವಾಗಿ ವಾಪಸ್ ಆಗುವ ಭಾವನೆ ಬೆಳೆಯುವಂತಾಗಲಿ ಎಂದು ಹಾರೈಸಿದರು.ಸೈನಿಕರಿಗೆ ಆರ್ಥಿಕ ಸಹಾಯದ ಜೊತೆಗೆ ನೈತಿಕ ಬೆಂಬಲ ನೀಡಲು ಮೇ 17 ರಂದು ನಡೆಯಲಿರುವ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಜಿಲ್ಲೆಯ ಜನರು ನೀಡುವ ದೇಣಿಗೆ ಸಂಗ್ರಹಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
10 ಕೆಸಿಕೆಎಂ 2ಅತ್ತಿಗುಂಡಿಯಿಂದ ಕೊಳಗಾಮೆಗೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಚ್.ಡಿ. ತಮ್ಮಯ್ಯ ಶನಿವಾರ ಶಂಕುಸ್ಥಾಪನೆ ನೆರವೇರಿಸಿದರು.