ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಬೂದನೂರು ಉತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಇಷ್ಟು ವರ್ಷಗಳಲ್ಲಿ ಮಂಡ್ಯ ದೊಡ್ಡ ಹಳ್ಳಿಯಾಗಿತ್ತು. ಮುಂದಿನ ಆರು ತಿಂಗಳಲ್ಲಿ ಮಂಡ್ಯ ನಗರವನ್ನು ವಿದೇಶಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಪಣ ತೊಟ್ಟಿದ್ದು, ಮಂಡ್ಯ ನಗರಕ್ಕೆ ರಿಂಗ್ ರಸ್ತೆ ನಿರ್ಮಾಣ, ಕ್ರೀಡಾಪಟುಗಳ ಆಶಯದಂತೆ ಅಂತಾರಾಷ್ಟ್ರೀಯ ಮಟ್ಟದ ಕ್ರೆಡಾಂಗಣ ಮತ್ತು ಜೆ.ಸಿ.ವೃತ್ತದಲ್ಲಿ ನಾಡಪ್ರಭು ಕೆಂಪೇಗೌಡ ಪ್ರತಿಮೆ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು.
ಮಂಡ್ಯ ನಗರ ಅಭಿವೃದ್ಧಿಗೆ ೨೦೦ ಕೋಟಿ ಅನುದಾನ ಬಿಡುಗಡೆಯಾಗಿದ್ದು, ಸುಸಜ್ಜಿತ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ರೈತರ ನೀರಾವರಿ ಸಮಸ್ಯೆ ನಿವಾರಿಸಲು ೨೩೦ ಕೋಟಿ ರು. ಅನುದಾನದಲ್ಲಿ ಕಾಲುವೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ನನ್ನ ಆಡಳಿತಾವಧಿಯಲ್ಲಿ ಸುವರ್ಣ ಮಂಡ್ಯ ಕಟ್ಟುವ ಕನಸಿದೆ ಎಂದರು.ಕೆರಗೋಡು ಶ್ರೀಪಂಚಲಿಂಗೇಶ್ವರ ದೇವಾಲಯವನ್ನು ನಂಜನಗೂಡು ಶ್ರೀಕಂಠೇಶ್ವರ ದೇವಾಲಯ ಮಾದರಿಯಲ್ಲಿ ಅಭಿವೃದ್ಧಿ ಮಾಡಲಾಗುವುದು. ಬಸರಾಳು ಹೋಬಳಿಯ ಅಭಿವೃದ್ಧಿಗೆ ೧೨೦೦ ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಿದ್ದು, ಕಾವೇರಿ ನದಿಯಿಂದ ನೀರಾವರಿ ಕಲ್ಪಿಸಲು ಸಂಕಲ್ಪ ಮಾಡಿರುವುದಾಗಿ ಹೇಳಿದರು.
ರೈತರು ಸಾಲಕ್ಕೆ ಹೆದ್ದಾರಿ ಆತ್ಮಹತ್ಯೆ ಮಾಡಿಕೊಳ್ಳಬಾರದು. ಸಾಲಕ್ಕೆ ಜೀವ ಹೆದರಬಾರದು, ಹೆದರಬೇಕಿರೋದು ಸಾಲ ಕೊಟ್ಟಿರುವ ಬ್ಯಾಂಕ್ ಮ್ಯಾನೇಜರ್. ಸಾಲ ಕಟ್ಟದಿದ್ದರೆ ಮನೆ ಹತ್ತಿರ ಬಂದು ಕೇಳುತ್ತಾರೆ. ಮರ್ಯಾದೆ ಹೋಯ್ತು ಅಂತ ಆತ್ಮಹತ್ಯೆ ಮಾಡಿಕೊಂಡರೆ ನಿಮ್ಮ ಮಕ್ಕಳನ್ನು ನೋಡಿಕೊಳ್ಳುವವರು ಯಾರು ಎಂದು ಪ್ರಶ್ನಿಸಿದರು.
ಮಕ್ಕಳ ಭವಿಷ್ಯದ ಜತೆಗೆ ಹಣವನ್ನು ಉಳಿತಾಯ ಮಾಡಿ. ಅವರಿಗೆ ಮಕ್ಕಳಾದ ಬಳಿಕ ನಿಮಗಿಂತ ಅವರ ಮಕ್ಕಳ ಮೇಲೆ ಪ್ರೀತಿ ಜಾಸ್ತಿ. ಹಾಗಾಗಿ ಮಕ್ಕಳ ಭವಿಷ್ಯದ ಜತೆಗೆ ಹಣ ಉಳಿಸಿ ಇಡಬೇಕು. ಮುಂದೆ ಅನಾರೋಗ್ಯ ಎದುರಾದಾಗ ಹಣ ಬೇಕಾಗುತ್ತದೆ. ಮಧ್ಯಮ ವರ್ಗದ ಯುವಕ, ಯುವತಿಯರು ಧೈರ್ಯದಿಂದ ಇರಬೇಕು. ಬೀದಿಯಲ್ಲಿ ಮಾತನಾಡುವವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಕಿವಿಮಾತು ಹೇಳಿದರು.
ಸಮಾರಂಭದಲ್ಲಿ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ, ಶಾಸಕರಾದ ರವಿಕುಮಾರ್, ಗಣೇಶ್ ಪ್ರಸಾದ್, ಅನಿಲ್ ಚಿಕ್ಕಮಾದು, ಮತ್ತು ದರ್ಶನ್ ಧ್ರುವನಾರಾಯಣ್, ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು (ವೆಂಕಟರಮಣೇಗೌಡ) ಅವರು ವಿಜೇತರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಿ ಗೌರವಿಸಿದರು.
ಸ್ವಂತ ಮನೆ ನಮ್ಮ ಹಕ್ಕು ಹೋರಾಟ ಸಮಿತಿಯ ೨೪ ಮಂದಿ ಫಲಾನುಭವಿಗಳಿಗೆ ಶಾಸಕ ಪಿ.ರವಿಕುಮಾರ್, ಜಿಲ್ಲಾಧಿಕಾರಿ ಡಾ.ಕುಮಾರ, ಎಸ್ಪಿ ಶೋಭಾರಾಣಿ ಅವರು ಹಕ್ಕುಪತ್ರಗಳನ್ನು ವಿತರಿಸಿದರು. ಅಲ್ಲದೆ, ಇದೇ ಸಂದರ್ಭದಲ್ಲಿ ರೈತರಿಗೆ ಆರ್‌ಟಿಸಿಗಳನ್ನು ವಿತರಿಸಿದರು.