ಉಡುಪಿ ಕೃಷ್ಣನಿಗೆ ಪಾರ್ಥಸಾರಥಿ ಸುವರ್ಣ ರಥ ನಿರ್ಮಾಣಕ್ಕೆ ಚಾಲನೆ

KannadaprabhaNewsNetwork | Published : Jun 30, 2025 12:34 AM

ಉಡುಪಿ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಸನ್ಯಾಸ ಸ್ವೀಕಾರ ಸುವರ್ಣ ಮಹೋತ್ಸವ (೫೦ ವರ್ಷ) ಅಂಗವಾಗಿ, ಅವರು ಶ್ರೀಕೃಷ್ಣನಿಗೆ ಸಮರ್ಪಿಸಲು ಉದ್ದೇಶಿಸಿರುವ ಪಾರ್ಥಸಾರಥಿ ಚಿನ್ನದ ರಥ ನಿರ್ಮಾಣಕ್ಕೆ ಭಾನುವಾರ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಸನ್ಯಾಸ ಸ್ವೀಕಾರ ಸುವರ್ಣ ಮಹೋತ್ಸವ (೫೦ ವರ್ಷ) ಅಂಗವಾಗಿ, ಅವರು ಶ್ರೀಕೃಷ್ಣನಿಗೆ ಸಮರ್ಪಿಸಲು ಉದ್ದೇಶಿಸಿರುವ ಪಾರ್ಥಸಾರಥಿ ಚಿನ್ನದ ರಥ ನಿರ್ಮಾಣಕ್ಕೆ ಭಾನುವಾರ ಚಾಲನೆ ನೀಡಲಾಯಿತು.ಮಂತ್ರಾಲಯ ರಾಘವೇಂದ್ರ ಮಠಾಧೀಶ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರು ಈ ರಥ ನಿರ್ಮಾಣಕ್ಕೆ ಚಾಲನೆ ನೀಡಿದರು. ನಂತರ ಸಂದೇಶ ನೀಡಿದ ಶ್ರೀಗಳು, ಅರ್ಜುನನ್ನು ನಿಮಿತ್ತವಾಗಿಟ್ಟುಕೊಂಡು ಕರ್ತವ್ಯ ಪ್ರಜ್ಞೆಯನ್ನು ಜನಮಾನಸದಲ್ಲಿ ಮೂಡಿಸಿದ ಶ್ರೀಕೃಷ್ಣನ ನೆಲೆವೀಡಾದ ಉಡುಪಿಗೂ ಮಂತ್ರಾಲಯ ಮಠಕ್ಕೂ ಅವಿನಾಭಾವ ಸಂಬಂಧವಿದೆ. ಪುತ್ತಿಗೆ ಸ್ವಾಮಿಗಳೂ ಶ್ರೀ ರಾಘವೇಂದ್ರ ಸ್ವಾಮಿಯ ಆರಾಧಕರು. ಉಡುಪಿ ಕೃಷ್ಣಮಠದ ಎಲ್ಲ ಕಾರ್‍ಯಕ್ರಮಗಳಲ್ಲೂ ಮಂತ್ರಾಲಯ ಮಠ ಈ ಹಿಂದಿನಿಂದಲೂ ಸಹಕಾರ ನೀಡುತ್ತಾ ಬಂದಿದೆ ಎಂದರು.ಮಂತ್ರಾಲಯ ಶ್ರೀಗಳು ಈ ಪಾರ್ಥಸಾರಥಿ ಸುವರ್ಣ ರಥ ನಿರ್ಮಾಣ ಕಾರ್ಯಕ್ಕೆ ಮಂತ್ರಾಲಯ ಮಠ ವತಿಯಿಂದ ೧೦ ಲಕ್ಷ ರು.ಗಳ ದೇಣಿಗೆಯನ್ನು ಪುತ್ತಿಗೆ ಶ್ರೀಗಳಿಗೆ ಹಸ್ತಾಂತರಿಸಿದರು. ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಉಡುಪಿಯ ಕೃಷ್ಣ ಬಾಲಕೃಷ್ಣ. ಮಕ್ಕಳಿಗೆ ತಿಂಡಿ ಹಾಗೂ ಆಟಿಕೆಗಳ ಬಗ್ಗೆ ಹೆಚ್ಚು ಪ್ರೀತಿ. ಉಡುಪಿಯ ಶ್ರೀಕೃಷ್ಣ ಉತ್ಸವ ಪ್ರಿಯ. ನಮ್ಮ ಚತುರ್ಥ ಪರ್‍ಯಾಯ ವಿಶ್ವ ಗೀತಾ ಪರ್‍ಯಾಯವಾಗಿರುವುದರಿಂದ ಗೀತೆಯ ಪ್ರಜ್ಞೆ ಜಾಗತಿಕಗೊಳಿಸುವ ಧ್ಯೋತಕವಾಗಿ ಗೀತೆ ಬೋಧಿಸುವ ಪಾರ್ಥಸಾರಥಿ ಚಿನ್ನದರಥವನ್ನು ನಿರ್ಮಿಸಲುದ್ದೇಶಿಸಿದ್ದೇವೆ ಎಂದರು.

ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು. ಶಾಸಕರಾದ ಯಶಪಾಲ್ ಸುವರ್ಣ ಮತ್ತು ಸುರೇಶ ಶೆಟ್ಟಿ, ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ.ಎಚ್. ಎಸ್. ಬಲ್ಲಾಳ್, ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ, ಸಮಾಜಸೇವಕರಾದ ಯೋಗೀಶ ಶೆಟ್ಟಿ ಕಾಪು, ಡಾ.ದೇವಿಪ್ರಸಾದ ಶೆಟ್ಟಿ ಬೆಳಪು ಮತ್ತು ವಿದ್ವಾಂಸ ಗಯಾ ರಾಮಾಚಾರ್‍ಯ, ರಮ್ಯ ಶ್ರೀನಿಧಿ ಕೊಪ್ಪ ಇದ್ದರು.ವಾದಿರಾಜ ಸಂಶೋಧನ ಕೇಂದ್ರದ ನಿರ್ದೇಶಕ ಡಾ.ಗೋಪಾಲಾಚಾರ್ ಸ್ವಾಗತಿಸಿ, ನಿರೂಪಿಸಿದರು. ಪುತ್ತಿಗೆ ಮಠದ ದಿವಾನ ನಾಗರಾಜ ಆಚಾರ್‍ಯ, ಕಾರ್ಯದರ್ಶಿ ಪ್ರಸನ್ನಾಚಾರ್‍ಯ ಮೊದಲಾದವರಿದ್ದರು.