ಮುಂಡರಗಿ: ನಿತ್ಯ ನೂರಾರು ವಿದ್ಯಾರ್ಥಿಗಳು ಬಂದು ಅಕ್ಷರಾಭ್ಯಾಸ ಮಾಡುವ ಶಾಲೆಗಳ ಆವರಣದಲ್ಲಿ ಪಂಚವಟಿ ನಿರ್ಮಾಣ ಮಾಡುವುದು ಒಂದು ಒಳ್ಳೆಯ ಕಾರ್ಯವಾಗಿದೆ ಎಂದು ಗದಗ ಜಿಲ್ಲಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಶೋಕ ಎ.ಎಚ್. ಹೇಳಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಜಿಲ್ಲಾ ಉಪನಿರ್ದೇಶಕ ಎಂ.ಎ. ರಡ್ಡೇರ ಮಾತನಾಡಿ, ಪಂಚವಟಿ ಗಿಡಗಳು ಧಾರ್ಮಿಕವಾಗಿ ಹಾಗೂ ವೈಜ್ಞಾನಿಕವಾಗಿ ಮಹತ್ವ ಪಡೆದುಕೊಂಡಿವೆ. ಹೀಗಾಗಿ ಮುಂಡರಗಿ ತಾಲೂಕಿನಲ್ಲಿ ಆಯ್ದ 60 ಶಾಲೆಗಳಲ್ಲಿ ಪಂಚವಟಿ ನಿರ್ಮಿಸುವ ಕಾರ್ಯವನ್ನು ಕೈಗೊಳ್ಳಲಾಗಿದೆ. ಮುಂಡರಗಿ ತಾಲೂಕಿನಲ್ಲಿ ಪ್ರಾರಂಭಿಸಿರುವ ಈ ಕಾರ್ಯಕ್ರಮವನ್ನು ಮುಂಬರುವ ದಿನಗಳಲ್ಲಿ ಅರಣ್ಯ ಇಲಾಖೆಯ ನೆರವಿನೊಂದಿಗೆ ಜಿಲ್ಲೆಯ ಎಲ್ಲ ಶಾಲೆಗಳಿಗೂ ವಿಸ್ತರಿಸುವ ಕುರಿತು ಯೋಚಿಸಲಾಗುವುದು ಎಂದರು.
ಗದಗ ಜಿಲ್ಲಾ ವನ್ಯಜೀವಿ ಪರಿಪಾಲಕ, ಪರಿಸರವಾದಿ ಪ್ರೊ. ಸಿ.ಎಸ್. ಅರಸನಾಳ ಮಾತನಾಡಿ, ಪಂಚವಟಿ ಗಿಡಗಳು ವೈಜ್ಞಾನಿಕವಾಗಿ ಮಹತ್ವ ಪಡೆದುಕೊಂಡಿವೆ. ಬಿಲ್ವ, ಬನ್ನಿ, ಬೇವು, ಅರಳೆ ಮತ್ತು ಅತ್ತಿ ಇವುಗಳೇ ಪಂಚವಟಿ ಮರಗಳು. ಇವುಗಳನ್ನು ಒಂದೇ ದೊಡ್ಡದಾದ ಗುಂಡಿ ತೆಗೆದು ಎಲ್ಲವನ್ನೂ ಕೂಡಿಯೋ ನೆಡುವುದು ಅಥವಾ 4ರಿಂದ 5 ಅಡಿ ಅಂತರದಲ್ಲಿ ಸಾಲಾಗಿ 5 ಮರಗಳನ್ನು ಬೆಳೆಸಬಹುದು. ಪಂಚವಟಿ ವ್ಯಾಪ್ತಿಯ ಗಿಡ, ಮರಗಳು ಪರಿಸರ ಸಂರಕ್ಷಣೆಯಲ್ಲಿ ಅತ್ಯಂತ ಪ್ರಮುಖವಾದ ಪಾತ್ರ ವಹಿಸುತ್ತವೆ. ಈ ಮರಗಳಿಗೆ ಶಬ್ದ ಮಾಲಿನ್ಯ ತಡೆಗಟ್ಟುವ ಶಕ್ತಿ ಸಹ ಇದೆ. ಆದ್ದರಿಂದ ಎಲ್ಲರೂ ಶಾಲಾ ಆವರಣದಲ್ಲಿ ಪಂಚವಟಿ ಗಿಡಗಳನ್ನು ಕಾಳಜಿ ಪೂರ್ವಕವಾಗಿ ಬೆಳೆಸಿದರೆ ಶುದ್ದವಾದ ಪರಿಸರ ನಿರ್ಮಾಣ ಮಾಡಿದಂತಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಚಿನ್ನದ ಪದಕ ಪಡೆದ ಕಪ್ಪತ್ ಹಿಲ್ಸ್ ವಲಯ ಅರಣ್ಯಾಧಿಕಾರಿ ವೀರೇಂದ್ರ ಮರಿಬಸಣ್ಣವರ, ಗೋಡಂಬಿ ಬೆಳೆಯಲ್ಲಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಈಶ್ವರಪ್ಪ ಹಂಚಿನಾಳ, ಉಪನಿರ್ದೇಶಕ ಎಂ.ಎ. ರಡ್ಡೇರ, ತಹಸೀಲ್ದಾರ್ ಧನಂಜಯ ಮಾಲಗತ್ತಿ ಅವರನ್ನು ಗೌರವಿಸಲಾಯಿತು.
ಪ್ರಾರಂಭದಲ್ಲಿ ವಿದ್ಯಾರ್ಥಿಗಳಿಂದ ವಚನ ನೃತ್ಯ ಜರುಗಿತು. ಗಂಗಾಧರ ಅಣ್ಣಿಗೇರಿ ಸ್ವಾಗತಿಸಿದರು. ಗುಡದಪ್ಪ ಲಿಂಗಶೆಟ್ಟರ ಕಾರ್ಯಕ್ರಮ ನಿರೂಪಿಸಿದರು.