ಚಿಕ್ಕಮಗಳೂರಲ್ಲಿ ಸೋಲಾರ್ ಪಾರ್ಕ್‌ ನಿರ್ಮಾಣ: ಸಚಿವ ಜಾರ್ಜ್‌

KannadaprabhaNewsNetwork | Published : Nov 2, 2023 1:00 AM

ಸಾರಾಂಶ

ಚಿಕ್ಕಮಗಳೂರಲ್ಲಿ ಸೋಲಾರ್ ಪಾರ್ಕ್‌ ನಿರ್ಮಾಣ: ಸಚಿವ ಜಾರ್ಜ್‌
180 ಎಕರೆ ಸರ್ಕಾರಿ ಜಾಗ ಗುರುತು । ವಿದ್ಯುತ್ ವಿತರಣೆ ಕುರಿತು ಇಂಧನ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ಚಿಕ್ಕಮಗಳೂರಿನಲ್ಲಿ ಸೋಲಾರ್ ಪಾರ್ಕ್ ನಿರ್ಮಾಣ ಮಾಡಲು 180 ಎಕರೆ ಸರ್ಕಾರಿ ಜಾಗ ಗುರುತಿಸ ಲಾಗಿದೆ ಎಂದು ರಾಜ್ಯ ಇಂಧನ ಸಚಿವ ಕೆ.ಜೆ. ಜಾರ್ಜ್‌ ಹೇಳಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಚಿಕ್ಕಮಗಳೂರು ಜಿಲ್ಲೆಯ ವಿದ್ಯುತ್ ವಿತರಣೆ ಕುರಿತಂತೆ ಇಂಧನ ಇಲಾಖೆ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಚಿಕ್ಕಮಗಳೂರಿನಲ್ಲಿ ಸೋಲಾರ್‌ ಪಾರ್ಕ್‌ ನಿರ್ಮಾಣ ಮಾಡಲು ಈಗಾಗಲೇ ಕ್ಯಾಬಿನೇಟ್‌ನಲ್ಲಿ ಅನುಮೋದನೆಯಾಗಿದ್ದು ಇಲ್ಲಿ 100 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಬಹುದಾಗಿದೆ. ಖಾಸಗಿ ಜಮೀನು ಸಿಕ್ಕರೆ ಅದನ್ನು ಗುತ್ತಿಗೆಗೆ ಪಡೆದು ಸೋಲಾರ್ ಪಾರ್ಕ್ ನಿರ್ಮಿಸಲು ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿದರು. ರೈತರಿಗೆ ಕೃಷಿ ಚಟುವಟಿಕೆಗೆ 5 ಗಂಟೆ ವಿದ್ಯುತ್ ನೀಡುವಂತೆ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದ್ದು, ಅದರಂತೆ ಥ್ರೀ ಫೇಸ್ ವಿದ್ಯುತ್ ನೀಡುವಂತೆ ಸಚಿವರು ಇಂಧನ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ನಗರ ಪ್ರದೇಶಗಳಲ್ಲಿ ವಿದ್ಯುತ್ ಕಡಿತದ ಬಗ್ಗೆ ಸಮಸ್ಯೆ ಇಲ್ಲ, ಹಳ್ಳಿಗಳಲ್ಲಿ ಕೃಷಿ ಚಟುವಟಿಕೆಗಳಿಗೆ 5 ಗಂಟೆ ವಿದ್ಯುತ್ ನೀಡುವಂತೆ ಈಗಾಗಲೇ ಆದೇಶ ಹೊರಡಿಸಿದ್ದರೂ ಸಹ ದೂರುಗಳು ಬರುತ್ತಿವೆ. ಅಧಿಕಾರಿಗಳು ಸರ್ಕಾರದ ಆದೇಶದಂತೆ ಥ್ರೀ ಫೇಸ್‌ನಲ್ಲಿ 5 ಗಂಟೆ ವಿದ್ಯುತ್ ನೀಡಬೇಕು ಎಂದರು. ಸಂಪೂರ್ಣ ವಿದ್ಯುತ್ ಕಡಿತವಾಗುತ್ತಿದೆ ಎಂದು ದೂರುಗಳು ಬಂದರೂ ಸಹ ಅಧಿಕಾರಿಗಳು ಏಕೆ ಕ್ರಮ ವಹಿಸುತ್ತಿಲ್ಲ, ಏನಾದರೂ ಸಮಸ್ಯೆಗಳಿದ್ದರೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಿ ರೈತರಿಗೆ ವಿದ್ಯುತ್ ಸಮಸ್ಯೆಯಾಗದಂತೆ ಕ್ರಮ ವಹಿಸುವಂತೆ ಸೂಚಿಸಿದರು. ಅಕ್ರಮ ಸಕ್ರಮದಡಿ ಕಡೂರಿನಲ್ಲಿ 8332 ಅರ್ಜಿಗಳು ಸಕ್ರಮಕ್ಕಾಗಿ ಬಂದಿವೆ. ಮೂಡಿಗೆರೆ ಹಾಗೂ ಚಿಕ್ಕಮಗಳೂರಿನಲ್ಲಿ ಅಕ್ರಮ ಸಕ್ರಮಕ್ಕೆ ಸಂಬಂಧಿಸಿದಂತೆ ದೂರುಗಳು ಇಲ್ಲ ಎಂದು ಮೆಸ್ಕಾಂ ಕಾರ್ಯ ಪಾಲಕ ಅಭಿಯಂತರರು ಸಭೆಗೆ ಮಾಹಿತಿ ನೀಡಿದರು. ಅಕ್ರಮ ಸಕ್ರಮದಡಿ ಅರ್ಜಿ ಹಾಕಿರುವವರಿಗೆ 500 ಮೀಟರ್‌ಗಿಂತ ಕಡಿಮೆಯಿದ್ದರೆ ಅಂತಹವರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬಹುದು. 500 ಮೀಟರ್‌ಗಿಂತ ಜಾಸ್ತಿಯಿದ್ದರೆ ಸೋಲಾರ್ ವ್ಯವಸ್ಥೆ ಕಲ್ಪಿಸ ಬಹುದು. ಸೋಲಾರ್ ವಿದ್ಯುತ್ ಉತ್ಪಾದನೆಗೆ ಸರ್ಕಾರ ಶೇ.80 ರಷ್ಟು ಸಬ್ಸಿಡಿ ನೀಡುತ್ತದೆ. ರೈತರು ಇದರ ಉಪಯೋಗ ಪಡೆಯುವಂತೆ ಹೇಳಿದರು. ಅಧಿಕಾರಿಗಳು ಯಾವ ಸಮಯಕ್ಕೆ ವಿದ್ಯುತ್ ಕಡಿತಗೊಳಿಸಲಾಗುತ್ತದೆ ಎಂಬುದರ ಕುರಿತು ವಾಟ್ಸ್ ಆಪ್ ಹಾಗೂ ಎಸ್ಎಂ ಎಸ್ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಸಾರ್ವಜನಿಕರಿಂದ ಇಲಾಖೆಗೆ ಒಳ್ಳೆಯ ಹೆಸರು ಬರುವ ರೀತಿಯಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ತಿಳಿಸಿದರು. ಸಭೆಯಲ್ಲಿ ಶಾಸಕ ಎಚ್.ಡಿ. ತಮ್ಮಯ್ಯ, ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹಾಗೂ ಇಂಧನ ಇಲಾಖೆ ಅಧಿಕಾರಿಗಳು ಹಾಜರಿದ್ದರು. 1 ಕೆಸಿಕೆಎಂ 6 ಚಿಕ್ಕಮಗಳೂರಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌ ಅಧ್ಯಕ್ಷತೆಯಲ್ಲಿ ವಿದ್ಯುತ್ ವಿತರಣೆ ಕುರಿತು ಇಂಧನ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಯಿತು.

Share this article