ಸರ್ಕಾರಿ ಹಾಸ್ಟೆಲ್, ಪ್ರೌಢಶಾಲೆ ಪಕ್ಕದಲ್ಲೇ ಸೋಲಾರ್ ಘಟಕ ನಿರ್ಮಾಣ: ವಿರೋಧ

KannadaprabhaNewsNetwork |  
Published : Feb 08, 2025, 12:31 AM IST
ಕೂಡ್ಲಿಗಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ ಸಿಐಟಿಯು ಸಂಘಟನೆ ಪದಾಧಿಕಾರಿಗಳು ಪ್ರವಾಸಿ ಮಂದಿರದ ಬಳಿ ತೆರಳಿ  ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಸಮ್ಮುಖದಲ್ಲಿಯೇ ತಹಶೀಲ್ದಾರ್ ಎಂ.ರೇಣುಕಾ ವಿರುದ್ದ ಘೋಷಣೆ ಕೂಗಿ ತಹಶೀಲ್ದಾರ್ ಕಾರ್ಯವೈಖರಿ ಪ್ರಶ್ನಿಸಿದರು. ನಂತರ ಶಾಸಕರಿಗೆ  ಮನವಿ ಸಲ್ಲಿಸಿದರು.========== | Kannada Prabha

ಸಾರಾಂಶ

ತಾಲೂಕಿನಲ್ಲಿ ಸೋಲಾರ್ ಘಟಕಗಳು ಎಲ್ಲೆಂದರಲ್ಲೇ ತಲೆ ಎತ್ತುತ್ತಿವೆ.

ಕೂಡ್ಲಿಗಿ: ತಾಲೂಕಿನ ಎಂ.ಬಿ. ಅಯ್ಯನಹಳ್ಳಿಯಲ್ಲಿ ಸರ್ಕಾರಿ ಪ್ರೌಢಶಾಲೆ, ಹಾಸ್ಟೆಲ್ ಪಕ್ಕದಲ್ಲಿ ಸೋಲಾರ್ ಘಟಕ ಸ್ಥಾಪನೆಗೆ ಆದೇಶ ನೀಡಿರುವುದನ್ನು ವಿರೋಧಿಸಿ ಸಿಐಟಿಯು ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಪದಾಧಿಕಾರಿಗಳು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಮೆರವಣಿಗೆ ಮೂಲಕ ಪ್ರವಾಸಿ ಮಂದಿರದ ಬಳಿಗೆ ಆಗಮಿಸಿದಾದ ಸಂಘಟಕರು, ಕಾನೂನು ಉಲ್ಲಂಘಿಸಿ ಆದೇಶ ನೀಡುತ್ತಿರುವ ತಹಶೀಲ್ದಾರ್ ಎಂ.ರೇಣುಕಾ ಕಾರ್ಯವೈಖರಿ ವಿರುದ್ಧ ಶಾಸಕರ ಸಮ್ಮುಖದಲ್ಲಿಯೇ ಘೋಷಣೆ ಕೂಗಿದರು.ಫೆಡರೇಷನ್ ಕಾರ್ಯದರ್ಶಿ ಗುನ್ನಳ್ಳಿ ರಾಘವೇಂದ್ರ ಮಾತನಾಡಿ, ತಾಲೂಕಿನಲ್ಲಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವಂಥ ಸೋಲಾರ್, ಗಾಳಿಯಂತ್ರಗಳ ಅಳವಡಿಕೆಗೆ ಕೂಡ್ಲಿಗಿ ತಹಶೀಲ್ದಾರ್ ಎಂ.ರೇಣುಕಾ ಮತ್ತು ಗ್ರಾಪಂ ಅಧಿಕಾರಿಗಳು ಬೇಕಾಬಿಟ್ಟಿಯಾಗಿ ಅನುಮತಿ ನೀಡುತ್ತಿದ್ದಾರೆ. ಇದರಿಂದ ರೈತರು ತಮ್ಮ ಭೂಮಿಯನ್ನು ಹಣದ ಆಸೆಗೆ ಕಳೆದುಕೊಳ್ಳುವಂತಾಗಿದೆ. ಎಂ.ಬಿ. ಅಯ್ಯನಹಳ್ಳಿ ಸರ್ಕಾರಿ ಪ್ರೌಢಶಾಲೆ ಮತ್ತು ವಸತಿನಿಲಯದ ಪಕ್ಕದಲ್ಲಿ ಸೋಲಾರ್ ಘಟಕ ನಿರ್ಮಿಸಲು ಆದೇಶ ನೀಡಿರುವುದರಿಂದ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಹಾಗಾಗಿ, ತಕ್ಷಣವೇ ಆದೇಶ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿದ ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ಮಾತನಾಡಿ, ತಾಲೂಕಿನಲ್ಲಿ ಸೋಲಾರ್ ಘಟಕಗಳು ಎಲ್ಲೆಂದರಲ್ಲೇ ತಲೆ ಎತ್ತುತ್ತಿವೆ. ಇದರಿಂದ ರೈತರು ತಮ್ಮ ಜಮೀನುಗಳನ್ನು ಕಳೆದುಕೊಳ್ಳುವಂತಾಗಿದೆ. ನಿಯಮ ಮೀರಿ ಅನುಮತಿ ನೀಡುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಎಂ.ಬಿ. ಅಯ್ಯನಹಳ್ಳಿ ಬಳಿ ಸೋಲಾರ್ ಘಟಕಕ್ಕೆ ಆದೇಶ ನೀಡಿರುವುದನ್ನು ಪರಿಶೀಲಿಸಿ ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ತಾಪಂ ಇಒ ಕೆ.ನರಸಪ್ಪ, ತಹಸೀಲ್ದಾರ್ ಎಂ.ರೇಣುಕಾ, ಸಿಪಿಐ ಸುರೇಶ್ ತಳವಾರ್, ಪಪಂ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ, ಡಿ.ನಾಗರಾಜ, ಟಿ.ಮಂಜುನಾಥ, ಪಿ.ಗುರುಸ್ವಾಮಿ, ಅಜ್ಜಪ್ಪ, ಮುತ್ತಪ್ಪ, ಅಭಿಷೇಕ, ಕೆ.ಶಿವರಾಜ, ಶಿವಣ್ಣ, ಮಹಾಂತೇಶ್, ಡಿ.ಎ. ಸುದೀಪ್, ಅರುಣ, ಡಿ.ಬಸವರಾಜ ಇದ್ದರು.

PREV

Recommended Stories

ಟಿಕೆಟ್ ಆಯ್ತು, ಮಲ್ಟಿಪ್ಲೆಕ್ಸ್‌ಗಳಲ್ಲಿ ತಿಂಡಿ ದರ ಇಳಿಸಿ : ಸಿನಿ ಪ್ರಿಯರು
ಮಂಗಳಮುಖಿಯರು, ಮಹಿಳೆಯರಿಗೆ ಸರ್ಕಾರದಿಂದಲೇ ಉಚಿತ ಆಟೋ