₹ 70 ಲಕ್ಷ ವೆಚ್ಚದಲ್ಲಿ ರೋಣ ಗುರುಭವನ ಮೇಲ್ಮಹಡಿ ನಿರ್ಮಾಣ-ಶಾಸಕ ಜಿ.ಎಸ್. ಪಾಟೀಲ

KannadaprabhaNewsNetwork |  
Published : Sep 07, 2025, 01:00 AM IST
6 ರೋಣ 1. ಗುರು ಭವನದಲ್ಲಿ ಜರುಗಿದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರು, ಶಿಕ್ಷಕಿಯರಿಗೆ ಸನ್ಮಾನ ಕಾರ್ಯಕ್ರಮವನ್ನು ಶಾಸಕ ಜಿ.ಎಸ್.ಪಾಟೀಲ ಉದ್ಘಾಟಿಸಿ  ಮಾತನಾಡಿದರು. | Kannada Prabha

ಸಾರಾಂಶ

ಈಗಾಗಲೇ ₹ 1 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಗುರುಭವನದ ಮೇಲ್ಮಹಡಿಯನ್ನು ಮುಖ್ಯಮಂತ್ರಿಗಳ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿ ₹ 50 ಲಕ್ಷ, ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ₹ 20 ಲಕ್ಷ ಸೇರಿ ಒಟ್ಟು ₹ 70 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳದರು.

ರೋಣ: ಈಗಾಗಲೇ ₹ 1 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಗುರುಭವನದ ಮೇಲ್ಮಹಡಿಯನ್ನು ಮುಖ್ಯಮಂತ್ರಿಗಳ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿ ₹ 50 ಲಕ್ಷ, ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ₹ 20 ಲಕ್ಷ ಸೇರಿ ಒಟ್ಟು ₹ 70 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಅವರು ಶನಿವಾರ ಪಟ್ಟಣದ ಗುರು ಭವನದಲ್ಲಿ ಜಿಪಂ, ತಾಪಂ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸಮನ್ವಯ ಅಧಿಕಾರಿಗಳ ಕಾರ್ಯಾಲಯ ರೋಣ, ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ಸಂಘಗಳು ರೋಣ- ಗಜೇಂದ್ರಗಡ ಸಂಯುಕ್ತಾಶ್ರಯದಲ್ಲಿ ಎಸ್‌.ರಾಧಾಕೃಷ್ಣನ್ ಅವರ 137ನೇ ಜನ್ಮ ದಿನಾಚರಣೆ ಅಂಗವಾಗಿ ಜರುಗಿದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕಿಯರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಾನು ಈ ಹಿಂದೆ ಶಾಸಕನಾಗಿದ್ದಾಗ ₹ 1 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಭವ್ಯವಾದ ಗುರುಭವನ ನಿರ್ಮಿಸಲಾಗಿತ್ತು. ಇದು ಕೇವಲ ಕಾರ್ಯಕ್ರಮದ ವೇದಿಕೆಯಾಗಿ‌ ಮಾತ್ರ ಬಳಕೆಯಾಗಿತ್ತು. ಊಟದ ಹಾಲ್ ಕೊರತೆ ಇದ್ದರಿಂದ, ಮಳೆಗಾಲದಲ್ಲಿ, ಬೇಸಿಗೆಯಲ್ಲಿ ತೊಂದರೆಯಾಗುತ್ತಿತ್ತು. ಇದಕ್ಕಾಗಿ ₹ 70 ಲಕ್ಷ ವೆಚ್ಚದಲ್ಲಿ ಮೇಲ್ಮಹಡಿ ನಿರ್ಮಾಣಕ್ಕೆ ಆದ್ಯತೆ ನೀಡಲಾಯಿತು ಎಂದರು.

ತಂತ್ರಜ್ಞಾನ ಉಪಯೋಗಿಸಿಕೊಂಡು ಕಲಿಕೆ ಪದ್ಧತಿಯನ್ನು ಅಭಿವೃದ್ಧಿ ಪಡಿಸಬೇಕು. ಕೇವಲ ಹಳೆಯ ಕಲಿಕಾ ಪದ್ಧತಿಗೆ ಸೀಮಿತವಾಗಬಾರದು. ಶಿಕ್ಷಕ ರಾಷ್ಟ್ರ ನಿರ್ಮಾಣದ ಶಿಲ್ಪಿ, ಉತ್ತಮ ಸಮಾಜ‌ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ಸ್ಪರ್ಧಾತ್ಮಕ ಕಾಲಘಟ್ಟದಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಶಿಕ್ಷಕರು ಶ್ರಮಿಸಬೇಕು. ಪ್ರಸಕ್ತ ಸಾಲಿನಿಂದಲೇ ಎಲ್.ಕೆ.ಜಿ., ಯುಕೆಜಿ ಪ್ರಾರಂಭಿಸಲಾಗಿದ್ದು, ಈ ಕಾರ್ಯಕ್ರಮ ಯಶಸ್ವಿಯಾಗಿದೆ. ಜಿಲ್ಲೆಯಲ್ಲಿ 700 ಶಾಲೆಗಳಲ್ಲಿ ಶೌಚಾಲಯ ಕೊರತೆಯಿದ್ದು, ಇಂದು ಶೌಚಾಲಯ ನಿರ್ಮಾಣ ಕನಿಷ್ಠ ₹ 7 ಲಕ್ಷ ವೆಚ್ಚವಾಗಲಿದ್ದು, ಇದಕ್ಕಾಗಿ ವಿಶೇಷ ಅನುದಾನಕ್ಕೆ ಮುಖ್ಯಮಂತ್ರಿಗಳಲ್ಲಿ ವಿನಂತಿಸಲಾಗಿದೆ ಎಂದರು.

ಶಿಕ್ಷಣ ಇಲಾಖೆ ನಿವೃತ್ತ ಉಪ ನಿರ್ದೇಶಕ ಎ.ಸಿ. ಗಂಗಾಧರ ಮಾತನಾಡಿ, ಎಲ್ಲಾ ಮಕ್ಕಳು ಕಲಿಯಬೇಕು ಎಂಬ ವಿಶ್ವಾಸವುಳ್ಳ ತತ್ವವನ್ನು ಹೊಂದಿದವರೇ ಶಿಕ್ಷಕರು. ಶಿಕ್ಷಕರಾದವರು ಜ್ಞಾನದ ಬುತ್ತಿಯನ್ನು ಕಟ್ಟಿಕೊಡುವದು ಶಿಕ್ಷಕನ ಜವಾಬ್ಧಾರಿಯಾಗಿದೆ. ಜೀವನದ ಪೂರೈಕೆಗಳನ್ನು ಈಡೇರಿಸಿಕೊಳ್ಳುವಲ್ಲಿ ಸಮರ್ಥನನ್ನಾಗಿಸಿ ರೂಪಿಸುವಲ್ಲಿ ,ಕಲಿಕೆ ಎಂಬ ಅಚ್ಚನ್ನು ವಿದ್ಯಾರ್ಥಿಗಳ ಮನದಲ್ಲಿ ಮೂಡಿಸುವಲ್ಲಿ ಶಿಕ್ಷಕನ ಪಾತ್ರ ಪ್ರಮುಖವಾಗಿದೆ ಎಂದರು.

ಎಸ್.ಆರ್. ಪಾಟೀಲ ಪ್ರತಿಷ್ಠಾನದಿಂದ ರೋಣ ಹಾಗೂ ಗಜೇಂದ್ರಗಡ ತಾಲೂಕಿನ ವಿವಿಧ ಶಾಲೆಗಳ 15 ಶಿಕ್ಷಕರಿಗೆ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ -2025 ಪ್ರದಾನ ಮಾಡಲಾಯಿತು. ನಿವೃತ್ತ ಶಿಕ್ಷಕರು, ಶಿಕ್ಷಕಿಯರನ್ನು ಸನ್ಮಾನಿಸಲಾಯಿತು.

ಸಾನಿಧ್ಯವನ್ನು ಗುಲಗಂಜಿ ಮಠದ ಗುರುಪಾದ ಸ್ವಾಮೀಜಿ ವಹಿಸಿ ಆಶಿರ್ವಚನ ನೀಡಿದರು.

‌ಕಾರ್ಯಕ್ರಮಕ್ಕೂ ಮೊದಲು ಶಾಸಕ ಜಿ.ಎಸ್. ಪಾಟೀಲ ಅವರು ₹ 70 ಲಕ್ಷ ವೆಚ್ಚದಲ್ಲಿ ಗುರುಭವನ ಮೇಲ್ಮಹಡಿ ‌ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

ಸಮಾರಂಭದಲ್ಲಿ ಗ್ಯಾರಂಟಿ ಯೋಜನೆಗಳ ಅನಷ್ಠಾನ ತಾಲೂಕು ಸಮಿತಿ ಅಧ್ಯಕ್ಷ ಮಿಥುನ‌ ಪಾಟೀಲ, ತಹಸೀಲ್ದಾರ್‌ ನಾಗರಾಜ ಕೆ., ಪುರಸಭೆ ಅಧ್ಯಕ್ಷೆ ಬಸಮ್ಮ ಕೊಪ್ಪದ, ಸಿದ್ದಣ್ಣ ಬಂಡಿ, ವ್ಹಿ.ಬಿ. ಸೋಮನಕಟ್ಟಿಮಠ, ಮಂಜುಳಾ ಹುಲ್ಲಣ್ಣವರ, ಎಚ್.ಎಸ್. ಸೊಂಪೂರ, ಪ್ರಭು ಮೇಟಿ, ವೀರಣ್ಣ ಶೆಟ್ಟರ್, ಬಸವರಾಜ ನವಲಗುಂದ, ವ್ಹಿ.ಆರ್. ಗುಡಿಸಾಗರ, ಹನಮಂತಪ್ಪ ದೊಡ್ಡಮನಿ, ಪರಶುರಾಮ ಅಳಗವಾಡಿ, ಎಸ್.ಜಿ. ದಾನಪ್ಪಗೌಡ್ರ, ವೈ.ಡಿ. ಗಾಣಿಗೇರ, ರಮೇಶ ಪಲ್ಲೇದ, ಯಚ್ಚರಗೌಡ ಗೋವಿಂದಗೌಡ್ರ, ತಾಪಂ ಇಒ ಚಂದ್ರಶೇಖರ ಕಂದಕೂರ, ಕ್ಷೇತ್ರ ಸಮನ್ವಯ ಅಧಿಕಾರಿ ಎಂ.ಎ. ಫಣಿಬಂಧ, ಅಕ್ಷರ ದಾಸೋಹ ಸಹಾಯಕ‌ ನಿರ್ದೇಶಕ ಆರ್.ಎಲ್. ನಾಯಕರ, ಸಿ.ಕೆ.ಕೇಸರಿ, ಗೀತಾ ಆಲೂರ, ನಾಜಬೇಗಂ ಯಲಿಗಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಬಿಇಒ ಅರ್ಜುನ ಕಾಂಬೋಗಿ ಸ್ವಾಗತಿಸಿದರು. ಎಸ್.ವ್ಹಿ. ಗವಿ, ಎಂ.ವೈ. ಜಕ್ಕರಸಾನಿ ನಿರೂಪಿಸಿದರು.

PREV

Recommended Stories

ಭಕ್ತರ ಸಹಕಾರದಿಂದ ದೇವಸ್ಥಾನದಲ್ಲಿ ಹೊಸತನ
ಪತ್ನಿ ಮೇಲೆ ಹಲ್ಲೆಗೈದು ಅರ್ಧ ತಲೆ ಬೋಳಿಸಿದ ಪತಿ