ಸಾರಾಂಶ
- ವೆಂಕಟೇಶ್ ಕಲಿಪಿ
ಕನ್ನಡಪ್ರಭ ವಾರ್ತೆ ಬೆಂಗಳೂರುಚಿತ್ರದುರ್ಗದ ರೇಣುಕಾಸ್ವಾಮಿ ಅಪಹರಣ ಮತ್ತು ಕೊಲೆ ಪ್ರಕರಣದಡಿ ನಟ ದರ್ಶನ್, ಪವಿತ್ರಾಗೌಡ ಸೇರಿ ಒಟ್ಟು 17 ಮಂದಿ ವಿರುದ್ಧ ದೋಷಾರೋಪ ಪ್ರಕ್ರಿಯೆಯನ್ನು ನಗರದ 57ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ಪೂರ್ಣಗೊಳಿಸಿದ ಬೆನ್ನಲ್ಲೇ, ಆರೋಪ ಸಾಬೀತಾದರೆ ಯಾವ್ಯಾವ ಆರೋಪದಲ್ಲಿ ಎಷ್ಟೆಲ್ಲ ಶಿಕ್ಷೆ ವಿಧಿಸಲು ಕಾನೂನಿನಡಿ ಅವಕಾಶವಿದೆ ಎಂಬ ಕುತೂಹಲ ಇದೀಗ ಸಾರ್ವಜನಿಕರಲ್ಲಿ ಮನೆ ಮಾಡಿದೆ.
ನ್ಯಾಯಾಲಯವು ದರ್ಶನ್, ಪವಿತ್ರಾ ಗೌಡ ಹಾಗೂ ಮತ್ತಿತರರ ಮೇಲೆ ಪ್ರಮುಖವಾಗಿ ನಿಗದಿಪಡಿಸಿರುವ ದೋಷಾರೋಪವೆಂದರೆ ಅದು ಕೊಲೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302ರ ಅಡಿ ಕೊಲೆ ಅಪರಾಧಕ್ಕೆ ಗರಿಷ್ಠ ಮರಣದಂಡನೆ, ಜೀವಾವಧಿ ಹಾಗೂ ದಂಡ ಶಿಕ್ಷೆ ವಿಧಿಸಲು ಅವಕಾಶವಿದೆ.ಆದರೆ ಪ್ರಕರಣದ ನಿರ್ದಿಷ್ಟತೆ, ಅಪರಾಧ ಸ್ವರೂಪ, ಗಂಭೀರತೆ, ಕೃತ್ಯದಲ್ಲಿ ಆರೋಪಿಗಳ ಪಾತ್ರ, ಅವರ ವಿರುದ್ಧ ಲಭ್ಯವಿರುವ ಸಾಕ್ಷ್ಯಧಾರ, ಅಪರಾಧ ಸಾಬೀತು ಆಧಾರದ ಮೇಲೆ ಅಂತಿಮವಾಗಿ ಯಾವ ತೀರ್ಪು ನೀಡಬೇಕು ಎಂಬುದನ್ನು ನ್ಯಾಯಾಲಯ ನಿರ್ಧರಿಸುತ್ತದೆ, ‘ಅಪರೂಪದಲ್ಲಿ ಅಪರೂಪದ’ ಪ್ರಕರಣಗಳಿಗೆ ಮರಣದಂಡನೆ ಶಿಕ್ಷೆ ವಿಧಿಸುವ ಅವಕಾಶ ನ್ಯಾಯಾಲಯಕ್ಕೆ ಇದೆ.
ಅಪರಾಧಿಕ ಒಳಸಂಚು:ಉಳಿದಂತೆ ರೇಣುಕಾಸ್ವಾಮಿಸ್ವಾಮಿ ಅಪಹರಿಸಲು ಪಿತೂರಿ ನಡೆಸಿದ್ದಕ್ಕೆ ಐಪಿಸಿ ಸೆಕ್ಷನ್ 120-ಬಿ ಅಡಿ ಅಪರಾಧಿಕ ಒಳಸಂಚು ದೋಷಾರೋಪ ನಿಗದಿಪಡಿಸಲಾಗಿದೆ. ಈ ಅಪರಾಧಕ್ಕೆ ಕಾನೂನಿನಲ್ಲಿ ಮರಣ ದಂಡನೆ ಅಥವಾ ಜೀವಾವಧಿ ಅಥವಾ ಎರಡು ಅಥವಾ ಅದಕ್ಕಿಂತ ಹೆಚ್ಚು ವರ್ಷ ಕಠಿಣ ಜೈಲು. ಅಪಹರಣ ಕೃತ್ಯ ಎಸಗುವ ಉದ್ದೇಶದಿಂದ ಅಕ್ರಮ ಕೂಟ ರಚಿಸಿದ ಮತ್ತು ಅಪಹರಣ ಮಾಡಿರುವ ಆರೋಪ ಸಂಬಂಧ ಐಪಿಸಿ ಸೆಕ್ಷನ್ 364, 143 ಮತ್ತು 149 ಅಡಿ ಆರೋಪ ಅಪರಾಧ ನಿಗದಿಸಲಾಗಿದೆ. ಅಪಹರಣ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಇಲ್ಲವೇ 10 ವರ್ಷಗಳ ಕಾಲ ಕಠಿಣ ಜೈಲು/ದಂಡ ವಿಧಿಸಬಹುದು. ಅಕ್ರಮ ಕೂಟ ರಚನೆ ಅಪರಾಧಕ್ಕೆ ಆರು ತಿಂಗಳ ಜೈಲು ಅಥವಾ ದಂಡ, ಇಲ್ಲವೇ ಎರಡೂ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.
ಅಪಹರಣ ನಂತರ ಪಟ್ಟಣಗೆರೆ ಶೆಡ್‌ಗೆ ಕರೆತಂದು, ಶೂ-ಚಪ್ಪಲಿಯಿಂದ ಮಾರಣಾಂತಿಕ ಹಲ್ಲೆ ನಡೆಸಿ, ಅವಮಾನ ಉಂಟು ಮಾಡಿರುವುದರಿಂದ ಐಪಿಸಿ ಸೆಕ್ಷನ್ 355 ಅಡಿ ಅಪರಾಧ ನಿಗದಿಪಡಿಸಲಾಗಿದೆ. ವ್ಯಕ್ತಿಯನ್ನು ಅವಮಾನಿಸುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ ಮಾಡಿದ ಅಪರಾಧಕ್ಕೆ ಎರಡು ವರ್ಷ ಜೈಲು, ಇಲ್ಲವೇ ದಂಡ ಅಥವಾ ಎರಡು ವಿಧಿಸಲು ಅವಕಾಶವಿದೆ.ರೇಣುಕಾಸ್ವಾಮಿಯನ್ನು ಅಕ್ರಮವಾಗಿ ಕೂಡಿ ಹಾಕಿರುವುದಕ್ಕೆ ಐಪಿಸಿ ಸೆಕ್ಷನ್ 342 ಅಡಿ ಆರೋಪ ನಿಗದಿಪಡಿಸಲಾಗಿದೆ. ಈ ಅಪರಾಧಕ್ಕೆ ಒಂದು ವರ್ಷದವರೆಗೆ ಜೈಲು, ಇಲ್ಲವೇ ಒಂದು ಸಾವಿರ ರು. ದಂಡ ಇಲ್ಲವೇ ಎರಡೂ ವಿಧಿಸಬಹುದಾಗಿದೆ. ಇನ್ನು ಮರದ ಕೊಂಬೆ, ನೈಲಾನ್ ಹಗ್ಗ, ಮರದ ಲಾಠಿ, ಕೊಂಬೆಯಿಂದ ಹೊಡೆದಿರುವುದಕ್ಕೆ ಮಾರಣಾಂತಿಕ ಹಲ್ಲೆ ನಡೆಸಿ, ಕೊಲೆ ಮಾಡಿ ದೊಂಬಿ ಉಂಟು ಮಾಡಿರುವುದಕ್ಕೆ 148 ಅಡಿ ಆರೋಪ ನಿಗದಿಪಡಿಸಲಾಗಿದೆ. ಈ ಅಪರಾಧಕ್ಕೆ ಮೂರು ವರ್ಷ ಜೈಲು ಅಥವಾ ದಂಡ ವಿಧಿಸಲು ಅವಕಾಶವಿದೆ. ಜೊತೆಗೆ ಕೊಲೆ ನಂತರ ಸಾಕ್ಷ್ಯ ನಾಶಪಡಿಸಿ, ತನಿಖೆಯ ಹಾದಿತಪ್ಪಿಸಿದ ಸಂಬಂಧ ಸೆಕ್ಷನ್ 201 ಅಡಿ ಸಾಕ್ಷ್ಯ ನಾಶ ಆರೋಪ ಹೊರಿಸಲಾಗಿದೆ. ಈ ಅಪರಾಧಕ್ಕೆ 7 ವರ್ಷವರೆಗೆ ಜೈಲು ಮತ್ತು ದಂಡ ವಿಧಿಸಲು ಅವಕಾಶವಿದೆ.
ದರ್ಶನ್ ಮೇಲಿನ ಆರೋಪವೇನು?:ರೇಣುಕಾಸ್ವಾಮಿ ಅಪಹರಿಸಿ ಆರ್.ಆರ್.ನಗರದ ಪಟ್ಟಣಗೆರೆ ಶೆಡ್‌ಗೆ ಕರೆತಂದಾಗ ಜೂ.8ರಂದು ಸಂಜೆ ಹೋಗಿದ್ದ 2ನೇ ಆರೋಪಿ ದರ್ಶನ್ ‘ನನ್ನ ಹೆಂಡತಿಗೆ ಮೆಸೇಜ್ ಮಾಡ್ತೀಯಾ ಸೂ.. ಮ..ನೇ ಎಂದು ರೇಣುಕಾಸ್ವಾಮಿಗೆ ಬೈದು ಅವಮಾನ ಉಂಟು ಮಾಡಿದ್ದಕ್ಕೆ ಐಪಿಸಿ ಸೆಕ್ಷನ್ 149, ಕೊಲೆ ಮಾಡುವ ಉದ್ದೇಶದಿಂದ ಎರಡು ಬಾರಿ ಮುಖಕ್ಕೆ ಹೊಡೆದು, ಶೂ ಕಾಲಿನಿಂದ ಎದೆಗೆ ಜೋರಾಗಿ ಒದ್ದು, ಮರದ ರೆಂಬೆಯಿಂದ ಬೆನ್ನು, ಮೊಣಕಾಲುಗಳಿಗೆ ಹಲ್ಲೆ ಮಾಡಿದ್ದಕ್ಕೆ, ರೇಣುಕಾಸ್ವಾಮಿ ಪ್ಯಾಂಟ್ ಬಿಚ್ಚಿಸಿ, ಆತನ ಮರ್ಮಾಂಗಕ್ಕೆ ತುಳಿದು, ಒದ್ದು ಮಾರಾಣಾಂತಿಕ ಹಲ್ಲೆ ಮಾಡಿದ ಅಪರಾಧಕ್ಕೆ ಐಪಿಸಿ ಸೆಕ್ಷನ್ 355 ಅಡಿ, ಜೀವ ಬೆದರಿಕೆ ಹಾಕಿದ್ದು ಮತ್ತು ಕೊಲೆ ಮಾಡಿರುವುದಕ್ಕೆ ಐಪಿಸಿ ಸೆಕ್ಷನ್ 302, ನಂತರ ಕೊಲೆ ಕೃತ್ಯವನ್ನು ಬಚ್ಚಿಡಲು ಹಾಗೂ ಸಾಕ್ಷ್ಯ ನಾಶ ಮಾಡಲು ಪ್ರಯತ್ನಿಸಿದ್ದಕ್ಕೆ ಐಪಿಸಿ ಸೆಕ್ಷನ್ 201ರ ಅಡಿ ಸಾಕ್ಷ್ಯನಾಶ ಆರೋಪ ನಿಗದಿಪಡಿಸಲಾಗಿದೆ.ಸುಪ್ರೀಂಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ ಪವಿತ್ರಾ ಗೌಡ:ಕನ್ನಡಪ್ರಭ ವಾರ್ತೆ ನವದೆಹಲಿಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನದಲ್ಲಿರುವ ನಟಿ ಪವಿತ್ರಾ ಗೌಡ ಅವರು ಜಾಮೀನು ರದ್ದು ಕುರಿತ ತೀರ್ಪಿನ ಮರು ಪರಿಶೀಲನೆ ಕೋರಿ ಸುಪ್ರೀಂಕೋರ್ಟ್‌ಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ.2024ರ ಜೂ.8ರಂದು ರೇಣುಕಾಸ್ವಾಮಿ ಅವರನ್ನು ಅಪಹರಿಸಿ ಕೊಲೆ ಮಾಡಿದ್ದಾರೆ ಎಂಬ ಆರೋಪದಡಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಮಂದಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದರು. 2024ರ ಡಿ.13 ರಂದು ಕರ್ನಾಟಕ ಹೈಕೋರ್ಟ್ ಅವರಿಗೆ ಜಾಮೀನು ನೀಡಿತ್ತು. ಈ ಜಾಮೀನು ಪ್ರಶ್ನಿಸಿ ಬೆಂಗಳೂರು ನಗರ ಪೊಲೀಸರು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಸುಪ್ರೀಂಕೋರ್ಟ್ ಇವರೆಲ್ಲರ ಜಾಮೀನನ್ನು ರದ್ದುಗೊಳಿಸಿತ್ತು. ಈ ತೀರ್ಪಿನ ಮರು ಪರಿಶೀಲನೆ ಕೋರಿ ಪವಿತ್ರಾ ಗೌಡ ಅವರು ಮಂಗಳವಾರ ಸುಪ್ರೀಂಕೋರ್ಟ್‌ಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ.
ನ್ಯಾ.ಪರ್ದೀವಾಲ ಹಾಗೂ ನ್ಯಾ.ಮಹದೇವನ್ ಅವರ ಪೀಠದಲ್ಲಿ ಗುರುವಾರ ಈ ಅರ್ಜಿಯ ವಿಚಾರಣೆ ನಡೆಯುವ ಸಾಧ್ಯತೆಯಿದೆ. ಇಲ್ಲಿ ವಾದ-ಪ್ರತಿವಾದಕ್ಕೆ ಅವಕಾಶ ಇರುವುದಿಲ್ಲ. ಅರ್ಜಿದಾರರ ಮನವಿಯನ್ನು ಮಾತ್ರ ಆಲಿಸಲಾಗುವುದು ಎಂದು ಮೂಲಗಳು ತಿಳಿಸಿವೆ.‘ನಾನು ಸಿಂಗಲ್ ಪೇರೆಂಟ್. ನನ್ನ ಮಗಳು ಎಸ್ಎಸ್ಎಲ್‌ಸಿ ವ್ಯಾಸಂಗ ಮಾಡುತ್ತಿದ್ದಾಳೆ. ಈ ಕೃತ್ಯದಲ್ಲಿ ನನ್ನ ಪಾತ್ರ ಇಲ್ಲ. ಹಾಗಾಗಿ, ಜಾಮೀನು ರದ್ದು ಕುರಿತ ತೀರ್ಪನ್ನು ಮರು ಪರಿಶೀಲಿಸಿ’ ಎಂದು ಅರ್ಜಿಯಲ್ಲಿ ಅವರು ಮನವಿ ಮಾಡಿದ್ದಾರೆ.;Resize=(128,128))
;Resize=(128,128))
;Resize=(128,128))