ಬೆಂಗಳೂರು : ಗ್ರಾಮೀಣ ಪ್ರದೇಶದಲ್ಲಿ ಇಂಧನ ಸುಸ್ಥಿರತೆಗಾಗಿ ಜೈವಿಕ ಇಂಧನ ಉತ್ಪಾದನಾ ಘಟಕಗಳ ಸ್ಥಾಪನೆ ಕುರಿತು ವಿಸ್ತೃತ ಯೋಜನಾ ವರದಿ ನೀಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ.
ಕಂಪ್ರೆಸ್ಡ್ ಬಯೋಗ್ಯಾಸ್ ಉತ್ಪಾದನೆ ಅಗತ್ಯವಿದೆ.
ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ, ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಅಭಿವೃದ್ಧಿ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಪ್ರಾಯೋಗಿಕವಾಗಿ ಪಂಚಾಯಿತಿ ಮಟ್ಟದಲ್ಲಿ ಸ್ಥಳೀಯ ಇಂಧನ ಸುಸ್ಥಿರತೆಗಾಗಿ ಕಂಪ್ರೆಸ್ಡ್ ಬಯೋಗ್ಯಾಸ್ ಉತ್ಪಾದನೆ ಅಗತ್ಯವಿದೆ. ಅದಕ್ಕಾಗಿ ವಿಸ್ತೃತ ಯೋಜನಾ ವರದಿ ಸಲ್ಲಿಸಿದರೆ ಸರ್ಕಾರದ ಗಮನ ಸೆಳೆಯಲಾಗುವುದು. ಜೊತೆಗೆ ರಾಜ್ಯವು ಜೈವಿಕ ಇಂಧನ ಕ್ಷೇತ್ರದಲ್ಲಿ ಹೂಡಿಕೆದಾರರನ್ನು ಆಕರ್ಷಿಸಲು ನೂತನ ನೀತಿಯ ಜಾರಿ, ಪ್ರೋತ್ಸಾಹ ಮುಂತಾದವುಗಳ ಸಂಬಂಧ ಸರ್ಕಾರದೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.
ಇದೇ ವೇಳೆ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್.ಈ.ಸುಧೀಂದ್ರ ಅವರು, ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಚಾಲ್ತಿಯಲ್ಲಿರುವ ಕಾರ್ಯ ಯೋಜನೆಗಳು, ಉನ್ನತೀಕರಣ ಹಾಗೂ ವಾಣಿಜ್ಯೀಕರಣದ ಕುರಿತು ನೂತನ ಜೈವಿಕ ಇಂಧನ ನೀತಿ ರಚನೆ ಬಗ್ಗೆ ಸಚಿವರಿಗೆ ಪರಿಚಯ ಮಾಡಿಕೊಟ್ಟರು.
ಈಗಾಗಲೇ ನೂತನ ಜೈವಿಕ ಇಂಧನ ನೀತಿ ಸಿದ್ಧವಾಗಿದ್ದು ಸರ್ಕಾರದ ಅನುಮೋದನೆಗೆ ಸಲ್ಲಿಕೆಯಾಗಿದೆ. ಈ ನೀತಿಯ ಅನುಷ್ಠಾನದಿಂದ ರಾಜ್ಯದಲ್ಲಿ ಜೈವಿಕ ಇಂಧನ ಕ್ಷೇತ್ರದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆಯನ್ನು ದೇಶ ವಿದೇಶಗಳ ಹೂಡಿಕೆದಾರರಿಂದ ನಿರೀಕ್ಷಿಸಬಹುದು. ಅದಕ್ಕಾಗಿ ಪೂರಕ ವಾತಾವರಣ ಸೃಜನೆಗೆ ಕ್ರಮ ವಹಿಸಲಾಗಿದೆ. ರಾಜ್ಯದಲ್ಲಿ ಎಲ್ಲಾ ಜೈವಿಕ ಇಂಧನಗಳಾದ ಬಯೋ ಬ್ರಿಕೆಟ್ಸ್ , ಬಯೋಪಿಲೆಟ್ಸ್ , ಬಯೋಡೀಸಲ್, ಎಥನಾಲ್, 2 ಜಿ ಎಥನಾಲ್, ಕಂಪ್ರೆಸ್ಡ್ ಬಯೋ ಗ್ಯಾಸ್, ಗ್ರೀನ್ ಹೈಡ್ರೋಜನ್ ಗಳನ್ನು ಮಂಡಳಿಯ ಕಾರ್ಯ ವ್ಯಾಪ್ತಿಗೆ ತರುವ ಅವಶ್ಯಕತೆ ಇದೆ ಎಂದು ಹೇಳಿದರು.
ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆಯಲ್ಲಿ ಹಿನ್ನಡೆ
ಮಧ್ಯಪ್ರಾಚ್ಯ ದೇಶಗಳಲ್ಲಿ ಉಂಟಾಗಿರುವ ಸಂಘರ್ಷದಿಂದ ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆಯಲ್ಲಿ ಹಿನ್ನಡೆ ಉಂಟಾಗಿದೆ. ಹೋಟೆಲ್, ರೆಸ್ಟೋರೆಂಟ್ ಗಳಿಗೆ ವಾಣಿಜ್ಯ ಅಡಿಗೆ ಇಂಧನದ ಪೂರೈಕೆಗೆ ಸಾಧ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವರಿಗೆ ವಿವರಣೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಖಂಡ್ರೆ ಅವರು, ಮುಂದಿನ ದಿನಗಳಲ್ಲಿ ಜೈವಿಕ ಇಂಧನಗಳು ಇಂತಹ ಪರಿಸ್ಥಿತಿಯಲ್ಲಿ ಪರ್ಯಾಯವಾಗಲಿವೆ ಎಂದರು.
ಸಭೆಯಲ್ಲಿ ಪಂಚಾಯತ್ ರಾಜ್ ಕಾರ್ಯದರ್ಶಿ ಡಿ.ರಂದೀಪ್, ಎಂಜಿಐಆರ್‌ಇಡಿ ಕಾರ್ಯನಿರ್ವಾಹಕ ನಿರ್ದೇಶಕಿ ಡಾ.ಗಾಯತ್ರಿ ರೆಡ್ಡಿ, ಯೋಜನಾ ಸಲಹೆಗಾರರಾದ ಡಾ. ದಯಾನಂದ, ಉಪನಿರ್ದೇಶಕರಾದ ರಮೇಶ್ ಸೇರಿದಂತೆ ಇತರರು ಹಾಜರಿದ್ದರು.
