ಬ್ಯಾಡಗಿ: ರೈತರು ತಮ್ಮ ಬೆಳೆಯನ್ನು ಸಂರಕ್ಷಿಸಿ ಮೌಲ್ಯವರ್ಧನೆ ಮೂಲಕ ಮಾರಾಟ ಮಾಡಿದಾಗ ಆರ್ಥಿಕವಾಗಿ ಸದೃಢರಾಗಲು ಸಾಧ್ಯ. ರೈತ ಸಮುದಾಯಕ್ಕೆ ನೆರವಾಗುವ ನಿಟ್ಟಿನಲ್ಲಿ ರಾಜ್ಯ ಮಟ್ಟದಲ್ಲಿ ಹೊಸದಾಗಿ ಶೀತಲೀಕರಣ ಘಟಕ ನಿರ್ಮಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ಹನುಮನಮಟ್ಟಿ ತೋಟಗಾರಿಕೆ ಕ್ಷೇತ್ರದಲ್ಲಿ 2 ಸಾವಿರ ಟನ್ ಸಾಮರ್ಥ್ಯದ ₹10 ಕೋಟಿ ವೆಚ್ಚದ ಶೀತಲೀಕರಣ ಘಟಕದ ಕಟ್ಟಡ ನಿರ್ಮಾಣಕ್ಕೆ ಭಾನುವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಒದಗಿಸಲು ಸಾಧ್ಯವಾಗಿಲ್ಲ. ರೈತನ ಬೆಳೆಗೆ ಸರಿಯಾದ ಮೌಲ್ಯವರ್ಧನೆ ದೊರೆತಲ್ಲಿ ಆರ್ಥಿಕ ಸಬಲರಾಗಬಹುದು. ದಾಳಿಂಬೆ, ದ್ರಾಕ್ಷಿ, ನಿಂಬೆ, ಮೆಣಸು, ವಿವಿಧ ಹಣ್ಣು, ಹೂವುಗಳು ರಫ್ತಾಗುತ್ತಿವೆ. ಇದಕ್ಕಾಗಿ ಸರ್ಕಾರದಿಂದಲೇ ಕೋಲ್ಡ್ ಸ್ಟೋರೇಜ್ ನಿರ್ಮಿಸಲು ಮುಂದಾಗಿದ್ದೇವೆ. ರಾಜ್ಯದಲ್ಲಿ ಈಗ 25 ಸರ್ಕಾರಿ ಕೋಲ್ಡ್ ಸ್ಟೋರೇಜ್‌ಗಳಿದ್ದು, ತೋಟಗಾರಿಕೆ ಇಲಾಖೆಯಿಂದ ಹೊಸದಾಗಿ 3 ಘಟಕಗಳನ್ನು ನಿರ್ಮಿಸಲಾಗುತ್ತದೆ. ಈ ಪೈಕಿ ಹಾವೇರಿ ಜಿಲ್ಲೆಗೆ 2 ಮಂಜೂರಾಗಿವೆ ಎಂದರು.ಜಿಲ್ಲೆಗೆ ಎಥೆನಾಲ್ ಘಟಕ: ಕಬ್ಬಿನ ಬೆಳೆಗೆ ಹೆಚ್ಚು ನೀರು ಅಗತ್ಯವಾಗಿದ್ದು, ತೋಟಗಾರಿಕೆ ಮಿಶ್ರ ಬೆಳೆಗೆ ಮುಂದಾಗಬೇಕಿದೆ. 80ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳಲ್ಲಿ ಎಥೆನಾಲ್ ಸೇರಿದಂತೆ ಬೇರೆ ಬೇರೆ ಉತ್ಪನ್ನಗಳು ಸಿದ್ಧವಾಗುತ್ತಿವೆ. ಹಾವೇರಿ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಯ ಜತೆ ಗೋವಿನಜೋಳದ ಬೆಳೆ ಹೆಚ್ಚಾಗಿದ್ದು, ರೈತರಿಗೆ ಉತ್ತಮ ಫಸಲು ಬರುತ್ತಿದೆ. ಜಿಲ್ಲೆಗೆ ಹೊಸದಾಗಿ 3 ಎಥೆನಾಲ್ ಘಟಕ ಮಂಜೂರಾಗಿದ್ದು, ಶೀಘ್ರದಲ್ಲೇ ಕಾರ್ಯಾರಂಭವಾಗಲಿದೆ. ಇದರಿಂದ ರೈತರಿಗೆ ಇನ್ನಷ್ಟು ಲಾಭವಾಗಲಿದೆ ಎಂದರು.
ಅತಿ ಹೆಚ್ಚು ಮೆಣಸಿನಕಾಯಿ ರಫ್ತು: ಅರಣ್ಯ ಅಭಿವೃದ್ಧಿ ನಿಗಮ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ರಾಜ್ಯದಲ್ಲಿ ಅತಿ ಹೆಚ್ಚು ಮೆಣಸಿನಕಾಯಿ ರಪ್ತು ಮಾಡುವ ಹಾಗೂ ವಹಿವಾಟು ನಡೆಸುವ ಬ್ಯಾಡಗಿ ವ್ಯಾಪ್ತಿಯಲ್ಲಿ 31 ಕೋಲ್ಡ್ ಸ್ಟೋರೇಜ್‌ಗಳಿವೆ. ಆಂಧ್ರಪ್ರದೇಶದ ಗುಂಟೂರು ಹೊರತುಪಡಿಸಿ, ಬ್ಯಾಡಗಿಯಲ್ಲಿ ಖಾಸಗಿ ಕೋಲ್ಡ್ ಸ್ಟೋರೇಜ್‌ಗಳಿವೆ. ಹಾವೇರಿಯಲ್ಲಿ ಟೊಮೆಟೋ, ರಾಣಿಬೆನ್ನೂರಲ್ಲಿ ಬೀಜೋತ್ಪಾದನೆ, ಹಾನಗಲ್ಲ ಮಾವು, ಬತ್ತ, ಬ್ಯಾಡಗಿಯಲ್ಲಿ ಮೆಣಸಿನಕಾಯಿ ಮತ್ತು ಶುಂಠಿ ಇನ್ನಿತರ ಬೆಳೆಗಳಿದ್ದು, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಿಸಲಾಗುತ್ತಿದೆ. ₹15 ಕೋಟಿ ವೆಚ್ಚದಲ್ಲಿ ಅಸುಂಡಿ ಮೆಗಾ ಮಾರುಕಟ್ಟೆಯಲ್ಲಿ ರೇಷ್ಮೆ ಗೂಡು ಮಾರುಕಟ್ಟೆಗೆ ಚಾಲನೆ ನೀಡಲಾಗಿದೆ. ಜಿಲ್ಲೆಯ ಅಭಿವೃದ್ಧಿಗೆ ಈಗಿನ ಉಸ್ತುವಾರಿ ಮಂತ್ರಿಗಳು ವಿಶೇಷ ಕಾಳಜಿ ತೋರಿದ್ದಾರೆ ಎಂದರು.ಪಂಚ ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ, ಸಿಇಒ ಅಕ್ಷಯಶ್ರೀಧರ, ಗ್ರಾಪಂ ಅಧ್ಯಕ್ಷೆ ಮಲ್ಲವ್ವ ಕಂಬಳಿ, ಉಪಾಧ್ಯಕ್ಷೆ ಸಾವಿತ್ರವ್ವ ಲಮಾಣಿ, ಹಾವೇರಿ ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ, ಕೆಸಿಸಿ ಬ್ಯಾಂಕ್ ನಿರ್ದೇಶಕರ ಚನ್ನಬಸಪ್ಪ ಹುಲ್ಲತ್ತಿ, ಕಾಂಗ್ರೆಸ್ ಮುಖಂಡ ಆನಂದಸ್ವಾಮಿ ಗಡ್ಡದೇವರಮಠ, ದಾನಪ್ಪ ಚೂರಿ, ಬಸವರಾಜ ಸವಣೂರು, ಲಿಂಗರಾಜ ಕುಮ್ಮೂರ, ತೋಟಗಾರಿಕೆ ಜಿಲ್ಲಾ ನಿರ್ದೇಶಕ ಸಿದ್ದರಾಮಯ್ಯ ಭರಗಿಮಠ ಇದ್ದರು.