ಶಿವಕುಮಾರ ಕುಷ್ಟಗಿ ಗದಗ
ಗಾಳಿ ವಿದ್ಯುತ್ ಕಂಪನಿಯ ಅವಾಂತರದಿಂದಾಗಿ ಮಳೆಗೆ ಕೊಚ್ಚಿಹೋಗಿರುವ ತನ್ನ ಭೂಮಿಗೆ ಪರಿಹಾರ ಕೊಡಿಸುವಂತೆ ಮನವಿ ಹಿಡಿದು ಬಂದ ರೈತನನ್ನು ಪೊಲೀಸರು, ತಹಸೀಲ್ದಾರರು ಸೇರಿ ಜಿಲ್ಲಾಧಿಕಾರಿ ಕಚೇರಿಗೆ ಅಟ್ಟಿದರೆ, ಇದೀಗ ಆ ಜಿಲ್ಲಾಧಿಕಾರಿಗಳು ಈ ಅನ್ನದಾತನನ್ನು ತಹಸೀಲ್ದಾರ ಬಳಿ ಹೋಗು ಎಂದು ಕಳಿಸುವ ಮೂಲಕ ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ. ಹೀಗೆ ಕಚೇರಿಗಳನ್ನು ಅಲೆದಾಡಿದ ಈ ಅನ್ನದಾತನಿಗೀಗ ದೇವರೇ ದಿಕ್ಕು ಎನ್ನುವಂತಾಗಿದೆ.
ಅನಧಿಕೃತ ರಸ್ತೆ ನಿರ್ಮಾಣ:ರೈತ ಹುಚ್ಚೀರಯ್ಯ ಬಳಗೇರಮಠ, ಅಬ್ಬಿಗೇರಿ ಗ್ರಾಮ ವ್ಯಾಪ್ತಿಯಲ್ಲಿ ಸರ್ವೇ ನಂಬರ್ 464/1ಎ+/1ಬಿ+1ಸಿ/3ಬ ನ, 3 ಎಕರೆ ಜಮೀನು ಹೊಂದಿದ್ದು, ವಿವಿಡ್ ರಿನಿವೇಬಲ್ ಪ್ರೈವೇಟ್ ಲಿ ಕಂಪನಿಯು ತನ್ನ ಬೃಹತ್ ವಾಹನಗಳನ್ನು ಕಪಂಡೊಯ್ಯಲು ಇವರ ಜಮೀನಿಗೆ ಹೊಂದಿಕೊಂಡು ಅನಧಿಕೃತ ರಸ್ತೆ ನಿರ್ಮಿಸಿದೆ.
ಈ ವಿಷಯವನ್ನು ದಾಖಲೆ ಸಮೇತ ವಿವಿಡ್ ರಿನಿವೇಬಲ್ ಪ್ರೈವೇಟ್ ಲಿ ಕಂಪನಿ ಅಧಿಕಾರಿಗಳಿಗೆ ಮನವರಿಕೆ ಮಾಡಿ, ಆಗಿರುವ ಹಾನಿಗೆ ಪರಿಹಾರ ನೀಡುವಂತೆ ಮಾಡಿದ ಮನವಿಗೆ ಸರಿಯಾಗಿ ಸ್ಪಂದಿಸದೇ ಇದ್ದಾಗ ರೈತ ಹುಚ್ಚೀರಯ್ಯ ರೋಣ ಪೊಲೀಸರು, ತಹಸೀಲ್ದಾರ ಗಮನಕ್ಕೆ ತಂದಿದ್ದಾರೆ. ಅವರು ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಸಲಹೆ ನೀಡಿದ್ದಾರೆ.
ಆದರೆ, ಈ ಕಂಪನಿಯ ಘಟಕ ಸ್ಥಾಪನೆ ಕಾರ್ಯಗಳೆಲ್ಲ ಮುಗಿಯುತ್ತ ಬಂದಿವೆ. ಒಂದೊಮ್ಮೆ ಕಂಪನಿಯ ಕಚೇರಿ ಬೇರೆಡೆ ಸ್ಥಳಾಂತರವಾದರೆಡೀ ಬಡ ರೈತ ದೂರದ ಬೆಂಗಳೂರು, ಮುಂಬೈ, ಪುಣೆಗೆ ಅಲೆಯಬೇಕಾದ ಸ್ಥಿತಿ ನಿರ್ಮಾಣವಾಗಲಿದೆ.
ನನಗೆ ಅನ್ಯಾಯವಾಗಿದೆ ಎಂದು ಹಲವಾರು ಬಾರಿ ಸ್ಥಳೀಯ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗದ ಹಿನ್ನೆಲೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದು, ಈಗ ಜಿಲ್ಲಾಡಳಿತ ತಾಲೂಕಾಡಳಿತಕ್ಕೆ ಪತ್ರ ಬರೆದಿದೆ. ತಾಲೂಕಾಡಳಿತಕ್ಕೆ ಪತ್ರ ತಲುಪಿ ತಿಂಗಳಾದರೂ ಯಾವುದೇ ಪ್ರಗತಿಯಾಗಿಲ್ಲ. ಈ ವಿಷಯದಲ್ಲಿ ನನಗೆ ತೀವ್ರ ಅನ್ಯಾಯವಾಗಿದೆ ಎಂದು ರೈತ ಹುಚ್ಚೀರಯ್ಯ ಬಳಿಗೇರಮಠ ಹೇಳಿದರು.