ಸಾರಾಂಶ
ಬೆಂಗಳೂರು : ಜೈಲಿನ ನಿಯಮಾನುಸಾರ ಎಲ್ಲ ಸೌಲಭ್ಯ ನೀಡಿರುವ ಬಗ್ಗೆ ಕಾನೂನು ಸೇವಾ ಪ್ರಾಧಿಕಾರವು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ ಬೆನ್ನಲ್ಲೇ ಕೊಲೆ ಆರೋಪಿ ನಟ ದರ್ಶನ್ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ತಮ್ಮ ಸಹ ಕೈದಿಗಳೊಂದಿಗೆ ಕೂಗಾಡಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ ಎನ್ನಲಾಗಿದೆ.
ನ್ಯಾಯಾಲಯದ ಸೂಚನೆ ಮೇರೆಗೆ ಕಾನೂನು ಸೇವಾ ಪ್ರಾಧಿಕಾರದ ಅಧಿಕಾರಿಗಳು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಕೊಲೆ ಆರೋಪಿ ದರ್ಶನ್‌ಗೆ ನೀಡಿರುವ ಸೌಲಭ್ಯಗಳನ್ನು ಖುದ್ದು ವೀಕ್ಷಿಸಿದ್ದರು. ಈ ಸಂಬಂಧ ಶನಿವಾರ ನ್ಯಾಯಾಲಯಕ್ಕೆ ವರದಿ ನೀಡಿದ್ದರು. ಈ ವರದಿಯಲ್ಲಿ ನಿಯಾಮಾನುಸಾರ ಆರೋಪಿಗೆ ಸೌಲಭ್ಯ ನೀಡಲಾಗಿದೆ ಎಂದು ಉಲ್ಲೇಖಿಸಿರುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿದೆ. ಈ ವಿಚಾರ ತಿಳಿದ ಬಳಿಕ ಆರೋಪಿ ದರ್ಶನ್ ತನ್ನ ಸಹ ಕೈದಿಗಳೊಂದಿಗೆ ಕೂಗಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನನಗೇಕೆ ಈ ಶಿಕ್ಷೆ? ನಾನು ಹೀಗೆ ಜೈಲಿನಲ್ಲಿ ಸಾಯಬೇಕಾ ಎಂದು ಚೀರಾಡಿದ್ದಾರೆ. ಈ ವೇಳೆ ಸಹ ಕೈದಿ ನಾಗರಾಜ್, ದುಃಖತಪ್ತ ದರ್ಶನ್‌ರನ್ನು ಸಮಾಧಾನಪಡಿಸಿದ್ದಾರೆ. ಉಳಿದ ಕೈದಿಗಳು ದರ್ಶನ್ ಅವರನ್ನು ಮಾತನಾಡಿಸುವ ಗೋಜಿಗೆ ಹೋಗಲಿಲ್ಲ. ದರ್ಶನ್ ಹತಾಶೆಯಲ್ಲಿ ಇರುವುದನ್ನು ಕಂಡು ಅಂತರ ಕಾಯ್ದುಕೊಂಡಿದ್ದರು ಎನ್ನಲಾಗಿದೆ.
ಮಾನವ ಹಕ್ಕುಗಳ ಆಯೋಗಕ್ಕೆ ದೂರು?:
ಹೆಚ್ಚುವರಿ ಸೌಲಭ್ಯಗಳಿಗಾಗಿ ನ್ಯಾಯಾಲಯದ ಮೊರೆ ಹೋಗಿ ಹಿನ್ನಡೆ ಅನುಭವಿಸಿರುವ ಕೊಲೆ ಆರೋಪಿ ದರ್ಶನ್, ಇದೀಗ ಮಾನವ ಹಕ್ಕುಗಳ ಆಯೋಗದ ಮೊರೆ ಹೋಗುವ ಸಾಧ್ಯತೆಯಿದೆ. ಈ ಸಂಬಂಧ ತಮ್ಮ ವಕೀಲರೊಂದಿಗೆ ಮಾತುಕತೆ ನಡೆಸಲು ಆಸಕ್ತರಾಗಿದ್ದಾರೆ. ಶೀಘ್ರದಲ್ಲೇ ವಕೀಲರೊಂದಿಗೆ ಚರ್ಚಿಸಿ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.