ಮಹಿಳಾ ಮತ್ತು ಪುರುಷರ ಕುಟುಂಬ ಕಲ್ಯಾಣ ಶಸ್ತ್ರಚಿಕಿತ್ಸೆ, ಪ್ರಸವೋತ್ತರ ಶಸ್ತ್ರಚಿಕಿತ್ಸೆ ಸೇರಿದಂತೆ ಒಟ್ಟು 9 ಚಟುವಟಿಕೆಗೆ ಸಂಬಂಧಿಸಿದ ಮಾಡ್ಯೂಲ್‌ಗಳನ್ನು ಆಶಾ ನಿಧಿ ತಂತ್ರಾಂಶದಲ್ಲಿ ನಿಷ್ಕ್ರಿಯಗೊಳಿಸಿರುವುದರಿಂದ ಆಶಾ ಕಾರ್ಯಕರ್ತೆಯರಿಗೆ ಆರ್ಥಿಕ ನಷ್ಟ
ಕನಕಗಿರಿ: ಕೇಂದ್ರ ಸರ್ಕಾರದ ಅನುಮೋದನೆ ಹಾಗೂ ಅನುದಾನವಿಲ್ಲದ 9 ಹೆಚ್ಚುವರಿ ಚಟುವಟಿಕೆ ಪ್ರೋತ್ಸಾಹಧನಕ್ಕೆ ಸಂಬಂಧಿಸಿದ ಪ್ರಮುಖ ಮಾಡ್ಯೂಲ್‌ಗಳನ್ನು ಆಶಾ ನಿಧಿ (ASHA Soft) ತಂತ್ರಾಂಶದಲ್ಲಿ ನಿಷ್ಕ್ರಿಯಗೊಳಿಸಿರುವುದನ್ನು ಖಂಡಿಸಿ, ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರು ಆಡಳಿತಾಧಿಕಾರಿ ಡಾ. ಶರಣೇಗೌಡ ಅವರಿಗೆ ಮನವಿ ಸಲ್ಲಿಸಿದರು.
ಈ ಕುರಿತು ಹಿರಿಯ ಆಶಾ ಕಾರ್ಯಕರ್ತೆ ಪೂರ್ಣಿಮಾ ಮಾತನಾಡಿ, ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್‌ಎಚ್‌ಎಂ) ಅಡಿಯಲ್ಲಿ ಆಶಾ ಕಾರ್ಯಕರ್ತೆಯರಿಗೆ ನೀಡಲಾಗುತ್ತಿದ್ದ ಕೆಲವು ಕಾರ್ಯಗಳ ಪ್ರೋತ್ಸಾಹಧನವನ್ನು ಯಾವುದೇ ಪೂರ್ವಸೂಚನೆ ಇಲ್ಲದೆ ಸ್ಥಗಿತಗೊಳಿಸಲಾಗಿದೆ. ಮಹಿಳಾ ಮತ್ತು ಪುರುಷರ ಕುಟುಂಬ ಕಲ್ಯಾಣ ಶಸ್ತ್ರಚಿಕಿತ್ಸೆ, ಪ್ರಸವೋತ್ತರ ಶಸ್ತ್ರಚಿಕಿತ್ಸೆ ಸೇರಿದಂತೆ ಒಟ್ಟು 9 ಚಟುವಟಿಕೆಗೆ ಸಂಬಂಧಿಸಿದ ಮಾಡ್ಯೂಲ್‌ಗಳನ್ನು ಆಶಾ ನಿಧಿ ತಂತ್ರಾಂಶದಲ್ಲಿ ನಿಷ್ಕ್ರಿಯಗೊಳಿಸಿರುವುದರಿಂದ ಆಶಾ ಕಾರ್ಯಕರ್ತೆಯರಿಗೆ ಆರ್ಥಿಕ ನಷ್ಟ ಉಂಟಾಗುತ್ತಿದೆ. ಕೇಂದ್ರ ಸರ್ಕಾರವು ಈ 9 ಚಟುವಟಿಕೆಗೆ ಅಗತ್ಯ ಅನುಮೋದನೆ ಹಾಗೂ ಅನುದಾನ ಒದಗಿಸಿ ಪ್ರೋತ್ಸಾಹಧನ ಪಾವತಿಸುವ ವರೆಗೆ ಸಂಬಂಧಿತ ಕೆಲಸಗಳನ್ನು ನಾವು ನಿರ್ವಹಿಸುವುದಿಲ್ಲ ಎಂದು ಎಚ್ಚರಿಸಿದರಲ್ಲದೆ, ಸರ್ಕಾರ ಆಶಾ ಕಾರ್ಯಕರ್ತೆಯರ ಮೇಲೆ ಹೆಚ್ಚುವರಿ ಕೆಲಸದ ಒತ್ತಡ ಹೇರಿದೆ. ಈಗಾಗಲೇ ಮಾಡುತ್ತಿರುವ ಕೆಲಸಗಳಿಗೆ ಸಮರ್ಪಕ ಪ್ರೋತ್ಸಾಹಧನ ಹಾಗೂ ಕಾರ್ಮಿಕ ಹಕ್ಕುಗಳನ್ನು ಖಾತ್ರಿಪಡಿಸಬೇಕು ಎಂದು ಆಗ್ರಹಿಸಿದರು.
ಆಶಾ ಕಾರ್ಯಕರ್ತೆಯರಾದ ಮಲ್ಲಮ್ಮ, ಮಹಾದೇವಿ, ಅನ್ನಪೂರ್ಣಾ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.