ಹಸಿ ತ್ಯಾಜ್ಯದಿಂದ ಬಯೋಗ್ಯಾಸ್‌ ಉತ್ಪಾದನೆ!

| Published : Apr 27 2025, 01:48 AM IST

ಸಾರಾಂಶ

ಸ್ವಚ್ಛ ಭಾರತ ಮಿಶನ್ 2ರ ಅಡಿಯಲ್ಲಿ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ತೈಲ ಕಂಪನಿಗಳು ಹಸಿ ತಾಜ್ಯದಿಂದ ಬಯೋ ಸಿಎನ್‌ಜಿ ಗ್ಯಾಸ್ ತಯಾರಿಕೆಗೆ ಮುಂದಾಗಿದ್ದು, ಬಿಪಿಸಿಎಲ್ ಕಂಪನಿ ರಾಜ್ಯ ಸರ್ಕಾರವನ್ನು ಸಂಪರ್ಕಿಸಿ ಘಟಕ ಆರಂಭಿಸಲು ಸಜ್ಜಾಗಿದೆ.

ಶಿವಾನಂದ ಗೊಂಬಿ ಹುಬ್ಬಳ್ಳಿ

ಹಸಿ ತ್ಯಾಜ್ಯದಿಂದ ಬಯೋಗ್ಯಾಸ್ ಉತ್ಪಾದಿಸಲು ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಚಿಂತನೆ ನಡೆಸಿದ್ದು, ಭಾರತ ಪೆಟ್ರೋಲಿಯಂ ಪ್ರೈವೇಟ್ ಲಿಮಿಟೆಡ್ ಕಂಪನಿ (ಬಿಪಿಸಿಎಲ್)ಯೊಂದಿಗೆ ಮಾತುಕತೆ ನಡೆದಿದೆ.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿತ್ಯ 500 ಟನ್‌ ಘನ ತ್ಯಾಜ್ಯ ಸಂಗ್ರಹವಾಗುತ್ತದೆ. ಇದರಲ್ಲಿ ಬರೋಬ್ಬರಿ 150-200 ಟನ್‌ ಹಸಿ ತ್ಯಾಜ್ಯವೇ ಇರುತ್ತದೆ. ಸದ್ಯ ಡಂಪಿಂಗ್‌ ಯಾರ್ಡ್‌ನಲ್ಲೇ ಇದನ್ನು ಹಾಕಲಾಗುತ್ತದೆ. ಕೆಲವೊಂದಿಷ್ಟು ಕಾಂಪೋಸ್ಟ್‌ ಗೊಬ್ಬರ ಕೂಡ ತಯಾರಿಸುತ್ತಿದೆ. ಕಾಂಪೋಸ್ಟ್‌ ಗೊಬ್ಬರದಿಂದ ಹೇಳಿಕೊಳ್ಳುವಂತಹ ಆದಾಯವೇನೂ ಪಾಲಿಕೆಗೆ ಇಲ್ಲ.

ಇದೀಗ ಸ್ವಚ್ಛ ಭಾರತ ಮಿಶನ್ 2ರ ಅಡಿಯಲ್ಲಿ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ತೈಲ ಕಂಪನಿಗಳು ಹಸಿ ತಾಜ್ಯದಿಂದ ಬಯೋ ಸಿಎನ್‌ಜಿ ಗ್ಯಾಸ್ ತಯಾರಿಕೆಗೆ ಮುಂದಾಗಿದ್ದು, ಬಿಪಿಸಿಎಲ್ ಕಂಪನಿ ರಾಜ್ಯ ಸರ್ಕಾರವನ್ನು ಸಂಪರ್ಕಿಸಿ ಘಟಕ ಆರಂಭಿಸಲು ಸಜ್ಜಾಗಿದೆ. ಇದಕ್ಕೆ ಅಗತ್ಯ ಭೂಮಿ ನೀಡಲು ಪಾಲಿಕೆಗೆ ಸೂಚಿಸಿದೆ.

ಪರ್ಯಾಯ ಇಂಧನ: ಪ್ಲಾಸ್ಟಿಕ್‌ ಹೊರತುಪಡಿಸಿ, ಕೊಳೆತ ಹಣ್ಣು, ತರಕಾರಿ ಸೇರಿದಂತೆ ಅಡುಗೆ ಮನೆಯ ತ್ಯಾಜ್ಯದಿಂದ ಮಾತ್ರ ಬಯೋ ಸಿಎನ್‌ಜಿ ಗ್ಯಾಸ್‌ ಉತ್ಪಾದಿಸಬಹುದಾಗಿದೆ. ಈ ತರಹ ತಯಾರಾದ ಗ್ಯಾಸ್‌ನ್ನು ವಾಹನಗಳಿಗೆ ಪರ್ಯಾಯ ಇಂಧನವನ್ನಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಪರ್ಯಾಯ ಇಂಧನ ಒಂದು ಭಾಗವಾದರೆ, ಸ್ವಚ್ಛ ಭಾರತ ಯೋಜನೆಯಲ್ಲಿ ಮಹಾನಗರಗಳಿಗೆ ದೊಡ್ಡ ಸವಾಲಾಗಿರುವ ತಾಜ್ಯ ನಿರ್ವಹಣೆಯ ದೊಡ್ಡ ಭಾರ ಇಳಿಯಲಿದೆ.

ಯೋಜನೆಗೆ ತಕ್ಕ ನಗರ: ಬಯೋ ಸಿಎನ್‌ಜಿ ಘಟಕ ಸ್ಥಾಪನೆಗೆ ಹು-ಧಾ ಮಹಾನಗರ ಸೂಕ್ತ ಎಂದು ಮೊಸ್ಟರ್ ಎನ್ನುವ ಸಂಸ್ಥೆ ವರದಿ ಸಲ್ಲಿಸಿದೆಯಂತೆ. ಪಾಲಿಕೆ ಪ್ರತಿ ವಾರ್ಡ್ ಸಂಚರಿಸಿ ಸಂಗ್ರಹವಾಗುವ ಅಡುಗೆ ಮನೆ ತ್ಯಾಜ್ಯ ಕುರಿತು ನಾಲ್ಕೈದು ಹಂತದಲ್ಲಿ ಸಮೀಕ್ಷೆ ಮಾಡಲಾಗಿದೆ. ಸಮೀಕ್ಷೆ ಪ್ರಕಾರ 150-200 ಟನ್ ಹಸಿ ಕಸ ದೊರೆಯಲಿದೆ. ಈ ಸಂಸ್ಥೆ ವಿಸ್ತೃತವಾದ ವರದಿ ಬಿಪಿಸಿಎಲ್ ಕಂಪನಿಗೆ ಸಲ್ಲಿಸಿದೆ. ಯೋಜನೆ ಅನುಷ್ಠಾನಕ್ಕೆ ಮಹಾನಗರ ಎನ್ನುವ ಕಾರಣಕ್ಕಾಗಿ ಗೇಲ್ ಕಂಪನಿಯವರು ಮುಂದೆ ಬಂದಿದ್ದಾರೆ.

ಹೆಚ್ಚುವರಿಯಾದ ಹಸಿ ತ್ಯಾಜ್ಯದಿಂದ ಬಯೋ ಗ್ಯಾಸ್ ಘಟಕವನ್ನು ಗೇಲ್ ಸಂಸ್ಥೆ ವತಿಯಿಂದ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಠರಾವ್ ಪಾಸ್ ಮಾಡಲಾಗಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಹುಬ್ಬಳ್ಳಿಯ ಶಿವಳ್ಳಿ ಬಳಿ 200 ಟಿಪಿಡಿ ಬಯೋಗ್ಯಾಸ್ ಘಟಕ ನಿರ್ಮಾಣವಾಗಲಿದೆ. ಮಹಾನಗರ ಪಾಲಿಕೆ 10 ಎಕರೆ ಭೂಮಿಯನ್ನು 30 ವರ್ಷಗಳ ಅವಧಿಗೆ ಗೇಲ್ ಕಂಪನಿಗೆ ಲೀಸ್ ನೀಡಲಾಗುತ್ತದೆ. 30 ವರ್ಷಗಳವರೆಗೆ ಅವರೇ ಕಟ್ಟಿ ಅವರೇ ನಿರ್ವಹಣೆ ಮಾಡಿ ಅವರೇ ಗ್ಯಾಸ್ ಬಳಸಿಕೊಳ್ಳಬಹುದು. 30 ವರ್ಷದ ನಂತರ ಲೀಸ್ ಅವಧಿ ಮುಗಿದ ಬಳಿಕ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಗೆ ಹಸ್ತಾಂತರ ಮಾಡಲಿದ್ದಾರೆ ಎಂದು ಪಾಲಿಕೆ ಅಧಿಕಾರಿ ವರ್ಗ ಮಾಹಿತಿ ನೀಡಿದೆ. ಇದಕ್ಕಾಗಿ ಬಿಪಿಸಿಎಲ್‌ ಕಂಪನಿ ₹68 ಕೋಟಿ ವೆಚ್ಚ ಮಾಡಲಿದೆ ಎಂದು ಮೂಲಗಳು ತಿಳಿಸುತ್ತವೆ.

ಪಾಲಿಕೆಗೆ ಏನು ಲಾಭ?: ಘಟಕ ನಿರ್ಮಾಣಕ್ಕೆ ಮಹಾನಗರ ಪಾಲಿಕೆಯಿಂದ ಲೀಸ್ ಆಧಾರದ ಭೂಮಿ ಕೊಡುವುದನ್ನು ಬಿಟ್ಟರೆ ಯಾವುದೇ ಬಗೆಯ ಬಂಡವಾಳ ಹೂಡುವ ಪ್ರಶ್ನೆ ಇಲ್ಲ. ತ್ಯಾಜ್ಯ ನಿರ್ವಹಣೆಗೆ ಪ್ರತಿ ವರ್ಷದ ಖರ್ಚು ₹5-6 ಕೋಟಿ ಉಳಿಯಲಿದೆ. 30 ವರ್ಷ ಕಂಪನಿ ಕಾರ್ಯನಿರ್ವಹಣೆ ಮಾಡಲಿದೆ. ಪ್ರತಿನಿತ್ಯ ಹಸಿತ್ಯಾಜ್ಯ ಕೊಡುವುದಷ್ಟೇ ಪಾಲಿಕೆ ಜವಾಬ್ದಾರಿಯಾಗಿದೆ. ನಗರದ ಹೊರ ವಲಯದಲ್ಲಿ ಬೆಟ್ಟದಂತೆ ತ್ಯಾಜ್ಯ ಸಂಗ್ರಹವಾಗುವುದು ತಪ್ಪಲಿದೆ.

ಒಣತ್ಯಾಜ್ಯ: ಒಣ ತ್ಯಾಜ್ಯವನ್ನು ಎನ್‌ಟಿಪಿಎಸ್‌ ಘಟಕಕ್ಕೆ ನೀಡುವ ಯೋಜನೆ ಇದೆ. ಎನ್‌ಟಿಪಿಎಸ್‌ ಕಂಪನಿಯು ಟೇರಿಫೈಡ್‌ ಚಾರ್‌ಕೋಲ್‌ ತಯಾರಿಸಲು ಮುಂದಾಗಿದೆ. ಇದಕ್ಕಾಗಿ ಎನ್‌ಟಿಪಿಸಿ ₹300 ಕೋಟಿಗೂ ಅಧಿಕ ಬಂಡವಾಳ ಹೂಡಿಕೆ ಮಾಡಲಿದೆ. ಈ ಸಂಬಂಧ ಈಗಾಗಲೇ ಎನ್‌ಟಿಪಿಸಿ ಜತೆಗೆ ಒಪ್ಪಂದ ಕೂಡ ಮಾಡಿಕೊಳ್ಳಲಾಗಿದೆ.

ಎರಡು ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಂಡರೆ ಬೆಟ್ಟದ ಗಾತ್ರದಲ್ಲಿ ಸಂಗ್ರಹವಾಗಿರುವ ತ್ಯಾಜ್ಯಕ್ಕೆ ಮುಕ್ತಿ ದೊರೆಯಲಿದೆ.

ಹಸಿ ತ್ಯಾಜ್ಯದಿಂದ ಬಯೋಗ್ಯಾಸ್‌ ಉತ್ಪಾದಿಸುವ ಕುರಿತು ಚಿಂತನೆ ನಡೆದಿದೆ. ಬಿಪಿಸಿಎಲ್‌ ಜತೆಗೆ ಮಾತುಕತೆ ನಡೆದಿದೆ. ಪ್ರತಿನಿತ್ಯ ಅಡುಗೆ ಮನೆಯ ತ್ಯಾಜ್ಯ ಅಂದರೆ ತರಕಾರಿ, ಹಣ್ಣು ಸೇರಿದಂತೆ ವಿವಿಧ ಹಸಿ ತ್ಯಾಜ್ಯ ನೀಡಿದರೆ ಮುಗಿತು. ಅದರಿಂದ ಗ್ಯಾಸ್‌ ಉತ್ಪಾದನೆಯಾಗಲಿದೆ. ತ್ಯಾಜ್ಯ ನಿರ್ವಹಣೆ ತಪ್ಪಲಿದೆ ಎಂದು ಪಾಲಿಕೆ ಆಯುಕ್ತ ರುದ್ರೇಶ ಘಾಳಿ ತಿಳಿಸಿದರು.