ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜಿಲ್ಲೆಯಲ್ಲಿ ಹೊಸದಾಗಿ ಪಶುವೈದ್ಯ ಕಟ್ಟಡಗಳನ್ನು ನಿರ್ಮಾಣ ಮಾಡಲು ಪ್ರತಿ ಕಟ್ಟಡಕ್ಕೆ 50 ಲಕ್ಷ ರು.ಗಳಂತೆ 4.50 ಕೋಟಿ ಅನುದಾನವನ್ನು ಪ್ರಸಕ್ತ ಸಾಲಿನಲ್ಲಿ ಒದಗಿಸಲಾಗಿದೆ ಎಂದು ಪಶು ಸಂಗೋಪನೆ, ರೇಷ್ಮೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಹೇಳಿದರು.ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಆಯೋಜಿಸಲಾಗಿದ್ದ 78ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಧ್ವಜಾರೋಹಣ ನೆರವೇರಿಸಿ, ಧ್ವಜ ವಂದನೆ ಸ್ವೀಕರಿಸಿದರು. ನಂತರ ತೆರೆದ ವಾಹನದಲ್ಲಿ ತೆರಳಿದ ಸಚಿವರು ಪಥಸಂಚಲನಕ್ಕೆ ಸಜ್ಜಾಗಿದ್ದ ವಿವಿಧ ತುಕಡಿಗಳಿಗೆ ಗೌರವ ವಂದನೆ ಸಲ್ಲಿಸಿ ಅವರು ಮಾತನಾಡಿದರು.ಆರ್‌ಐಡಿಎಫ್-30ರ ಅಡಿಯಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಸಂತೇಮರಹಳ್ಳಿ, ಮಲಿಯೂರು, ಕೊತ್ತಲವಾಡಿ, ಹೊನ್ನೇಗೌಡನಹಳ್ಳಿ, ತೆರಕಣಾಂಬಿ, ಕಬ್ಬಳ್ಳಿ, ರಾಮಾಪುರ, ಮಹದೇಶ್ವರ ಬೆಟ್ಟ, ಯಳಂದೂರಿನಲ್ಲಿ ಪಶು ವೈದ್ಯ ಕಟ್ಟಡಗಳನ್ನು ನಿರ್ಮಿಸಲಾಗುವುದು ಎಂದರು.
ಅನುಗ್ರಹ ಕೊಡುಗೆ ಯೋಜನೆಯಡಿ ಅಕಸ್ಮಿಕವಾಗಿ ಮೃತಪಟ್ಟ ಜಾನುವಾರುಗಳಿಗೆ 10 ಸಾವಿರ ಹಾಗೂ ಕುರಿ ಮೇಕೆಗಳಿಗೆ 5 ಸಾವಿರ ರು. ಗಳ ಪರಿಹಾರ ನೀಡಲಾಗುತ್ತಿದೆ ಎಂದು ತಿಳಿಸಿದರು. ರೈತ ಮಹಿಳೆಯರಲ್ಲಿ ಹೈನುಗಾರಿಕೆ ಪ್ರೋತ್ಸಾಹಿಸಲು 2024-25ನೇ ಸಾಲಿನಲ್ಲಿ ಹಸು, ಎಮ್ಮೆ ಖರೀದಿಗೆ ಪಡೆಯುವ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡುವ ಮಹಿಳೆಯರಿಗೆ ಸರ್ಕಾರದಿಂದ ಶೇ.6ರ ಬಡ್ಡಿದರದಲ್ಲಿ ಸಹಾಯಧನ ನೀಡುವ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ. ಅದರನ್ವಯ ಪರಿಶಿಷ್ಟ ಜಾತಿ-11, ಪರಿಶಿಷ್ಟ ಪಂಗಡ-4 ಹಾಗೂ ಸಾಮಾನ್ಯ-47 ಸೇರಿದಂತೆ ಜಿಲ್ಲೆಗೆ ಒಟ್ಟು 62 ಗುರಿ ನಿಗದಿಪಡಿಸಲಾಗಿದೆ ಎಂದರು.ದೇಶದ ಸರ್ವತೋಮುಖ ಅಭಿವೃದ್ಧಿಯಲ್ಲಿ ಭಾಗಿಯಾಗಿರುವ ನಾವೆಲ್ಲರೂ 78ನೇ ವರ್ಷದ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದ್ದೇವೆ. ಸ್ವಾತಂತ್ರ್ಯ ನಮಗೆ ಅಷ್ಟೇನು ಸುಲಭವಾಗಿ ದೊರೆತಿಲ್ಲ. ಅದು ಹಲವಾರು ರಾಷ್ಟ್ರ ನಾಯಕರ, ದೇಶಪ್ರೇಮಿಗಳ ತ್ಯಾಗ, ಬಲಿದಾನದಿಂದ ಸಿಕ್ಕಿದೆ ಎಂದು ಹೇಳಿದರು.
ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗಣ್ಯರು ರಾಷ್ಟ್ರ ನಾಯಕರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ಕಾರ್ಯಕ್ರಮದಲ್ಲಿ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಜಿಲ್ಲೆಯ 6 ಮಂದಿ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣ ಇಲಾಖೆಯಿಂದ ಉಚಿತ ಲ್ಯಾಪ್‌ಟಾಪ್ ವಿತರಿಸಲಾಯಿತು. ಅಲ್ಲದೆ ಅಪಘಾತದಲ್ಲಿ ಮೃತಪಟ್ಟವರ ಅಂಗಾಂಗ ದಾನ ಮಾಡಿದ ಸಂಬಂಧಿಸಿದ 7 ಕುಟುಂಬದ ಸದಸ್ಯರಿಗೆ, ಪೋಷಕರಿಗೆ ಮತ್ತು ಕೊಳ್ಳೇಗಾಲ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪ್ರವಾಹ ಉಂಟಾದ ಸಂದರ್ಭದಲ್ಲಿ ವಿಪತ್ತು ನಿರ್ವಹಣೆಯಲ್ಲಿ ಪ್ರಾಣದ ಹಂಗು ತೊರೆದು ಉತ್ತಮ ಕಾರ್ಯನಿರ್ವಹಿಸಿದ ಅಗ್ನಿಶಾಮಕ ಅಧಿಕಾರಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.ಸಂಸದ ಸುನಿಲ್ ಬೋಸ್, ಶಾಸಕ ಸಿ. ಪುಟ್ಟರಂಗಶೆಟ್ಟಿ, ಚಾಮರಾಜನಗರ ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್ ಅಸ್ಗರ್, ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ, ಪಂಚ ಗ್ಯಾರೆಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು, ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಪಂ ಸಿಇಒ ಮೋನಾ ರೋತ್, ಎಸ್ಪಿ ಡಾ.ಬಿ.ಟಿ. ಕವಿತ, ಎಡಿಸಿ ಗೀತಾ ಹುಡೇದ, ಜಿಪಂ ಉಪ ಕಾರ್ಯದರ್ಶಿ ಲಕ್ಷ್ಮಿ, ತಹಸೀಲ್ದಾರ್ ಗಿರಿಜ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಜಿಲ್ಲಾಡಳಿತ ಭವನದ ಆವರಣದಲ್ಲಿ ಧ್ವಜಾರೋಹಣಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಆಯೋಜಿಸಲಾಗಿದ್ದ 78ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೂ ಮೊದಲು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ ಭವನದ ಅವರಣದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಧ್ವಜಾರೋಹಣ ನೆರವೇರಿಸಿದರು. ಎಲ್ಲ ಅಧಿಕಾರಿ, ನೌಕರರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ತಿಳಿಸಿದರು. ಬಳಿಕ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.