ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ವತಿಯಿಂದ ನಡೆದ 400 ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮದ ಗಂಭೀರ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಅಥವಾ ಹಾಲಿ ಹೈಕೋರ್ಟ್‌ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸುವಂತೆ ರಾಜ್ಯ ಬಿಜೆಪಿ ನಾಯಕರ ನಿಯೋಗವು ಆಯೋಗದ ಅಧ್ಯಕ್ಷರನ್ನು ಆಗ್ರಹಿಸಿದೆ.

ಸೋಮವಾರ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಆಶೋಕ್‌, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಎಸ್‌.ಸುರೇಶ್ ಕುಮಾರ್‌ ನೇತೃತ್ವದಲ್ಲಿ ಬಿಜೆಪಿ ನಾಯಕರ ನಿಯೋಗವು ಆಯೋಗದ ಕಚೇರಿಗೆ ಭೇಟಿ ನೀಡಿ ಹಂಗಾಮಿ ಅಧ್ಯಕ್ಷ ಡಾ। ಪ್ರಭುದೇವ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.

ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಪ್ರತಿ ಹುದ್ದೆಗೆ ₹80 ಲಕ್ಷ ಲಂಚ ಪಡೆದಿರುವ ಗಂಭೀರ ಆರೋಪ ಕೇಳಿ ಬಂದಿದೆ. ಈ ಅಕ್ರಮದಲ್ಲಿ ಅಧಿಕಾರಿಗಳು, ಮಧ್ಯವರ್ತಿಗಳು ಹಾಗೂ ಪ್ರಭಾವಿ ವ್ಯಕ್ತಿಗಳ ಪಾತ್ರದ ಬಗ್ಗೆಯೂ ಗಂಭೀರ ಆರೋಪ ಕೇಳಿ ಬಂದಿವೆ. ಈ ಬೆಳವಣಿಗೆಗಳು ಕೆಪಿಎಸ್‌ಸಿಯ ವಿಶ್ವಾಸಾರ್ಹತೆ ಪ್ರಶ್ನಿಸುವಂತಿವೆ ಎಂದು ಅಸಮಾಧಾನ ವ್ಯಕ್ತಪಡಿಸಲಾಗಿದೆ.


₹800 ಕೋಟಿ ಡೀಲ್:

ಮನವಿ ಸಲ್ಲಿಕೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆರ್‌.ಅಶೋಕ್‌, ಕೆಪಿಎಸ್ಸಿ ಅಧ್ಯಕ್ಷರು ಕೂಡ ಅಕ್ರಮ ಮಾಡಿ ಅಮಾನತು ಆಗಿದ್ದಾರೆ. ನೀಟ್‌ ಬಗ್ಗೆ ರಾಹುಲ್‌ ಗಾಂಧಿ ಹೋರಾಟ ಮಾಡಿದ್ದರು. ಆದರೆ ಇಲ್ಲಿ ಇಷ್ಟೆಲ್ಲ ಆದರೂ ಹೋರಾಟ ಮಾಡಿಲ್ಲ. ಈ ಬಗ್ಗೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಮಾತಾಡಿಲ್ಲ. 400 ಹುದ್ದೆಯಲ್ಲಿ ಅಕ್ರಮ ನಡೆದಿದೆ ಎಂದರೆ ಒಟ್ಟು ₹800 ಕೋಟಿ ಡೀಲ್‌ ನಡೆದಿದೆ ಎಂದರ್ಥ. ಪ್ರತಿಭಾವಂತರು 350 ಅಂಕ ಪಡೆಯಲು ಕಷ್ಟಪಟ್ಟರೆ, ಸಾಮಾನ್ಯ ವಿದ್ಯಾರ್ಥಿಗಳು 400 ಅಂಕ ಗಳಿಸಿದ್ದಾರೆ ಎಂದು ಕಿಡಿಕಾರಿದರು.

ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಕೆಪಿಎಸ್ಸಿ ಎಂದರೆ, ಬುದ್ಧಿವಂತರನ್ನು ದಡ್ಡರಾಗಿ, ದಡ್ಡರನ್ನು ಬುದ್ಧಿವಂತರಾಗಿ ಮಾಡುವ ಸಂಸ್ಥೆಯಾಗಿದೆ. ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ. ಸರ್ಕಾರದ ಆದೇಶ ಉಲ್ಲಂಘಿಸಿ ಬ್ಯಾಗ್ ಲಾಗ್‌ ಹುದ್ದೆಗಳ ಭರ್ತಿ ಮಾಡಲಾಗಿದೆ. ಈ ನೇಮಕಾತಿ ರದ್ದುಪಡಿಸಿ, ಮರು ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದರು.

ಈ ಅಕ್ರಮ ಕುರಿತು ಆಯೋಗವು ತನ್ನ ಅಧಿಕಾರಿಗಳ ಮೂಲಕ ಆಂತರಿಕ ತನಿಖೆ ನಡೆಸಲು ಮುಂದಾಗಿರುವುದು ಅಸಂಬದ್ಧ ಮತ್ತು ಅಸಮಂಜಸ ನಡೆಯಾಗಿದೆ. ಸಂಸ್ಥೆಯ ವಿರುದ್ಧದ ಆರೋಪಗಳ ಕುರಿತು ಸಂಸ್ಥೆಯ ಅಧಿಕಾರಿಗಳೇ ತನಿಖೆ ನಡೆಸುವುದು ನೈಸರ್ಗಿಕ ನ್ಯಾಯಯದ ಮೂಲತತ್ವಗಳಿಗೆ ವಿರುದ್ಧವಾಗಿದೆ. ಈ ಆಂತರಿಕ ತನಿಖೆಗೆ ಸಾರ್ವಜನಿಕ ವಿಶ್ವಾಸ ದೊರೆಯುವುದು ಅಸಾಧ್ಯ. ಹೀಗಾಗಿ ಈ ಆಂತರಿಕ ತನಿಖೆ ತಕ್ಷಣ ರದ್ದುಗೊಳಿಸಬೇಕು ಎಂದು ಆಗ್ರಹಿಸಲಾಗಿದೆ.

ಸಿಬಿಐ ಅಥವಾ ನ್ಯಾಯಾಂಗ ತನಿಖೆಗೆ ಆಗ್ರಹ:

ಈ ಪ್ರಕರಣವನ್ನು ಸಿಬಿಐ ಅಥವಾ ರಾಜ್ಯ ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ಈ ನೇಮಕಾತಿ ಪ್ರಕ್ರಿಯೆ ಕುರಿತು ಸಂಪೂರ್ಣ ತನಿಖೆ ನಡೆಸಿ, ಅಧಿಕಾರಿಗಳು, ಮಧ್ಯವರ್ತಿಗಳು, ಫಲಾನುಭವಿಗಳು ಹಾಗೂ ಸಂಬಂಧಿತರ ಪಾತ್ರವನ್ನು ತನಿಖೆಗೆ ಒಳಪಡಿಸಬೇಕು. ಕೆಪಿಎಸ್‌ಸಿಯಿಂದ ಇತ್ತೀಚೆಗೆ ನಡೆದ ಇತರೆ ನೇಮಕಾತಿ ಪ್ರಕ್ರಿಯೆಗಳನ್ನು ತನಿಖೆ ವ್ಯಾಪ್ತಿಗೆ ಒಳಪಡಿಸಬೇಕು. ತನಿಖಾ ವರದಿ ಸಾರ್ವಜನಿಕಗೊಳಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಪಶು ವೈದ್ಯಾಧಿಕಾರಿ ಹುದ್ದೆ ಆಕಾಂಕ್ಷಿಗಳ ಮನವಿ ಮೇರೆಗೆ ಮರು ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.