ಉಣಕಲ್ಲ ಕೆರೆಯಲ್ಲಿ ಮಿಯಾವಾಕಿ ಕಿರುಅರಣ್ಯ ನಿರ್ಮಾಣ!

KannadaprabhaNewsNetwork | Published : Dec 7, 2023 1:15 AM

ಸಾರಾಂಶ

ಜಪಾನ್‌ ದೇಶದ ಸಸ್ಯತಜ್ಞ ಡಾ. ಅಕಿರಾ ಮಿಯಾವಾಕಿ ಅವರ ಅರಣ್ಯ ಮಾದರಿಯಲ್ಲಿ ಇಲ್ಲಿನ ಉಣಕಲ್ಲ ಕೆರೆಯ ಪಕ್ಕದಲ್ಲಿ ಕಿರುಅರಣ್ಯ ನಿರ್ಮಾಣಕ್ಕೆ ಸಿಐಐ (Confederation of indian industry)ನ ಯಂಗ್‌ ಇಂಡಿಯನ್ಸ್ ತಂಡವು ಮುಂದಾಗಿದೆ.

ಅಜೀಜಅಹ್ಮದ ಬಳಗಾನೂರ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಜಪಾನ್‌ ದೇಶದ ಸಸ್ಯತಜ್ಞ ಡಾ. ಅಕಿರಾ ಮಿಯಾವಾಕಿ ಅವರ ಅರಣ್ಯ ಮಾದರಿಯಲ್ಲಿ ಇಲ್ಲಿನ ಉಣಕಲ್ಲ ಕೆರೆಯ ಪಕ್ಕದಲ್ಲಿ ಕಿರುಅರಣ್ಯ ನಿರ್ಮಾಣಕ್ಕೆ ಸಿಐಐ (Confederation of indian industry)ನ ಯಂಗ್‌ ಇಂಡಿಯನ್ಸ್ ತಂಡವು ಮುಂದಾಗಿದೆ.

ಉಣಕಲ್ಲ ಕೆರೆಗೆ ಹೊಂದಿಕೊಂಡಿರುವ 2 ಎಕರೆ ಜಾಗದಲ್ಲಿ ಈ ಮಿಯಾವಾಕಿ ಕಿರುಅರಣ್ಯವನ್ನು ಸಿಐಐನ ಯಂಗ್‌ ಇಂಡಿಯನ್ಸ್, ಹು-ಧಾ ಮಹಾನಗರ ಪಾಲಿಕೆ, ಸ್ವರ್ಣಾ ಗ್ರುಪ್‌ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.

ಯಾವುದೇ ಒಂದು ಕಾಡು ಬೆಳೆಯಲು ಸುಮಾರು 40-50 ವರ್ಷಗಳು ಬೇಕು. ಆದರೆ, ಕೇವಲ 10-12 ವರ್ಷಗಳಲ್ಲಿ ಕಿರುಅರಣ್ಯ ಬೆಳೆಸುವ ಜಪಾನ್‌ನ ಮಿಯಾವಾಕಿ ಮಾದರಿಯು ಈಗ ಎಲ್ಲೆಡೆ ಪ್ರಖ್ಯಾತಿ ಗಳಿಸಿದೆ. ರಾಜ್ಯದಲ್ಲಿ 2 ಎಕರೆ ವಿಸ್ತಾರದಲ್ಲಿ ಇದೇ ಮೊದಲ ಬಾರಿಗೆ ಈ ಕಿರುಅರಣ್ಯ ನಿರ್ಮಾಣಕ್ಕೆ ಕೈಹಾಕಿದ್ದು, ಯಶಸ್ಸು ಕಂಡಲ್ಲಿ ಇದರ ಪಕ್ಕದಲ್ಲಿರುವ ಇನ್ನೂ ಎರಡು ಎಕರೆ ಜಾಗದಲ್ಲಿ ಇದನ್ನು ವಿಸ್ತರಣೆಗೆ ಯೋಜನೆ ಹಾಕಿಕೊಳ್ಳಲಾಗಿದೆ.

₹30 ಲಕ್ಷ ವೆಚ್ಚದಲ್ಲಿ ನಿರ್ಮಾಣ:

ಸಿಐಐನ ಯಂಗ್‌ ಇಂಡಿಯನ್ಸ್ ನೇತೃತ್ವದಲ್ಲಿ ಈ ಕಿರುಅರಣ್ಯ ನಿರ್ಮಾಣ ಕಾಮಗಾರಿ ಈಗಾಗಲೇ ಆರಂಭವಾಗಿದ್ದು, ಆ ಪ್ರದೇಶವನ್ನು ಸಂಪೂರ್ಣ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ. ಕಾಮಗಾರಿ ಪೂರ್ಣಗೊಳಿಸಲು ₹30 ಲಕ್ಷ ವೆಚ್ಚವಾಗುವ ನಿರೀಕ್ಷೆ ಇದೆ. ಇದಕ್ಕೆ ಬೇಕಾದ ಆರ್ಥಿಕ ಸಹಾಯವನ್ನು ಸ್ವರ್ಣಾ ಗ್ರುಪ್‌ ಆಫ್‌ ಕಂಪನಿ ನಿರ್ವಹಿಸುತ್ತಿದೆ ಎಂದು ಯಂಗ್‌ ಇಂಡಿಯನ್‌ ಹುಬ್ಬಳ್ಳಿಯ ಅಧ್ಯಕ್ಷ ಕರಣ್ ಅಗರವಾಲ್‌ ಕನ್ನಡಪ್ರಭಕ್ಕೆ ತಿಳಿಸಿದರು.

50 ಬಗೆಯ ಸಸಿಗಳ ನಾಟಿ:

ಈ ಕಿರುಅರಣ್ಯದಲ್ಲಿ ಇಲ್ಲಿನ ಹವಾಗುಣಕ್ಕೆ ಹೊಂದಿಕೊಳ್ಳುವ ಸಸ್ಯಗಳನ್ನು ಬೆಳೆಸುವ ಉದ್ದೇಶ ಹೊಂದಿದೆ. ಕಾರಂಜೆ, ಬೇವು, ಮಾವು, ಶ್ರೀಗಂಧ, ಆಲ, ಪೇರಲ, ಚಿಕ್ಕು, ದಾಳಿಂಬೆ, ಕವಳೆ, ಮರಸೇಬು, ಶಿವಾಲಿ, ನಂದಿ, ಚೆಂಪಕ, ದಾಸವಾಳ, ಮಲ್ಲಿಗೆ, ರಾಮತುಳಸಿ, ಬಿದಿರು, ಮೆಹಂದಿ, ಅಮೃತ ಬಳ್ಳಿ ಸೇರಿದಂತೆ 50ಕ್ಕೂ ಅಧಿಕ ಬಗೆಬಗೆಯ ಸುಮಾರು 15 ಸಾವಿರಕ್ಕೂ ಅಧಿಕ ಸಸಿಗಳನ್ನು ಬೆಳೆಸಲು ಉದ್ದೇಶಿಸಲಾಗಿದೆ.

ವಾಯುವಿಹಾರಕ್ಕೆ ವ್ಯವಸ್ಥೆ:

ಈ ಕಿರುಅರಣ್ಯವನ್ನು ಮಾರ್ಚ್‌ನೊಳಗೆ ನಿರ್ಮಿಸಲು ಉದ್ದೇಶಿಸಲಾಗಿದೆ. ಇದರ ನಂತರ 3 ವರ್ಷಗಳ ಕಾಲ ನಿರ್ವಹಣೆ ಮಾಡಲಾಗುತ್ತದೆ. ಇಲ್ಲಿ ವಾಯುವಿಹಾರಕ್ಕಾಗಿಯೇ ಪ್ರತ್ಯೇಕ ಮಾರ್ಗ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಕಿರುಅರಣ್ಯದಲ್ಲಿ ಬೆಳಗಿನ ಜಾವ ಸಾರ್ವಜನಿಕರು ಸಂಚರಿಸುವ ಮೂಲಕ ಸುಂದರ ಅರಣ್ಯದ ಸೌಂದರ್ಯ ಸವಿಯಲು ಅವಕಾಶ ಕಲ್ಪಿಸಿಕೊಡಲಾಗುತ್ತಿದೆ. ಹುಬ್ಬಳ್ಳಿ ಜನತೆಗೆ ಮಿಯಾವಾಕಿ ಮಾದರಿಯ ಕಿರುಅರಣ್ಯದ ಸೊಬಗು ನೋಡಲು ಸಿಗಲಿದೆ.

ಏನಿದು ಮಿಯಾವಾಕಿ?

ಜಪಾನ್‌ ದೇಶದ ಸಸ್ಯತಜ್ಞ ಡಾ. ಅಕಿರಾ ಮಿಯಾವಾಕಿ ಎಂಬುವರು ಕಡಿಮೆ ಜಾಗದಲ್ಲಿ ಅರಣ್ಯ ಬೆಳೆಸುವ ಪ್ರಯೋಗ ನಡೆಸಿ ಯಶಸ್ಸು ಕಂಡವರು. ಜಪಾನಿನಲ್ಲಿ ಅರಣ್ಯೀಕರಣ ಪ್ರೋತ್ಸಾಹಿಸಲು ಜಾಗದ ಕೊರತೆ ಕಂಡು ಬಂದ ವೇಳೆ ಅಲ್ಲಲ್ಲಿ ಕಿರುಅರಣ್ಯ ಮಾದರಿ ಪದ್ಧತಿ ಅನುಸರಿಸಲಾಯಿತು. ಕಡಿಮೆ ಜಾಗದಲ್ಲಿಯೇ ಹತ್ತಿರ ಹತ್ತಿರ ನೆಟ್ಟ ಗಿಡಗಳು ಸೂರ್ಯನ ಕಿರಣಗಳಿಗೆ ತಲೆಯೊಡ್ಡಿ ವೇಗವಾಗಿ ಬೆಳೆಯತೊಡಗಿದವು. ಕೇವಲ 10 ವರ್ಷಗಳಲ್ಲಿ ನೆಲದ ಮೇಲೆ ಸೂರ್ಯ ಕಿರಣಗಳು ಬೀಳದಂತೆ ದಟ್ಟವಾಗಿ ಕಿರು ಅರಣ್ಯ ಬೆಳೆದು ನಿಂತಿತು. ಇದು ನೂರಾರು ಪ್ರಾಣಿ, ಪಕ್ಷಿಗಳಿಗೆ ಆಸರೆಯಾಯಿತು.

ಮಿಯಾವಾಕಿ ಅವರ ಈ ಕಿರು ಅರಣ್ಯ ಪದ್ಧತಿಯ ಯಶಸ್ಸನ್ನು ಕಂಡು ಅದನ್ನು ಅನುಸರಿಸುವವರ ಸಂಖ್ಯೆ ಹೆಚ್ಚುತ್ತಿದೆ. ಅನೇಕ ದೇಶಗಳಲ್ಲಿ ಇದೇ ಮಾದರಿ ಅರಣ್ಯ ಬೆಳೆಸುತ್ತಿದ್ದಾರೆ. ಹಾಗೆಯೇ ಈಗ ಹುಬ್ಬಳ್ಳಿಯಲ್ಲೂ ಈ ಕಿರುಅರಣ್ಯ ನಿರ್ಮಾಣ ಆಗುತ್ತಿದೆ. ಸಾಂಪ್ರದಾಯಿಕ ಅರಣ್ಯಕ್ಕಿಂತ 30 ಪಟ್ಟು ವೇಗವಾಗಿ ಕಾಡು ಬೆಳೆಯುವುದು ಇರದ ವಿಶೇಷತೆ.

ಸಿಐಐನ ಯಂಗ್‌ ಇಂಡಿಯನ್ಸ್‌ ನೇತೃತ್ವದಲ್ಲಿ ಈ ಮಿಯಾವಾಕಿ ಮಾದರಿಯ ಕಿರುಅರಣ್ಯ ನಿರ್ಮಾಣಕ್ಕೆ ಕೈಹಾಕಲಾಗಿದೆ. ನಮ್ಮೊಂದಿಗೆ ಪಾಲಿಕೆ, ಸ್ಮಾರ್ಟ್‌ಸಿಟಿ, ಸ್ವರ್ಣಾ ಗ್ರುಪ್‌ ಆಫ್‌ ಕಂಪನಿ ಕೈಜೋಡಿಸಿದೆ. ಕೆಲವೇ ದಿನಗಳಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಗುವುದು ಎಂದು ಯಂಗ್‌ ಇಂಡಿಯನ್ಸ್‌ನ ಅಧ್ಯಕ್ಷ ಕರಣ್ ಅಗರವಾಲ್ ತಿಳಿಸಿದ್ದಾರೆ.

ಮಿಯಾವಾಕಿ ಕಿರುಅರಣ್ಯ ನಿರ್ಮಾಣ ಕುರಿತು ಯಂಗ್‌ ಇಂಡಿಯನ್ಸ್‌ ತಂಡವು ನಮ್ಮ ಬಳಿ ಪ್ರಸ್ತಾವನೆ ತಂದು ತಿಳಿಸಿತ್ತು. ಅದಕ್ಕೆ ಸಮ್ಮತಿಸಿ ಕಾಮಗಾರಿ ಆರಂಭಿಸಲಾಗಿದೆ. ಮಹಾನಗರ ಪ್ರದೇಶದಲ್ಲಿ ಇಂತಹ ಕಿರುಅರಣ್ಯದ ಅವಶ್ಯಕತೆಯಿದೆ. ಸ್ವರ್ಣಾ ಗ್ರುಪ್‌ ಆಫ್‌ ಕಂಪನೀಸ್‌ ವ್ಯವಸ್ಥಾಪಕ ನಿರ್ದೇಶಕ ಡಾ. ಸಿಎಚ್‌ ವಿ.ಎಸ್‌.ವಿ. ಪ್ರಸಾದ ತಿಳಿಸಿದ್ದಾರೆ.

Share this article