ರೈತ ಹೋರಾಟದಲ್ಲಿ ವೀರಪ್ಪ ಕಡ್ಲಿಕೊಪ್ಪ ಅವರು ವೀರಮರಣ ಹೊಂದಿ 45 ವರ್ಷ ಗತಿಸಿದರೂ ಸರ್ಕಾರ ರೈತ ಸ್ಮಾರಕ ನಿರ್ಮಾಣ ಮಾಡದೇ ಇರುವುದರಿಂದ ಈಗ ರೈತರೇ ದೇಣಿಗೆ ರೂಪದಲ್ಲಿ ಹಣ ಸಂಗ್ರಹಿಸಿ ₹25 ಲಕ್ಷ ವೆಚ್ಚದಲ್ಲಿ ರೈತ ಸ್ಮಾರಕ ನಿರ್ಮಾಣ ಮಾಡಲು ಪ್ರಾರಂಭಿಸಿದ್ದಾರೆ.
ಎಸ್.ಜಿ. ತೆಗ್ಗಿನಮನಿ
ನರಗುಂದ: ರೈತ ಹೋರಾಟದಲ್ಲಿ ವೀರಪ್ಪ ಕಡ್ಲಿಕೊಪ್ಪ ಅವರು ವೀರಮರಣ ಹೊಂದಿ 45 ವರ್ಷ ಗತಿಸಿದರೂ ಸರ್ಕಾರ ರೈತ ಸ್ಮಾರಕ ನಿರ್ಮಾಣ ಮಾಡದೇ ಇರುವುದರಿಂದ ಈಗ ರೈತರೇ ದೇಣಿಗೆ ರೂಪದಲ್ಲಿ ಹಣ ಸಂಗ್ರಹಿಸಿ ₹25 ಲಕ್ಷ ವೆಚ್ಚದಲ್ಲಿ ರೈತ ಸ್ಮಾರಕ ನಿರ್ಮಾಣ ಮಾಡಲು ಪ್ರಾರಂಭಿಸಿದ್ದಾರೆ.
1980ರಲ್ಲಿ ಮಲಪ್ರಭಾ ಅಚ್ಚುಕಟ್ಟ ಪ್ರದೇಶದ ರೈತರು "ನೀರಿನ ಅಭಿವೃದ್ಧಿ ಕರ " ತುಂಬಬೇಕು, ಇಲ್ಲವಾದರೆ ಪಹಣಿ ಪತ್ರದ ಕಬ್ಜಾ ಕಾಲಂನಲ್ಲಿ ಸರ್ಕಾರ ಎಂದು ನಮೂದಿಸುತ್ತೇವೆ ಅಥವಾ ರೈತರ ಮನೆಗಳನ್ನು ಜಪ್ತ ಮಾಡಿ ನೀರಿನ ಅಭಿವೃದ್ಧಿ ಕರ ವಸೂಲಿ ಮಾಡುತ್ತೇವೆ ಎಂದು ಸರ್ಕಾರ ಹೇಳಿತ್ತು.
ಇಂಥ ಕಠಿಣ ಕ್ರಮ ಕೈಕೊಳ್ಳದಂತೆ ರೈತರು ಪರಿಪರಿಯಾಗಿ ಬೇಡಿಕೊಂಡರೂ ಸರ್ಕಾರ ಕಿವಿಗೊಟ್ಟಿರಲಿಲ್ಲ. ಜು. 21, 1980ರಲ್ಲಿ ಮಲಪ್ರಭಾ ಅಚ್ಚುಕಟ್ಟ ಪ್ರದೇಶದ ರೈತರು ಪ್ರತಿ ಗ್ರಾಮದಿಂದ ಟ್ರ್ಯಾಕ್ಟರ್ ಮೂಲಕ ಸಹಸ್ರಾರು ಸಂಖ್ಯೆಯಲ್ಲಿ ನರಗುಂದಕ್ಕೆ ಆಗಮಿಸಿ ಸರ್ಕಾರ ವಿರುದ್ಧ ತ್ರೀವು ಹೋರಾಟ ಪ್ರಾರಂಭಸಿದ್ದರು.
ಅಂದಿನ ತಹಸೀಲ್ದಾರ್ ಮತ್ತು ರೈತರ ಮಧ್ಯೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿ ತಹಸೀಲ್ದಾರ್ ರೈತರ ಮೇಲೆ ಲಾಠಿ ಚಾರ್ಜ್ ಮಾಡಲು ಆದೇಶ ಮಾಡಿದ್ದರಿಂದ ರೈತರು ಮತ್ತು ಪೊಲೀಸರ ಮಧ್ಯೆ ಗಲಾಟೆ ನಡೆದ ಸಂದರ್ಭದಲ್ಲಿ ಪೊಲೀಸರು ರೈತರನ್ನು ಚದುರಿಸಲು ಗುಂಡು ಹಾರಿಸಿದಾಗ ತಾಲೂಕಿನ ಚಿಕ್ಕನರಗುಂದದ ಯುವ ರೈತ ವೀರಪ್ಪ ಕಡ್ಲಿಕೊಪ್ಪ ಅವರಿಗೆ ಗುಂಡು ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದರು.
ಇದರಿಂದ ರೈತರ ಹೋರಾಟ ಮತ್ತಷ್ಟು ತ್ರೀವತೆ ಪಡೆದುಕೊಂಡಿದ್ದರಿಂದ ಹಳೆ ತಹಸೀಲ್ದಾರ್ ಕಾರ್ಯಾಲಯದಲ್ಲಿನ ಎಲ್ಲ ದಾಖಲೆಗಳು ರೈತರ ಕೋಪಕ್ಕೆ ಸುಟ್ಟು ಭಸ್ಮವಾದವು. ಈ ರೈತ ಬಂಡಾಯ ಚಳವಳಿ ರಾಜ್ಯದ ಗಮನ ಸೆಳೆಯಿತು. ರೈತ ಚಳವಳಿಯಲ್ಲಿ ಮರಣ ಹೊಂದಿದ ರೈತನನ್ನು ಅದೇ ಜಾಗೆಯಲ್ಲಿ ಸಮಾಧಿ ಮಾಡಬೇಕು ಎಂದು ರೈತರು ಪಟ್ಟು ಹಿಡಿದಿದ್ದರು. ಆದರೆ, ಪಟ್ಟಣದಲ್ಲಿ ಪೊಲೀಸ್ ಸರ್ಪಗಾವಲು ಇದ್ದಿದ್ದರಿಂದ ಕೋರ್ಟ್ ವೃತ್ತದ ಬಳಿಯ ಸುಬೇದಾರ ಎನ್ನುವ ರೈತರ ಜಮೀನದಲ್ಲಿ ಅವರ ಒಪ್ಪಿಗೆ ಪಡೆದು ಸಮಾಧಿ ಮಾಡಲಾಯಿತು. ಅಂದಿನಿಂದ ಈ ಭಾಗದ ರೈತ ಹೋರಾಟಗಾರರು ಸ್ಮಾರಕ ನಿರ್ಮಿಸಲು ಮನವಿ ಮಾಡಿದರೂ ಪ್ರಯೋಜನ ಆಗದ್ದರಿಂದ 45 ವರ್ಷದ ನಂತರ ವಿವಿಧ ರೈತ ಸಂಘಟನೆಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿಕೊಂಡು ಜನರಿಂದ ದೇಣಿಗೆ ಸಂಗ್ರಹಿಸಿ ಸ್ಮಾರಕ ನಿರ್ಮಾಣ ಮಾಡಲು ಮುಂದಾಗಿದ್ದಾರೆ.
ಭರವಸೆ ಈಡೇರಲಿಲ್ಲ
2025ರ ಜುಲೈ 21ರಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರು ಒಂದು ವರ್ಷದೊಳಗೆ ರೈತ ಸ್ಮಾರಕ ಭವನ ನಿರ್ಮಿಸುವ ಭರವಸೆ ನೀಡಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದರು. ಆದರೆ, ಬುನಾದಿ ಸಹಿತ ಹಾಕಲಿಲ್ಲ. ಈಗ ಆ ರೈತರು ಈ ಕಾರ್ಯ ಮಾಡುತ್ತಿದ್ದಾರೆ.
ಸ್ಮಾರಕದ ನೀಲನಕ್ಷೆ
ಸದ್ಯ ಇರುವ ವೀರಗಲ್ಲಿನ ಸ್ಥಳದಲ್ಲಿ ಕಲ್ಲಿನ ರೈತ ಸ್ಮಾರಕ ಮತ್ತು ರೈತ ಹೋರಾಟದಲ್ಲಿ ವೀರ ಮರಣ ಹೊಂದಿದ ವೀರಪ್ಪ ಕಡ್ಲಿಕೊಪ್ಪ ಅವರ ಮೂರ್ತಿಯನ್ನು ಕಲ್ಲಿನಲ್ಲಿ ಕೆತ್ತಿಸುವ ನೀಲ ನಕ್ಷೆ ತಯಾರಿಸಿದ್ದಾರೆ. ಅಂದಾಜು ₹25 ಲಕ್ಷ ವೆಚ್ಚದಲ್ಲಿ ರೈತ ಸ್ಮಾರಕ ನಿರ್ಮಾಣ ಮಾಡಲು ತೀರ್ಮಾನಿಸಿ, ಜು. 10ರಿಂದ ಪಾದಯಾತ್ರೆಯ ಮೂಲಕ ದೇಣಿಗೆ ಸಂಗ್ರಹ ಮಾಡುತ್ತಿದ್ದಾರೆ.
ಕಳೆದ 2 ದಶಕದಿಂದ ಸರ್ಕಾರಕ್ಕೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಪ್ರಯೋಜನ ಆಗದಿರುವುದರಿಂದ ಈ ಭಾಗದ ವಿವಿಧ ರೈತ ಸಂಘಟನೆ ಮತ್ತು ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳು ಸೇರಿಕೊಂಡು ದೇಣಿಗೆ ಸಂಗ್ರಹಿಸುತ್ತಿದ್ದೇವೆ ಎಂದು ಕರ್ನಾಟಕ ರೈತ ಸೇನೆ ಅಧ್ಯಕ್ಷ ಶಂಕ್ರಣ್ಣ ಅಂಬಲಿ ತಿಳಿಸಿದರು.ಸದ್ಯ ಈ ವೀರಗಲ್ಲು ಖಾಸಗಿಯವರ ಜಾಗೆಯಲ್ಲಿದೆ. ಹೀಗಾಗಿ ಅವರ ಒಪ್ಪಿಗೆ ಪಡೆದು ನಾವು ರೈತರ, ವ್ಯಾಪಾರಸ್ಥರು, ಕೂಲಿ ಕಾರ್ಮಿಕರಿಂದ ಹಣ ಸಂಗ್ರಹಿಸಿ ಈ ರೈತ ಸ್ಮಾರಕ ನಿರ್ಮಾಣ ಮಾಡುತ್ತೇವೆ ಎಂದು
ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಬಸವರಾಜ ಸಾಬಳೆ ಹೇಳಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.