35 ಕೋಟಿ ವೆಚ್ಚದಲ್ಲಿ ರಿಂಗ್‌ ರೋಡ್‌ ನಿರ್ಮಾಣ

KannadaprabhaNewsNetwork | Published : Jul 31, 2024 1:00 AM

ಸಾರಾಂಶ

ಶಿರಾ ಸುತ್ತ ಸುಮಾರು 350 ಕೋಟಿ ವೆಚ್ಚದಲ್ಲಿ 15 ಕಿ.ಮೀ. ರಿಂಗ್ ರೋಡ್ ನಿರ್ಮಾಣ

ಕನ್ನಡಪ್ರಭ ವಾರ್ತೆ ಶಿರಾ ಶಿರಾ ನಗರದ ಮೂಲಕ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿರುವುದರಿಂದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಶಿರಾ ಸುತ್ತ ಸುಮಾರು 350 ಕೋಟಿ ವೆಚ್ಚದಲ್ಲಿ 15 ಕಿ.ಮೀ. ರಿಂಗ್ ರೋಡ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಡಾ.ಟಿ.ಬಿ.ಜಯಚಂದ್ರ ಹೇಳಿದರು.

ನಗರದ ಶಾದಿ ಮಹಲ್ ನಲ್ಲಿ ಡಾ.ಟಿ.ಬಿ.ಜಯಚಂದ್ರ ಅವರ ಹುಟ್ಟುಹಬ್ಬದ ಪ್ರಯುಕ್ತ ಅಲ್ಲಾಭಕ್ಷ ಪ್ಯಾರು ಸ್ಮರಣಾರ್ಥ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನನ್ನನ್ನು ಜನತೆ ಈ ಬಾರಿ ಶಾಸಕನಾಗಿ ಆಯ್ಕೆ ಮಾಡಿದ್ದರ ಫಲವಾಗಿ ನಾನು ಶಿರಾವನ್ನು ನನ್ನದೇ ಆದ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಕಂಕಣಬದ್ಧನಾಗಿದ್ದೇನೆ. ಶಿರಾ ಗುಮ್ಮನಹಳ್ಳಿಯಿಂದ, ಅರೇಹಳ್ಳಿ ಮುಖೇನ ಮಧುಗಿರಿ ರಸ್ತೆಯಿಂದ ಬೈರೇನಹಳ್ಳಿ ಕ್ರಾಸ್ವರೆಗೂ 1000 ಕೊಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿಗಾಗಿ ಅನುದಾನ ತಂದಿದ್ದೇನೆ. ಕರ್ನಾಟಕದಲ್ಲಿ ಯಾವ ರಸ್ತೆಗೂ ಇಷ್ಟು ಹಣ ಕೊಟ್ಟಿಲ್ಲ ಎಂದರು. ತುಮಕೂರಿನಿಂದ ದಾವಣಗೆರೆಗೆ ಹೊಗುವ ರೈಲ್ವೆ ಯೋಜನೆ ತುಮಕೂರಿನಲ್ಲೂ ಪ್ರಾರಂಭವಾಗಿಲ್ಲ ದಾವಣಗೆರೆಯಲ್ಲೂ ಪ್ರಾರಂಭವಾಗಿಲ್ಲ. ಆದರೆ ಇನ್ನೊಂದು ತಿಂಗಳಲ್ಲಿ ಶಿರಾದಲ್ಲಿ ಮಾತ್ರ ಕಾಮಗಾರಿ ಪ್ರಾರಂಭವಾಗುತ್ತದೆ. ಇದಕ್ಕಾಗಿ 1030 ಕೋಟಿ ಹಣ ಬಿಡುಗಡೆಯಾಗಿದೆ ಎಂದರು. ಶಿರಾದಲ್ಲಿ ಎಲ್ಲಾ ಬಡವರಿಗೂ ನಿವೇಶನ ಕೊಡಲು ತೀರ್ಮಾನ ಮಾಡಿದ್ದೇನೆ. ಇನ್ನೆರಡು ತಿಂಗಳಲ್ಲಿ ಶಿರಾ ನಗರದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳನ್ನು ಕರೆದು ಅವರ ಮೂಲಕ ಸುಮಾರು 10000 ನಿವೇಶನ ಕೊಡುವ ಕೆಲಸ ಮಾಡುತ್ತೇನೆ ಎಂದರು.

ಇದೇ ವೇಳೆ ಮಾಜಿ ನಗರಸಭಾ ಸದಸ್ಯರಾದ ದಿವಂಗತ ಅಲ್ಲಾಭಕ್ಷ ಪ್ಯಾರು ಒಡನಾಡ ಸ್ಮರಿಸಿದ ಜಯಚಂದ್ರ, ಪ್ಯಾರು ಅವರು ಬಡವರ ಪರ ಚಿಂತನೆ ಉಳ್ಳವರಾಗಿದ್ದರು. ಅವರ ಮಕ್ಕಳು ಸಹ ಜನರ ಸೇವೆ ಮಾಡುತ್ತಿದ್ದಾರೆ. ನನಗೆ ಒಡಹುಟ್ಟಿದ ಸಹೋದರನ ರೀತಿಯಲ್ಲಿ ಹಲವಾರು ವಿಷಯಗಳಲ್ಲಿ ಪ್ಯಾರು ಸಲಹೆ ನೀಡುತ್ತಿದ್ದರು ಎಂದರು.

ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷೆ ಪೂಜಾ ಪೆದ್ದರಾಜು, ಸದಸ್ಯರಾದ ಜೀಷಾನ್ ಮೊಹಮದ್, ಬುರಾನ್ ಮೊಹಮದ್, ಎಸ್.ಎಲ್.ರಂಗನಾಥ್, ಅಜಯ್ ಕುಮಾರ್, ಎಂ.ಡಿ.ಜಾಫರ್, ಫಯಾಜ್, ರಫಿಉಲ್ಲಾ, ಇರ್ಷಾದ್ ಪಾಷ, ರೆಹಮತ್ ಉಲ್ಲಾ ಶರೀಪ್, ಧ್ರುವಕುಮಾರ್, ಪಿ.ಆರ್.ಮಂಜುನಾಥ್, ನೂರುದ್ದೀನ್, ಹಾರೋಗೆರೆ ಮಹೇಶ್, ಎಚ್.ಗುರುಮೂರ್ತಿ ಗೌಡ, ಸತ್ಯನಾರಾಯಣ, ಸಲ್ಮಾನ್, ಮಜರ್, ಭಾನುಪ್ರಕಾಶ್, ನರಸಿಂಹಯ್ಯ, ಅಶೋಕ್, ಮುಷೀರ್, ಸೇರಿದಂತೆ ಹಲವರು ಹಾಜರಿದ್ದರು.

Share this article