ಗ್ರಾಪಂ ವ್ಯಾಪ್ತೀಲಿ ಆಸ್ತಿ ತೆರಿಗೆ ಬಾಕಿ ಹೆಚ್ಚಳ

KannadaprabhaNewsNetwork |  
Published : May 11, 2025, 01:15 AM ISTUpdated : May 11, 2025, 09:06 AM IST
new tax regime benifits

ಸಾರಾಂಶ

ರಾಜ್ಯದ ಗ್ರಾಪಂ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹ ಪ್ರಮಾಣ ಏರಿಕೆಯಾಗುತ್ತಿರುವ ರೀತಿಯಲ್ಲೇ, ತೆರಿಗೆ ಬಾಕಿ ಪ್ರಮಾಣವೂ ಹೆಚ್ಚಳವಾಗುತ್ತಿದೆ. 2024-25ನೇ ಸಾಲಿನ ಅಂತ್ಯಕ್ಕೆ ಬಾಕಿ ತೆರಿಗೆ ಪ್ರಮಾಣ 2,657.70 ಕೋಟಿ ರು. ತಲುಪಿದೆ. ಈ ಮೂಲಕ ಬಾಕಿ ವಸೂಲಿಯೇ ಸರ್ಕಾರಕ್ಕೆ ತಲೆಬಿಸಿಯಾದಂತಾಗಿದೆ.

 ಬೆಂಗಳೂರು :  ರಾಜ್ಯದ ಗ್ರಾಪಂ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹ ಪ್ರಮಾಣ ಏರಿಕೆಯಾಗುತ್ತಿರುವ ರೀತಿಯಲ್ಲೇ, ತೆರಿಗೆ ಬಾಕಿ ಪ್ರಮಾಣವೂ ಹೆಚ್ಚಳವಾಗುತ್ತಿದೆ. 2024-25ನೇ ಸಾಲಿನ ಅಂತ್ಯಕ್ಕೆ ಬಾಕಿ ತೆರಿಗೆ ಪ್ರಮಾಣ 2,657.70 ಕೋಟಿ ರು. ತಲುಪಿದೆ. ಈ ಮೂಲಕ ಬಾಕಿ ವಸೂಲಿಯೇ ಸರ್ಕಾರಕ್ಕೆ ತಲೆಬಿಸಿಯಾದಂತಾಗಿದೆ.

ರಾಜ್ಯದ 31 ಜಿಲ್ಲೆಗಳಲ್ಲಿ ಒಟ್ಟು 5,950 ಗ್ರಾಪಂಗಳಿವೆ. ಅವುಗಳಿಂದ 2024-25ನೇ ಸಾಲಿನಲ್ಲಿ 1,590.88 ಕೋಟಿ ರು. ತೆರಿಗೆ ಸಂಗ್ರಹದ ಗುರಿ ಹೊಂದಲಾಗಿತ್ತು. ಅದರ ಜತೆಗೆ 2,344.55 ಕೋಟಿ ರು. ಆಸ್ತಿ ತೆರಿಗೆ ಬಾಕಿ ವಸೂಲಿಯ ಗುರಿಯನ್ನೂ ಗ್ರಾಪಂಗಳಿಗೆ ನೀಡಲಾಗಿತ್ತು. ಈ ಮೂಲಕ ಒಟ್ಟಾರೆ 2024-25ರಲ್ಲಿ 3,935.43 ಕೋಟಿ ರು. ಆಸ್ತಿ ತೆರಿಗೆ ಸಂಗ್ರಹಿಸುವ ಹೊಣೆಯನ್ನು ಗ್ರಾಪಂಗಳಿಗೆ ವಹಿಸಲಾಗಿತ್ತು.

ಅದರಂತೆ 2024-25ರ ಅಂತ್ಯಕ್ಕೆ 1,272.43 ಕೋಟಿ ರು. ಅಷ್ಟೇ ಆಸ್ತಿ ತೆರಿಗೆ ಸಂಗ್ರಹಿಸಲಾಗಿದ್ದು, 2,657.70 ಕೋಟಿ ರು. ತೆರಿಗೆ ಸಂಗ್ರಹ ಬಾಕಿ ಉಳಿಸಲಾಗಿದೆ. ಆಮೂಲಕ ಒಟ್ಟಾರೆ ಆಸ್ತಿ ತೆರಿಗೆ ಸಂಗ್ರಹ ಗುರಿಯಲ್ಲಿ ಶೇ.32ರಷ್ಟು ಮುಟ್ಟಲು ಮಾತ್ರ ಗ್ರಾಪಂಗಳು ಶಕ್ತವಾಗಿದೆ. ಅದೇ 2024-25ನೇ ಸಾಲಿನ ವಾರ್ಷಿಕ ಗುರಿಯಲ್ಲಿ ಶೇ.80ರಷ್ಟು ತೆರಿಗೆ ವಸೂಲಿ ಮಾಡಿವೆ.

ಆರ್‌ಡಿಪಿಆರ್‌ ಸಚಿವರ ತವರಲ್ಲೇ ಕಡಿಮೆ:

ಗ್ರಾಪಂಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ (ಆರ್‌ಡಿಪಿಆರ್‌) ಇಲಾಖೆ ಅಡಿ ಕಾರ್ಯನಿರ್ವಹಿಸುತ್ತವೆ. ಈ ಇಲಾಖೆ ಸಚಿವ ಪ್ರಿಯಾಂಕ್‌ ಖರ್ಗೆ ತವರು ಜಿಲ್ಲೆಯಾದ ಕಲಬುರಗಿಯಲ್ಲಿ ತೆರಿಗೆ ಸಂಗ್ರಹದ ಒಟ್ಟಾರೆ ಗುರಿಯಲ್ಲಿ ಶೇ.17ರಷ್ಟನ್ನು ಮಾತ್ರ ತಲುಪಲಾಗಿದೆ. ಅದೇ ರೀತಿ ವಾರ್ಷಿಕ ಗುರಿಯಲ್ಲಿ ಶೇ.68ರಷ್ಟನ್ನು ಮುಟ್ಟಲಾಗಿದೆ.

ಉಳಿದಂತೆ ಆಸ್ತಿ ತೆರಿಗೆ ಸಂಗ್ರಹದ ಪೈಕಿ ಯಾದಗಿರಿ ಉಳಿದೆಲ್ಲ ಜಿಲ್ಲೆಗಳಿಗಿಂತ ಹಿಂದೆ ಬಿದ್ದಿದೆ. ಯಾದಗಿರಿ ಜಿಲ್ಲೆಯ 122 ಗ್ರಾಪಂಗಳಿಂದ ಒಟ್ಟಾರೆ 62.54 ಕೋಟಿ ರು. ತೆರಿಗೆ ಸಂಗ್ರಹದ ಗುರಿಯಿತ್ತು. ಅದರಲ್ಲಿ ಕೇವಲ 8.54 ಕೋಟಿ ರು. ತೆರಿಗೆ ಸಂಗ್ರಹಿಸಲಾಗಿದ್ದು, ನಿಗದಿತ ಒಟ್ಟಾರೆ ಗುರಿಯಲ್ಲಿ ಶೇ.14ರಷ್ಟು ಮಾತ್ರ ತೆರಿಗೆ ಸಂಗ್ರಹಿಸಲಾಗಿದೆ. ಹಾಗೆಯೇ, ವಿಜಯನಗರ ಜಿಲ್ಲೆಯ ಒಟ್ಟಾರೆ ಆಸ್ತಿ ತೆರಿಗೆ 82.54 ಕೋಟಿ ರು.ಗಳಾಗಿದ್ದು, 13.28 ಕೋಟಿ ರು. ಮಾತ್ರ ಸಂಗ್ರಹಿಸಲಾಗಿದೆ.

ಶೇ.100ಕ್ಕಿಂತ ಹೆಚ್ಚು ತೆರಿಗೆ ಸಂಗ್ರಹಿಸಿದ 7 ಜಿಲ್ಲೆಗಳು:

ರಾಜ್ಯದ 7 ಜಿಲ್ಲೆಗಳು ವಾರ್ಷಿಕ ಗುರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಆಸ್ತಿ ತೆರಿಗೆ ಸಂಗ್ರಹಿಸಿವೆ. ಗದಗ, ದಕ್ಷಿಣ ಕನ್ನಡ, ರಾಯಚೂರು, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಗ್ರಾಪಂಗಳು ವಾರ್ಷಿಕ ಗುರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಸಂಗ್ರಹಿಸಿವೆ. ಆದರೆ, ಈ ಜಿಲ್ಲೆಗಳ ಪೈಕಿ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಮೂರು ಜಿಲ್ಲೆಗಳ ಗ್ರಾಪಂಗಳು ಒಟ್ಟಾರೆ ಗುರಿಯಲ್ಲಿ ಅಂದರೆ ಬಾಕಿ ತೆರಿಗೆ ಸಂಗ್ರಹಿಸುವಲ್ಲಿ ಹಿಂದೆ ಬಿದ್ದಿವೆ.

ಬೆಂಗಳೂರು ಜಿಲ್ಲೆಗಳಲ್ಲಿ ಅತಿಹೆಚ್ಚು ಮೊತ್ತ ಸಂಗ್ರಹ: ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ವ್ಯಾಪ್ತಿಯಲ್ಲಿನ ಗ್ರಾಪಂಗಳು ಅತಿಹೆಚ್ಚು ಮೊತ್ತದ ಆಸ್ತಿ ತೆರಿಗೆ ಸಂಗ್ರಹಿಸಿವೆ. ಅದರಂತೆ 85 ಗ್ರಾಪಂಗಳಿಗೆ 880.45 ಕೋಟಿ ರು. ಒಟ್ಟಾರೆ ತೆರಿಗೆ ಸಂಗ್ರಹದ ಗುರಿ ನೀಡಲಾಗಿತ್ತು. ಅದರಲ್ಲಿ 296.49 ಕೋಟಿ ರು. ತೆರಿಗೆ ಸಂಗ್ರಹಿಸಲಾಗಿದೆ. 

ಉಳಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯ ಗ್ರಾಪಂಗಳು 291.01 ಕೋಟಿ ರು. ಒಟ್ಟು ಸಂಗ್ರಹದ ಗುರಿಯಲ್ಲಿ 119.77 ಕೋಟಿ ರು.ಸಂಗ್ರಹಿಸಿವೆ. ಈ ಎರಡು ಜಿಲ್ಲೆಗಳಿಂದಲೇ 416.26 ಕೋಟಿ ರು. ಆಸ್ತಿ ತೆರಿಗೆ ಸಂಗ್ರಹವಾಗಿದೆ. ಮೂರನೇ ಸ್ಥಾನದಲ್ಲಿ ಬೆಳಗಾವಿ ಜಿಲ್ಲೆಯಿದ್ದು 500 ಗ್ರಾಪಂಗಳಿಗೆ ಒಟ್ಟು 342.48 ಕೋಟಿ ರು. ತೆರಿಗೆ ಸಂಗ್ರಹದ ಗುರಿ ನೀಡಲಾಗಿದ್ದು, 87.26 ಕೋಟಿ ರು. ಸಂಗ್ರಹಿಸಲಾಗಿದೆ.ತೆರಿಗೆ ಸಂಗ್ರಹವಷ್ಟೇ ಅಲ್ಲದೆ ತೆರಿಗೆ ಬಾಕಿ ಉಳಿಸಿಕೊಂಡ ಜಿಲ್ಲೆಗಳಲ್ಲೂ ಬೆಂಗಳೂರು ನಗರ ಮತ್ತು ಗ್ರಾಮಾಂತರ ಹಾಗೂ ಬೆಳಗಾವಿ ಜಿಲ್ಲೆಗಳು ಮುಂಚೂಣಿಯಲ್ಲಿವೆ. 2024-25ರ ಅಂತ್ಯಕ್ಕೆ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಗ್ರಾಪಂಗಳಲ್ಲಿ 581.73 ಕೋಟಿ ರು, ಬೆಳಗಾವಿ ವ್ಯಾಪ್ತಿಯಲ್ಲಿ 255.13 ಕೋಟಿ ರು. ಹಾಗೂ ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯಲ್ಲಿ 170.68 ಕೋಟಿ ರು. ತೆರಿಗೆ ಸಂಗ್ರಹ ಬಾಕಿ ಉಳಿದಿದೆ. 

ಹಾಗೆಯೇ, ದಕ್ಷಿಣ ಕನ್ನಡ ಜಿಲ್ಲೆ ಅತಿಕಡಿಮೆ ಅಂದರೆ 4 ಕೋಟಿ ರು. ಮಾತ್ರ ಬಾಕಿ ತೆರಿಗೆ ವಸೂಲಿ ಮಾಡಬೇಕಿದೆ. ಉಳಿದಂತೆ ಉಡುಪಿ ಜಿಲ್ಲೆಯಲ್ಲಿ 11.05 ಕೋಟಿ ರು, ಕೊಡಗು 14.03 ಕೋಟಿ ರು, ಬಳ್ಳಾರಿ 19.23 ಕೋಟಿ ರು. ಬಾಕಿ ತೆರಿಗೆ ಸಂಗ್ರಹಿಸಬೇಕಿದೆ.-ಬಾಕ್ಸ್‌-ಹಿಂದಿನ ವರ್ಷಗಳಿಗಿಂತ ಹೆಚ್ಚಿನ ಸಂಗ್ರಹವಸೂಲಿಯಾಗಬೇಕಿರುವ ತೆರಿಗೆ ಬಾಕಿ ಹೆಚ್ಚಳವಾಗಿದ್ದರೂ ಕಳೆದೆರಡು ವರ್ಷಗಳಿಗೆ ಹೋಲಿಸಿದರೆ 2024-25ನೇ ಸಾಲಿನಲ್ಲಿ ತೆರಿಗೆ ಸಂಗ್ರಹ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದೆ. 2022-23ರಲ್ಲಿ 571 ಕೋಟಿ ರು. ತೆರಿಗೆ ಸಂಗ್ರಹವಾಗಿದ್ದರೆ, 2023-24ನೇ ಸಾಲಿನಲ್ಲಿ 767 ಕೋಟಿ ರು. ತೆರಿಗೆ ಸಂಗ್ರಹಿಸಲಾಗಿತ್ತು. ಈ ವರ್ಷ 1,272 ಕೋಟಿ ರು. ತೆರಿಗೆ ಸಂಗ್ರಹಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಳದಿ ಮಾರ್ಗ: 9 ಮೆಟ್ರೋ ನಿಲ್ದಾಣ ಬಳಿ ಹೊಸ ಬಿಎಂಟಿಸಿ ನಿಲ್ದಾಣ
ವಿವಾಹ ಪವಿತ್ರವಾದ ಶಾಶ್ವತ ಸಮ್ಮಿಲನ : ಹೈಕೋರ್ಟ್‌