ಕಂಪ್ಲಿ: ವಿಮುಕ್ತ ದೇವದಾಸಿ ಮಹಿಳೆಯರು ಹಾಗೂ ಅವರ ಮೂರು ತಲೆಮಾರುಗಳ ಕುಟುಂಬ ಸದಸ್ಯರ ಸಮಗ್ರ ಮತ್ತು ದೋಷರಹಿತ ಗಣತಿ ನಡೆಸಬೇಕು ಎಂದು ಆಗ್ರಹಿಸಿ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಪದಾಧಿಕಾರಿಗಳು ಗುರುವಾರ ತಹಸೀಲ್ದಾರ್ ಜೂಗಲ ಮಂಜುನಾಯಕರಿಗೆ ಮನವಿ ಸಲ್ಲಿಸಿದರು.
ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಇತ್ತೀಚಿನ ಗಣತಿ ಪಟ್ಟಿಯಲ್ಲಿ ಕೇವಲ 23,385 ಮಹಿಳೆಯರನ್ನು ಮಾತ್ರ ಗುರುತಿಸಲಾಗಿದೆ. ಈ ಅಂಕಿ-ಅಂಶಗಳು ವಾಸ್ತವಿಕ ಸ್ಥಿತಿಗೆ ಹೊಂದಿಕೆಯಾಗುವುದಿಲ್ಲ. ರಾಜ್ಯದಲ್ಲಿ ದೇವದಾಸಿ ಮಹಿಳೆಯರು ಹಾಗೂ ಅವರ ಕುಟುಂಬಗಳ ಸಂಖ್ಯೆ ಸುಮಾರು ಎರಡು ಲಕ್ಷಕ್ಕೂ ಅಧಿಕ ಇರಬಹುದೆಂದು ಅಂದಾಜಿಸಲಾಗಿದೆ. ಆದ್ದರಿಂದ ಯಾವುದೇ ಅರ್ಹ ಮಹಿಳೆ ಹೊರಗುಳಿಯದಂತೆ ಮರುಪರಿಶೀಲನೆ ನಡೆಸಿ ಸಮಗ್ರ ಗಣತಿ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ದೇವದಾಸಿ ಮಹಿಳೆಯರಿಗೆ ನೀಡಬೇಕಾದ ಪಿಂಚಣಿ ಹಲವೆಡೆ ಬಾಕಿ ಉಳಿದಿದ್ದು, ಅದನ್ನು ತಕ್ಷಣವೇ ಬಿಡುಗಡೆ ಮಾಡಬೇಕು. ಅಲ್ಲದೆ 2026-27ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ದೇವದಾಸಿ ಮಹಿಳೆಯರ ಮಾಸಿಕ ಪಿಂಚಣಿಯನ್ನು ₹6,000ಕ್ಕೆ ಹೆಚ್ಚಿಸುವ ಮೂಲಕ ಅವರ ಜೀವನೋಪಾಯಕ್ಕೆ ನೆರವಾಗಬೇಕು ಎಂದು ಮನವಿ ಮಾಡಿದರು.ಸರ್ವೇ ಪಟ್ಟಿಯಿಂದ ಹೊರಗುಳಿದಿರುವ ದೇವದಾಸಿ ಮಹಿಳೆಯರ ಮಕ್ಕಳಿಗೆ ಶಿಕ್ಷಣ, ವಿದ್ಯಾರ್ಥಿವೇತನ ಹಾಗೂ ಇತರೆ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ತಾಯಿಯ ದೇವದಾಸಿ ದೃಢೀಕರಣ ಪತ್ರ ನೀಡುವ ವ್ಯವಸ್ಥೆ ಮಾಡಬೇಕು. ಜೊತೆಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಮಹಿಳೆಯರಿಗೆ ₹2 ಲಕ್ಷದವರೆಗೆ ಸಾಲಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಮನವಿ ಸಲ್ಲಿಸುವ ವೇಳೆ ವಿಮುಕ್ತ ದೇವದಾಸಿ ಮಹಿಳೆಯರಾದ ತಾಯಮ್ಮ, ಲಕ್ಷ್ಮೀದೇವಿ, ಗಂಗಮ್ಮ, ಮರಿಯಮ್ಮ, ಹೊನ್ನೂರಮ್ಮ, ಹುಲಿಗೆಮ್ಮ, ಶಿವಮ್ಮ ಸೇರಿದಂತೆ ರಾಜ್ಯ ದೇವದಾಸಿ ಮಹಿಳೆಯರ ಮಕ್ಕಳ ಹೋರಾಟ ಸಮಿತಿ ತಾಲೂಕು ಕಾರ್ಯದರ್ಶಿ ರಾಮ, ಓಬಳೇಶ ಇದ್ದರು.