ವಿಜಯನಗರ ಜಿಲ್ಲೆಯಾಗಿ ಐದು ವರ್ಷಗಳಾದ ಮೇಲೆ ನಗರದಲ್ಲಿ ಸುಸಜ್ಜಿತ, ಭವ್ಯ ಜಿಲ್ಲಾ ರಂಗಮಂದಿರ ತಲೆಎತ್ತಲಿದೆ.
ಸಿ.ಕೆ. ನಾಗರಾಜ
ಹೊಸಪೇಟೆ: ವಿಜಯನಗರ ಜಿಲ್ಲೆಯಾಗಿ ಐದು ವರ್ಷಗಳಾದ ಮೇಲೆ ನಗರದಲ್ಲಿ ಸುಸಜ್ಜಿತ, ಭವ್ಯ ಜಿಲ್ಲಾ ರಂಗಮಂದಿರ ತಲೆಎತ್ತಲಿದೆ. ಕೇಂದ್ರ ಸರ್ಕಾರದ ಹಣಕಾಸು ಇಲಾಖೆಯಿಂದ ಸುಮಾರು ₹5 ಕೋಟಿ ವೆಚ್ಚದಲ್ಲಿ ದೇಶದಲ್ಲೇ ಮಾದರಿ ರಂಗಮಂದಿರವಾಗಿ ನಿರ್ಮಾಣಗೊಳ್ಳಲಿದೆ. ಜಿಲ್ಲಾಧಿಕಾರಿ ಕಚೇರಿ ಸಮೀಪದ ಟಿ.ಎಸ್.ಪಿ. ಪ್ರದೇಶದ 3 ಎಕರೆ ಜಾಗದಲ್ಲಿ ನವೀನ ರೀತಿಯ ವಿನ್ಯಾಸದಿಂದ ಕೂಡಿರುವ ಜಿಲ್ಲಾ ರಂಗಮಂದಿರಕ್ಕೆ ಜೂ. 5ರಂದು ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರ ಸಚಿವೆ ನಿರ್ಮಲಾ ಸೀತಾರಾಮನ್ ಭೂಮಿಪೂಜೆ ನೆರವೇರಿಸಲಿದ್ದಾರೆ.
ರಂಗಮಂದಿರದೊಂದಿಗೆ ಬಯಲು ರಂಗಮಂದಿರ ಮತ್ತು ಕಲಾವಿದರು ಉಳಿದುಕೊಳ್ಳಲು ಡಾರ್ಮೆಟ್ರಿಗಳು (ವಸತಿನಿಲಯ) ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿ ಇರಲಿದೆ.
ಜಿಲ್ಲೆಯ ರಂಗಭೂಮಿ ಚಟುವಟಿಕೆಗೆ ಉತ್ತೇಜನ ನೀಡುವ ಉದ್ದೇಶ ಹೊಂದಿರುವ ಜಿಲ್ಲಾ ರಂಗಮಂದಿರ ನಿರ್ಮಿಸುವ ಕನಸು ಇಂದು ನಿನ್ನೆಯದಲ್ಲ. ದಶಕಗಳ ಕನಸು ಈಗ ನನಸಾಗುತ್ತಿದೆ. ಜಿಲ್ಲೆಯ ರಾಜಕೀಯ ಮುತ್ಸದ್ದಿ ಎಂ.ಪಿ. ಪ್ರಕಾಶ್ ರಾಜಕಾರಣದೊಂದಿಗೆ ಸ್ವತಃ ಕಲಾವಿದರಾಗಿದ್ದರಿಂದ ಹೊಸಪೇಟೆಯಲ್ಲಿ ಸುಸಜ್ಜಿತ, ಭವ್ಯ ರಂಗಮಂದಿರ ನಿರ್ಮಿಸಬೇಕು ಎಂಬ ಕನಸು ಕಂಡಿದ್ದರು. ನಗರದ ಹೃದಯಭಾಗದಲ್ಲಿ ಜಾಗದ ಕೊರತೆಯಿಂದ ಅವರ ಕನಸು ಈಡೇರಲಿಲ್ಲ. ಎಂ.ಪಿ. ಪ್ರಕಾಶ್ ಅವರ ಹೆಸರಿನ ರಂಗಮಂದಿರವನ್ನು ನಗರಸಭೆಯಿಂದ ನಿರ್ಮಿಸಲಾಗಿತ್ತಾದರೂ ಕೆಲವೇ ವರ್ಷಗಳಲ್ಲಿಯೇ ಅದು ನಗರಸಭೆಯ ಗೋದಾಮು ಆಯಿತು. ಅಲ್ಲಿಂದ ಇಲ್ಲಿವರೆಗೆ ಹೊಸಪೇಟೆಯಲ್ಲಿ ಸುಸಜ್ಜಿತ ರಂಗಮಂದಿರದ ಕೊರತೆ ಕಲಾವಿದರನ್ನು ಕಾಡುತ್ತಿತ್ತು.
ಜಿಲ್ಲೆಗೆ ಆಧುನಿಕ ರಂಗಮಂದಿರದ ಅಗತ್ಯವಿದೆ ಎಂದು ಅನೇಕ ವರ್ಷಗಳಿಂದ ಜಿಲ್ಲೆಯ ಕಲಾವಿದರು ಪ್ರತಿಪಾದಿಸುತ್ತಿದ್ದರು. ಜಿಲ್ಲೆ, ವಿಶೇಷವಾಗಿ ಹಂಪಿ, ವಿಶ್ವಪ್ರಸಿದ್ಧ ಸಾಂಸ್ಕೃತಿಕ, ಐತಿಹಾಸಿಕ ತಾಣವಾಗಿದೆ. ವರ್ಷಪೂರ್ತಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಹಿತ್ಯ ಸಮ್ಮೇಳನಗಳು, ಸಂಗೀತ, ನೃತ್ಯ ಕಾರ್ಯಕ್ರಮಗಳು ನಿರಂತರ ನಡೆಯುತ್ತವೆ. ಪ್ರತಿವರ್ಷ ಹಂಪಿ ಉತ್ಸವಕ್ಕೆ ಬಂದು ಹೋದ ಲಕ್ಷಾಂತರ ಕಲಾವಿದರು, ಪ್ರವಾಸಿಗರು ಹೊಸಪೇಟೆಯಲ್ಲಿ ಸುಸಜ್ಜಿತ ರಂಗಮಂದಿರವಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದರು.
ಜಿಲ್ಲಾ ಕೇಂದ್ರದಲ್ಲಿ 500- 600 ಆಸನಗಳ ಆಧುನಿಕ ಜಿಲ್ಲಾ ರಂಗಮಂದಿರ ನಿರ್ಮಾಣವಾದರೆ ಜಿಲ್ಲಾ ಮಟ್ಟದ ಸರ್ಕಾರಿ ಕಾರ್ಯಕ್ರಮಗಳು, ನಾಟಕೋತ್ಸವಗಳು, ಸಂಗೀತ ಮತ್ತು ನೃತ್ಯ ಪ್ರದರ್ಶನಗಳು, ಸಾಹಿತ್ಯ ಸಮ್ಮೇಳನಗಳು, ಸಭೆ-ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲು ಶಾಶ್ವತ ವೇದಿಕೆಯಾಗಿರುತ್ತದೆ. ಪ್ರವಾಸೋದ್ಯಮಕ್ಕೆ ಉತ್ತೇಜಿಸಲು ಅನುಕೂಲವಾಗುತ್ತದೆ. ಹಂಪಿಗೆ ಬರುವ ದೇಶಿ-ವಿದೇಶಿ ಪ್ರವಾಸಿಗರಿಗೆ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ, ಜಿಲ್ಲೆಯ ಸಾಂಸ್ಕೃತಿಕ ಶ್ರೀಮಂತಿಕೆ ಪರಿಚಯಿಸಬಹುದು ಎಂಬುದು ಕಲಾವಿದರ ಆಶಯವಾಗಿತ್ತು.
ಈಗ ವಿಜಯನಗರ ಸಾಮ್ರಾಜ್ಯದ ಪರಂಪರೆ, ಹಂಪಿಯ ಇತಿಹಾಸ, ಸಂಸ್ಕೃತಿ ನೆನಪಿಸುವಂತಹ ಮಾದರಿಯಲ್ಲಿ ಜಿಲ್ಲಾ ರಂಗಮಂದಿರ ನಿರ್ಮಾಣಗೊಳ್ಳಲಿದೆ. ಜಿಲ್ಲೆಯ ಯುವ ಪ್ರತಿಭೆಗಳಿಗೆ ಅವಕಾಶ ನೀಡುವ ಕಾರ್ಯಕ್ರಮ ನಡೆಸಲು, ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹಿಸಲು, ಸಾಂಸ್ಕೃತಿಕ ಉತ್ಸವಗಳಿಗೆ ರಂಗಮಂದಿರ ಉತ್ತಮ ವೇದಿಕೆಯಾಗಲಿ ಎಂದ ಆಶಯ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರ ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಬೆಳಗ್ಗೆ 9.30ಕ್ಕೆ ಟಿ.ಬಿ. ಡ್ಯಾಂ ರಸ್ತೆಯಲ್ಲಿ ಸುಮಾರು ₹5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಜಿಲ್ಲಾ ರಂಗಮಂದಿರಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎನ್ನುತ್ತಾರೆ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.