ಸಿದ್ದು ಚಿಕ್ಕಬಳ್ಳೇಕೆರೆ
ಬೆಂಗಳೂರು : ‘ಗೃಹಲಕ್ಷ್ಮಿ’ ಯೋಜನೆಯಡಿ ಫಲಾನುಭವಿಗಳಾಗಿದ್ದು ಬಳಿಕ ಮೃತಪಟ್ಟ 1,95,224 ಮಹಿಳೆಯರು ಮಾತ್ರವಲ್ಲದೆ, ಐಟಿ/ಜಿಎಸ್‌ಟಿ ಪಾವತಿಸುತ್ತಿದ್ದ 1,94,560 ಫಲಾನುಭವಿ ಮಹಿಳೆಯರನ್ನೂ ಸರ್ಕಾರ ಪತ್ತೆ ಮಾಡಿದೆ. ನಿಯಮಬಾಹಿರವಾಗಿ ಹಣ ಪಡೆಯುತ್ತಿದ್ದ ಈ ಮಹಿಳೆಯರಿಗೆ ಹಣ ಸಂದಾಯ ಸ್ಥಗಿತಗೊಳಿಸುವ ಪ್ರಕ್ರಿಯೆ ಆರಂಭಿಸಲಾಗಿದೆ. ಅಂದರೆ, ಬರೋಬ್ಬರಿ 3.89 ಲಕ್ಷ ಮಹಿಳೆಯರಿಗೆ ಯೋಜನೆಯಿಂದ ಕೊಕ್ ನೀಡಲಾಗಿದೆ.
ಐಟಿ/ಜಿಎಸ್‌ಟಿ ಪಾವತಿಯ 1,94,560 ಪ್ರಕರಣಗಳನ್ನು ಪತ್ತೆ ಹಚ್ಚಿದ್ದು ಈ ಮಹಿಳೆಯರಿಗೆ ನೀಡುತ್ತಿದ್ದ ಹಣವನ್ನು ನಿಲ್ಲಿಸಲಾಗಿದೆ. ಫಲಾನುಭವಿಯು ಮೃತಪಟ್ಟ ಬಳಿಕವೂ ಅಂತಹವರ ಖಾತೆಗೆ ಹಣ ಸಂದಾಯವಾಗುತ್ತಿದ್ದ 1,95,224 ಪ್ರಕರಣಗಳನ್ನೂ ಪತ್ತೆ ಹಚ್ಚಿ ಅವರಿಗೆ ನೀಡುತ್ತಿದ್ದ ಹಣವನ್ನೂ ತಡೆ ಹಿಡಿಯಲಾಗಿದೆ. ಇಂತಹ ಪ್ರಕರಣದಲ್ಲಿ ಫಲಾನುಭವಿಯ ಖಾತೆಯನ್ನು ಸ್ಥಗಿತಗೊಳಿಸಲು ಬ್ಯಾಂಕ್‌ಗಳಿಗೆ ಈಗಾಗಲೇ ನಿರ್ದೇಶನ ನೀಡಿದ್ದು ಹಣ ವಾಪಸ್ ಪಡೆಯುವ ಪ್ರಕ್ರಿಯೆಗೂ ವೇಗ ನೀಡಲಾಗಿದೆ.
ಆ.23ರಿಂದ ಮಾ.26ರವರೆಗೂ ಕಾರ್ಯಾಚರಣೆ:
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಪೈಕಿ ಪ್ರಮುಖವಾದ ಯೋಜನೆ ‘ಗೃಹಲಕ್ಷ್ಮಿ’ಯಾಗಿದ್ದು ಭಾರೀ ಸಂಖ್ಯೆಯಲ್ಲಿ ಅನರ್ಹರು ಫಲಾನುಭವಿಗಳಾಗಿದ್ದಾರೆ ಎಂಬ ದೂರು ಮೊದಲಿನಿಂದಲೂ ಕೇಳಿಬಂದಿತ್ತು. ಆದರೆ ಅನರ್ಹರನ್ನು ಪತ್ತೆ ಹಚ್ಚಿ ಹೊರಗಿಡುವ ತೀವ್ರ ‘ಕಾರ್ಯಾಚರಣೆ’ಗೆ ವೇಗ ದೊರೆತಿರಲಿಲ್ಲ. ಆದರೆ ಅನರ್ಹರನ್ನು ತಡೆಗಟ್ಟಿದರೆ ಒಂದು ಸಾವಿರ ಕೋಟಿ ರು.ಗೂ ಅಧಿಕ ಹಣ ಬೊಕ್ಕಸಕ್ಕೆ ಉಳಿತಾಯವಾಗಲಿದೆ ಎಂಬ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
‘2025ರ ಆಗಸ್ಟ್ 23ರಿಂದ ಪ್ರಸಕ್ತ ಸಾಲಿನ ಮಾರ್ಚ್ 26ರವರೆಗೂ ವಿಶೇಷ ಕಾರ್ಯಾಚರಣೆ ನಡೆಸಿ ಅನರ್ಹರನ್ನು ಪತ್ತೆ ಹಚ್ಚುವ ಕಾರ್ಯವನ್ನು ತೀವ್ರಗೊಳಿಸಲಾಗಿತ್ತು. ಈ ಅವಧಿಯಲ್ಲೇ ಬರೋಬ್ಬರಿ 3,89,784 ಅನರ್ಹರನ್ನು ಗುರುತಿಸಿ ಯೋಜನೆಯಿಂದ ಕೊಕ್ ನೀಡಲಾಗಿದೆ. ನಂತರವೂ ಅನರ್ಹರನ್ನು ಗುರುತಿಸಿ ಹಣ ತಡೆ ಹಿಡಿಯುವ ಕಾರ್ಯ ಕೈಗೊಳ್ಳಲಾಗುತ್ತಿದೆ’ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಪತಿ ಐಟಿ/ಜಿಎಸ್‌ಟಿ ಪಾವತಿದಾರರಾಗಿದ್ದರೆ ಅಂತಹವರ ಪತ್ನಿ ಗೃಹಲಕ್ಷ್ಮಿ ಯೋಜನೆಗೆ ಅರ್ಹರಾಗುವುದಿಲ್ಲ. ಆದರೆ ಬೆಂಗಳೂರು ನಗರವೊಂದರಲ್ಲೇ ಇಂತಹ 33,833 ಪ್ರಕರಣಗಳನ್ನು ಪತ್ತೆ ಹಚ್ಚಿ ಹಣ ತಡೆ ಹಿಡಿಯಲಾಗಿದೆ. ಬೆಳಗಾವಿ ಜಿಲ್ಲೆಯಲ್ಲೂ ಇಂತಹ 16,432 ಪ್ರಕರಣ ಕಂಡುಹಿಡಿಯಲಾಗಿದೆ. ಮೃತಪಟ್ಟವರ ಖಾತೆಗೆ ಹಣ ಸಂದಾಯವಾಗಿರುವ ಜಿಲ್ಲೆಗಳ ಪೈಕಿ ಬೆಳಗಾವಿ ‘ಪ್ರಥಮ’ ಸ್ಥಾನದಲ್ಲಿದ್ದು, 15,850 ಖಾತೆಗಳಿಗೆ ಸಂದಾಯವಾಗುತ್ತಿದ್ದ ಹಣವನ್ನು ನಿಲ್ಲಿಸಲಾಗಿದೆ.
ಗೃಹಲಕ್ಷ್ಮಿ ಯೋಜನೆಯ ಐಟಿ/ಜಿಎಸ್‌ಟಿ, ಮೃತಪಟ್ಟ ಪ್ರಕರಣಗಳ ವಿವರ
ಜಿಲ್ಲೆ ಐಟಿ/ಜಿಎಸ್‌ಟಿ ಮೃತಪಟ್ಟವರು
ಬಾಗಲಕೋಟೆ 4849 5907
ಬಳ್ಳಾರಿ 4237 3415
ಬೆಳಗಾವಿ 16432 15850
ಬೆಂಗಳೂರು ಗ್ರಾಮಾಂತರ 4285 3911
ಬೆಂಗಳೂರು ನಗರ 33833 14038
ಬೀದರ್ 3650 4063
ಚಾಮರಾಜನಗರ 2232 4739
ಚಿಕ್ಕಬಳ್ಳಾಪುರ 3592 5358
ಚಿಕ್ಕಮಗಳೂರು 3872 5042
ಚಿತ್ರದುರ್ಗ 3810 6543
ದಕ್ಷಿಣ ಕನ್ನಡ 10495 6159
ದಾವಣಗೆರೆ 4794 5926
ಧಾರವಾಡ 6660 5628
ಗದಗ 2740 3868
ಹಾಸನ 6866 8033
ಹಾವೇರಿ 4549 5905
ಕಲಬುರಗಿ 5765 6408
ಕೊಡಗು 2712 2193
ಕೋಲಾರ 4636 5615
ಕೊಪ್ಪಳ 3334 4475
ಮಂಡ್ಯ 6735 9168
ಮೈಸೂರು 9139 11541
ರಾಯಚೂರು 4603 5181
ರಾಮನಗರ 5117 5713
ಶಿವಮೊಗ್ಗ 6124 6409
ತುಮಕೂರು 7898 12139
ಉಡುಪಿ 5718 4311
ಉತ್ತರ ಕನ್ನಡ 6404 5546
ವಿಜಯನಗರ 2592 3825
ವಿಜಯಪುರ 4742 5540
ಯಾದಗಿರಿ 2145 2775
ಒಟ್ಟು 1,94,560 1,95,224
ನಮ್ಮಲ್ಲಿ ಮಾತ್ರ
ಮೃತರು, ತೆರಿಗೆ ಪಾವತಿದಾರರನ್ನು ಗೃಹಲಕ್ಷ್ಮಿ ಯೋಜನೆಯಿಂದ ರಾಜ್ಯಾದ್ಯಂತ ಹೊರಗೆ ಹಾಕಲಾಗುತ್ತಿದೆ ಎಂದು ‘ಕನ್ನಡಪ್ರಭ’ ಮಾತ್ರ ಮೊನ್ನೆಯೇ ವರದಿ ಮಾಡಿತ್ತು.
